ಬೆಂಗಳೂರಿಗೆ RRTS ರೈಲು ಬರೋದು ಯಾವಾಗ? ನಮ್ಮ ಎಂಪಿಗಳ ಕಣ್ಣಿಗೆ ಇಂಥವು ಬೀಳೋದೇ ಇಲ್ವಾ? ಇಂಟರ್ನೆಟ್‌ನಲ್ಲಿ ಬೆಂಗಳೂರು ಸಂಸದರಿಗೆ ಕ್ಲಾಸ್
Nov 12, 2024 04:00 PM IST
ದೆಹಲಿ-ಗಾಜಿಯಾಬಾದ್-ಮೀರತ್ ಆರ್‌ಆರ್‌ಟಿಎಸ್ ಕಾರಿಡಾರ್
- ದೆಹಲಿ-ಗಾಜಿಯಾಬಾದ್-ಮೀರತ್ ಆರ್‌ಆರ್‌ಟಿಎಸ್ ಕಾರಿಡಾರ್‌ನಂತಹ ಆರ್‌ಆರ್‌ಟಿಎಸ್ ಸಾರಿಗೆ ವ್ಯವಸ್ಥೆಯು ಕರ್ನಾಟಕಕ್ಕೂ ಬೇಕಿದೆ. ಬೆಂಗಳೂರು, ತುಮಕೂರು, ಹಾಸನ, ಮೈಸೂರು, ಕೆಐಎಎಲ್ ನಡುವೆ ಇಂತಹ ಆರ್‌ಆರ್‌ಟಿಎಸ್ ಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಬೆಂಗಳೂರು: ದೆಹಲಿ-ಗಾಜಿಯಾಬಾದ್-ಮೀರತ್ ಆರ್‌ಆರ್‌ಟಿಎಸ್ ಕಾರಿಡಾರ್‌ನಿಂದಾಗಿ ರೈಲು ಪ್ರಯಾಣ ಅವಧಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಮೀರತ್ ದಕ್ಷಿಣದಿಂದ ಪ್ರಾರಂಭವಾಗುವ ನಮೋ ಭಾರತ್ ರೈಲು ಮಾರ್ಗದ ಉದ್ಘಾಟನೆಯಿಂದ ಸಾಹಿಬಾಬಾದ್‌ಗೆ ಪ್ರಯಾಣದ ಸಮಯ ತುಂಬಾ ಕಡಿಮೆಯಾಗುತ್ತದೆ. ಇದೇ ಸಮಯದಲ್ಲಿ ಇಂತಹ ಆರ್‌ಆರ್‌ಟಿಎಸ್ ಬೆಂಗಳೂರಿಗೆ ಯಾವಾಗ ಬರುತ್ತದೆ? ನಮ್ಮ ಸಂಸದರಿಗೆ ಇವೆಲ್ಲ ಕಾಣಿಸೋದಿಲ್ವ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ಪ್ರಶ್ನಿಸುತ್ತಿದ್ದಾರೆ. ಈ ಕುರಿತು ತಿಳಿಯುವ ಮೊದಲು ಆರ್‌ಆರ್‌ಟಿಎಸ್ ಕಾರಿಡಾರ್ ವಿವರ ಪಡೆಯೋಣ.
ಏನಿದು ಆರ್‌ಆರ್‌ಟಿಎಸ್ ಕಾರಿಡಾರ್?
ಇದು ಮೆಟ್ರೋಗಿಂತ ಭಿನ್ನ. ಇದು ನಗರ ಮತ್ತು ಅಂತರ್ ಸಿಟಿ ಪ್ರಯಾಣಕ್ಕೆ ಇರುವಂತಹ ಕಾರಿಡಾರ್ ಆಗಿದೆ. ಮೆಟ್ರೋ ಬೆಂಗಳೂರಿಗೆ ಸೀಮಿತವಾಗಿದ್ದರೆ ಆರ್‌ಆರ್‌ಟಿಎಸ್ ಕಾರಿಡಾರ್‌ನ ವೇಗದ ರೈಲುಗಳು ಬೆಂಗಳೂರು ಮಾತ್ರವಲ್ಲದೆ ತುಮಕೂರು, ಮೈಸೂರು ಸೇರಿದಂತೆ ಹಲವು ನಗರಗಳ ನಡುವೆ ಚಲಿಸುತ್ತವೆ. ಆದರೆ, ಸದ್ಯ ಇಂತಹ ಸೌಲಭ್ಯ ಕರ್ನಾಟಕದಲ್ಲಿ ಇಲ್ಲ. ದೆಹಲಿ-ಗಾಜಿಯಾಬಾದ್-ಮೀರತ್ RRTS ಕಾರಿಡಾರ್ ಮೀರತ್ ಮತ್ತು ದೆಹಲಿ ನಡುವಿನ ಸಂಪರ್ಕವನ್ನು ಹೆಚ್ಚಿಸುವ ಪ್ರಮುಖ ಪಾತ್ರವಹಿಸುತ್ತದೆ. ಈ ಕಾರಿಡಾರ್ ಒಟ್ಟು 42 ಕಿಲೋಮೀಟರ್ ಇದೆ. ಗಾಜಿಯಾಬಾದ್‌ನ ಸಾಹಿಬಾಬಾದ್‌ನಿಂದ ಮೀರತ್ ದಕ್ಷಿಣಕ್ಕೆ ಒಂಬತ್ತು ನಿಲ್ದಾಣಗಳನ್ನು ಸಂಪರ್ಕಿಸುತ್ತದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಾಣಿಜ್ಯ ಕಾರ್ಯಾಚರಣೆಗಳಿಗಾಗಿ ಇದು ತೆರೆಯಿತು. ನಮೋ ಭಾರತ್ ರೈಲು ಸೇವೆಗಳು ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ದುಹಾಯ್‌ನಿಂದ ಮೋದಿ ನಗರ ಉತ್ತರದವರೆಗಿನ 17 ಕಿಲೋಮೀಟರ್ ಉದ್ದದ ಮಾರ್ಗದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.
ಬೆಂಗಳೂರಿಗೂ ಬೇಕು ಆರ್‌ಆರ್‌ಟಿಎಸ್
ಈ ಕುರಿತು ನವೀನ್ ಎಂಬವರು "ಬೆಂಗಳೂರಿಗೂ ಇಂತಹ ಆರ್‌ಆರ್‌ಟಿಎಸ್ ಬೇಕು" ಎಂದು ಟ್ವೀಟ್ ಮಾಡಿದ್ದಾರೆ. "ಸಾಹಿಬಾಬಾದ್‌ನಿಂದ ಮೀರತ್ ದಕ್ಷಿಣದವರೆಗಿನ ಆರ್‌ಆರ್‌ಟಿಎಸ್ ಸುಮಾರು 57 ಕಿ.ಮೀ.ಯನ್ನು ಕ್ರಮಿಸುತ್ತದೆ. ಇದು ಗಂಟೆಗೆ 150 ಕಿ.ಮೀ. ವೇಗದಲ್ಲಿ ಸಾಗುತ್ತದೆ. ಬೆಂಗಳೂರಿಗೂ ಇಂತಹ ಆರ್‌ಆರ್‌ಟಿಎಸ್ ಬೇಕು. ಕರ್ನಾಟಕದ ಆರ್‌ಆರ್‌ಟಿಎಸ್ ತುಮಕೂರು, ಹಾಸನ, ಮೈಸೂರು, ಕೆಐಎಎಲ್ ಅನ್ನು ಸಂಪರ್ಕಿಸಬೇಕು. ನಮ್ಮ ಸಂಸದರು ಇದಕ್ಕಾಗಿ ಆಗ್ರಹಿಸಬೇಕು" ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಅನ್ನು ಕೇಂದ್ರ ಸಚಿವ ವಿ ಸೋಮಣ್ಣರಿಗೆ ಟ್ಯಾಗ್ ಮಾಡಿದ್ದಾರೆ.
ಈ ಪೋಸ್ಟ್‌ಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. "ಭಾರತದ ಎಲ್ಲಾ ಮೆಟ್ರೋಪಾಲಿಟನ್ ನಗರಗಳಿಗೆ ಆರ್‌ಆರ್‌ಟಿಎಸ್ ಬೇಕು. ಮುಂಬೈ, ಬೆಂಗಳೂರು ಎಲ್ಲಾ ಕಡೆಗಳಲ್ಲಿಯೂ ಇಂತಹ ಸಾರಿಗೆ ಬೇಕು" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಇಂತಹ ರಾಪಿಡ್ ಸಾರಿಗೆ ವ್ಯವಸ್ಥೆ ಕರ್ನಾಟಕಕ್ಕೆ ಭೇಕು. ವಿವಿಧ ಪಟ್ಟಣ ಮತ್ತು ನಗರಗಳನ್ನು ಸಂಪರ್ಕಿಸುವ ವ್ಯವಸ್ಥೆ ಬೇಕು. ಆದರೆ, ಕರ್ನಾಟಕದಲ್ಲಿ ಯಾವುದೇ ಸರಕಾರ ಹೂಡಿಕೆ ಮಾಡುತ್ತಿಲ್ಲ" ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.
"ಕರ್ನಾಟಕದಲ್ಲಿ ಅಥವಾ ದಕ್ಷಿಣ ಕರ್ನಾಟಕದಲ್ಲಿ ಇಂತಹ ಸಾರಿಗೆ ಸಾಧ್ಯವಿಲ್ಲ. ಏಕೆಂದರೆ, ಇಲ್ಲಿ ಹೆಚ್ಚಿನ ಹಳಿಗಳು ಹೆಚ್ಚು ದೂರ ನೇರವಾಗಿಲ್ಲ. ಇಲ್ಲಿ 120 ಕಿ.ಮೀ.ಯೇ ವೇಗವಾಗುತ್ತದೆ" ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. "ಕರ್ನಾಟಕದಲ್ಲಿ ಇಂತಹ ಸೌಕರ್ಯ ನಿರೀಕ್ಷಿಸಲು ಸಾಧ್ಯವಿಲ್ಲ. ನಾವು ಕೇಂದ್ರ ಸರಕಾರಕ್ಕೆ ತೆರಿಗೆಗೆ ಮಾತ್ರ ಸೀಮಿತ" "ಉತ್ತರ ಭಾರತಕ್ಕೆ ತೆರಿಗೆ ಹಣ ನೀಡುವುದೇ ಬೆಂಗಳೂರಿನ ಪ್ರಮುಖ ಕೆಲಸ" ಎಂದೆಲ್ಲ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ.
"ಇಲ್ಲಿನ ಬಸ್ ಮಾಫಿಯಾದಿಂದಾಗಿ ಇಂತಹ ಸೌಕರ್ಯಗಳು, ಸಾರಿಗೆಗಳು ಬರೋದಿಲ್ಲ" "ಈ ರೀತಿಯ ಸಾರಿಗೆ ಬಂದರೆ ನಿಜಕ್ಕೂ ಒಳ್ಳೆಯದಾಗಲಿದೆ. ಶೀಘ್ರದಲ್ಲಿ ಇಂತಹ ಸೇವೆಗಳು ಬರಲಿ" "ನಮ್ಮ ಸಂಸದರಿಗೆ ಇಂತಹ ಸಾರಿಗೆಗಳು ಕಾಣಿಸೋದಿಲ್ಲ. ಕಾಣಿಸಿದರೂ ಕರ್ನಾಟಕಕ್ಕೆ ತರುವ ಕುರಿತು ಆಲೋಚಿಸಲು ಬರೋದಿಲ್ಲ" "ಆದರೆ, ಕರ್ನಾಟಕದವರು ಉಚಿತ ಭಾಗ್ಯಕ್ಕೆ ಮತ ನೀಡಿದ್ದಾರೆ. ಇಂತಹ ಸೌಕರ್ಯಗಳು ದೊರಕುವುದೇ" ಹೀಗೆ ನವೀನ್ ಅವರ ಪೋಸ್ಟ್‌ಗೆ ವೈವಿಧ್ಯಮಯ ಕಾಮೆಂಟ್‌ಗಳು ಬಂದಿವೆ.