ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಬಳಕೆ: 49,732 ಅಂಗಡಿ ಮುಂಗಟ್ಟುಗಳಿಂದ ಪಾಲನೆ; ರಾಜ್ಯಾದ್ಯಂತ ಕನ್ನಡ ನಾಮಫಲಕ ಅಳವಡಿಕೆ ಚುರುಕು
Mar 14, 2024 06:56 PM IST
ಕನ್ನಡ ನಾಮಫಲಕ ಅಳವಡಿಸಿದ ಕಂಪನಿಗಳ ನಾಮಫಲಕ ಹಾಳುಗೆಡವಿದ ಹೋರಾಟಗಾರರು (ಫೈಲ್ ಚಿತ್ರ)
- ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡವನ್ನು ಬಳಸಬೇಕೆಂಬ ಸರ್ಕಾರದ ಆದೇಶಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 49,732 ಅಂಗಡಿ, ಹೋಟೆಲ್ ಸೇರಿದಂತೆ ಎಲ್ಲ ರೀತಿಯ ವ್ಯಾಪಾರಿ ಮತ್ತು ಇನ್ನಿತರ ಕೇಂದ್ರಗಳು ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡವನ್ನು ಅಳವಡಿಸಿಕೊಂಡಿವೆ.
ಬೆಂಗಳೂರು: ಕರ್ನಾಟಕದಲ್ಲಿ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡವನ್ನು ಬಳಸಬೇಕೆಂಬ ಸರ್ಕಾರದ ಆದೇಶಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 49,732 ಅಂಗಡಿ, ಹೋಟೆಲ್ ಸೇರಿದಂತೆ ಎಲ್ಲ ರೀತಿಯ ವ್ಯಾಪಾರಿ ಮತ್ತು ಇನ್ನಿತರ ಕೇಂದ್ರಗಳು ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡವನ್ನು ಅಳವಡಿಸಿಕೊಂಡಿವೆ. 625 ವ್ಯಾಪಾರಿ ಕೇಂದ್ರಗಳು ಮಾತ್ರ ಇನ್ನೂ ಕನ್ನಡ ಅವವಡಿಸಿಕೊಂಡಿಲ್ಲ.
ಈ ಹಿಂದೆ ಫೆಬ್ರವರಿ 28ರ ಒಳಗೆ ಕನ್ನಡ ನಾಮಫಲಕ ಅಳವಡಿಸಲು ಗಡುವು ವಿಧಿಸಲಾಗಿತ್ತು. ನಿಯಮಬದ್ಧ ನಾಮಫಲಕ ಅಳವಡಿಸದೇ ಇದ್ದರೆ ಅಂತಹ ಉದ್ದಿಮೆಗಳ ಪರವಾನಗಿಗಳನ್ನು ರದ್ದುಗೊಳಿಸಲು, ಉದ್ದಿಮೆಗಳಿಗೆ ಬೀಗ ಹಾಕಲು ಸುತ್ತೋಲೆ ಹೊರಡಿಸಲಾಗಿತ್ತು. ವಾಣಿಜ್ಯ ಮಳಿಗೆಗಳು ಹೆಚ್ಚಿನ ಸಮಯಾವಕಾಶ ಕೋರಿದ್ದರಿಂದ ನಂತರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ದೇಶನದಂತೆ ಮಾರ್ಚ್ 13ರವರೆಗೆ ಗಡುವು ವಿಸ್ತರಿಸಲಾಗಿತ್ತು.
ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿ ಪಡೆದು ಕಾರ್ಯನಿರ್ವಹಿಸುತ್ತಿರುವ ಜೊತೆ, ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳು ಸೇರಿದಂತೆ ಎಲ್ಲ ಕೇಂದ್ರಗಳು ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಶೇ. 60 ರಷ್ಟು ಬಳಸಬೇಕು. ಫಲಕದ ಮೇಲ್ಬಾಗದಲ್ಲಿ ಅದು ಪ್ರದರ್ಶಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು.
ರಾಜ್ಯಾದ್ಯಂತ ಕನ್ನಡ ನಾಮಫಲಕ ಅಳವಡಿಕೆ ಚುರುಕು
ಅತ್ತ ರಾಜ್ಯಾದ್ಯಂತ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಕನ್ನಡ ನಾಮಫಲಕ ಅಳವಡಿಕೆ ಕುರಿತು ಸ್ವತಃ ಜಿಲ್ಲಾಧಿಕಾರಿಗಳೇ ವಿಧಾನಸಭಾ ಕ್ಷೇತ್ರವಾರು ಭೇಟಿ ನೀಡಿ, ನಾಮಫಲಕ ಅಳವಡಿಕೆ ಪ್ರಗತಿ ಕುರಿತು ವರದಿ ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್.ತಂಗಡಗಿ ಸೂಚನೆ ನೀಡಿದ್ದಾರೆ.
ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಕಾಯ್ದೆ ಜಾರಿ ಸಂಬಂಧ ಸಚಿವರು ವಿಕಾಸಸೌಧದಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿಗಳ ಜತೆ ವಿಡಿಯೊ ಸಂವಾದ ನಡೆಸಿದ್ದರು. ಹೊಸ ಕಾಯಿದೆ ಪ್ರಕಾರ ಉದ್ದಿಮೆಗಳ ನಾಮಫಲಕದಲ್ಲಿ ಶೇ 60 ರಷ್ಟು ಕನ್ನಡ ಭಾಷೆ ಇರಬೇಕು. ಅದಕ್ಕೆ ಸಂಬಂಧಿಸಿದಂತೆ ಪ್ರತಿ ಜಿಲ್ಲೆಯಲ್ಲಿನ ಪ್ರಗತಿ ಕುರಿತಂತೆ ಖುದ್ದು ಜಿಲ್ಲಾಧಿಕಾರಿಗಳೇ ಪರಿಶೀಲನೆ ನಡೆಸಬೇಕು ಎಂದು ಸಚಿವರು ಸೂಚನೆ ನೀಡಿದ್ದರು.
ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಅಳವಡಿಕೆಯ ಗಡುವು ಮಾರ್ಚ್ 15ರವರೆಗೆ ಮುಂದೂಡಲಾಗಿದ್ದರೂ, ಜಿಲ್ಲಾಧಿಕಾರಿಗಳು ಕಾಲಕಾಲಕ್ಕೆ ಜಿಲ್ಲಾ ಸಮಿತಿ ಸಭೆ ನಡೆಸಬೇಕು. ತಾಲ್ಲೂಕು ಮಟ್ಟದಲ್ಲಿ ಉಪವಿಭಾಗಾಧಿಕಾರಿಗಳು ಸಭೆ ನಡೆಸಬೇಕು ಎಂದು ತಿಳಿಸಲಾಗಿತ್ತು.
ಕನ್ನಡ ನಾಮಫಲಕ ಅಳವಡಿಕೆ ಕುರಿತು ಜಾಗೃತಿ ಮೂಡಿಸಬೇಕು ಮತ್ತು ನಾಮಫಲಕ ಅಳವಡಿಸದವರಿಗೆ ನೋಟಿಸ್ ನೀಡಬೇಕು. ಕನ್ನಡ ನಾಮಫಲಕ ಅಳವಡಿಸದಿದ್ದರೆ ಪರವಾನಗಿ ರದ್ದು ಸೇರಿದಂತೆ ದಂಡ ವಿಧಿಸುವ ಬಗ್ಗೆ ಎಚ್ಚರಿಕೆ ನೀಡಬೇಕು ಎಂದು ಸರ್ಕಾರ ಸೂಚನೆ ನೀಡಿತ್ತು. ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಧಾನ್ಯ ನೀಡಬೇಕಾಗಿರುವುದರಿಂದ ಮೇಲಿನ ಅರ್ಧ ಭಾಗ ಎಂಬುದರ ಬದಲಾಗಿ, ಶೇ 60ರಷ್ಟು ಭಾಗ ಕನ್ನಡ ಬಳಕೆ ಮಾಡಬೇಕು ಮತ್ತು ಕನ್ನಡ ಭಾಷೆಯು ನಾಮಫಲಕದ ಮೇಲ್ಭಾಗದಲ್ಲೇ ಇರಬೇಕು ಎಂಬ ತಿದ್ದುಪಡಿಯನ್ನು ಮಾಡಲಾಗಿತ್ತು.
ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ
ಇತ್ತೀಚೆಗೆ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಕನ್ನಡ ಬಳಸದೇ ಇರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ. ನಾರಾಯಣಗೌಡರ ಬಣ ಬೃಹತ್ ಪ್ರತಿಭಟನೆ ನಡೆಸಿತ್ತು. ನಗರದ ಕೆಲವು ಕಡೆ ನಾಮಫಲಕಗಳನ್ನು ಒಡೆದು ಹಾಕಿದ್ದರು. ಈ ಹೋರಾಟ ಹಿಂಸೆಗೆ ತಿರುಗಿತ್ತು. ಪೊಲೀಸರು ನಾರಾಯಣಗೌಡ ಸೇರಿದಂತೆ 40ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದರು.
ವರದಿ: ಎಚ್. ಮಾರುತಿ