ಕನ್ನಡ ಭಾಷೆಯ ಹೆಸರಿನಲ್ಲಿ ಈ ಪರಿ ನಿಂದನೆ, ಹಲ್ಲೆ ಸರಿಯೇ; ಗಮನ ಸೆಳೆದಿದೆ ಖೇದ ಭಾವದ ಈ ಮನವಿ
ಕನ್ನಡ ಸುದ್ದಿ  /  ಕರ್ನಾಟಕ  /  ಕನ್ನಡ ಭಾಷೆಯ ಹೆಸರಿನಲ್ಲಿ ಈ ಪರಿ ನಿಂದನೆ, ಹಲ್ಲೆ ಸರಿಯೇ; ಗಮನ ಸೆಳೆದಿದೆ ಖೇದ ಭಾವದ ಈ ಮನವಿ

ಕನ್ನಡ ಭಾಷೆಯ ಹೆಸರಿನಲ್ಲಿ ಈ ಪರಿ ನಿಂದನೆ, ಹಲ್ಲೆ ಸರಿಯೇ; ಗಮನ ಸೆಳೆದಿದೆ ಖೇದ ಭಾವದ ಈ ಮನವಿ

ಬೆಂಗಳೂರಿನಲ್ಲಿ ಕನ್ನಡ ಭಾಷೆಯ ಹೆಸರಿನಲ್ಲಿ ಕೆಲವರು ನಡೆಸುವ ದಾಂದಲೆಯಿಂದ ರಾಜ್ಯದ, ರಾಜಧಾನಿಯ ಘನತೆಗೆ ಧಕ್ಕೆ ಉಂಟಾಗುವಂತಾಗಿದೆ ಎಂಬುದನ್ನು ಬಹಳ ಖೇದಭಾವದಲ್ಲಿ ವಿವರಿಸಿದ್ದಾರೆ ನೊಂದವರೊಬ್ಬರು. ಇಂತಹ ಅನೇಕ ಪ್ರಕರಣಗಳು ಗಮನಸೆಳೆಯುತ್ತಿರುವ ಕಾರಣ ಸರ್ಕಾರಕ್ಕೂ ಇದೊಂದು ಎಚ್ಚರಿಕೆಯ ಗಂಟೆಯಂತೆ ತೋರುತ್ತಿದೆ.

ಸ್ಕಾರ್ಪಿಯೋ (ಸಾಂಕೇತಿಕ ಚಿತ್ರ)
ಸ್ಕಾರ್ಪಿಯೋ (ಸಾಂಕೇತಿಕ ಚಿತ್ರ) (Pexels)

ಬೆಂಗಳೂರು: ಹೊರರಾಜ್ಯದವರಿಗೆ ಬೆಂಗಳೂರು ನಗರ ಸುರಕ್ಷಿತವಲ್ಲವೆ? ಹಾಗೊಂದು ಭಾವನೆ ಹಲವರನ್ನು ಕಾಡುತ್ತಿದ್ದು, ಅದಕ್ಕೆ ಕಾರಣ ನಗರದೊಳಗೆ ತಡರಾತ್ರಿ ಪ್ರಯಾಣದಲ್ಲಿ ಸಂಭವಿಸುತ್ತಿರುವ ಕಹಿಘಟನೆಗಳು. ರಾತ್ರಿ ಪ್ರಯಾಣದ ವೇಳೆ ರಸ್ತೆಯಲ್ಲಿ ದುಷ್ಕರ್ಮಿಗಳು, ಪುಂಡರ ಉಪಟಳದಿಂದಾಗಿ ಅನೇಕರು ಬೇಸರ ವ್ಯಕ್ತಪಡಿಸುತ್ತಿರುವುದು ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಗಮನಸೆಳೆಯುತ್ತಿರುತ್ತದೆ. ಅಂಥದ್ದೇ ಒಂದು ಪ್ರಕರಣ ಇದು. ‘ಟೀಮ್‌ಬಿಎಚ್‌ಪಿ’ ಜಾಲತಾಣದ ಕಮ್ಯೂನಿಟಿ ಸೆಕ್ಷನ್‌ನಲ್ಲಿ ರಾಹುಲ್ ನಾಗರಾಜ್ ಎನ್ನುವವರು ಹಂಚಿಕೊಂಡಿರುವ ಈ ವಿಚಾರ ಹಲವರ ಗಮನ ಸೆಳೆದಿದೆ. ಕುಡುಕರು ಸಂಘರ್ಷಕ್ಕೆ ಇಳಿದಾಗ, ಸಾಧ್ಯವಾದಷ್ಟು ಅವರನ್ನು ಕೆರಳಿಸದೆ ಮೌನವಾಗಿದ್ದು ಸ್ಥಳದಿಂದ ದೂರ ಹೋಗಲು ಪ್ರಯತ್ನಿಸಬೇಕು ಎಂಬುದು ನಮಗೆಲ್ಲ ತಿಳಿದಿರುವ ವಿಚಾರವೇ ಎಂಬ ಟಿಪ್ಪಣಿಯೊಂದಿಗೆ ವಿವರಣೆ ಶುರುವಾಗಿದೆ.

ತಮಿಳುನಾಡು ನಂಬರ್ ಪ್ಲೇಟ್ ಇದ್ದ ವಾಹನದಲ್ಲಿ ಪ್ರಯಾಣಿಸಿದಾಗ ಆದ ಕೆಟ್ಟ ಅನುಭವದ ಚಿತ್ರಣದ ವಿವರಣೆಯನ್ನು ಅವರು ಶೇರ್ ಮಾಡಿದ್ದಾರೆ. ಈ ಘಟನೆ ಇತ್ತೀಚೆಗೆ ನಡೆದಿರುವುದು ಎಂಬುದನ್ನೂ ಉಲ್ಲೇಖಿಸಿದ್ದಾರೆ.

ತಮಿಳುನಾಡು ನೋಂದಣಿ ವಾಹನದಲ್ಲಿದ್ದವರಿಗೆ ಬೆಂಗಳೂರಲ್ಲಿ ನಡೆದುದೇನು

ತಮಿಳುನಾಡು ನೋಂದಣಿಯ ವಾಹನದಲ್ಲಿ ತೆರಳಿದವರಿಗೆ ಮಧ್ಯರಾತ್ರಿ ಡ್ರೈವಿಂಗ್ ಸಂದರ್ಭದಲ್ಲಿ ಆದ ಪ್ರತ್ಯಕ್ಷ ಅನುಭವ ವಿವರಣೆಯ ಸಾರ ಇದು.

“ಸ್ನೇಹಿತರೇ, ನಾನು ಇದನ್ನು ಟೈಪ್ ಮಾಡುವಾಗ ಇನ್ನೂ ನಡುಗುತ್ತಿದ್ದೇನೆ. ನಾನು ಆಘಾತಕ್ಕೊಳಗಾಗಿದ್ದೇನೆ. ಯಾವುದೇ ಸಮಯದಲ್ಲೂ ದಾಳಿಗೊಳಗಾಗಬಹುದು ಎಂಬ ಕಳವಳದೊಂದಿಗೆ ಹೊಟ್ಟೆ ತಳಮಳಿಸುತ್ತಿದೆ" ಎಂಬ ಪೀಠಿಕೆಯೊಂದಿಗೆ ನಿರೂಪಣೆ ಶುರುವಾಗಿದೆ.

"ನನ್ನ ಪತ್ನಿ ಮತ್ತು ನಾನು ಕಲ್ಯಾಣಿ ಕಲಾಮಂದಿರದಲ್ಲಿ ನಡೆಯುತ್ತಿದ್ದ ಪುಸ್ತಕ ಪ್ರದರ್ಶನಕ್ಕೆ ಹೋಗಿದ್ದೆವು. ನನ್ನ ಸ್ನೇಹಿತೆ ಮತ್ತು ಆಕೆಯ ಪತಿಯೂ ನಮ್ಮ ಜೊತೆಗಿದ್ದರು. ನಾವು ಸ್ಕಾರ್ಪಿಯೋ ಕಾರಿನಲ್ಲಿ ಹೋಗಿದ್ದೆವು. ಪುಸ್ತಕ ಪ್ರದರ್ಶನ ನೋಡಿ ಹಿಂದಿರುಗುವಾಗ ಸ್ನೇಹಿತೆ ಮತ್ತು ಆಕೆಯ ಪತಿಯನ್ನು ದೊಮ್ಮಲೂರು ಸಮೀಪದ ಚಲ್ಲಗಟ್ಟದಲ್ಲಿರುವ ಅವರ ಮನೆಗೆ ಬಿಡುವುದಕ್ಕೆ ಹೋಗುತ್ತಿದ್ದೆವು. ಅದು ನಸುಕಿನ 1 ಗಂಟೆ ಸಮಯವಾಗಿತ್ತು.

ನಾವು ಪುಸ್ತಕಗಳನ್ನು ಕಾರಿನಿಂದ ಇಳಿಸುತ್ತಿದ್ದಾಗ ಇನ್ನೊಂದು ಕಾರಿನಲ್ಲಿ ಇಬ್ಬರು ಅಲ್ಲಿ ಬಂದು ಅಲ್ಲಿಂದ ಹೋಗುವಂತೆ ಸೂಚಿಸಿದರು. ನಾವು ರಿವರ್ಸ್‌ ತೆಗೆದು ಹೋಗಲು ಪ್ರಯತ್ನಿಸುತ್ತಿರುವಾಗ ಗುದ್ದುವಂತೆ ತೀರಾ ಸಮೀಪಕ್ಕೆ ಬಂದರು. ಕಾರನ್ನು ಗಮನಿಸಿದರೆ ಒಬ್ಬ ಪ್ರಯಾಣಿಕ ಕೈಯಲ್ಲಿ ಸಿಗರೇಟ್ ಇತ್ತು. ಅವರು ಮದ್ಯಪಾನ ಮಾಡಿದ್ದು, ಅದರ ಅಮಲಿನಲ್ಲಿದ್ದಾರೆ ಎಂಬುದನ್ನು ಅರ್ಥಮಾಡಿಕೊಂಡೆ. ಅವರನ್ನು ಹೋಗಲು ಬಿಟ್ಟು, ನಮ್ಮ ಕೆಲಸದಲ್ಲಿ ತೊಡಗಿದೆವು. ಅವರು ವಾಪಸ್ ಬಂದು ಪುನಃ ಉಪಟಳ ನೀಡತೊಡಗಿದರು. ತಮಿಳುನಾಡಿಗೆ ಏನೋ ಬೈಯುತ್ತಿದ್ದರು. ನಾವು ಅಲ್ಲಿಂದ ಹೊರಟೆವು. ದಾರಿಯಲ್ಲಿ ಮತ್ತೆ ಮತ್ತೆ ಅವರು ಸಿಕ್ಕರು. ಒಂದು ಕಡೆ ಗಾಡಿ ನಿಲ್ಲಿಸಿದೆವು. ಅಲ್ಲಿ ಕಾರಿನಿಂದ ಹೊರಗಿಳಿದ ಅವರು ನಿಮಗೆ ಕನ್ನಡ ಬರಲ್ವಾ , ಕನ್ನಡ ಗೊತ್ತಿಲ್ದೇ ಇಲ್ಲಿಗೆ ಬರಬಹುದು ಅಂತ ತಿಳ್ಕೊಂಡಿದ್ದೀರಾ ಎಂದು ಮೇಲೇರಿ ಬಂದರು.

ಕಾರು ಚಲಾಯಿಸುತ್ತ ಬಂದ ವ್ಯಕ್ತಿ ನನ್ನ ಸ್ನೇಹಿತೆಯ ಪತಿಯ ಕೆನ್ನೆಗೆ ಹೊಡೆದ. ನಾನು ಕುಳಿತಲ್ಲಿಂದ ಎದ್ದಿರಲಿಲ್ಲ. ಆಗ ನನ್ನ ಮುಖಕ್ಕೆ ಮತ್ತು ಕಣ್ಣಿಗೆ ಗುದ್ದಿದ. ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದ. ನನ್ನ ಪತ್ನಿ ಬಳಿಗೆ ಬಂದು ಯಾರು ಈಕೆ ಎಂದು ಕೇಳಿ. ನನ್ನ ಪತ್ನಿ ಎಂದ ಕೂಡಲೇ, ಸಾರಿ ಸಿಸ್ಟರ್, ಬೇರೆ ಯಾರೋ ಅಂದುಕೊಂಡೆ ಎಂದು ಆತ ಹೇಳಿದ.

ಇಷ್ಟೆಲ್ಲ ಆದ ಕೂಡಲೇ ನನ್ನ ಸ್ನೇಹಿತೆಯ ಕೋಪ ಉಕ್ಕೇರಿ ಕೂಗಾಡಿದಳು. ಇಷ್ಟಾಗುತ್ತಲೇ, ಆ ಪುಂಡರು ನಮ್ಮ ಮೇಲೆ ರೇಗಾಡಿದರು. ನೀವು ತಮಿಳರು, ಕರ್ನಾಟಕದವರಲ್ಲ ಎಂದೆಲ್ಲ ಕೂಗಾಡಿದರು. ಸುಮಾರು ಎರಡು ಗಂಟೆ ಕಾಲ ಈ ಸಂಘರ್ಷ ಸಾಗಿತ್ತು. ಕೊನೆಗೆ ಸ್ಥಳೀಯರು ಆ ಕುಡುಕರಿಂದ ನಮ್ಮನ್ನು ಹರಸಾಹಸ ಪಟ್ಟು ಬಿಡಿಸಿದರು. ಅಷ್ಟರಲ್ಲಾಗಲೇ ನಾವು ಹೈರಾಣಾಗಿದ್ದೆವು. ಭಾವನಾತ್ಮಕವಾಗಿ ಕುಸಿದುಹೋಗಿದ್ದೆವು. ತಮಿಳುನಾಡು ನೋಂದಣಿಯ ನಂಬರ್ ಪ್ಲೇಟ್ ಇದ್ದ ಕಾರಣಕ್ಕೆ ನಾವು ಒಂಟಿಯಾಗಿದ್ದೆವು. ಹೊರಗಿನವರಾಗಿದ್ದೆವು. ಆ ರಾತ್ರಿ ಅಲ್ಲೇ ಉಳಿದು ಬೆಳಗ್ಗೆ ಹೊರಡೋಣ ಎಂದು ಅವರ ಮನೆಯಲ್ಲೇ ಉಳಿದೆವು. ಬೆಳಗ್ಗೆ ಎದ್ದು ನೋಡಿದರೆ ಕಾರಿನ ಮುಂಭಾಗದ ಚಕ್ರದ ಗಾಳಿ ತೆಗೆದಿದ್ದರು. ಎರಡು ವೀಲ್ ಕ್ಯಾಪ್ ತುಂಡಾಗಿದ್ದವು. ಬಹಳ ದುಃಖಭಾವದಿಂದ ಇದನ್ನೆಲ್ಲ ಬರೆಯುತ್ತಿದ್ದೇನೆ" ಎಂಬ ಅಂಶ ಅದರಲ್ಲಿದೆ.

ಕನ್ನಡ ಭಾಷೆಯ ಹೆಸರಿನಲ್ಲಿ ಬೆಂಗಳೂರಿನಲ್ಲಿ ಯಾಕೆ ಇಂಥದ್ದು ನಡೆಯುತ್ತಿದೆ?

ನಾನು ಉತ್ತರಾಖಂಡ್‌ನಲ್ಲಿದೆ. ಮುಂಬೈ, ಪುಣೆ, ಕೋಲ್ಕತ್ತ, ಸಿಕ್ಕಿಂ ಮುಂತಾದೆಡೆ ಎಲ್ಲ ಕೆಲಸ ಮಾಡಿದ್ದೇನೆ. ಅಷ್ಟೇ ಏಕೆ ಕೇರಳ, ಆಂಧ್ರ, ಉತ್ತರ ಪ್ರದೇಶ, ದೆಹಲಿಗೂ ಅನೇಕ ಬಾರಿ ಹೋಗಿ ಬಂದಿದ್ದೇನೆ. ಆದರೆ ಬೆಂಗಳೂರಲ್ಲಿ ಮಾತ್ರ ಯಾಕೆ ಹೀಗೆ? ಕೆಲವು ಜನರೇಕೆ ಹೀಗೆ ವರ್ತಿಸುತ್ತಿದ್ದಾರೆ. ಕರ್ನಾಟಕದಲ್ಲಿ “ನಂಬರ್ ಪ್ಲೇಟ್ ಆಧರಿಸಿದ ಸತ್ಕಾರ” ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಆಗಿದ್ದಿದೆ. ಅನೇಕ ಬಾರಿ ಬೆಂಗಳೂರಿನಲ್ಲಿ ಆಗಿದೆ. ಮೈಸೂರಲ್ಲಿ ಆಗಿದೆ. ಅದೇ ರೀತಿ ಇತರೆಡೆಯೂ ಈ ಅನುಭವ ಆಗಿದೆ. ಈ ಕೆಟ್ಟ ಅನುಭವದ ಕಾರಣವೇ ಕರ್ನಾಟಕಕ್ಕೆ ಮತ್ತೆ ಹೋಗಬಾರದು ಎಂಬ ತೀರ್ಮಾನಕ್ಕೆ ಕಾರಣವಾಗುತ್ತಿದೆ. ಬೆಂಗಳೂರಿಗೆ ಕೆಲಸದ ನಿಮಿತ್ತವೂ ಹೋಗಬಾರದು ಎಂಬ ಕಠಿಣ ಭಾವ ಮನದಲ್ಲಿ ಮೂಡುತ್ತಿದೆ. ನನಗಾದ ಅನುಭವ ಬೇರೆಯವರಿಗೆ ಆಗಬೇಕು ಎಂದೇನೂ ಇಲ್ಲ. ಆದರೂ ಇಂಥದ್ದು ಆಗಬಾರದು ಎಂದು ಅವರು ಓದುಗರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.

ಮೂಲ ಲೇಖನದ ಪೂರ್ಣ ಓದಿಗೆ - How my TN plate led to a violent encounter in Bengaluru a few days ago

(This copy first appeared in Hindustan Times Kannada website. To read more on Bengaluru City News please visit kannada.hindustantimes.com )

Whats_app_banner