ಬೆಂಗಳೂರಿನಲ್ಲಿ ಒಂದೇ ಮಳೆಗೆ ಕೊಚ್ಚಿ ಹೋದ ಕೋಟ್ಯಂತರ ಅನುದಾನ: ಮುಚ್ಚಿದ್ದ ರಸ್ತೆ ಗುಂಡಿಗಳೆಲ್ಲಾ ಮತ್ತೆ ಉದ್ಭವ, ನಾಗರಿಕರ ಹಿಡಿಶಾಪ
Oct 31, 2024 10:11 PM IST
ಬೆಂಗಳೂರಿನಲ್ಲಿ ಮಳೆಯಿಂದಾಗಿ ರಸ್ತೆ ಗುಂಡಿಗಳೆಲ್ಲಾ ಮತ್ತೆ ಕಾಣಿಸಿಕೊಂಡಿವೆ.
- ಕೇವಲ ಒಂದು ಮಳೆಗೆ ಮುಚ್ಚಿದ್ದ ಗುಂಡಿಗಳೆಲ್ಲಾ ಮತ್ತೆ ಉದ್ಭವವಾಗಿವೆ. ಪಾಲಿಕೆ ಕಳಪೆ ಗುಣಮಟ್ಟದ ಕಚ್ಚಾವಸ್ತುಗಳನ್ನು ಬಳಸುತ್ತಿರುವುದರಿಂದ ಗುಂಡಿಗಳು ಹಾಗೆಯೇ ಉಳಿದಿವೆ ಎಂದು ಬೆಂಗಳೂರು ನಿವಾಸಿಗಳು ಆರೋಪಿಸಿದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಎರಡು ವಾರಗಳ ಕಾಲ ಸತತ ಮಳೆ ಸುರಿಯುವುದಕ್ಕೂ ಮುನ್ನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಸ್ತೆ ಗುಂಡಿಗಳನ್ನು ಮುಚ್ಚಲು ಮತ್ತು ರಸ್ತೆಗಳನ್ನು ದುರಸ್ತಿ ಮಾಡಲು 45 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಇದರಲ್ಲಿ 7,600 ಗುಂಡಿಗಳನ್ನು ಮುಚ್ಚಲು ಮತ್ತು 32 ಸಾವಿರ ಚದರ ಮೀಟರ್ ರಸ್ತೆಗಳನ್ನು ಸರಿಪಡಿಸಲು 45 ಕೋಟಿ ರೂ.ಗಳನ್ನು ಸುರಿದಿದೆ. ಬೆಂಗಳೂರಿನಲ್ಲಿ ಎರಡು ವಾರಗಳ ಕಾಲ ಸುರಿದ ನಿರಂತರ ಮಳೆಗೆ ಮುಚ್ಚಿದ್ದ ರಸ್ತೆ ಗುಂಡಿಗಳು ಮತ್ತೆ ಕಾಣಿಸಿಕೊಂಡಿವೆ. ಕೇವಲ ಮುಚ್ಚಲು ಬಳಸಿದ್ದ ಜಲ್ಲಿ, ಮರಳು, ಡಾಂಬರು ಮಾತ್ರ ಕೊಚ್ಚಿ ಹೋಗಿಲ್ಲ. ಮತ್ತಷ್ಟು ಆಳಕ್ಕೆ ಇಳಿದಿವೆ. ವಾಹನ ಸವಾರರು ಬಿಬಿಎಂಪಿಗೆ ಹಿಡಿಶಾಪ ಹಾಕುವುದನ್ನು ಮುಂದುವರೆಸಿದ್ದಾರೆ. ರಸ್ತೆಗುಂಡಿಗಳನ್ನು ಮುಚ್ಚಲು ಅದ್ಯಾವ ತಂತ್ರಜ್ಞಾನವನ್ನು ಬಳಸಿಕೊಂಡಿದೆಯೋ ದೇವರೇ ಬಲ್ಲ ಎಂದು ಹೇಳುತ್ತಿದ್ದಾರೆ.
ಕೇವಲ ಒಂದು ಮಳೆಗೆ ಮುಚ್ಚಿದ್ದ ಗುಂಡಿಗಳೆಲ್ಲಾ ಮತ್ತೆ ಉದ್ಭವವಾಗಿವೆ. ಪಾಲಿಕೆ ಕಳಪೆ ಗುಣಮಟ್ಟದ ಕಚ್ಚಾವಸ್ತುಗಳನ್ನು ಬಳಸುತ್ತಿರುವುದರಿಂದ ಗುಂಡಿಗಳು ಹಾಗೆಯೇ ಉಳಿದಿವೆ. ಈಗಲಾದರೂ ಬಿಬಿಎಂಪಿ ಉತ್ತಮ ಗುಣಮಟ್ಟದ ತಂತ್ರಜ್ಞಾನ ಅಳವಡಿಸಿಕೊಂಡು ಗುಣಮಟ್ಟದ ವಸ್ತುಗಳನ್ನು ಬಳಸಬೇಕು ಎಂದು ನಾಗರಿಕರು ಆಗ್ರಹಪಡಿಸಿದ್ದಾರೆ. ಒಂದು ಕಿಮೀ ರಸ್ತೆಯಲ್ಲಿಯೇ ಹತ್ತಾರು ಗುಂಡಿಗಳಿವೆ. ಟ್ರಾಫಿಕ್ ಸಮಸ್ಯೆಯು ನಮ್ಮನ್ನು ಮತ್ತಷ್ಟು ಹೈರಾಣಾಗಿಸುತ್ತದೆ ಎಂದು ಪ್ರತಿದಿನ ಮಾಗಡಿ ರಸ್ತೆಯ ಭಾಗದಲ್ಲಿ ಪ್ರಯಾಣಿಸುವ ದೇವರಾಜ್ ಹೇಳುತ್ತಾರೆ.
ಬೆಂಗಳೂರಿನ ಯಾವ ಭಾಗದಲ್ಲಿ ರಸ್ತೆ ಗುಂಡಿಗಳಿವೆ ಎಂದು ಹೇಳುವುದಾದರೂ ಹೇಗೆ? ಬಹುತೇಕ ಭಾಗಗಳಲ್ಲಿ ಗುಂಡಿಗಳದ್ದೇ ಕಾರುಬಾರು ಎನ್ನುತ್ತಾರೆ ಕೆ.ಆರ್.ಪುರದಿಂದ ನಗರಕ್ಕೆ ಉದ್ಯೋಗಕ್ಕಾಗಿ ಆಗಮಿಸುವ ಹರೀಶ್, ಪ್ರತಿದಿನ ಗುಂಡಿಗಳಿರುವ ರಸ್ತೆಗಳಲ್ಲಿ ವಾಹನ ಚಲಾಯಿಸಿ ಬೆನ್ನು ನೋವಿನಿಂದ ಬಳಲುತ್ತಿದ್ದೇನೆ. ವೈದ್ಯರು ಫಿಜಿಯೋಥೆರಪಿ ಮಾಡಿಸಿಕೊಳ್ಳಲು ಸಲಹೆ ನೀಡಿದ್ದಾರೆ ಎನ್ನುತ್ತಾರೆ ಖಾಸಗಿ ಕಂಪನಿ ಉದ್ಯೋಗಿ ಪೂರ್ಣಿಮಾ.
ನಗರದ ಪ್ರತಿ ವಾರ್ಡ್ ಗೆ 15 ಲಕ್ಷ ರೂಗಳಂತೆ 255 ವಾರ್ಡ್ ಗಳಿಗೆ 38.29 ಕೋಟಿ ರೂ ವೆಚ್ಚ ಮಾಡಲಾಗಿದೆ. ಉಪ ರಸ್ತೆಗಳ ರಿಪೇರಿಗೆ ಹೆಚ್ಚುವರಿಯಾಗಿ 6 ಕೋಟಿ ರೂ ಖರ್ಚು ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ. ವಿಐಪಿ ಸಂಚಾರವಿರುವ ವಿಧಾನಸೌಧ ರಸ್ತೆ, ಸದಾಶಿವನಗರ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಆರ್‌ಟಿ ನಗರ, ಡಾಲರ್ಸ್ ಕಾಲೊನಿಯಂಥ ಬಡಾವಣೆಗಳ ರಸ್ತೆಗಳು ಉತ್ತಮವಾಗಿದ್ದರೆ ಸಾಕೇ? ಶ್ರೀ ಸಾಮಾನ್ಯರು ಸಂಚರಿಸುವ ರಸ್ತೆಗಳೂ ಚೆನ್ನಾಗಿರಬೇಕಲ್ಲವೇ? ಉತ್ತಮವಾಗಿರಬೇಲ್ಲವೇ ಎಂದು ಜಾನ್ ಸುಂದರ್ ಪ್ರಶ್ನಿಸುತ್ತಾರೆ.
ಸೆಪ್ಟಂಬರ್ ಕೊನೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 14 ಸಾವಿರ ರಸ್ತೆ ಗುಂಡಿಗಳನ್ನು ಮುಚ್ಚಿರುವುದಾಗಿ ಬೆಂಗಳೂರಿನ ಜವಾಬ್ದಾರಿ ಹೊತ್ತಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದರು. ಈಗ ಸರ್ಕಾರವಂತೂ ಗುಂಡಿಗಳನ್ನು ಮುಚ್ಚಲು ಪದೇಪದೆ ಗಡುವು ನೀಡುತ್ತಲೇ ಬರುತ್ತಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ಗುಂಡಿಗಳನ್ನು ಮುಚ್ಚುವುದು ಎಂದರೆ ಕಚ್ಚಾ ವಸ್ತುಗಳನ್ನು ಗುಂಡಿಗೆ ಸುರಿಯಲಾಗುತ್ತದೆ. ಇದು ವೈಜ್ಞಾನಿಕ ವಿಧಾನ ಅಲ್ಲ. ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಯಾವುದೇ ಆಧುನಿಕ ವಿಧಾನವನ್ನು ಅಳವಡಿಸಿಕೊಂಡಿಲ್ಲ. ಹಾಗಾಗಿ ಮಳೆ ಬಂದಾಗ ನೀರೆಲ್ಲಾ ಗುಂಡಿಯೊಳಗೆ ಇಳಿದು ಕಚ್ಚಾ ವಸ್ತು ಮೇಲೆ ಬಂದು ಕೊಚ್ಚಿ ಹೋಗುತ್ತದೆ. ಮಳೆ ನಿಂತ ಕೂಡಲೇ ಮತ್ತೆ ರಸ್ತೆ ಗುಂಡಿಗಳನ್ನು ಮುಚ್ಚುವುದಾಗಿ ಬಿಬಿಎಂಪಿ ಭರವಸೆ ನೀಡಿದೆ. ಶ್ರೀಸಾಮಾನ್ಯ ಮಾತ್ರ ಎಂದಿನಂತೆ ಗುಂಡಿಗಳ ಮಧ್ಯೆ ರಸ್ತೆಯನ್ನು ಹುಡುಕಿಕೊಂಡು ಪ್ರಯಾಣಿಸಬೇಕಾಗಿದೆ.