logo
ಕನ್ನಡ ಸುದ್ದಿ  /  ಕರ್ನಾಟಕ  /  ವಿಪಿ ಬಳಿಗಾರ್ ಸಂದರ್ಶನ: ಬೆಂಗಳೂರು ಇಷ್ಟಪಡುವ ಅಧಿಕಾರಿಗಳಿಗೆ ಕನ್ನಡವೇಕೆ ಅಪಥ್ಯ? ಆಡಳಿತ ನಡೆಸುವವರಿಗೆ ಅರ್ಥವಾಗಬೇಕಾದ ಸತ್ಯಗಳಿವು

ವಿಪಿ ಬಳಿಗಾರ್ ಸಂದರ್ಶನ: ಬೆಂಗಳೂರು ಇಷ್ಟಪಡುವ ಅಧಿಕಾರಿಗಳಿಗೆ ಕನ್ನಡವೇಕೆ ಅಪಥ್ಯ? ಆಡಳಿತ ನಡೆಸುವವರಿಗೆ ಅರ್ಥವಾಗಬೇಕಾದ ಸತ್ಯಗಳಿವು

Umesh Kumar S HT Kannada

Oct 31, 2024 12:19 PM IST

google News

ಕನ್ನಡ ರಾಜ್ಯೋತ್ಸವ ನಿಮಿತ್ತ ನಿವೃತ್ತ ಐಎಎಸ್‌ ಅಧಿಕಾರಿ ವಿಪಿ ಬಳಿಗಾರರ ಸಂದರ್ಶನ.

  • ಕನ್ನಡ ರಾಜ್ಯೋತ್ಸವ 2024: ಕರ್ನಾಟಕದಲ್ಲೇ ಕನ್ನಡ ಉಳಿಯದಿದ್ದರೆ ಇನ್ನೆಲ್ಲಿರುತ್ತೆ? ಆಡಳಿತದಲ್ಲಿ ಕನ್ನಡ ಬರಬೇಕಾದರೆ ಇದು ಕನ್ನಡಿಗರ ಸರ್ಕಾರ ಎಂದು ಒಪ್ಪಿಕೊಳ್ಳಬೇಕು. ಇದು ನಿವೃತ್ತ ಐಎಎಸ್‌ ಅಧಿಕಾರಿ ವಿಪಿ ಬಳಿಗಾರರ ಸ್ಪಷ್ಟ ಅಭಿಪ್ರಾಯ. 2000 ಪದಗಳ ಈ ಸುದೀರ್ಘ ಸಂದರ್ಶನ ಆಧರಿತ ಬರಹದಲ್ಲಿ ಕನ್ನಡದ ಕಾಯಕಲ್ಪಕ್ಕಾಗಿ ಆಗಬೇಕಾದ್ದೇನು ಎಂದು ಬಳಿಗಾರ್ ವಿವರಿಸಿದ್ದಾರೆ

ಕನ್ನಡ ರಾಜ್ಯೋತ್ಸವ ನಿಮಿತ್ತ ನಿವೃತ್ತ ಐಎಎಸ್‌ ಅಧಿಕಾರಿ ವಿಪಿ ಬಳಿಗಾರರ ಸಂದರ್ಶನ.
ಕನ್ನಡ ರಾಜ್ಯೋತ್ಸವ ನಿಮಿತ್ತ ನಿವೃತ್ತ ಐಎಎಸ್‌ ಅಧಿಕಾರಿ ವಿಪಿ ಬಳಿಗಾರರ ಸಂದರ್ಶನ.

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು ಎನ್ನುವ ಕೂಗು, ಒತ್ತಾಯ ಮತ್ತು ಪ್ರಯತ್ನ ಇಂದು ನಿನ್ನೆಯದಲ್ಲ. 1980ರ ದಶಕದಲ್ಲಿಯೇ ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸುವುದಕ್ಕೆ ಕನ್ನಡ ಭಾಷಾ ಕಾವಲು ಸಮಿತಿ ರಚಿಸಲಾಗಿತ್ತು. ಆಡಳಿತದಲ್ಲಿ ಕನ್ನಡ ಭಾಷೆಯ ಬಳಕೆಯ ಆಶಯ, ಅನುಷ್ಠಾನ ಮತ್ತು ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮುಂದುವರಿಯುತ್ತಲೇ ಇದೆ. ಇಂಥ ಹಲವು ವಿಚಾರಗಳ ಬಗ್ಗೆ ಕರ್ನಾಟಕ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಐಎಎಸ್ ಅಧಿಕಾರಿ ವಿ.ಪಿ.ಬಳಿಗಾರ್ ಅವರ ಅಭಿಪ್ರಾಯ ತಿಳಿಯುವ ಪ್ರಯತ್ನವನ್ನು 'ಎಚ್‌ಟಿ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ ಉಮೇಶ್ ಕುಮಾರ್ ಶಿಮ್ಲಡ್ಕ ಮಾಡಿದ್ದಾರೆ. ಸುಮಾರು 2000 ಪದಗಳ, ಸಂದರ್ಶನ ಆಧರಿತ ಈ ಸುದೀರ್ಘ ಬರಹವು ಆಡಳಿತದಲ್ಲಿ ಕನ್ನಡ ಭಾಷೆಯ ಬಳಕೆ, ಅಧಿಕಾರಿಗಳ ಸ್ಪಂದನೆ ಮತ್ತು ಪ್ರತಿಕ್ರಿಯೆ, ಜನಸಾಮಾನ್ಯರ ನಿರೀಕ್ಷೆಗಳ ಬಗ್ಗೆ ಸಮರ್ಥವಾಗಿ ಬೆಳಕು ಚೆಲ್ಲುತ್ತದೆ. ವಿ.ಪಿ. ಬಳಿಗಾರ್ ಅವರ ಮಾತುಗಳ ಅಕ್ಷರ ರೂಪ ಇಲ್ಲಿದೆ.

***

ಕರ್ನಾಟಕದಲ್ಲಿ ಕನ್ನಡವು ಆಡಳಿತ ಭಾಷೆಯಾಗಿ ಕನ್ನಡ ಮೂರು ಹಂತಗಳಲ್ಲಿ ಅನುಷ್ಠಾನಗೊಂಡಿದೆ. ಗ್ರಾಮ ಪಂಚಾಯಿತಿ, ತಾಲೂಕು, ಜಿಲ್ಲಾ ಪಂಚಾಯಿತಿ, ರಾಜ್ಯ ಸರ್ಕಾರದ ಮಟ್ಟದಲ್ಲಿ ಆಡಳಿತ ಭಾಷೆಯಾಗಿ ಕನ್ನಡ ಇದೆ. ಈ ಪೈಕಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶೇ 100 ರಷ್ಟು ಅನುಷ್ಠಾನವಾಗಿದೆ. ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ತಳಮಟ್ಟದ ಅಧಿಕಾರಿಗಳ ಹಂತದಲ್ಲಿ ಕನ್ನಡ ಬಳಕೆಯಲ್ಲಿದೆ. ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳ ಹಂತದಲ್ಲಿ ಕನ್ನಡ ಬಳಕೆ ಆಗಬೇಕಾದರೂ, ಎಲ್ಲ ಅಧಿಕಾರಿಗಳೂ ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ಮನಸ್ಸು ಮಾಡುತ್ತಿಲ್ಲ.

ಆದೇಶ ಅಥವಾ ಇನ್ಯಾವುದಾದರೂ ಟಿಪ್ಪಣಿ, ಸುತ್ತೋಲೆ ಸಿದ್ಧಪಡಿಸಬೇಕಾಗಿ ಬಂದಾಗ ಈ ಅಧಿಕಾರಿಗಳು ಇಂಗ್ಲಿಷ್‌ನಲ್ಲೇ ಉಕ್ತಲೇಖನ ಕೊಡುತ್ತಾರೆ. ಅದನ್ನು ಬರೆದುಕೊಂಡು ಹೋದ ಕೆಳಹಂತದ ಅಧಿಕಾರಿಗಳು ಕನ್ನಡಕ್ಕೆ ತರ್ಜುಮೆ ಮಾಡುತ್ತಾರೆ. ತಾಲೂಕು ಮತ್ತು ಜಿಲ್ಲಾ ಪಂಚಾಯಿ ಮಟ್ಟದಲ್ಲಿ ಈ ರೀತಿ ಆಗಬಾರದು. ಉಕ್ತಲೇಖನ ಕೊಡುವಾಗಲೇ ಕನ್ನಡದಲ್ಲಿ ಕೊಡುವಂತಾಗಬೇಕು. ಅದು ಸುಲಭ. ಇಂಗ್ಲಿಷ್ ಭಾಷೆಯ ಪದಗಳಿಗೆ ಬೇರೆಬೇರೆ ಅರ್ಥಗಳಿರುತ್ತವೆ. ಅವನ್ನು ಕೆಳ ಹಂತದ ಅಧಿಕಾರಿಗಳು ಅರ್ಥ ಮಾಡಿಕೊಂಡು ಬರೆಯುವುದು ಸುಲಭವಲ್ಲ.

ಆಡಳಿತ ವ್ಯವಸ್ಥೆಯು ಜನರನ್ನು ತಲುಪುವುದು ತಳಹಂತದಲ್ಲಿಯೇ. ಸಾರ್ವಜನಿಕರಿಗೆ ಸರ್ಕಾರದ ಸಂದೇಶ ಸರಿಯಾಗಿ ಅರ್ಥವಾಗಬೇಕು. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಗಮನ ಕೊಡಬೇಕು. ಆಸ್ಥೆಯಿಂದ ಕನ್ನಡವನ್ನು ಬಳಸಬೇಕು. ಇಲ್ಲಿ ಒಂದು ಘಟನೆ ಉಲ್ಲೇಖಿಸಬೇಕು ಎನ್ನಿಸುತ್ತಿದೆ.

ಶಿವಮೊಗ್ಗದ ಕಾರ್ಯಕ್ರಮದಲ್ಲಿ ಕನ್ನಡವೇ ಇರಲಿಲ್ಲ

ಎರಡು ಮೂರು ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ಸಿಆರ್‌ಪಿಎಫ್‌ನ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವರು ಬಂದಿದ್ದರು. ಆ ಕಾರ್ಯಕ್ರಮದಲ್ಲಿ ಎಲ್ಲವೂ ಹಿಂದಿ ಮಯವಾಗಿತ್ತು. ಕರ್ನಾಟಕದ ಸಚಿವರು, ಅಧಿಕಾರಿಗಳು ಎಲ್ಲರೂ ಭಾಗಿಯಾಗಿದ್ದರು. ಆದರೆ ಆಹ್ವಾನ ಪತ್ರಿಕೆ, ಬ್ಯಾನರ್‌, ಕಾರ್ಯಕ್ರಮ ಎಲ್ಲೂ ಕನ್ನಡ ಬಳಕೆಯಾಗಲೇ ಇಲ್ಲ. ಕಾರ್ಯಕ್ರಮ ಕರ್ನಾಟಕದಲ್ಲಿ ಅದೂ ಕನ್ನಡದ ಕೇಂದ್ರ ಭಾಗದಲ್ಲಿ ಕುವೆಂಪು ಅವರ ನಾಡಿನಲ್ಲಿ ಆಗಿತ್ತು. ಕನ್ನಡ ಎಳ್ಳಷ್ಟೂ ಇರಲಿಲ್ಲ.

ನಮಗೆ ಕನ್ನಡ ಹೆತ್ತಮ್ಮ ಆಗಿರಬೇಕು. ಇಂಗ್ಲಿಷ್, ಹಿಂದಿ ಅಥವಾ ಇನ್ಯಾವುದೇ ಭಾಷೆ ಚಿಕ್ಕಮ್ಮ, ದೊಡ್ಡಮ್ಮ ಅಥವಾ ಆಂಟಿ ಏನು ಬೇಕಾದರೂ ಆಗಬಹುದು. ಐಎಎಸ್ ಅಧಿಕಾರಿಗಳು ಸಹ ಈ ಅಂಶವನ್ನು ಮರೆತಿದ್ದರು. ಇದು ಅತ್ಯಂತ ಖೇದಕರ ವಿಚಾರ. ಮಾರನೇ ದಿನ ಮಾಧ್ಯಮಗಳಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ವರದಿ ಪ್ರಕಟವಾದ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿತು. ನಮ್ಮತನವನ್ನು, ಕನ್ನಡವನ್ನು ನಾವು ಬಿಟ್ಟುಕೊಟ್ಟರೆ ಇನ್ಯಾರು ಅದನ್ನು ಎತ್ತಿ ಮರೆಸುತ್ತಾರೆ?

ಕನ್ನಡವನ್ನು ನಮ್ಮದಾಗಿಸಿಕೊಳ್ಳಬೇಕು

ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಆಡಳಿತ ಹೇಗೆ ನಡೆಯುತ್ತದೆ ಎಂದು ಒಮ್ಮೆ ಗಮನಿಸಿ. ಕೇಂದ್ರ ಸರ್ಕಾರದ ಜೊತೆಗೆ ತಮಿಳುನಾಡು ಸರ್ಕಾರದ ಸಂವಹನ ಅವರ ಪ್ರಾದೇಶಿಕ ಭಾಷೆಯಲ್ಲೇ ನಡೆಯುತ್ತದೆ. ಕೇಂದ್ರ ಸರ್ಕಾರ ಹಿಂದಿಯಲ್ಲಿ ಕಳುಹಿಸುವ ಸೂಚನೆಗಳಿಗೆ ತಮಿಳುನಾಡಿನ ಅಧಿಕಾರಿಗಳು ತಮಿಳು ಭಾಷೆಯಲ್ಲೇ ಉತ್ತರಿಸುತ್ತಾರೆ. ಹಿಂದಿ ಭಾಷೆಯನ್ನು ನಾವು ಹೇಗೆ ಭಾಷಾಂತರಕಾರರನ್ನು ಇಟ್ಟುಕೊಂಡು ಅರ್ಥಮಾಡಿಕೊಳ್ಳುತ್ತೇವೆಯೋ ಹಾಗೆ ನೀವು ಕೂಡ ತಮಿಳನ್ನು ಅರ್ಥಮಾಡಿಕೊಳ್ಳಿ ಎಂಬ ದಿಟ್ಟತನವನ್ನು ತೋರುತ್ತಾರೆ. ಕರ್ನಾಟಕದಲ್ಲಿ ಅಂಥ ದಿಟ್ಟತನ ತೋರುವುದು ಸಾಧ್ಯವಾಗುತ್ತಿಲ್ಲ.

ಇದು ಮೊದಲು ಸಾಧ್ಯವಾಗಲು ನಮ್ಮ ಆಡಳಿತದ ಸಂವಹನದ ಭಾಷೆ ಕನ್ನಡವೇ ಆಗಿರಬೇಕು. ನಮ್ಮ ಕಂಪ್ಯೂಟರ್, ಇಮೇಲ್, ವಾಟ್ಸ್‌ಆಪ್‌ಗಳಲ್ಲಿ ಸಂವಹನ ಇಂಗ್ಲಿಷ್‌ ಭಾಷೆಯಲ್ಲಿ ಅಲ್ಲ, ಕನ್ನಡದಲ್ಲೇ ಆಗಬೇಕು. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಪೊಲೀಸ್ ವರಿಷ್ಠಾಧಿಕಾರಿಗಳ ನಡುವೆ ಅಧಿಕೃತ ಸಂವಹನಗಳು ಕನ್ನಡದಲ್ಲೇ ಆಗಬೇಕು. ಪ್ರಸ್ತುತ ಇದು ಸಾಮಾನ್ಯವಾಗಿ ಇಂಗ್ಲಿಷ್‌ನಲ್ಲಿ ನಡೆಯುತ್ತದೆ. ವೈಯಕ್ತಿಕ ಸಂದೇಶಗಳಿಗೆ ಇಂಗ್ಲಿಷ್ ಭಾಷೆಯಿದ್ದರೆ ಸಮಸ್ಯೆ ಇಲ್ಲ. ಆದರೆ ಉಳಿದ ಕಚೇರಿ ಕೆಲಸಕ್ಕೆ ಸಂಬಂಧಿಸಿದ ಸಂವಹನ ಕನ್ನಡದಲ್ಲೇ ಇರಬೇಕು. ಇದು ಕಡ್ಡಾಯ ಆಗಬೇಕು. ಅಧಿಕಾರಿಗಳು ಇಂಗ್ಲಿಷ್‌ನಲ್ಲಿ ಆಲೋಚನೆ ಮಾಡುವುದನ್ನು ಬಿಡಬೇಕು. ಕನ್ನಡವನ್ನು, ಕರ್ನಾಟಕವನ್ನು ನಮ್ಮದಾಗಿಸಿಕೊಳ್ಳಬೇಕು.

ಭಾಷಾಂತರ ಇಲಾಖೆ ಸದೃಢವಾಗಬೇಕು

ಅಧಿಕಾರಿಗಳು ಜನಪರವಾಗಿ ಆಲೋಚಿಸಬೇಕು. ಕರ್ನಾಟಕದಲ್ಲಿ ಜನರ ಭಾಷೆ ಕನ್ನಡ. ಹಾಗಾಗಿ ಅಧಿಕಾರಿಗಳು ಕನ್ನಡದಲ್ಲಿ ಆಲೋಚಿಸಿದರೆ ಮಾತ್ರವೇ ಜನಪರವಾಗಿ, ಜನರೊಡನೆ ಸಂಪರ್ಕ ಸಾಧಿಸಲು ಸಾಧ್ಯ. ಜನರ ಮನೋಭಾವಗಳು ಅರ್ಥವಾಗಬಹುದು. ಅವರಿಗೆ ಸ್ಪಂದಿಸುವುದು ಸಾಧ್ಯವಾಗುತ್ತದೆ. ಸಾರ್ವಜನಿಕ ನಿಗಮ ಮಂಡಳಿ, ವಿಶ್ವವಿದ್ಯಾನಿಲಯಗಳು ಮತ್ತು ಇತರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡದ ಬಳಕೆ ಹೆಚ್ಚಾಗಬೇಕು. ವ್ಯಾವಹಾರಿಕವಾಗಿ ಕೂಡ ಹೆಚ್ಚು ಹೆಚ್ಚು ಕನ್ನಡ ಬಳಸಬೇಕು. ಇದಕ್ಕೆ ಬೇಕಾದಂತೆ ಅಧಿಕಾರಿಗಳನ್ನು ಸಜ್ಜಗೊಳಿಸುವ ಕೆಲಸ ಮಾಡಬೇಕು. ಸರ್ಕಾರ ಈ ಬಗ್ಗೆ ಮುತುವರ್ಜಿ ತೋರಿಸಿದರೆ ಮಾತ್ರವೇ ಇದು ಕಡ್ಡಾಯವಾಗಿ ಅನುಷ್ಠಾನವಾಗಲು ಸಾಧ್ಯ.

ಉಪ ಕಾರ್ಯದರ್ಶಿ ಸ್ತರದಲ್ಲಿ ಕೆಲಸ ಮಾಡುವವರು ಕನ್ನಡದಲ್ಲೇ ವ್ಯವಹರಿಸಬೇಕು. ಕೇಂದ್ರ ಸರ್ಕಾರದ ಅಧಿಸೂಚನೆಗಳು, ಸುತ್ತೋಲೆಗಳು ಎಲ್ಲವೂ ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಬರುತ್ತಿವೆ. ಅವು ಹಾಗೆಯೇ ಗ್ರಾಮ ಪಂಚಾಯಿತಿ ಮಟ್ಟಕ್ಕೂ ರವಾನೆಯಾಗುತ್ತಿವೆ. ಇಂಥ ಸಂದರ್ಭಗಳಲ್ಲಿ ಭಾಷಾಂತರ ಇಲಾಖೆಯ ನೆರವು ಪಡೆದು ಅವುಗಳನ್ನು ಕನ್ನಡಕ್ಕೆ ಅನುವಾದಿಸಿ ಗ್ರಾಮ ಪಂಚಾಯಿಗಳಿಗೆ ಕಳುಹಿಸಬೇಕು. ಇದಕ್ಕಾಗಿ ಭಾಷಾಂತರ ಇಲಾಖೆಯನ್ನು ಬಲಗೊಳಿಸುವ ಕೆಲಸ ಮಾಡಬೇಕು. ಅದು ಸಬಲವಾಗಬೇಕು.

ಚಿರಂಜೀವಿ ಸಿಂಗ್ ಅವರಂತೆ ಅಧಿಕಾರಿಗಳು ಕನ್ನಡದವರಾಗಬೇಕು

ಕರ್ನಾಟಕದಲ್ಲಿ ವ್ಯಾವಹಾರಿಕ ಮತ್ತು ಆಡಳಿತ ಭಾಷೆಯಾಗಿ ಕನ್ನಡಕ್ಕೆ ಪ್ರಥಮ ಆದ್ಯತೆ ಸಿಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಗ್ರಾಮ ಪಂಚಾಯಿತಿಯಿಂದ ರಾಜ್ಯ ಮಟ್ಟದವರೆಗೂ ಇದು ಹೀಗೆಯೇ ಇರಬೇಕು. ಕರ್ನಾಟಕದಲ್ಲಿ ನಾಗರಿಕ ಸೇವಾ ಅಧಿಕಾರಿಯಾಗಿ ಬಂದು ಕನ್ನಡದವರೇ ಆದವರ ಬಗ್ಗೆ ಯೋಚಿಸಿದರೆ, ನಮಗೆ ಮಾದರಿಯಾಗಿ ಕಾಣಿಸುವವರು ಶ್ರೀಯುತ ಚಿರಂಜೀವಿ ಸಿಂಗ್.

ಮೈಸೂರಿನಲ್ಲಿರುವ ಆಡಳಿತ ತರಬೇತಿ ಸಂಸ್ಥೆಯಲ್ಲಿ ಸಾಮಾನ್ಯವಾಗಿ ಹಿರಿಯ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆ. ಚಿರಂಜೀವಿ ಸಿಂಗ್ ಅವರು ಹೊರ ರಾಜ್ಯದಿಂದ ಬಂದು ಕನ್ನಡಿಗರಾದ ಅಧಿಕಾರಿ. ಕನ್ನಡಿಗರಿಗಿಂತಲೂ ಹೆಚ್ಚು ಕನ್ನಡ ಬಳಕೆ, ಕನ್ನಡಾಭಿಮಾನ, ರಾಜ್ಯಾಭಿಮಾನ ಮೆರೆದವರು. ಅವರು ಮೈಸೂರು ಆಡಳಿತ ತರಬೇತಿ ಸಂಸ್ಥೆಯಲ್ಲಿದ್ದಾಗ ಅಧಿಕಾರಿಗಳ ತರಬೇತಿಗೆ ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸಂಪನ್ಮೂಲ ವ್ಯಕ್ತಿಯಾಗಿ ಕರೆಸುತ್ತಿದ್ದರು. ಗಂಗೂಬಾಯಿ ಹಾನಗಲ್ ಮುಂತಾದವರೆಲ್ಲ ಬಂದು ಅಧಿಕಾರಿಗಳ ಜೊತೆಗೆ ತಮ್ಮ ಅನುಭವ ಹಂಚಿಕೊಂಡಿದ್ದರು, ಈ ಉಪಕ್ರಮಗಳು ಹೊರ ರಾಜ್ಯದ ಅಧಿಕಾರಿಗಳಿಗೆ ಕನ್ನಡವನ್ನು ಪರಿಚಯಿಸುವಲ್ಲಿ, ಕನ್ನಡಿಗರನ್ನು ಅರ್ಥ ಮಾಡಿಕೊಳ್ಳುವಲ್ಲಿ ನೆರವಾಗುತ್ತದೆ. ಅಷ್ಟೆ ಅಲ್ಲ ಕರ್ನಾಟಕದ ನಾಡು, ನುಡಿ, ಸಂಸ್ಕೃತಿಗಳ ಪರಿಚಯ ಮಾಡಿಕೊಡುತ್ತದೆ. ಇದು ನೆಲಮಟ್ಟದಲ್ಲಿ ಕನ್ನಡಿಗರೊಂದಿಗೆ ಬೆರೆಯಲು ಅಧಿಕಾರಿಗಳಿಗೆ ನೆರವಾಗುತ್ತದೆ. ಅಂದು ಅದು ಚಿರಂಜೀವಿ ಸಿಂಗ್ ಅವರ ಒತ್ತಾಸೆಯಲ್ಲಿ ನಡೆಯುತ್ತಿತ್ತು. ಇಂತಹ ಉಪ್ರಕಮ ಈಗ ನಡೆಯುತ್ತಿರುವಂತೆ ಕಾಣುತ್ತಿಲ್ಲ.

ಚಿರಂಜೀವಿ ಸಿಂಗ್ ನಾಗರಿಕ ಸೇವೆಗೆ ಬಂದು ಪೂರ್ತಿಯಾಗಿ ಕನ್ನಡಿಗರಾಗಿ ಬದಲಾದರು. ಹೀಗೆ, ಅಧಿಕಾರಿಗಳಲ್ಲಿ ಕನ್ನಡ ಭಾಷೆ ಬಳಕೆ, ಕನ್ನಡಿಗ ಭಾವನೆ ಅದು ಅಂತರಾಳದಿಂದ ಬರಬೇಕು. ಅಧಿಕಾರಿಗಳು ಮಾನಸಿಕವಾಗಿ ಬದಲಾಗಬೇಕು. ಹಿಂದೆಲ್ಲ ಅಧಿಕಾರಿಗಳು ಸಿನಿಮಾ ನೋಡಿ ವಿಶೇಷವಾಗಿ ಡಾ ರಾಜ್ ಕುಮಾರ್ ಅವರ ಸಿನಿಮಾ ನೋಡಿಯೇ ಕನ್ನಡ ಕಲಿತಿದ್ದಾರೆ. ವ್ಯಾವಹಾರಿಕ ತಿಳಿವಳಿಕೆಗೆ ಅಗತ್ಯ ಇರುವಷ್ಟು ಕನ್ನಡ ಭಾಷೆ ಬಳಸಲಾರಂಭಿಸಿದ್ದರು. ಈಗ ಕನ್ನಡ ಸಿನಿಮಾದ ದಿಕ್ಕು ಬದಲಾಗಿದೆ. ಇರಲಿ, ಕರ್ನಾಟಕಕ್ಕೆ ಬಂದ ಅಧಿಕಾರಿಗಳು ಮಾನಸಿಕವಾಗಿ ತಾವು ಇನ್ನು ಕರ್ನಾಟಕದಲ್ಲಿ ಸೇವೆ ಸಲ್ಲಿಸಬೇಕು. ಆದ್ದರಿಂದ ಕನ್ನಡಿಗರೊಂದಿಗೆ ಒಡನಾಡಲು ಕನ್ನಡ ಕಲಿಯಬೇಕು ಎಂಬ ಭಾವನೆಯನ್ನು ತುಂಬಿಕೊಂಡಿರಬೇಕು. ಅಧಿಕಾರಿಗಳಿಗೆ ಕನ್ನಡ ಕಲಿಯಲು ಸಾಕಷ್ಟು ಅವಕಾಶ ಇದೆ. ಕನ್ನಡ ಕಲಿಸುವ ಬೋಧಕರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಸೇವಾ ನಿಯಮದಲ್ಲಿ ಅವಕಾಶ ಇದೆ. ಅದನ್ನು ಬಳಸಿಕೊಂಡು ಕನ್ನಡ ಕಲಿತು ಬಳಕೆ ಮಾಡುವ ಪ್ರಯತ್ನ ಮಾಡಬೇಕು.

ಕನ್ನಡ ಕಲಿತರೆ ಮಾತ್ರವೇ ಪೋಸ್ಟಿಂಗ್ ಎಂಬ ನಿಯಮ ಬರಲಿ

ನಾಗರಿಕ ಸೇವಾ ಸ್ತರದ ಅಧಿಕಾರಿಗಳು ಕರ್ನಾಟಕಕ್ಕೆ ಬರಬೇಕೆಂದು ಬಯಸುತ್ತಾರೆ. ಪೋಸ್ಟಿಂಗ್‌ಗಾಗಿ ಹಾತೊರೆಯುತ್ತಾರೆ. ಇಲ್ಲಿ ಸೇವೆ ಮಾಡುತ್ತಿರುವ ಐಎಎಸ್, ಐಪಿಎಸ್‌, ಐಎಫ್‌ಎಸ್ ಅಧಿಕಾರಿಗಳು ಅನ್ಯ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಐಎಎಸ್‌, ಐಪಿಎಸ್‌, ಐಎಸ್‌ಎಫ್ ಅಧಿಕಾರಿಗಳನ್ನು ವಿವಾಹವಾದರೆ ಕರ್ನಾಟಕಕ್ಕೆ ವರ್ಗಾವಣೆ ಮಾಡಿಸಿಕೊಳ್ಳಬಹುದು ಎನ್ನುವ ನಿಯಮವೂ ಇದೆ. ಸಾಮಾನ್ಯವಾಗಿ ಹೀಗೆ ಬಂದ ಅಧಿಕಾರಿಗಳು ಜಿಲ್ಲಾಮಟ್ಟಕ್ಕೆ ಅಧಿಕಾರಿಗಳಾಗಿ ಹೋಗುವುದಿಲ್ಲ. ಇವರೆಲ್ಲರೂ ಬೆಂಗಳೂರಿನಲ್ಲೇ ಇರುತ್ತಾರೆ. ವಿವಿಧ ನಿಗಮ, ಮಂಡಳಿ, ಐಟಿ, ಬಿಟಿ ಉದ್ಯಮಗಳಿಗೆ ಸಂಬಂಧಿಸಿದ ಕಚೇರಿಗಳಲ್ಲಿ ಆಡಳಿತಾಧಿಕಾರಿಗಳಾಗಿ ಮುಂದುವರಿಯುತ್ತಾರೆ. ಅಲ್ಲಿ ಕನ್ನಡ ಬೇಕಾಗುವುದಿಲ್ಲ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ.

ಇತರ ರಾಜ್ಯಗಳಿಂದ ವರ್ಗಾವಣೆಯಾಗಿ ಬಂದ ಅಧಿಕಾರಿಗಳು ಕನ್ನಡ ಕಡ್ಡಾಯವಾಗಿ ಕಲಿಯುವಂತೆ ಮಾಡಬೇಕು. ಕನ್ನಡ ಭಾಷೆ ಕಲಿತು ಪರೀಕ್ಷೆ ತೇರ್ಗಡೆಯಾದರೆ ಮಾತ್ರವೇ ಪೋಸ್ಟಿಂಗ್ ಎಂಬ ನಿಯಮ ಜಾರಿಗೊಳಿಸಬೇಕು. ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ ಪುರುಷೋತ್ತಮ ಬಿಳಿಮಲೆ ಈ ನಿಟ್ಟಿನಲ್ಲಿ ಹಲವು ಕೆಲಸಗಳನ್ನು ಮಾಡಲಾರಂಭಿಸಿದ್ದಾರೆ.

ಬೆಂಗಳೂರು ಎಲ್ಲರಿಗೂ ಇಷ್ಟವಾಗುತ್ತೆ, ಸಂಭ್ರಮಿಸುವ ಮೊದಲು ಈ ವಿಚಾರಗಳನ್ನು ಗಮನಿಸಿ

ಕರ್ನಾಟಕ, ಬೆಂಗಳೂರು ಎಲ್ಲರಿಗೂ ಇಷ್ಟ ಆಗುತ್ತೆ. ಅನ್ಯ ರಾಜ್ಯದಿಂದ ಬಂದವರನ್ನು ಕನ್ನಡಿಗರು ಬಹುಬೇಗನೆ ಸ್ವೀಕರಿಸುತ್ತಾರೆ. ಅವರ ಭಾಷೆ, ಸಂಸ್ಕೃತಿ ಯಾವುದೂ ಕನ್ನಡಿಗರಿಗೆ ಅಡ್ಡಿ ಆಗುವುದಿಲ್ಲ. ಅವರ ಅಸ್ತಿತ್ವವನ್ನು ಹಾಗೆಯೇ ಸ್ವೀಕರಿಸುವ ಸ್ವಭಾವ ಕನ್ನಡಿಗರದ್ದು. ಉದ್ಯೋಗ ಅರಸಿಕೊಂಡು, ಉದ್ಯಮ ಸ್ಥಾಪಿಸಬೇಕು ಎಂದು ಬೆಂಗಳೂರಿಗೆ, ಕರ್ನಾಟಕಕ್ಕೆ ಬಂದವರು ಅನೇಕರಿದ್ದಾರೆ. ದೊಡ್ಡದೊಡ್ಡ ಕಂಪನಿಗಳೂ ಬಂದು ತಮ್ಮ ವ್ಯವಹಾರ, ವಹಿವಾಟು ಆರಂಭಿಸಿವೆ. ಲಾಭವನ್ನೂ ಗಳಿಸುತ್ತಿವೆ. ವಿಶೇಷವಾಗಿ 'ದೊಡ್ಡಮಟ್ಟದ ಉದ್ಯಮದಿಂದ ಗ್ರಾಹಕರಿಗೆ' (ಬ್ಯುಸಿನೆಸ್‌ ಟು ಕಸ್ಟಮರ್) ಎಂಬ ಪರಿಕಲ್ಪನೆಯ ಉದ್ಯಮಗಳು ಬೆಂಗಳೂರಿನಲ್ಲಿ ಹೆಚ್ಚು ವಹಿವಾಟು ನಡೆಸುತ್ತಿವೆ.

ಅಮೆಜಾನ್, ಫ್ಲಿಪ್‌ಕಾರ್ಟ್‌, ಸ್ವಿಗ್ಗಿ, ಜೊಮ್ಯಾಟೊ ಸೇರಿ ಹತ್ತು ಹಲವು ಕಂಪನಿಗಳು ಡೆಲಿವರಿ ಏಜೆಂಟ್‌ ಅಥವಾ ಡೆಲಿವರಿ ಪ್ರತಿನಿಧಿಯಾಗಿ ನೇಮಕ ಮಾಡಿಕೊಂಡವರನ್ನು ಗಮನಿಸಿ. ಅವರಲ್ಲಿ ಬಹುತೇಕರು ಹೊರ ರಾಜ್ಯದವರು. ಬಹುಪಾಲು ಯಾರಿಗೂ ಕನ್ನಡ ಬರುವುದಿಲ್ಲ. ಅವರು ಯಾರು ಕೂಡ ಸ್ವಯಂ ಪ್ರೇರಿತರಾಗಿ ಕನ್ನಡ ಕಲಿಯುವುದೂ ಇಲ್ಲ. ಕನ್ನಡ ಕಲಿಯಬೇಕಾದ ಅನಿವಾರ್ಯತೆ ಅವರಿಗೆ ಎದುರಾಗಿಯೂ ಇಲ್ಲ. ಹಾಗಾಗಿ ಅವರು ಕನ್ನಡ ಕಲಿಯಲು ಪ್ರಯತ್ನಿಸುವುದೂ ಇಲ್ಲ.

ನಾನು ಅಮೆಜಾನ್, ಫ್ಲಿಪ್‌ಕಾರ್ಟ್‌ ಅಥವಾ ಇನ್ಯಾವುದೇ ಕಂಪನಿಯ ಡೆಲಿವರಿ ಏಜೆಂಟರು ಮನೆಗೆ ಉತ್ಪನ್ನಗಳನ್ನು ಮನೆಗೆ ತಲುಪಿಸಲು ಬಂದರೆ ಆಗ ಅವರ ಬಳಿ ಕನ್ನಡದಲ್ಲೇ ಮಾತನಾಡುತ್ತೇನೆ. ಅವರು ಕನ್ನಡ ಬರುವುದಿಲ್ಲ ಎಂದು ಹಿಂದಿಯಲ್ಲಿ ಉತ್ತರಿಸಿದರೆ, 'ಕನ್ನಡ ಕಲಿಯಬೇಕು' ಎನ್ನುತ್ತೇನೆ. ಕನ್ನಡದಲ್ಲಿ ಮಾತನಾಡಿದವರಿಗೆ ಟಿಪ್ಸ್ ಕೊಟ್ಟು ಕಳುಹಿಸುತ್ತೇನೆ. ಈ ಕೆಲಸವನ್ನು ನನ್ನ ಮಟ್ಟದಲ್ಲಿ ಅಂದರೆ ತೀರಾ ವೈಯಕ್ತಿಕ ಮಟ್ಟದಲ್ಲಿ ಮಾಡುತ್ತಿದ್ದೇನೆ. ಸರ್ಕಾರದ ಮಟ್ಟದಲ್ಲಿ ಬೇರೆ ರೀತಿಯ ಪ್ರಯತ್ನ ಆಗಬೇಕಿದೆ.

ನಾಮಫಲಕದ ನಿಯಮ ತಂದ ರೀತಿಯಲ್ಲೇ ಇದನ್ನೂ ಮಾಡಿಬಿಡಲಿ…

ಸರ್ಕಾರ ವಿಶೇಷವಾಗಿ ಬಿಬಿಎಂಪಿ ಈ ಕಂಪನಿಗಳಿಗೆ ವ್ಯವಹಾರ ಮಾಡಲು ಅನುಮತಿ, ಪರವಾನಗಿ ಕೊಡುವಾಗ ಒಂದು ನಿಬಂಧನೆ ಹಾಕಬಹುದು. ಕಂಪನಿಯ ಆಂತರಿಕ ಮತ್ತು ಬಾಹ್ಯ ವ್ಯವಹಾರಗಳು ಕರ್ನಾಟಕದಲ್ಲಿ ಕನ್ನಡದಲ್ಲಿಯೇ ಇರಬೇಕು ಎಂಬ ನಿಬಂಧನೆ ಬೇಕು. ತಳಮಟ್ಟದಲ್ಲಿ ಈ ಕಂಪನಿಗಳ ಗ್ರಾಹಕರು ಕನ್ನಡದವರು, ಕರ್ನಾಟಕದವರು. ಅವರ ಜೊತೆಗೆ ವ್ಯವಹರಿಸುವ ಪ್ರತಿನಿಧಿಗಳು ಕಡ್ಡಾಯವಾಗಿ ಕನ್ನಡ ಕಲಿತಿರಬೇಕು ಎಂಬ ಷರತ್ತು ಅಥವಾ ನಿಬಂಧನೆಯನ್ನು ಬಿಬಿಎಂಪಿ ವಿಧಿಸಬೇಕು. ಆಗ ಕಂಪನಿಗಳು ಕನ್ನಡಿಗರನ್ನು ಉದ್ಯೋಗಕ್ಕೆ ತೆಗೆದುಕೊಳ್ಳುತ್ತವೆ. ಇಲ್ಲದಿದ್ದರೆ ಈಗಾಗಲೇ ಕೆಲಸ ಮಾಡುತ್ತಿರುವವರಿಗೆ ಕನ್ನಡ ಕಲಿಸುವುದಕ್ಕೆ ಬೋಧಕರನ್ನು ನೇಮಕ ಮಾಡುತ್ತದೆ. ಕನ್ನಡ ಭಾಷೆಯನ್ನು ವ್ಯಾವಹಾರಿಕವಾಗಿ ಬಳಸುತ್ತಿರುವುದನ್ನು ಖಾತ್ರಿಪಡಿಸಲು ಸಹ ಒಂದು ವ್ಯವಸ್ಥೆಯನ್ನು ಬಿಬಿಎಂಪಿ ಮಾಡಬೇಕು. ಹಾಗೆ ಮಾಡಿದರೆ ಪರಿಣಾಮಕಾರಿಯಾಗಿ ಕನ್ನಡ ಭಾಷೆ ಬಳಕೆಯಾಗುತ್ತದೆ.

ಈ ಹಿಂದೆ ಕರ್ನಾಟಕ ಸರ್ಕಾವು ಉದ್ಯಮ, ಕೈಗಾರಿಕೆ, ವ್ಯಾಪಾರ, ವಹಿವಾಟುಗಳಲ್ಲಿ ಶ್ರಮಿಕ ವರ್ಗದ ಉದ್ಯೋಗ ಕನ್ನಡಿಗರಿಗೆ ಮೀಸಲಿಡಬೇಕು ಎಂಬ ಕಾನೂನು ರೂಪಿಸಿತ್ತು. ತೀವ್ರ ವಿರೋಧದ ಕಾರಣ ಅದನ್ನು ಬಳಿಕ ಹಿಂಪಡೆಯಿತು. ಉದ್ಯೋಗ ಮೀಸಲಾತಿ ಎಂದು ನೇರವಾಗಿ ಬಳಸುವ ಬದಲು ಕಾನೂನುಗಳಲ್ಲೇ ಇರುವ ಇಂತಹ ಅವಕಾಶಗಳನ್ನು ಬಳಸಿಕೊಂಡು ಆಡಳಿತ ನಡೆಸಬೇಕು. ಆಗ ಕನ್ನಡಿಗರಿಗೂ ಕೆಲಸ ಸಿಗುತ್ತದೆ. ಕನ್ನಡವೂ ಉಳಿಯುತ್ತದೆ.

ಇತ್ತೀಚೆಗೆ ನಾಮಫಲಕದ ವಿಚಾರದಲ್ಲಿ ಬಿಬಿಎಂಪಿ ಸರಿಯಾದ ಕ್ರಮ ಅನುಸರಿಸಿದೆ ಎಂದು ಹೈಕೋರ್ಟ್‌ ಸಹ ಅದನ್ನು ಎತ್ತಿ ಹಿಡಿದಿದೆ. ಕರ್ನಾಟಕದಲ್ಲಿ ವ್ಯವಹಾರ ಮಾಡುವುದಾದರೆ, ಕನ್ನಡದಲ್ಲಿ ನಾಮಫಲಕ ಹಾಕಬೇಕು ಎಂಬುದನ್ನು ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಹಾಗಾಗಿ, ಕಾನೂನಿನಲ್ಲಿರುವ ಅವಕಾಶವನ್ನು ಬಳಸಿಕೊಂಡರೆ ಕೋರ್ಟ್‌ನಲ್ಲೂ ಇಂತಹ ಅಂಶಗಳು ನಿಲ್ಲಲ್ಲ. ಅವರಿಗೆ ಹಿನ್ನಡೆಯಾಗುತ್ತದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ಯಾವುದೇ ಕಾರಣಕ್ಕೂ ಹಿಂಜರಿಯಬಾರದು.

ಬೆಂಗಳೂರು ಇಷ್ಟಪಡುವ ಅಧಿಕಾರಿಗಳಿಗೆ ಕನ್ನಡವೇಕೆ ಅಪಥ್ಯ

ಐಎಎಸ್, ಐಪಿಎಸ್‌, ಐಎಫ್‌ಎಸ್ ಮುಂತಾದ ನಾಗರಿಕ ಸೇವಾ ಅಧಿಕಾರಿಗಳಿಗೆ ಬೆಂಗಳೂರೇ ಇಷ್ಟ. ಕೇರಳ, ತಮಿಳುನಾಡು ರಾಜ್ಯಗಳಲ್ಲಿ ನಿಯೋಜಿಸಲ್ಪಟ್ಟ ಬಹುತೇಕ ಅಧಿಕಾರಿಗಳು ಹೆಚ್ಚು ಕಾಲ ತಮಿಳುನಾಡಿನಲ್ಲಿ ಇರಲ್ಲ. ಅಲ್ಲಿ ತಮಿಳು ಭಾಷೆ ಕಲಿತು ತಮಿಳರೊಂದಿಗೆ ಬೆರತರಷ್ಟೇ ಆಡಳಿತ ನಡೆಸುವುದು ಸಾಧ್ಯ. ಅದು ಕಷ್ಟವಾದವರು ಕೆಲವು ತಿಂಗಳು ಅಲ್ಲಿದ್ದು ಬಳಿಕ ವರ್ಗಾವಣೆ ಬಯಸುತ್ತಾರೆ. ಹೀಗೆ ವರ್ಗಾವಣೆ ಕೇಳುವಾಗ ಸ್ಥಳದ ಆಯ್ಕೆಯಲ್ಲಿ ಮೊದಲ ಸ್ಥಾನ ಬೆಂಗಳೂರಿಗೆ, ಬಳಿಕ ಕರ್ನಾಟಕದ ಯಾವುದೇ ಭಾಗ, ಇಲಾಖೆ. ಇದು ಸಾಧ್ಯವಾಗದೇ ಹೋದರೆ ದೆಹಲಿಗೆ ಕೊಡಿ ಎಂದು ಅಲ್ಲಿಗೇ ವರ್ಗ ಪಡೆದುಕೊಂಡು ಹೊರಟು ಹೋಗುತ್ತಾರೆ.

ಕರ್ನಾಟಕಕ್ಕೆ ಬಂದವರು ಬೆಂಗಳೂರಿನಲ್ಲೇ ಇರಲು ಪ್ರಯತ್ನಿಸುತ್ತಾರೆ. ಅನಿವಾರ್ಯವಾದರೆ ಮಾತ್ರವೆ ಇತರೆ ಜಿಲ್ಲೆಗಳಿಗೆ ಹೋಗುತ್ತಾರೆ. ಸಾಧ್ಯವಾದಷ್ಟು ಮಟ್ಟಿಗೆ ಕನ್ನಡ ಭಾಷೆ ಕಲಿಯದೇ ತಮ್ಮದೇ ಭಾಷೆಯಲ್ಲಿ ಸೇವಾವಧಿ ಕಳೆಯಲು ಪ್ರಯತ್ನಿಸುತ್ತಾರೆ. ಇದಕ್ಕೆ ಸರ್ಕಾರ ಅವಕಾಶ ಕೊಡಬಾರದು. ಕರ್ನಾಟಕದ ಒಳಿತು ಬಯಸುವ, ಕನ್ನಡಿಗರಿಗೆ ಸ್ಪಂದಿಸುವ ಅಧಿಕಾರಿಗಳು ಕರ್ನಾಟಕದಲ್ಲಿರಬೇಕು. ಆದ್ದರಿಂದ ಕನ್ನಡ ಭಾಷೆ ಕಲಿತು, ಪರೀಕ್ಷೆ ಉತ್ತೀರ್ಣರಾದರೆ ಮಾತ್ರವೇ ಸರ್ಕಾರ ಪೋಸ್ಟಿಂಗ್ ಕೊಡಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಆದರೆ ಒಳಿತು.

ಎಲ್ಲರೂ ಕನ್ನಡದಲ್ಲೇ ವ್ಯವಹರಿಸುವುದಕ್ಕೆ ಬೇಕಾದ ವಾತಾವರಣವನ್ನು ಅಧಿಕಾರಿಗಳೂ ಸೃಷ್ಟಿಸಬೇಕು. ಬಂದ ಅತಿಥಿಗಳಿಗೆ ಕನ್ನಡ ಬಾರದೇ ಇದ್ದರೆ ಅವರು ಕರ್ನಾಟಕದಲ್ಲೇ ವ್ಯವಹರಿಸುವವರಾಗಿದ್ದರೆ ಅಂಥವರಿಗೆ, “ನೋಡಿ ನೀವು ಕರ್ನಾಟಕದಲ್ಲಿ, ಕನ್ನಡಿಗರೊಂದಿಗೆ ವ್ಯವಹಾರ ಮಾಡಲು ಬಂದಿದ್ದೀರಿ, ಹಾಗಾಗಿ, ಕನ್ನಡ ಕಲಿಯಬೇಕು. ಅದರಿಂದ ಅನುಕೂಲ ಹೆಚ್ಚು" ಎಂಬುದನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಬೇಕು. ಅಧಿಕಾರಿಗಳೇ ಕನ್ನಡದಲ್ಲಿ ಮಾತನಾಡುವ ವಾತಾವರಣ ಸೃಷ್ಟಿಸಿಲ್ಲ ಎಂದಾದರೆ ಈ ಕೆಲಸ ಇನ್ಯಾರು ಮಾಡಬೇಕು.

ಹಿಂದೆ ನಾನು ಅಧಿಕಾರಿಯಾಗಿದ್ದಾಗ ಟೊಯೊಟೊ ಕಂಪನಿಯವರು ಬೆಂಗಳೂರಿಗೆ ಬಂದಿದ್ದರು. ಆಗ ಬೆಂಗಳೂರಲ್ಲೇ ಇದ್ದ ಜಪಾನ್‌ನ ಪ್ರತಿನಿಧಿಗಳು ಕನ್ನಡವನ್ನು ಕಲಿತು ಕನ್ನಡದಲ್ಲೇ ವ್ಯವಹರಿಸುತ್ತಿದ್ದರು. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡನ್ನೂ ಹಾಡುತ್ತಿದ್ದರು. ದೂರದ ಜಪಾನ್‌ನಿಂದ ಬಂದವರಿಗೆ ಕನ್ನಡ ಕಲಿಯುವುದು ಸಾಧ್ಯವಾಗುವುದಾದರೆ ಭಾರತದಲ್ಲೇ ಇರುವ ಅನ್ಯ ರಾಜ್ಯದವರಿಗೆ ಕನ್ನಡ ಕಲಿಯುವುದು ಸಾಧ್ಯವಾಗದ ಮಾತೇನೂ ಅಲ್ಲ. ಅಂತಹ ವಾತಾವರಣವನ್ನು ನಾವು ಸೃಷ್ಟಿಸಬೇಕು. ಪ್ರೋತ್ಸಾಹಿಸಬೇಕು.

ಕರ್ನಾಟಕದಲ್ಲಿ ವ್ಯವಹರಿಸುವಾಗ ಕನ್ನಡದಲ್ಲೆ ಮಾತನಾಡಬೇಕು. ಕರ್ನಾಟಕ ಸರ್ಕಾರ ಅನ್ಯಭಾಷಿಕರಿಗಾಗಿ ಇರುವುದಲ್ಲ. ಕನ್ನಡಿಗರಿಗಾಗಿ ಇರುವಂಥದ್ದು. ಹಾಗೆಂದು ಅನ್ಯಭಾಷಿಕರ ಮೇಲೆ ದಬ್ಬಾಳಿಕೆ ಮಾಡಬೇಕು ಎಂದಲ್ಲ. ನಯವಾದ ರೀತಿಯಲ್ಲೇ ಅವರೂ ಕನ್ನಡ ಭಾಷೆ ಕಲಿಯಬೇಕಾದ ವಾತಾವರಣವನ್ನು ಸೃಷ್ಟಿಸಬೇಕು.

ಬ್ಯಾಂಕುಗಳಲ್ಲೂ ಕನ್ನಡದಲ್ಲೇ ವ್ಯವಹರಿಸಿ, ಆಡಳಿತವೂ ತಲೆಬಾಗುತ್ತೆ

ಬ್ಯಾಂಕುಗಳಲ್ಲೂ ಅಷ್ಟೇ, ತಮ್ಮೊಂದಿಗೆ ಕನ್ನಡದಲ್ಲಿ ವ್ಯವಹರಿಸಲಿಲ್ಲ ಎಂದು ಹಲವರು ಅಲವತ್ತುಕೊಳ್ಳುತ್ತಾರೆ. ಅನ್ಯಭಾಷಿಕ ಸಿಬ್ಬಂದಿಗಳಿದ್ದು, ಅವರು ಕನ್ನಡ ಕಲಿಯದೇ ಬ್ಯಾಂಕ್‌ನಲ್ಲಿ ವ್ಯವಹಾರ ಮಾಡುವ ಹಲವು ಉದಾಹರಣೆಗಳು ಸಿಗುತ್ತವೆ. ಇಂಥ ಸಂದರ್ಭಗಳಲ್ಲಿ ಸಂಕಷ್ಟ ಅನುಭವಿಸುವವರು ಗ್ರಾಹಕರು ಅಂದರೆ ನಮ್ಮ ಕನ್ನಡಿಗರೇ. ಬ್ಯಾಂಕ್ ಶಾಖೆಯಲ್ಲಿ ಕನ್ನಡದವರನ್ನು ನೇಮಕ ಮಾಡಬೇಕು ಎಂಬ ಬೇಡಿಕೆ ಹೆಚ್ಚಾಗಬೇಕು. ಆಗ ಬ್ಯಾಂಕ್‌ನವರೂ ಎಚ್ಚೆತ್ತುಕೊಳ್ಳುತ್ತಾರೆ.

ಆಡಳಿತದಲ್ಲಿ ಮತ್ತು ವ್ಯವಹಾರದಲ್ಲಿ ಕನ್ನಡ ಬಳಸಬೇಕು ಎಂದರೆ ಅದಕ್ಕೆ ಮನಸ್ಸೂ ಬೇಕು. ಮನಸ್ಸಿದ್ದರೆ ಮಾರ್ಗ ಎನ್ನುತ್ತಾರಲ್ಲ ಹಾಗೆ. ಪ್ರತಿಯೊಬ್ಬ ಅಧಿಕಾರಿಯೂ ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕು.

ತಮಿಳು, ಮಲಯಾಳ ಭಾಷಿಕರನ್ನು ಗಮನಿಸಿ

ತಮಿಳು ಭಾಷಿಕರು, ಮಲಯಾಳ ಭಾಷಿಕರು ತಮ್ಮ ಭಾಷೆಯ ಪರವಾದ ವಾತಾವರಣವನ್ನು ಬಹಳ ನಾಜೂಕಾಗಿ ಸೃಷ್ಟಿಸಿದ್ದಾರೆ. ಡೆಲಿವರಿ ಏಜೆಂಟರಿಂದ ಹಿಡಿದು ಫೋನ್‌ ಕರೆ ಮಾಡಿ ಮಾತನಾಡುವ ಮಾರ್ಕೆಟಿಂಗ್ ಪ್ರತಿನಿಧಿವರೆಗೆ ಎಲ್ಲರೂ ಅವರ ಭಾಷೆಯಲ್ಲೇ ವ್ಯವಹರಿಸುವ ಸಂದರ್ಭ ಅಲ್ಲಿದೆ. ಆದರೆ ಕರ್ನಾಟಕದಲ್ಲಿ ಹೇಗಿದೆ ಯೋಚಿಸಿ. ಕನ್ನಡಿಗರಾಗಿ ನಾವು ಮಾಡಬೇಕಾದ್ದೂ ಅದನ್ನೇ. ಕರ್ನಾಟಕದಲ್ಲಿ ಕನ್ನಡ ಮಾತನಾಡಿದರೆ ಮಾತ್ರ ವ್ಯವಹಾರ ಸಾಗುತ್ತದೆ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು.

ಇನ್ನು ಸರ್ಕಾರದ ಮಟ್ಟದಲ್ಲಿ ಕೂಡ ಬದಲಾವಣೆ ಬೇಕು. ಅಧಿಕಾರಿಗಳ ಮಟ್ಟದಲ್ಲಿ ಇಂಗ್ಲಿಷ್ ವ್ಯಾಮೋಹ ದೂರಾಗಬೇಕು. ತಮಿಳುನಾಡು, ಕೇರಳಗಳಲ್ಲಿ ಅವರವರ ಪ್ರಾದೇಶಿಕ ಭಾಷೆಯಲ್ಲೇ ವ್ಯವಹಾರ ಸಾಗುತ್ತದೆ ಎಂದಾದರೆ ಕರ್ನಾಟಕದಲ್ಲಿ ಯಾಕೆ ಸಾಧ್ಯವಿಲ್ಲ. ಅಧಿಕಾರಿಗಳು ಮನಸ್ಸು ಮಾಡಬೇಕು. ಹೊರಗಿನಿಂದ ಬಂದವರು ಚಿರಂಜೀವಿ ಸಿಂಗ್ ಅವರಂತೆ ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿಯನ್ನು ನಮ್ಮದಾಗಿಸಿಕೊಳ್ಳಬೇಕು.

ಇಚ್ಛಾಶಕ್ತಿ ತೋರಿಸೋಣ, ನಾವು ಬದಲಾಗೋಣ

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕನ್ನಡ ಭಾಷೆ ಬಳಕೆ ವಿಚಾರ, ಕನ್ನಡ, ನೆಲ, ಜಲಗಳ ಕುರಿತು ಬಹಳ ಒಲವು ಇರುವಂಥವರು. ಆಡಳಿತ ಭಾಷೆಯಾಗಿ ಕನ್ನಡವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂಬ ಆಶಯದಲ್ಲಿ 1983ರಲ್ಲಿ ಕನ್ನಡ ಭಾಷಾ ಕಾವಲು ಸಮಿತಿ (ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ) ರಚಿಸಿದಾಗ ಅದರ ಮೊದಲ ಅಧ್ಯಕ್ಷರಾಗಿದ್ದವರು ಇವರೇ. ಅವರ ಅಂದಿನ ಆಶಯಗಳನ್ನು ಜಾರಿಗೊಳಿಸುವುದಕ್ಕೆ ಈಗ ಅವಕಾಶ ಸಿಕ್ಕಿದೆ. ಅವರು ಅದನ್ನು ಬಳಸಿಕೊಂಡು ಆಡಳಿತ ಭಾಷೆಯಾಗಿ ಕನ್ನಡವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಸಾಧ್ಯವಿದೆ. ಯಾವುದಕ್ಕೂ ಮನಸ್ಸು ಮತ್ತು ರಾಜಕೀಯ ಇಚ್ಛಾಶಕ್ತಿ ಬೇಕು. ಅದನ್ನು ನಾವು ತೋರಿಸಿಕೊಡುವುದು ಸಾಧ್ಯವಿದೆ. ಕರ್ನಾಟಕದ ನಾಳೆಗಳಿಗಾಗಿ, ಕನ್ನಡಿಗರ ಭವಿಷ್ಯಕ್ಕಾಗಿ, ನಮಗಾಗಿ ನಾವು ಬದಲಾಗೋಣ.

***

ಗಮನಿಸಿ: ಇದು ನಿವೃತ್ತ ಐಎಎಸ್ ಅಧಿಕಾರಿ ವಿ.ಪಿ.ಬಳಿಗಾರ್ ಅವರ ಸಂದರ್ಶನ ಆಧರಿತ ಬರಹ. ಇಲ್ಲಿರುವುದು ಬಳಿಗಾರ್ ಅವರ ವೈಯಕ್ತಿಕ ಅಭಿಪ್ರಾಯ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ