logo
ಕನ್ನಡ ಸುದ್ದಿ  /  ಕರ್ನಾಟಕ  /  Covid 19 Updates: ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ, ಗೌರವಯುತ ಅಂತ್ಯಸಂಸ್ಕಾರಕ್ಕೆ 4 ಚಿತಾಗಾರ ಮೀಸಲು

COVID 19 Updates: ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ, ಗೌರವಯುತ ಅಂತ್ಯಸಂಸ್ಕಾರಕ್ಕೆ 4 ಚಿತಾಗಾರ ಮೀಸಲು

HT Kannada Desk HT Kannada

Dec 22, 2023 11:38 PM IST

ಕೋವಿಡ್ ಪ್ರಕರಣ ಹೆಚ್ಚಳದ ಕಾರಣ ಕೋವಿಡ್ ಟೆಸ್ಟ್‌ ಮಾಡುತ್ತಿರುವ ಆರೋಗ್ಯ ಸಿಬ್ಬಂದಿ (ಸಾಂಕೇತಿಕ ಕಡತ ಚಿತ್ರ)

  • ಬೆಂಗಳೂರಲ್ಲಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು, ಆಸ್ಪತ್ರೆ, ವೈದ್ಯರು ಮತ್ತು ಉಪಕರಣ ಲಭ್ಯವಿರುವಂತೆ ನೋಡುತ್ತಿದ್ದಾರೆ. ಕೋವಿಡ್‌ ಟೆಸ್ಟ್ ಹೆಚ್ಚಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದೇ ರೀತಿ, ಗೌರವಯುತ ಅಂತ್ಯಸಂಸ್ಕಾರಕ್ಕೆ 4 ಚಿತಾಗಾರ ಮೀಸಲಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ವರದಿ ಎಚ್. ಮಾರುತಿ)

ಕೋವಿಡ್ ಪ್ರಕರಣ ಹೆಚ್ಚಳದ ಕಾರಣ ಕೋವಿಡ್ ಟೆಸ್ಟ್‌ ಮಾಡುತ್ತಿರುವ ಆರೋಗ್ಯ ಸಿಬ್ಬಂದಿ (ಸಾಂಕೇತಿಕ ಕಡತ ಚಿತ್ರ)
ಕೋವಿಡ್ ಪ್ರಕರಣ ಹೆಚ್ಚಳದ ಕಾರಣ ಕೋವಿಡ್ ಟೆಸ್ಟ್‌ ಮಾಡುತ್ತಿರುವ ಆರೋಗ್ಯ ಸಿಬ್ಬಂದಿ (ಸಾಂಕೇತಿಕ ಕಡತ ಚಿತ್ರ)

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಈ ಕ್ಷಣದವರೆಗೆ 105 ಕ್ಕೆ ಏರಿದೆ. ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ತಗ್ಗಿಸುವ ಸಲುವಾಗಿ ಬಿಬಿಎಂಪಿ ವಿವಿಧ ಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಅಲ್ಲದೆ ಈ ಹಿಂದೆ ಕೊರೋನಾ ಸೋಂಕು ತೀವ್ರಗೊಂಡಾಗ ಉಂಟಾಗಿದ್ದ ಅವ್ಯವಸ್ಥೆ ಮರುಕಳಿಸದಂತೆ ಮಾಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

Bangalore News: ಬೆಂಗಳೂರು ಕೆಂಪೇಗೌಡ ವಿಮಾನನಿಲ್ದಾಣದಲ್ಲಿ 7 ನಿಮಿಷ ನಂತರ ವಾಹನ ನಿಂತರೆ ಬೀಳಲಿದೆ ಭಾರೀ ಶುಲ್ಕ

Education News: 5, 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳು ಪಾಸ್; ಮುಂದಿನ ತರಗತಿಗೆ ಮುಂದುವರೆಸಲು ಅನುಮತಿ

Karnataka Rains: ಉಡುಪಿ, ಕೊಡಗು, ಗದಗ, ಶಿವಮೊಗ್ಗ ಸಹಿತ 12 ಜಿಲ್ಲೆಗಳಲ್ಲಿಂದು ಭಾರೀ ಮಳೆ ಮುನ್ಸೂಚನೆ, ಬೆಂಗಳೂರಲ್ಲಿ ಸಾಧಾರಣ ಮಳೆ

Hubli News: ಹುಬ್ಬಳ್ಳಿ ಅಂಜಲಿ ಅಂಬಿಗೇರ ಪ್ರಕರಣ, ಎಸಿಪಿ ಸಸ್ಪೆಂಡ್‌, ನೂತನ ಡಿಸಿಪಿ ನೇಮಕ

ಕಳೆದ ಬಾರಿಯಂತೆ ಈ ಬಾರಿಯೂ ರಾಜ್ಯದಲ್ಲಿ ಬೆಂಗಳೂರು ಹಾಟ್ ಸ್ಪಾಟ್ ಆಗಲಿದೆಯೇ ಎಂಬ ಸಂದೇಹ ಮೂಡಿದೆ. ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣ ಮಾಡಲು ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದೆ.

ಹೋಂ ಐಸೋಲೇಷನ್ ಕಡ್ಡಾಯಗೊಳಿಸುವುದು, ಕ್ವಾರಂಟೈನ್ ಆದವರ ಮೇಲೆ ಹೆಚ್ಚು ನಿಗಾ ಇಡುವುದು, ಕೋವಿಡ್ ಟೆಸ್ಟ್ ಹೆಚ್ಚಳ, ನೆರೆ ರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ಇಡುವುದು ಹಾಗೂ ಆಕ್ಸಿಜನ್, ವೆಂಟಿಲೇಟರ್ ಹಾಗೂ ವೈದ್ಯಕೀಯ ಉಪಕರಣಗಳನ್ನು ಸಿದ್ಧಪಡಿಸಿಕೊಳ್ಳಲು ಉದ್ದೇಶಿಸಿದೆ.

ಪ್ರಸ್ತುತ ಬೆಂಗಳೂರಿನಲ್ಲಿ 350-400 ಟೆಸ್ಟ್ ನಡೆಸುತ್ತಿದ್ದು 1000 ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ. ಹಾಗೆಂದು ಸಾರ್ವಜನಿಕರು ಆತಂಕ ಪಡಬೇಕಿಲ್ಲ. ಇದುವರೆಗೂ ಇಬ್ಬರು ಮಾತ್ರ ಮೃತಪಟ್ಟಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಬಾಲ ಸುಂದರ್ ಹೇಳಿದ್ದಾರೆ.

450 ಲ್ಯಾಬ್ ಟೆಕ್ನಿಷಿಯನ್ ಗಳು, 350 ನುರಿತ ವೈದ್ಯರು ಮತ್ತು 2000 ಅಕ್ಸಿಜನ್ ಕಾನ್ಸಿಂಟ್ರೆಟರ್ ಗಳನ್ನು ಸಿದ್ಧವಾಗಿಟ್ಟು ಕೊಳ್ಳಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. ಜೊತೆಗೆ ಪ್ರತಿದಿನ ಉಚಿತವಾಗಿ 1500 ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಪಾಲಿಕೆ ವ್ಯಾಪ್ತಿಯ 144 ಆರೋಗ್ಯ ಕೇಂದ್ರಗಳು ಮತ್ತು 242 ನಮ್ಮ ಕ್ಲಿನಿಕ್ ಗಳಲ್ಲಿ ಉಚಿತ ಪರೀಕ್ಷೆ ನಡೆಯಲಿದೆ.

ರಾಜ್ಯದಲ್ಲಿ ಕೊರೋನಾ ಸೋಂಕಿನ ತೀವ್ರತೆ ಹೆಚ್ಚುತ್ತಿದ್ದು, ಪ್ರತಿದಿನ ಸೋಂಕಿನಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಸೋಂಕಿನಿಂದ ಮೃತ್ಪಟ್ಟವರನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲು ಬಿಬಿಎಂಪಿ ಮುಂದಾಗಿದ್ದು, ಪ್ರತ್ಯೇಕ ಚಿತಾಗಾರಗಳನ್ನು ಮೀಸಲಿಡಲು ಚಿಂತನೆ ನಡೆಸಿದೆ.

ಅಲ್ಲಿ ಬೇರೆ ಯಾವುದೇ ರೀತಿಯ ಅಂತ್ಯಸಂಸ್ಕಾರಕ್ಕೇ ಅವಕಾಶ ನೀಡದೆ ಕೇವಲ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.

12 ಚಿತಾಗಾರಗಳಲ್ಲಿ 4 ಮೀಸಲು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ವಹಣೆಯಲ್ಲಿ 12 ವಿದ್ಯುತ್‌ ಚಿತಾಗಾರಗಳನ್ನು ನಿರ್ವಹಣೆ ಮಾಡುತ್ತಿದೆ.

ಕಳೆದ ಮೂರು ಕೊರೋನಾ ಅಲೆಗಳು ಅಪ್ಪಳಿಸಿದ ಸಂದರ್ಭದಲ್ಲಿ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕಾಗಿ ಬೆಂಗಳೂರಿನ ಹೊರವಲಯದ ಕಲ್ಪಳ್ಳಿ ರುದ್ರಭೂಮಿ ಮತ್ತು ಚಿತಾಗಾರವನ್ನು ಮೀಸಲಿಡಲಾಗಿತ್ತು. ಆದರೆ, ಅಲ್ಲಿ ಈಗ ಸ್ಥಳದ ಅಭಾವ ಇದೆ.

ಕಳೆದ ಬಾರಿ ಅಂತ್ಯಸಂಸ್ಕಾರಕ್ಕೆ ಸೂಕ್ತ ವ್ಯವಸ್ಥೆ ಮಾಡದ ಕಾರಣ ಸಾಕಷ್ಟು ಸಮಸ್ಯೆಯಾಗಿತ್ತು. ಸಾರ್ವಜನಿಕರು ತೊಂದರೆ ಎದುರಿಸಬೇಕಾಗಿ ಬಂದಿತ್ತು. ಹೀಗಾಗಿ ಈ ಬಾರಿ ಮುಂಜಾಗ್ರತಾ ಕ್ರಮವಾಗಿ ಕೊರೋನಾ ಸೋಂಕಿನ ತೀವ್ರತೆ ಹೆಚ್ಚುವುದಕ್ಕೆ ಮುನ್ನವೇ ಚಿತಾಗಾರಗಳನ್ನು ಮೀಸಲಿಡಲಾಗುತ್ತಿದೆ. ಬನಶಂಕರಿ, ಮೇಡಿಅಗ್ರಹಾರ, ಹೆಬ್ಬಾಳ ಮತ್ತು ಸುಮನಹಳ್ಳಿಯ ಚಿತಾಗಾರಗಳನ್ನು ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಮೀಸಲಿಡಲು ಬಿಬಿಎಂಪಿ ನಿರ್ಧರಿಸಿದೆ. ಅಲ್ಲಿ ಅನ್ಯ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡದಿರಲು ನಿರ್ಧರಿಸಿದೆ.

ವಲಯಕ್ಕೊಂದು ಆ್ಯಂಬುಲೆನ್ಸ್‌: ಕಳೆದ ಬಾರಿ ಸೋಂಕು ತೀವ್ರಗೊಂಡಾಗ ಮೃತದೇಹಗಳನ್ನು ಸಾಗಿಸಲು ಪರದಾಡುವಂತಾಗಿತ್ತು. ಈ ಬಾರಿ ಮುನ್ನೆಚ್ಚರಿಕೆ ಕ್ರಮವಾಗಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರನ್ನು ಸಾಗಿಸಲು ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಾರಿ ಮೃತ ದೇಹಗಳನ್ನು ಚಿತಾಗಾರಗಳಿಗೆ ಕೊಂಡೊಯ್ಯಲು ತನ್ನ ವ್ಯಾಪ್ತಿಯ ಎಲ್ಲ 8 ವಲಯಗಳಿಗೂ ತಲಾ ಒಂದು ಆ್ಯಂಬುಲೆನ್ಸ್‌ ಮೀಸಲಿಡಲು ತೀರ್ಮಾನಿಸಿದೆ.

ಸದ್ಯಕ್ಕೆ ಒಂದು ಆಂಬುಲೆನ್ಸ್ ಸೇವೆ ಸಾಕಾಗಿದ್ದು ಅವಶ್ಯಕತೆ ಬಿದ್ದಲ್ಲಿ ಆ್ಯಂಬುಲೆನ್ಸ್‌ ಸಂಖ್ಯೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ರುದ್ರಭೂಮಿ ಸಿಬ್ಬಂದಿಗೆ ಪಿಪಿಇ ಕಿಟ್: ರುದ್ರಭೂಮಿ ಮತ್ತು ಚಿತಾಗಾರಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯ ಸುರಕ್ಷತೆ ಕುರಿತು ಬಿಬಿಎಂಪಿ ಎಚ್ಚರಿಕೆ ವಹಿಸಿದೆ. ಬಿಬಿಎಂಪಿ ನಿರ್ವಹಿಸುವ ಚಿತಾಗಾರ ಹಾಗೂ ರುದ್ರಭೂಮಿಗಳಲ್ಲಿ ಒಟ್ಟು 148 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲರಿಗೂ ಪಿಪಿಇ ಕಿಟ್‌ಗಳನ್ನು ಒದಗಿಸಲು ಅನುಮತಿ ಕೋರಿ ಬಿಬಿಎಂಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಸಂಪುಟ ಉಪ ಸಮಿತಿ ರಚನೆ: ಕೋವಿಡ್‌ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಸಂಪುಟ ಉಪ ಸಮಿತಿ ರಚನೆ ಮಾಡಿ ಆದೇಶ ಹೊರಡಿಸಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಂಪುಟ ಉಪ ಸಮಿತಿಯನ್ನು ರಚನೆ ಮಾಡಿದ್ದು, ಸಚಿವರಾದ ಎಚ್.ಸಿ. ಮಹದೇವಪ್ಪ, ಶರಣ ಪ್ರಕಾಶ್ ಪಾಟೀಲ್, ಎಂ.ಸಿ. ಸುಧಾಕರ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಕೋವಿಡ್ ಸೇರಿ ಸಾಂಕ್ರಾಮಿಕ ರೋಗಗಳ ಕುರಿತು ಈ ಸಮಿತಿಯು ಪರಾಮರ್ಶೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ