logo
ಕನ್ನಡ ಸುದ್ದಿ  /  ಕರ್ನಾಟಕ  /  ಗೌರಿ-ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟಿಸಿದ ಬೆಸ್ಕಾಂ; ಅಪ್ಪಿ-ತಪ್ಪಿಯೂ ಈ ತಪ್ಪುಗಳನ್ನು ಮಾಡ್ಬೇಡಿ

ಗೌರಿ-ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟಿಸಿದ ಬೆಸ್ಕಾಂ; ಅಪ್ಪಿ-ತಪ್ಪಿಯೂ ಈ ತಪ್ಪುಗಳನ್ನು ಮಾಡ್ಬೇಡಿ

Prasanna Kumar P N HT Kannada

Sep 04, 2024 12:54 PM IST

google News

ಗೌರಿ-ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟಿಸಿದ ಬೆಸ್ಕಾಂ

    • Ganesh Chaturthi: ಗಣೇಶೋತ್ಸವಕ್ಕ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಲು ಮತ್ತು ಗಣಪತಿ ಮೆರವಣಿಗೆ ಹಾಗೂ ವಿಸರ್ಜನೆ ವೇಳೆ ಪಾಲಿಸಬೇಕಾದ ಸುರಕ್ಷತಾ ಗೈಡ್‌ಲೈನ್ಸ್‌ ಅನ್ನು ಬೆಸ್ಕಾಂ ಬಿಡುಗಡೆ ಮಾಡಿದೆ. (ವರದಿ-ಎಚ್. ಮಾರುತಿ)
ಗೌರಿ-ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟಿಸಿದ ಬೆಸ್ಕಾಂ
ಗೌರಿ-ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟಿಸಿದ ಬೆಸ್ಕಾಂ

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಸೆಪ್ಟೆಂಬರ್​ 7ರಂದು ಗಣೇಶನ ಉತ್ಸವ (Ganesh Chaturthi) ಹಮ್ಮಿಕೊಳ್ಳುತ್ತಿದ್ದೀರಾ? ಹಾಗಾದರೆ ವಿದ್ಯುತ್ ಸಂಪರ್ಕವನ್ನು ಅಕ್ರಮವಾಗಿ ಪಡೆದುಕೊಳ್ಳಬೇಡಿ. ಬೆಸ್ಕಾಂ ಸಂಪರ್ಕಿಸಿ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆದುಕೊಳ್ಳುವಂತೆ ಬೆಸ್ಕಾಂ ತಿಳಿಸಿದೆ. ಇದಕ್ಕಾಗಿ ಆಯಾ ಉಪ ವಿಭಾಗಾಧಿಕಾರಿಗಳನ್ನು ಸಂಪರ್ಕಿಸುವಂತೆ ಬೆಸ್ಕಾಂ ಕೋರಿದೆ.

ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ವಿಳಂಬವಿಲ್ಲದೇ, ನಿಯಮಾವಳಿಗಳ ಅನ್ವಯ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವಂತೆ ಉಪವಿಭಾಗೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬೆಸ್ಕಾಂ (Bescom) ತಿಳಿಸಿದೆ.

ಹಬ್ಬದ ಸಂಭ್ರಮದ ಜತೆಗೆ ಸುರಕ್ಷತೆ ಬಗ್ಗೆಯೂ ಸಾವರ್ಜನಿಕರು ಕಾಳಜಿ ವಹಿಸಬೇಕು. ಗಣೇಶೋತ್ಸವಕ್ಕೆ ಬೆಳಕಿನ ವ್ಯವಸ್ಥೆ, ದೀಪಾಲಂಕಾರಕ್ಕೆ ಬೆಸ್ಕಾಂ ವತಿಯಿಂದ ಸಹಕಾರ ನೀಡಲಾಗುವುದು. ಸಾರ್ವಜನಿಕ ಗಣೇಶೋತ್ಸವದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ವೇಳೆ ಕೈಗೊಳ್ಳ ಬೇಕಾದ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಿ, ವಿದ್ಯುತ್‌ ಅವಘಡಗಳಾಗದಂತೆ ಎಚ್ಚರವಹಿಸಿ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್‌ ಬೀಳಗಿ ಮನವಿ ಮಾಡಿದ್ದಾರೆ.

ಸಾರ್ವಜನಿಕರು ಮತ್ತು ಆಯೋಜಕರು ಪಾಲಿಸಬೇಕಾದ ಸುರಕ್ಷತಾ ಕ್ರಮಗಳು

1. ಗಣೇಶ ಉತ್ಸವಕ್ಕೆ ತೋರಣ, ಪೆಂಡಾಲ್‌, ಸೀರಿಯಲ್ ಲೈಟ್‌ಗಳನ್ನು ಹಾಕುವ ಮುನ್ನ ವಿದ್ಯುತ್ ತಂತಿಗಳ ಬಗ್ಗೆ ಗಮನವಿರಲಿ.

2. ಸೀರಿಯಲ್ ಲೈಟ್ ತಂತಿಗಳು ಸಮರ್ಪಕವಾಗಿ ಇನ್ಸುಲೇಟ್ ಆಗಿವೆಯೇ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ.

3. ಸೀರಿಯಲ್‌ ಲೈಟ್‌, ದೀಪಗಳನ್ನು ಹಾಕುವಾಗ ವಿದ್ಯುತ್‌ ಕಂಬದಿಂದ ಸಂಪರ್ಕ ಪಡೆಯಬೇಡಿ.

4. ವಿದ್ಯುತ್ ತಂತಿ, ವಿದ್ಯುತ್ ಕಂಬ ಅಥವಾ ಪರಿವರ್ತಕ ಕೇಂದ್ರಗಳಿಗೆ ಚಪ್ಪರ, ಶಾಮಿಯಾನಗಳನ್ನು ಕಟ್ಟಬೇಡಿ.

5. ಗಣೇಶ ಮೆರವಣಿಗೆ ವೇಳೆ ರಸ್ತೆ ಬದಿಯ ವಿದ್ಯುತ್ ಮಾರ್ಗಗಳ ಬಗ್ಗೆ ಎಚ್ಚರ, ವಿದ್ಯುತ್‌ ತಂತಿಗಳನ್ನು ಮೇಲಕ್ಕೆ ಎತ್ತುವ ಪ್ರಯತ್ನ ಮಾಡದಿರಿ. ಮೆರವಣಿಗೆ ಮಾರ್ಗವನ್ನು ಮುಂಚಿತವಾಗಿ ಉಪ ವಿಭಾಗಾಧಿಕಾರಿಗಳ ಗಮನಕ್ಕೆ ತನ್ನಿ, ಅವರು ಅಗತ್ಯ ನೆರವು ಒದಗಿಸುತ್ತಾರೆ.

6. ತುಂಡಾದ ವೈರ್‌, ವಿದ್ಯುತ್‌ ಕಿಡಿ ಗಮನಕ್ಕೆ ಬಂದರೆ, ಕೂಡಲೇ 1912 ಸಹಾಯವಾಣಿಗೆ ಕರೆ ಮಾಡಿ.

7. ವಿದ್ಯುತ್ ಪರಿಕರಗಳು ಇರುವ ಸ್ಥಳಗಳಲ್ಲಿ ಡೇಂಜರ್ ಜೋನ್ ಎಂದು ಸೂಚಿಸಬೇಕು ಎಂದು ತಿಳಿಸಿದೆ.

ತಾತ್ಕಾಲಿಕ ಸಂಪರ್ಕ ಪಡೆದುಕೊಳ್ಳಲು ಈ ನಿಯಮ ಅನುಕರಿಸಿ

1. ತಾತ್ಕಲಿಕ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸುವಾಗ, ಎಲ್ಲಾ ಸಂಬಂಧಿತ (ಬಿಬಿಎಂಪಿ/ಬಿಡಿಎ/ಗ್ರಾಮ ಪಂಚಾಯಿತಿ/ಆರಕ್ಷಕ ಠಾಣೆ ಹಾಗೂ ಇನ್ನಿತರ) ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪತ್ರ ಪಡೆದಿರಬೇಕು.

2. ಸ್ಥಳೀಯ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆದ ನಂತರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಥವಾ ಸಹಾಯಕ ಇಂಜಿನಿಯರ್‌ಗಳು ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಲು ನಿರ್ಮಾಣ ಮಾಡಿರುವ ಪೆಂಡಾಲ್ ಅಥವಾ ಸಮಾರಂಭ ಸ್ಥಳದ ಸುರಕ್ಷತೆಯನ್ನು ಖಾತ್ರಿ ಪಡಿಸುತ್ತಾರೆ.

3. ವೈರಿಂಗ್ ಸುರಕ್ಷತೆ, ಎಂಸಿಬಿ ಮತ್ತು ಇಐಎ ಅಳವಡಿಕೆಯ ಬಗ್ಗೆ ನೋಂದಾಯಿತ ವಿದ್ಯುತ್ ಗುತ್ತಿಗೆದಾರರಿಂದ ವೈರಿಂಗ್ ಸಮಾಪನ ವರದಿಯನ್ನು ಪಡೆದು ಸ್ಥಳ ಪರಿಶೀಲಿಸಿದ ನಂತರ ಸಂಪರ್ಕ ಕಲ್ಪಿಸಲಾಗುತ್ತದೆ

4. ತಾತ್ಕಾಲಿಕ ವಿದ್ಯುತ್ ಸಂಪರ್ಕದ ನಿರೀಕ್ಷಿತ ಸಮಯ ಮುಗಿದ ಬಳಿಕ ಅಂತಿಮ ರೀಡಿಂಗ್ ನಮೂದಿಸಿ ಮಾಪಕವನ್ನು ಮರಳಿಸಬೇಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ