Ganesha Festival; ಬೆಂಗಳೂರಲ್ಲಿ ಗಣೇಶ ಹಬ್ಬ ಆಚರಣೆಗೆ ಅನುಮತಿ ಪಡೆಯೋದು ಈಗ ಸುಲಭ; ಏಕಗವಾಕ್ಷಿ ವ್ಯವಸ್ಥೆ ವಿವರ ನೀಡಿದ ಬಿಬಿಎಂಪಿ ಕಮಿಷನರ್‌
ಕನ್ನಡ ಸುದ್ದಿ  /  ಕರ್ನಾಟಕ  /  Ganesha Festival; ಬೆಂಗಳೂರಲ್ಲಿ ಗಣೇಶ ಹಬ್ಬ ಆಚರಣೆಗೆ ಅನುಮತಿ ಪಡೆಯೋದು ಈಗ ಸುಲಭ; ಏಕಗವಾಕ್ಷಿ ವ್ಯವಸ್ಥೆ ವಿವರ ನೀಡಿದ ಬಿಬಿಎಂಪಿ ಕಮಿಷನರ್‌

Ganesha Festival; ಬೆಂಗಳೂರಲ್ಲಿ ಗಣೇಶ ಹಬ್ಬ ಆಚರಣೆಗೆ ಅನುಮತಿ ಪಡೆಯೋದು ಈಗ ಸುಲಭ; ಏಕಗವಾಕ್ಷಿ ವ್ಯವಸ್ಥೆ ವಿವರ ನೀಡಿದ ಬಿಬಿಎಂಪಿ ಕಮಿಷನರ್‌

Ganeshotsava; ಗಣೇಶನ ಹಬ್ಬಕ್ಕೆ ಬೆಂಗಳೂರು ಸಜ್ಜಾಗತೊಡಗಿದೆ. ಈ ಬಾರಿ ಬೆಂಗಳೂರಲ್ಲಿ ಗಣೇಶ ಹಬ್ಬ ಆಚರಣೆಗೆ ಅನುಮತಿ ಪಡೆಯೋದು ಸುಲಭವಾಗಲಿದೆ ಎಂದು ಭರವಸೆ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಅವರು ಏಕಗವಾಕ್ಷಿ ವ್ಯವಸ್ಥೆ ವಿವರ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶೋತ್ಸವ ಆಚರಣೆ ಸುಲಲಿತಗೊಳಿಸಲು ಬಿಬಿಎಂಪಿ ಮತ್ತು ಬೆಂಗಳೂರು ಸಂಚಾರ ಪೊಲೀಸರು ಇಂದು ಶಾಂತಿ ಸೌಹಾರ್ದ ಸಭೆ ನಡೆಸಿದರು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಮಾತನಾಡಿದರು. ಮಹಾನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಮತ್ತು ಇತರೆ ಅಧಿಕಾರಿಗಳು ಸಭೆಯಲ್ಲಿದ್ದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶೋತ್ಸವ ಆಚರಣೆ ಸುಲಲಿತಗೊಳಿಸಲು ಬಿಬಿಎಂಪಿ ಮತ್ತು ಬೆಂಗಳೂರು ಸಂಚಾರ ಪೊಲೀಸರು ಇಂದು ಶಾಂತಿ ಸೌಹಾರ್ದ ಸಭೆ ನಡೆಸಿದರು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಮಾತನಾಡಿದರು. ಮಹಾನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಮತ್ತು ಇತರೆ ಅಧಿಕಾರಿಗಳು ಸಭೆಯಲ್ಲಿದ್ದರು.

ಬೆಂಗಳೂರು: ಭಾರತದ ಉದ್ದಗಲಕ್ಕೂ ಗಣೇಶೋತ್ಸವ ಆಚರಣೆಗೆ ಸಿದ್ಧತೆ ಶುರುವಾಗಿದೆ. ಬೆಂಗಳೂರಲ್ಲಿ ಗಣೇಶ ಹಬ್ಬ (Ganesha Festival) ಆಚರಣೆಗೆ ಅನುಮತಿ ಪಡೆಯೋದು ಈಗ ಸುಲಭ. ಹೌದು, ಬಿಬಿಎಂಪಿ ಚೀಫ್‌ ಕಮಿಷನರ್‌ ತುಷಾರ್‌ಗಿರಿ ನಾಥ್‌ ಅವರು ಏಕಗವಾಕ್ಷಿ ವ್ಯವಸ್ಥೆ ವಿವರವನ್ನು ಇಂದು (ಆಗಸ್ಟ್‌ 21) ನೀಡಿದರು.

ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಾಲಿಕೆಯ 63 ಉಪ ವಿಭಾಗ ಕಚೇರಿಗಳಲ್ಲಿ ಏಕಗವಾಕ್ಷಿ ಪದ್ದತಿಯಲ್ಲಿ ಒಂದೇ ಸೂರಿನಡಿ (Single Window System) ಅನುಮತಿ ಪತ್ರವನ್ನು ಪಡೆಯಬಹುದಾಗಿದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ತಿಳಿಸಿದರು.

ಅವರು, ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್)ದಲ್ಲಿ ಬಿಬಿಎಂಪಿ, ಬೆಂಗಳೂರು ನಗರ ಪೊಲೀಸರು ಜಂಟಿಯಾಗಿ ಆಯೋಜಿಸಿದ ಗಣೇಶ ಚತುರ್ಥಿ ಆಚರಣೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ "ಶಾಂತಿ ಸೌಹಾರ್ದತೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಗಣೇಶ ಹಬ್ಬ ಆಚರಣೆಗೆ ಅನುಮತಿ ಪತ್ರ; ಬಿಬಿಎಂಪಿ ವ್ಯಾಪ್ತಿಯಲ್ಲಿ 63 ಏಕಗವಾಕ್ಷಿ ಕೇಂದ್ರ

ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಅನುವಾಗುವಂತೆ ಪಾಲಿಕೆಯ 63 ಉಪ ವಿಭಾಗ ಕಚೇರಿಗಳಲ್ಲಿ ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಮತ್ತು ಅಗ್ನಿಶಾಮಕ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗುಗುವುದು. 63 ಏಕಗವಾಕ್ಷಿ ಕೇಂದ್ರಗಳ ವಿಳಾಸ ಹಾಗೂ ಏಕಗವಾಕ್ಷಿ ಕೇಂದ್ರಗಳಲ್ಲಿರುವ ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಮತ್ತು ಅಗ್ನಿಶಾಮಕ ಇಲಾಖೆಯ ನೋಡಲ್ ಅಧಿಕಾರಿಗಳ ವಿವರವಾದ ಮಾಹಿತಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ. ಅದರನುಸಾರ ಗಣೇಶ ಮೂರ್ತಿಗಳನ್ನಿಡುವವರು ಏಕಗವಾಕ್ಷಿ ಸ್ಥಳಕ್ಕೆ ಭೇಟಿ ನೀಡಿ ಒಂದೇ ಸ್ಥಳದಲ್ಲಿ ಅನುಮತಿ ಪಡೆಯಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

ತುಷಾರ್ ಗಿರಿನಾಥ್ ಅವರು ನೀಡಿದ ಸೂಚನೆಗಳಿವು: ಕೆರೆಗಳ ಬಳಿಯಿರುವ ಕಲ್ಯಾಣಿಗಳಲ್ಲಿ ಗಣೇಶ ವಿಸರ್ಜನೆಗಾಗಿ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿರುತ್ತದೆ. ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಲಾಗಿದ್ದು, ಯಾರೂ ಕೂಡಾ ಪಿಒಪಿ ಗಣೇಶ ಮೂರ್ತಿಗಳನ್ನು ಖರೀದಿಸದೆ ಪರಿಸರ ಸ್ಹೇಹಿ ಗಣೇಶ ಮೂರ್ತಿಗಳನ್ನಿಟ್ಟು ಪೂಜಿಸಬೇಕು.

ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವರ್ಷದಂತೆ ಪಾಲಿಕೆ ವತಿಯಿಂದ ಗಣೇಶ ವಿಸರ್ಜನೆಗೆ ಹಲಸೂರು ಕೆರೆ ಸೇರಿದಂತೆ ಇನ್ನಿತರೆ ಪ್ರಮುಖ ಕೆರೆಗಳ ಕಲ್ಯಾಣಿಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಂಡು ಸರಿಯಾಗಿ ವಿಸರ್ಜನೆ ಮಾಡಲು ಅವಕಾಶ ಮಾಡಿಕೊಡಲಾಗುವುದು. ಪ್ರಮುಖ ಸ್ಥಳ/ಜಂಕ್ಷನ್ ಮತ್ತು ಅವಶ್ಯಕತೆ ಇರುವ ಕಡೆ ವಾರ್ಡ್‌ವಾರು ತಾತ್ಕಾಲಿಕ ಸಂಚಾರಿ ವಿಸರ್ಜನಾ ಘಟಕ(ಮೊಬೈಲ್ ಟ್ಯಾಂಕ್)ಗಳನ್ನು ಪ್ರತಿ ವರ್ಷದಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತುಷಾರ್‌ಗಿರಿನಾಥ್ ವಿವರಿಸಿದರು.

ಗಣೇಶ ಮೂರ್ತಿಗಳ ವಿಸರ್ಜನೆಗೆ ಗುರುತಿಸಿರುವ ಕೆರೆಗಳ ಕಲ್ಯಾಣಿಗಳ ಬಳಿ ಭದ್ರತೆಯ ದೃಷ್ಠಿಯಿಂದ ಪೊಲೀಸ್ ವ್ಯವಸ್ಥೆಯ ಜೊತೆಗೆ ಬ್ಯಾರಿಕೇಡಿಂಗ್, ಸಿಸಿಟಿವಿ, ವಿದ್ಯುತ್ ದ್ವೀಪ, ನುರಿತ ಈಜುಗಾರರ ವ್ಯವಸ್ಥೆ, ಕ್ರೇನ್ ಗಳ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದರು.

ಗಣೇಶ ಹಬ್ಬದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ

ಪ್ರತಿ ವರ್ಷದಂತೆ ಈ ವರ್ಷವೂ ಶಾಂತಿ ಸೌಹಾರ್ದಯುತವಾಗಿ ಗಣೇಶ ಹಬ್ಬವನ್ನು ಆಚರಿಸಬೇಕು. ಈಗಾಗಲೇ ಎಲ್ಲ ಕಡೆ ಶಾಂತಿ ಸಭೆಗಳನ್ನು ನಡೆಸಲಾಗಿದೆ. ಈ ಬಾರಿ ಯಾವುದೇ ರೀತಿಯ ಅನಾನುಕೂಲವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಹೇಳಿದರು.

ಪಾಲಿಕೆ, ಪೊಲೀಸ್ ಇಲಾಖೆಯಿಂದ ಬರುವ ಸಲಹೆ, ಸೂಚನೆಗಳನ್ನು ಎಲ್ಲರೂ ತಪ್ಪದೆ ಪಾಲಿಸಬೇಕು. ಮೆರವಣಿಗೆ, ಮೆರವಣಿಗೆಯ ಮಾರ್ಗಕ್ಕೆ ಎಲ್ಲರೂ ಸಹಕಾರ ನೀಡಬೇಕು. ಹಬ್ಬದ ವೇಳೆ ಅನಾನುಕೂಲ, ಅಚಾತುರ್ಯ ನಡೆಯದಂತೆ ನೋಡಿಕೋಳ್ಳಲಾಗುವುದು. ಎಲ್ಲಿಯೂ ಸಂಚಾರ ದಟ್ಟಣೆಯಾಗದಂತೆ ಪೊಲೀಸ್ ಅಧಿಕರಿಗಳು ಸೂಕ್ರ ಕ್ರಮ ಕೈಗೊಳ್ಳಲಿದ್ದಾರೆ ಎಂದು ದಯಾನಂದ್‌ ತಿಳಿಸಿದರು.

ರಸ್ತೆಗಳ ನಡುವೆ ಗಣೇಶ ಮೂರ್ತಿಗಳನ್ನಿಡಬಾರದು. ಇದಕ್ಕೆ ಸೂಕ್ತ ಜಾಗವನ್ನು ಗುರುತಿಸಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ, ಇದರಿಂದ ನಾಗರಿಕರಿಗೆ ಅನುಕೂಲವಾಗಲಿದೆ. ಕಾನೂನು ವ್ಯವಸ್ಥೆಯಲ್ಲಿ ಯಾವುದೇ ರೀತಿಯ ದಕ್ಕೆಯಾಗದಂತೆ ಸಂಭ್ರಮದಿಂದ, ಶಾಂತಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸೋಣ ಎಂದು‌ ಪೊಲೀಸ್ ಆಯುಕ್ತ ದಯಾನಂದ್ ಹೇಳಿದರು.

ಗಣೇಶ ಪ್ರತಿಷ್ಠಾನದ ಆಯೋಜನಕರ ಪ್ರಮುಖ ಸಲಹೆಗಳು

1) ಗಣಪತಿ ವಿಸರ್ಜನೆ ಮಾಡಲು ಸೂಕ್ತ ಸ್ಥಳ ನಿಗದಿಮಾಡಿ, ವಿಸರ್ಜನೆಗೆ ಅವಕಾಶ ಮಾಡಿಕೊಡಬೇಕು.

2) ಸೂಕ್ಷ್ಮ ಪ್ರದೇಶಗಳಲ್ಲಿ ಸರಿಯಾದ ಪೊಲೀಸ್ ಭದ್ರತೆ ನೀಡಬೇಕು

3) ಧಾರ್ಮಿಕ ಆಚರಣೆಗಳು ನಡೆಸುವಾಗ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು.

4) ಪಿಒಪಿ ಗಣೇಶ ಮೂರ್ತಿಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು.

5) ಏಕ ಗವಾಕ್ಷಿ ಪದ್ದತಿಯನ್ನು ಸರಿಯಾಗಿ ಜಾರಿಗೊಳಿಸಬೇಕು.

6) ಮೆರವಣಿಗೆ ಹೋಗುವ ರಸ್ತೆಗಳನ್ನು ಸರಿಯಾಗಿ ದುರಸ್ತಿಮಾಡಿಕೊಡಬೇಕು. ಗಣೇಶ ವಿಸರ್ಜನೆಯ ಮೆರವಣಿಗೆಯ ವೇಳೆ ಸಂಚಾರ ದಟ್ಟಣೆಯಾಗದಂತೆ ಕ್ರಮವಹಿಸಬೇಕು.ಗಣೇಶ ವಿಸರ್ಜನಾ ಸಮಯದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು.

7) ಹೆಚ್ಚು ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶ ನೀಡಬಾರದು. ಗಣೇಶ ಪ್ರತಿಷ್ಠಾಪನೆಯ ಸ್ಥಳದಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಸಲು ಅನುಮತಿ ನೀಡಬೇಕು.

8) ಸ್ವಲ್ಪ ಹೆಚ್ಚು ಸಂಖ್ಯೆಯ ಮೊಬೈಲ್ ಟ್ಯಾಂಕ್‌ಗಳನ್ನು ಸ್ಥಾಪಿಸಬೇಕು.

9) ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆ ಬೆಸ್ಕಾಂ ಇಲಾಖೆಯಿಂದ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಯಾವುದೇ ವಿದ್ಯುತ್ ಅವಘಡ ನಡೆಯದಂತೆ ನೋಡಿಕೊಳ್ಳಬೇಕು.

10) ಕೆರೆಗಳ ಬಳಿಯಿರುವ ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡುವ ವೇಳೆ ಸಾಕಷ್ಟು ಗಣೇಶ ಮೂರ್ತಿಗಳನ್ನು ರಸ್ತೆ ಬದಿಯೇ ಇಟ್ಟು ಹೋಗುತ್ತಾರೆ. ಅದನ್ನು ತಪ್ಪಿಸಬೇಕು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್, ರಮಣ ಗುಪ್ತಾ, ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್, ಬೆಸ್ಕಾಂ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ಅಧಿಕಾರಿಗಳು, ಗಣೇಶ ಪ್ರತಿಷ್ಠಾನದ ಆಯೋಜಕರು, ವಿವಿಧ ಸಮುದಾಯದ ಮುಖಂಡರು ಸೇರಿ ಇನ್ನಿತರರು ಉಪಸ್ಥಿತರಿದ್ದರು.

Whats_app_banner