Blast in Bengaluru: ಬೆಂಗಳೂರಿನ ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ; ಹಲವರಿಗೆ ಗಾಯ
Mar 01, 2024 04:11 PM IST
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ
ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ (ಮಾ1) ಮಧ್ಯಾಹ್ನ ಭಾರಿ ಸ್ಪೋಟ ಸಂಭವಿಸಿದೆ. ನಿಗೂಢ ಸ್ಫೋಟಕ್ಕೆ ಕಾರಣವೇನು ಎಂಬುದು ಬಹಿರಂಗವಾಗಿಲ್ಲ. ಹಲವರು ಗಾಯಗೊಂಡಿರುವ ಶಂಕೆ ಇದೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ (Rameshwaram Cafe) ಯಲ್ಲಿ ನಿಗೂಢ ಸ್ಫೋಟ (Mysterious Blast) ಸಂಭವಿಸಿದೆ. ಶುಕ್ರವಾರ ಮಧ್ಯಾಹ್ನ ಈ ಸ್ಫೋಟ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.
ಸ್ಫೋಟಕ್ಕೆ ಕಾರಣವೇನು ಎಂಬುದು ಬಹಿರಂಗವಾಗಿಲ್ಲ. ಬಾಯ್ಲರ್ ಸ್ಫೋಟವಾಗಿರುವುದಾ ಅಥವಾ ಸಿಲಿಂಡರ್ ಸ್ಫೋಟವಾಗಿರುವುದಾ ಎಂಬುದು ಖಚಿತವಾಗಿಲ್ಲ. ಎಎಚ್‌ಎಎಲ್ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಪರಿಹಾರ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಮಧ್ಯಾಹ್ನ ಊಟದ ಸಮಯವಾದ ಕಾರಣ ಹೋಟೆಲ್‌ನಲ್ಲಿ ಜನದಟ್ಟಣೆ ಇತ್ತು. ಸ್ಫೋಟದ ಬಳಿಕ ಗಾಯಗೊಂಡವರನ್ನು ಕೂಡಲೇ ಸ್ಥಳದಲ್ಲಿ ಸಿಕ್ಕ ಆಟೋ ಮತ್ತು ಇತರೆ ವಾಹನಗಳ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳದಲ್ಲಿ ಹೋಟೆಲ್‌ನಲ್ಲಿದ್ದ ಗ್ರಾಹಕರ ಕೆಲವರ ಕಂಪನಿ ಐಡಿ ಕಾರ್ಡ್‌ಗಳು ಬಿದ್ದಿರುವುದು ಕಂಡುಬಂದಿದೆ ಎಂದು ವರದಿ ಹೇಳಿದೆ.
ಸ್ಫೋಟದಿಂದ ಐವರಿಗೆ ಗಾಯ, ಒಬ್ಬನ ಸ್ಥಿತಿ ಗಂಭೀರ
ನಿಗೂಢ ಸ್ಫೋಟ ಸಂಭವಿಸಿದ್ದು ಹೇಗೆ ಎಂಬುದು ದೃಢಪಟ್ಟಿಲ್ಲ. ಆದರೂ ಎಲ್‌ಪಿಜಿ ಸಿಲಿಂಡರ್ ಸ್ಫೋಟದ ಶಂಕೆ ವ್ಯಕ್ತವಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಸ್ಫೋಟದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಒಂದೇ ಕಂಪನಿಯ 5 ಉದ್ಯೋಗಿಗಳು ಗಾಯಗೊಂಡಿದ್ದಾರೆ. ಅವರ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.
ಸ್ಫೋಟದ ತೀವ್ರತೆಗೆ ಹೋಟೆಲ್‌ನ ಒಳಭಾಗ ಸಂಪೂರ್ಣ ಛಿದ್ರವಾಗಿದೆ. ಸ್ಫೋಟದ ಸದ್ದು ಬಹಳ ದೂರದ ತನಕ ಕೇಳಿತ್ತು. ಯಾವುದಾದರೂ ವಾಹನದ ಟೈರ್ ಬ್ಲಾಸ್ಟ್ ಆಗಿರಬೇಕು ಎಂದು ಹೊರಗೆ ಬಂದು ನೋಡಿದೆ. ಆಗ ರಾಮೇಶ್ವರಂ ಕೆಫೆ ಛಿದ್ರವಾಗಿದ್ದು, ಹೊಗೆ ಹೋಗುತ್ತಿದ್ದುದು ಕಂಡುಬಂತು ಎಂದು ವೀಕ್ಷಕರೊಬ್ಬರು ಟಿವಿ9 ಕನ್ನಡಕ್ಕೆ ಹೇಳಿಕೆ ನೀಡಿದ್ದು ಕಂಡುಬಂತು.
ಸ್ಫೋಟಕ್ಕೆ ಕಾರಣವೇನು; ಪೊಲೀಸರು, ಎಫ್‌ಎಸ್‌ಎಲ್ ತಂಡ, ಬಾಂಬ್ ಸ್ಕ್ವಾಡ್ ಸ್ಥಳಪರಿಶೀಲನೆ
ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಎಫ್‌ಎಸ್‌ಎಲ್ ಪರಿಣತರ ತಂಡ ಸ್ಥಳಕ್ಕೆ ತಲುಪಿದೆ. ಪರಿಣತರ ತಂಡ ಹೋಟೆಲ್ ಒಳಭಾಗದಲ್ಲಿ ಸ್ಫೋಟ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ಸ್ಥಳ ಪರಿಶೀಲನೆ ಮಾಡಿ ಬಳಿಕ ಸ್ಫೋಟ ಕಾರಣವೇನು ಎಂಬುದನ್ನು ಖಚಿತಪಡಿಸಲಿದೆ.
ಎಸಿಪಿ ರೀನಾ ಸುವರ್ಣ, ಮಾರತ್ತಹಳ್ಳಿ ಪೊಲೀಸರ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಸುಟ್ಟ ಸ್ಥಿತಿಯಲ್ಲಿರುವ ಬ್ಯಾಗ್ ಹಾಗೂ ಸ್ಥಳದಲ್ಲಿ ಸಿಕ್ಕ ಐಡಿ ಕಾರ್ಡ್ ವಶಪಡಿಸಿಕೊಂಡು ಪರಿಶೀಲಿಸಿದ್ದಾರೆ. ಹೋಟೆಲ್‌ನ ಸಿಸಿಟಿವಿ ಫೂಟೇಜ್‌ಗಳನ್ನೂ ವಶಪಡಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಬೆಂಗಳೂರು ನಗರದ ಪೊಲೀಸ್ ಆಯಕ್ತ ದಯಾನಂದ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ.
ಅನುಮಾನ ಮೂಡಿಸಿದ ಬ್ಯಾಗ್; ರಾಮೇಶ್ವರಂ ಕೆಫೆ ಎಂಡಿ ಶಂಕೆ
ದಿ ರಾಮೇಶ್ವರಂ ಕೆಫೆ ಎಂಡಿ ದಿವ್ಯಾ ರಾಘವೇಂದ್ರ ರಾವ್ ಅವರು ಟಿವಿ9 ಕನ್ನಡಕ್ಕೆ ಹೇಳಿಕೆ ನೀಡುತ್ತ, ಹೋಟೆಲ್‌ನಲ್ಲಿರುವ ವಸ್ತುಗಳಿಂದ ಸ್ಫೋಟ ಸಂಭವಿಸಿಲ್ಲ. ಸಿಲಿಂಡರ್, ಬಾಯ್ಲರ್ ಎಲ್ಲವೂ ಸುರಕ್ಷಿತವಾಗಿದ್ದವು. ಸ್ಫೋಟ ಸಂಭವಿಸಿದ ಸ್ಥಳದಿಂದ ಬ್ಯಾಗ್, ಐಡಿ ಕಾರ್ಡ್ ಮತ್ತು ಬ್ಯಾಟರಿ ಸಿಕ್ಕಿದೆ. ಎಲ್ಲವೂ ಸುಟ್ಟ ಸ್ಥಿತಿಯಲ್ಲಿದೆ ಎಂದು ಹೇಳಿದರು.
ಈ ರೀತಿ ಅನುಮಾನಾಸ್ಪದ ಬ್ಯಾಗ್ ಕೆಫೆಯಲ್ಲಿ ಕಂಡುಬರುತ್ತಿರುವುದು ಇದೇ ಮೊದಲಲ್ಲ. ಹಿಂದೆ ಎರಡು ಬಾರಿ ಈ ರೀತಿ ಆಗಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದೆವು ಎಂದು ದಿವ್ಯಾ ರಾಘವೇಂದ್ರ ರಾವ್ ಹೇಳಿದ್ದಾರೆ.
(This copy first appeared in Hindustan Times Kannada website. To read more like this please logon to kannada.hindustantimes.com)