BWSSB Water Tariff; ಬೆಂಗಳೂರಲ್ಲಿ 14 ವರ್ಷದಿಂದ ನೀರಿನ ದರ ಬದಲಾಗಿಲ್ಲ, ಈ ಸಲ ನೀರಿನ ಬಿಲ್ ಹೆಚ್ಚಳ ಪಕ್ಕಾ ಎಂದ ಡಿಸಿಎಂ
Aug 23, 2024 04:10 PM IST
ಬೆಂಗಳೂರು ಜಲ ಮಂಡಳಿ (ಸಾಂಕೇತಿಕ ಚಿತ್ರ)
Bengaluru Water Tariff; ಜನರಿಗೆ ಎಷ್ಟು ಮಾಡಿದರೂ, ಏನು ಮಾಡಿದರೂ ಉಪಕಾರ ಸ್ಮರಣೆ ಇಲ್ಲ. ಬೆಂಗಳೂರಲ್ಲಿ 14 ವರ್ಷದಿಂದ ನೀರಿನ ದರ ಬದಲಾಗಿಲ್ಲ, ಈ ಸಲ ನೀರಿನ ಬಿಲ್ ಹೆಚ್ಚಳ ಪಕ್ಕಾ ಎಂದು ಡಿಸಿಎಂ ಡಿಕೆ ಶಿವ ಕುಮಾರ್ ಸ್ಪಷ್ಟಪಡಿಸಿದರು.
ಬೆಂಗಳೂರು: ನೀರಿನ ದರ ಪರಿಷ್ಕರಣೆಯಾಗದೆ 14 ವರ್ಷಗಳಾಗಿದ್ದು, ಈಗ ಬೆಂಗಳೂರಿಗರಿಗೆ ನೀರಿನ ದರ ಏರಿಕೆಯ ಕಳವಳ ಶುರುವಾಗಿದೆ. ಬೆಂಗಳೂರು ಜಲಮಂಡಳಿ ನೀರಿನ ಶುಲ್ಕವನ್ನು ಯಾವ ಪ್ರಮಾಣದಲ್ಲಿ ಹೆಚ್ಚಿಸಬಹುದು ಎಂಬ ವಿಚಾರ ಚರ್ಚೆಗೆ ಒಳಗಾಗಿದೆ. ಇದಲ್ಲದೆ, ನೀರಿನ ದರ ಏರಿಕೆ ಮಾಡಿಯೇ ಮಾಡುತ್ತೇವೆ ಎಂದು ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ, ಈ ವಿದ್ಯಮಾನವನ್ನು ದೃಢೀಕರಿಸಿದೆ.
14 ವರ್ಷಗಳ ಅವಧಿಯಲ್ಲಿ ಎಲ್ಲ ದರಗಳೂ ಏರಿಕೆಯಾಗಿವೆ. ಆದರೆ ನೀರಿನ ದರ ಏರಿಕೆಯಾಗದಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಈ ವಿಚಾರದಲ್ಲಿ ಸ್ವಲ್ಪ ಬಿಗಿ ನಿಲುವು ಪ್ರದರ್ಶಿಸಿದರು.
ಜನ ಬೈದರೂ ನೀರಿನ ದರ ಹೆಚ್ಚಳ ಮಾಡುವುದು ಖಚಿತ- ಡಿಸಿಎಂ ಡಿಕೆ ಶಿವಕುಮಾರ್
ಜನ ಬೈದರೂ ನೀರಿನ ದರ ಹೆಚ್ಚಳ ಮಾಡಿಯೇ ಮಾಡುತ್ತೇವೆ. ಮಾಧ್ಯಮದವರು ಬೈಯಲಿ, ಜನವಿರೋಧ ವ್ಯಕ್ತಪಡಿಸಲಿ. ವಿಪಕ್ಷಗಳು ಟೀಕಿಸಲಿ, ತಲೆಕೆಡಿಸಿಕೊಳ್ಳುವುದಿಲ್ಲ. ನೀರಿನ ದರ ಹೆಚ್ಚಳ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುರುವಾರ ವಿಧಾನಸೌಧದ ಮುಂಭಾಗ ಕಾವೇರಿ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಹೇಳಿದರು.
ಎಷ್ಟು ವರ್ಷಗಳಿಂದ ನೀರಿನ ದರ ಹೆಚ್ಚಿಸಿಲ್ಲ ಎಂಬುದರ ಮಾಹಿತಿಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಅಧಿಕಾರಿಗಳಿಂದ ಪಡೆದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಕಳೆದ 14 ವರ್ಷಗಳಿಂದ ನೀರಿನ ದರ ಏರಿಕೆ ಮಾಡದೇ ನಿರ್ವಹಿಸುತ್ತ ಬರಲಾಗಿದೆ. ಆದರೆ ವಿದ್ಯುತ್ ದರ ಸೇರಿ ಎಲ್ಲ ದರಗಳು ಏರಿಕೆಯಾಗಿವೆ ಎಂಬುದರ ಕಡೆಗೆ ಗಮನಸೆಳೆದರು.
ಬೆಂಗಳೂರು ನಗರವಾಸಿಗಳಿಗೆ ಉತ್ತಮ ರೀತಿಯಲ್ಲಿ ನೀರು ಪೂರೈಸುವಲ್ಲಿ ಬೆಂಗಳೂರ ಜಲಮಂಡಳಿಯ ಕೊಡುಗೆ ಗಮನಾರ್ಹ. ಜಲಮಂಡಳಿ ನಿತ್ಯದ ಖರ್ಚುವೆಚ್ಚಗಳನ್ನು ಭರಿಸುವುದರ ಕಡೆಗೂ ಸರ್ಕಾರ ಗಮನಹರಿಸಬೇಕಾಗಿದೆ. ಪ್ರತಿ ವರ್ಷ ವಿದ್ಯುತ್ ದರ ಪರಿಷ್ಕರಣೆ ಆಗುತ್ತಿದೆ. ಜಲಮಂಡಳಿಯ ವಿದ್ಯುತ್ ಬಿಲ್ ಕೂಡ ಹೆಚ್ಚುತ್ತಿದೆ. ಆದರೆ, ಬಿಲ್ ಕಟ್ಟಲು, ನೌಕರರ ಸಂಬಳ ಪಾವತಿಸಲು ಆಗುತ್ತಿಲ್ಲ. ಹೀಗಾಗಿ, ದರ ಹೆಚ್ಚಿಸದೇ ಬೇರೆ ಆಯ್ಕೆ ಇಲ್ಲ. ಇದೇ ರೀತಿ ಮುಂದು ವರೆದರೆ ಜಲಮಂಡಳಿ ಉಳಿಯುವುದಿಲ್ಲಎಂದು ಡಿಕೆ ಶಿವಕುಮಾರ್ ವಿವರಿಸಿದರು.
ಬಿಲ್ ಕಟ್ಟುವವರು ಕಟ್ಟುತ್ತಾರೆ, ಕಟ್ಟದವರು ಇಲ್ಲ- ಇದು ಸರಿಯಲ್ಲ ಎಂದ ಡಿಕೆ ಶಿವಕುಮಾರ್
ಬೆಂಗಳೂರು ಮಹಾನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಲೇ ಇದ್ದು, ಈಗಲೇ 1.4 ಕೋಟಿ ಜನರಿದ್ದಾರೆ. ಎಲ್ಲರಿಗೂ ನೀರು ಒದಗಿಸುವ ಹೊಣೆಗಾರಿಕೆ ಬೆಂಗಳೂರು ಜಲಮಂಡಳಿಯ ಮೇಲಿದೆ. ಭವಿಷ್ಯದ ದೃಷ್ಟಿಯಿಂದ ಈಗ ಸಾಲ ಮಾಡಿ, ಸಂಪರ್ಕ ಜಾಲವನ್ನು ಹೆಚ್ಚಿಸದ ಹೊರತು ನೀರು ಒದಗಿಸಲು ಕಷ್ಟವಾಗುತ್ತದೆ. ಇನ್ನೂ ಜನರಿಗೆ ಎಷ್ಟು ಮಾಡಿದರೂ, ಏನು ಮಾಡಿದರೂ ಉಪಕಾರ ಸ್ಮರಣೆ ಇಲ್ಲ. ಅವರಿಗೆ ನೀರು ಬಂದರೆ ಸರಿ. ಇಲ್ಲದಿದ್ದರೆ ಬೈತಾರೆ, ಉಗಿತಾರೆ. ಅವರಿಗೆ ಜಲಮಂಡಳಿಯವರ ಕಷ್ಟದ ಅರಿವಿಲ್ಲ, ಬಿಲ್ ಕಟ್ಟುವವರು ಕಟ್ಟುತ್ತಾರೆ, ಕಟ್ಟದವರೂ ಇದ್ದಾರೆ. ಆದ್ದರಿಂದ ಜಲಮಂಡಳಿಯ ಆರೋಗ್ಯ ದೃಷ್ಟಿಯಿಂದ ದರ ಏರಿಕೆ ಮಾಡುವುದು ಖಚಿತ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನ ನೀರು ಸರಬರಾಜು ಮತ್ತು ವಿದ್ಯುತ್ ಸರಬರಾಜಿನ ವ್ಯವಸ್ಥೆಯನ್ನು ವಿವಧ ರಾಜ್ಯಗಳಲ್ಲಿ ಮಾಡಿದಂತೆ ಖಾಸಗಿ ಕಂಪನಿಗಳಿಗೆ ವಹಿಸಬೇಕು ಎಂಬ ಪ್ರಸ್ತಾವನೆಗಳನ್ನು ಕೆಲವರು ಮುಂದಿಟ್ಟಿದ್ದರು. ವಿವಿಧ ರಾಜ್ಯಗಳಲ್ಲಿ ಅದಾನಿಯಂತಹ ಸಂಸ್ಥೆಗಳು ಈಗಾಗಲೇ ವಿದ್ಯುತ್ ಪೂರೈಕೆ ಮಾಡುತ್ತಿರುವ ಕಾರಣ, ಅದರ ಸಾಧಕ ಬಾಧಕಗಳನ್ನು ಗಮನಿಸಿದ್ದೇವೆ. ಪ್ರಸ್ತಾವನೆಗಳನ್ನು ತಿರಸ್ಕರಿಸಿದ್ದೇವೆ. ನಾನು ಇರುವವರೆಗೂ ಈ ವ್ಯವಸ್ಥೆಯ ಖಾಸಗೀಕರಣ ಸಾಧ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್‌ಸ್ಪಷ್ಟಪಡಿಸಿದರು.