logo
ಕನ್ನಡ ಸುದ್ದಿ  /  ಕರ್ನಾಟಕ  /  ರೇಣುಕಾಸ್ವಾಮಿ ಕೊಲೆ ಪ್ರಕರಣ; ಸೆ 9 ರವರೆಗೆ ಮತ್ತೆ ಜೈಲಿನಲ್ಲಿ ಉಳಿಯಬೇಕು ದರ್ಶನ್‌, ತಡರಾತ್ರಿ ಬಳ್ಳಾರಿ ಜೈಲಿಗೆ ಶಿಫ್ಟ್‌

ರೇಣುಕಾಸ್ವಾಮಿ ಕೊಲೆ ಪ್ರಕರಣ; ಸೆ 9 ರವರೆಗೆ ಮತ್ತೆ ಜೈಲಿನಲ್ಲಿ ಉಳಿಯಬೇಕು ದರ್ಶನ್‌, ತಡರಾತ್ರಿ ಬಳ್ಳಾರಿ ಜೈಲಿಗೆ ಶಿಫ್ಟ್‌

Umesh Kumar S HT Kannada

Aug 28, 2024 08:00 PM IST

google News

ಕೊಲೆ ಆರೋಪಿ ನಟ ದರ್ಶನ್ ತೂಗುದೀಪ (ಎಡಚಿತ್ರ), ಹತ್ಯೆಗೀಡಾದ ಚಿತ್ರದುರ್ಗದ ರೇಣುಕಾಸ್ವಾಮಿ (ಬಲಚಿತ್ರ)

  •  ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ತೂಗುದೀಪ ಮತ್ತು ಸಹಚರರ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ಆರೋಪ ಎದುರಾದ ಕಾರಣ, ಪೊಲೀಸರು ದರ್ಶನ್ ಅವರನ್ನು ತಡರಾತ್ರಿ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಕೊಲೆ ಆರೋಪಿ ನಟ ದರ್ಶನ್ ತೂಗುದೀಪ (ಎಡಚಿತ್ರ), ಹತ್ಯೆಗೀಡಾದ ಚಿತ್ರದುರ್ಗದ ರೇಣುಕಾಸ್ವಾಮಿ (ಬಲಚಿತ್ರ)
ಕೊಲೆ ಆರೋಪಿ ನಟ ದರ್ಶನ್ ತೂಗುದೀಪ (ಎಡಚಿತ್ರ), ಹತ್ಯೆಗೀಡಾದ ಚಿತ್ರದುರ್ಗದ ರೇಣುಕಾಸ್ವಾಮಿ (ಬಲಚಿತ್ರ)

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 9 ರವರೆಗೆ ನಟ ದರ್ಶನ್ ತೂಗುದೀಪ ಮತ್ತು ಇತರ ಆರೋಪಿಗಳಿಗೆ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಲಾಗಿದೆ.

ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟ್ ಈ ಆದೇಶ ಹೊರಡಿಸಿದೆ. ರೇಣುಕಾಸ್ವಾಮಿ ಕೊಲೆಯಲ್ಲಿ ಭಾಗಿಯಾಗಿದ್ದ ದರ್ಶನ್, ಅವರ ಆಪ್ತ ಸ್ನೇಹಿತೆ ಪವಿತ್ರ ಗೌಡ ಸೇರಿದಂತೆ 17 ಮಂದಿಯ ನ್ಯಾಯಾಂಗ ಬಂಧನ ಅವಧಿ ಆಗಸ್ಟ್ 28 ಬುಧವಾರಕ್ಕೆ ಅಂತ್ಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ಎಲ್ಲ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.

ಪ್ರಕರಣದ ತನಿಖಾಧಿಕಾರಿಗಳು, ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆರೋಪಿಗಳ ಬಂಧನ ಅವಧಿ ಅನಿವಾರ್ಯ ಎಂದು ಹಲವು ಕಾರಣಗಳನ್ನು ಪೊಲೀಸರು ನೀಡಿದ್ದರು.

ರೇಣುಕಾಸ್ವಾಮಿ ಹತ್ಯೆ ಕೇಸ್‌, ಆರೋಪಿಗಳ ವಿರುದ್ಧ ಬಲವಾದ ಸಾಕ್ಷ್ಯ

ರೇಣುಕಾಸ್ವಾಮಿ ಹತ್ಯೆಯಲ್ಲಿ ಆರೋಪಿಗಳ ಪಾತ್ರ ಎಲ್ಲಾ ರೀತಿಯಿಂದಲೂ ಬಹುತೇಕ ಸಾಬೀತಾಗಿದೆ. ಕೆಲವು ಸಾಂದರ್ಭಿಕ ಸಾಕ್ಷಿಗಳ ಹೇಳಿಕೆ ಪಡೆಯಬೇಕಿದ್ದು ಬಾಕಿ ಉಳಿದಿದೆ. ಅಗತ್ಯ ಕಂಡು ಬಂದಲ್ಲಿ ಸೆ. 164 ಅಡಿಯಲ್ಲಿ ಹೇಳಿಕೆ ದಾಖಲಿಸ ಬೇಕಿದೆ. ಈ ಸಂದರ್ಭದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದರೆ ಸಾಕ್ಷ್ಯಗಳನ್ನು ನಾಶ ಪಡಿಸುವ ಮತ್ತು ಬೆದರಿಸುವ ಸಾಧ್ಯತೆಗಳಿವೆ. ಆರೋಪಿಗಳು ಪ್ರಭಾವಿಗಳಾಗಿದ್ದು, ವ್ಯವಸ್ಥಿತ ರೀತಿಯಲ್ಲಿ ಸಾಕ್ಷ್ಯ ನಾಶ ಮಾಡುವ ಸಾಧ್ಯತೆಗಳು ಹೆಚ್ಚು. ಪ್ರಭಾವಿ ಆರೋಪಿಗಳಾಗಿದ್ದು ಮೃತ ಸ್ವಾಮಿಯ ಕುಟುಂಬಕ್ಕೆ ಬೆದರಿಕೆ ಅಥವಾ ಆಮಿಷ ಒಡ್ಡುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗುವುದಿಲ್ಲ.

ಕೆಲವು ಸಾಕ್ಷ್ಯಗಳ ಎಫ್ ಎಸ್ ಎಲ್ ವರದಿಯಲ್ಲಿ ಆರೋಪಿಗಳ ಪಾತ್ರ ಸಾಬೀತಾಗಿದೆ. ಇನ್ನೂ ಕೆಲವು ಸಾಕ್ಷ್ಯಗಳ ಎಫ್ ಎಸ್ ಎಲ್ ವರದಿ ಬರಬೇಕಿದೆ. ಈ ಎಲ್ಲ ಕಾರಣಗಳಿಂದಾಗಿ ಆರೋಪಿಗಳಿಗೆ ಈ ಹಂತದಲ್ಲಿ ಜಾಮೀನು ನೀಡಬಾರದು ಮತ್ತು ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಬೇಕು ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿ ಕೊಡಲಾಗಿದೆ.

ನಟ ದರ್ಶನ್‌ ಸೇರಿ ಕೆಲವು ಆರೋಪಿಗಳು ತಡರಾತ್ರಿ ಬಳ್ಳಾರಿಗೆ ಶಿಫ್ಟ್‌

ನಾಲ್ವರು ಆರೋಪಿಗಳನ್ನು ತುಮಕೂರು ಹಾಗೂ ದರ್ಶನ್ ಸೇರಿದಂತೆ ಉಳಿದ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿರಿಸಲಾಗಿದೆ. ನಟ ದರ್ಶನ್ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗುತ್ತಿದ್ದು, ಬಳ್ಳಾರಿ ಕಾರಾಗೃಹಕ್ಕೆ ತಡ ರಾತ್ರಿಯೊಳಗೆ ಕರೆ ತರಲಾಗುತ್ತದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಜೂನ್ 8 ರಂದು ರೇಣುಕಾಸ್ವಾಮಿ ಕೊಲೆ ನಡೆದಿತ್ತು. ಹತ್ಯೆಗೂ ಮುನ್ನ ದರ್ಶನ್ ರಾಜರಾಜೇಶ್ವರಿ ನಗರದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ನಲ್ಲಿ ನಟ ಚಿಕ್ಕಣ್ಣ ಮತ್ತಿತರರ ಜತೆಯಲ್ಲಿ ಪಾರ್ಟಿ ನಡೆಸಿದ್ದರು. ಹಿಂದಿನ ವಿಚಾರಣೆಯಲ್ಲಿ ದರ್ಶನ್‌ ಸೇರಿದಂತೆ ಎಲ್ಲ ಆರೋಪಿಗಳ ಬಂಧನ ಅವಧಿ ಆಗಸ್ಟ್‌ 14, ಬುಧವಾರಕ್ಕೆ ಅಂತ್ಯವಾಗಿತ್ತು. ನಂತರ ನ್ಯಾಯಾಂಗ ಬಂಧನ ಅವಧಿಯನ್ನು ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆಗಸ್ಟ್‌ 28ರವರೆಗೆ ವಿಸ್ತರಿಸಿತ್ತು.

ತನಿಖಾಧಿಕಾರಿಗಳು ಚಾರ್ಜ್‌ ಶೀಟ್‌ ಅನ್ನು ಸಿದ್ದಪಡಿಸಿದ್ದು, ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

(ವರದಿ- ಎಚ್. ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ