ಬರ ನಿರ್ವಹಣೆ ಪರಿಶೀಲನೆ; ಮಾರ್ಚ್ 5 ರಂದು ಜಿಲ್ಲಾ ಉಸ್ತವಾರಿ ಸಚಿವರು, ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ
Mar 04, 2024 02:10 PM IST
ರಾಜ್ಯದಲ್ಲಿನ ಬರ ನಿರ್ವಹಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಮಂಗಳವಾರ (ಮಾರ್ಚ್ 5) ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. (ಫೋಟೋ-ಫೈಲ್ (ANI)
- ಸಿಎಂ ಸಿದ್ದರಾಮಯ್ಯ ಅವರು ಮಾರ್ಚ್ 5 ರಂದು ರಾಜ್ಯದಲ್ಲಿನ ಬರ ನಿರ್ವಹಣೆ ಬಗ್ಗೆ ಪರಿಶೀಲನೆ ಸಭೆ ನಡೆಸಲಿದ್ದಾರೆ. ವಿಡಿಯೊ ಸಂವಾದದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಮಾರ್ಚ್ 5 ರಂದು ಬೆಳಿಗ್ಗೆ 11 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಬರ ಪರಿಸ್ಥಿತಿ ನಿರ್ವಹಣೆ (Drought Management Review) ಮತ್ತಿತರ ವಿಷಯಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳು ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ವಿಡಿಯೋ ಸಂವಾದದಲ್ಲಿ ಎಲ್ಲ ಜಿಲ್ಲೆಗಳ “ಕುಡಿಯುವ ನೀರು, ಬರ ನಿರ್ವಹಣೆ, ಜಾನುವಾರು ಮೇವು, ಉದ್ಯೋಗ ಹಾಗೂ ಕೃಷಿ” ವಿಷಯಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ.
ಕೆಲವೊಂದು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಪಂಚಾಯಿತಿಗಳಿಂದ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವ ಕೆಲಸ ಮಾಡಲಾಗುತ್ತಿದೆ. ಸರ್ಕಾರಗಳೇ ವಿವಿಧ ಯೋಜನೆಗಳ ಅಡಿಯಲ್ಲಿ ಹೊಸದಾಸಿ ಕೊಳವೆಬಾವಿಗಳನ್ನು ಕೊರೆಸಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ. ಪಶುಗಳಿಗೆ ಮೇವಿನ ಕೊರತೆಯುಂಟಾಗಿದ್ದು, ಕೆಲವರು ರೈತರನ್ನು ಪಶುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
2023ರ ಸೆಪ್ಟೆಂಬರ್‌ನಲ್ಲಿ ಕರ್ನಾಟಕದ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ 161 ತೀವ್ರ ಬರ ಪೀಡಿತ, 34 ಸಾಮಾನ್ಯ ಬರ ಪೀಡಿತ ಜಿಲ್ಲೆಗಳೆಂದು ಘೋಷಣೆ ಮಾಡಲಾಗಿತ್ತು. ಬಳಿಕ ಬರ ಪೀಡಿತ ತಾಲೂಕು ಪಟ್ಟಿಯನ್ನು ಪರಿಷ್ಕರಿಸಿಲಾಗಿದ್ದು, ಈ ಸಂಖ್ಯೆಯನ್ನು 195ಕ್ಕೆ ಹೆಚ್ಚಿಸಲಾಗಿತ್ತು. ಬೆಂಗಳೂರು ನಗರದ ಬೆಂಗಳೂರು ಪೂರ್ವ ತಾಲೂಕು, ಬೆಂಗಳೂರು ಗ್ರಾಮಾಂಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ, ರಾಮನಗರದ ಕನಕಪುರ, ರಾಮನಗರ, ಹಾರೋಹಳ್ಳಿ, ಕೋಲಾರ ಜಿಲ್ಲೆಯ ಬಂಗಾರಪೇಟೆ, ಕೋಲಾರ, ಮುಳಬಾಗಿಲು, ಶ್ರೀನಿವಾಸಪುರ, ಕೆಜಿಎಫ್, ಚಿಕ್ಕಬಳ್ಳಾಪುರದ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ಶಿರಾ, ತುರುವೇಕೆರೆಯನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ.
ಚಿತ್ರದುರ್ಗ, ದಾವಣಗೆರೆ, ಮೈಸೂರು, ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಧಾರವಾಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡುಗು ಉಡುಪಿ, ಉತ್ತರ ಕನ್ನಡ, ಯಾದಗಿರಿ ಹಾಗೂ ವಿಜಯನಗರದಲ್ಲಿನ ಕೆಲವು ತಾಲೂಕುಗಳನ್ನು ತೀರ್ವ ಬರ ಪೀಡಿತ ಎಂದು ಘೋಷಿಸಲಾಗಿದೆ.
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದಲೇ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆಯಾಗಿದ್ದು, ಬೆಳೆಗಳನ್ನು ಬೆಳೆಯಲು ರೈತರು ಹರಸಾಹಸ ಪಡುತ್ತಿದ್ದಾರೆ. ಇದರ ನಡುವೆ ಪದೇ ಪದೆ ವಿದ್ಯುತ್ ಕೈಕೊಡುತ್ತಿರುವುದು ಬೆಳೆಗಳಿಗೆ ನೀರು ಒದಗಿಸುವುದು ಅನ್ನದಾತರಿಗೆ ದೊಡ್ಡ ಸವಾಲು ಆಗಿದೆ. ಕೆಲವೆಡೆ ನೀರಿನಲ್ಲಿ ಬೆಳೆಗಳು ಒಣಗಿ ಹೋಗುತ್ತಿವೆ. ಇದು ಕೂಲಿ ಕಾರ್ಮಿಕರ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕೆಲಸವಿಲ್ಲದೆ ಕಾರ್ಮಿಕರು ಮನೆಗಳಲ್ಲೇ ಇರುವಂತ ಪರಿಸ್ಥಿತಿ ಇದೆ.