ಕರ್ನಾಟಕ ಬಜೆಟ್ 2024: 500 ಕೋಟಿ ರೂಪಾಯಿ ವೆಚ್ಚದಲ್ಲಿ ಬರ ಉಪಶಮನಕ್ಕೆ ಸಿಎಂ ಸಿದ್ದರಾಮಯ್ಯ ಅಸ್ತು
Karnataka Budget 2024: ಪ್ರಸಕ್ತ ಸಾಲಿನಲ್ಲಿ ರಾಜ್ಯ ವಿಪತ್ತು ಉಪಶಮನ ನಿಧಿಯಿಂದ ಒಟ್ಟು 500 ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಿವಿಧ ಬರ ಉಪಶಮನ ಕ್ರಮಗಳನ್ನು ಕೈಗೊಳ್ಳಲು ಕ್ರಮವಹಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಫೆಬ್ರವರಿ 16, ಶುಕ್ರವಾರ) 2024ನೇ ಸಾಲಿನ ಪೂರ್ಣ ಬಜೆಟ್ (Karnataka Budget 2024) ಅನ್ನು ಸುದೀರ್ಘವಾಗಿ ಮಂಡಿಸಿದ್ದು, ಪ್ರಮುಖವಾಗಿ ರಾಜ್ಯದಲ್ಲಿ ತಲೆದೂರಿರುವ ಬರದ ನೋವಿಗೆ ಮದ್ದು ನೀಡಿದ್ದಾರೆ.
ತಮ್ಮ 15ನೇ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬರ ಪರಿಹಾರಕ್ಕಾಗಿ ವೆಚ್ಚ ಮಾಡಲಿರುವ ಮೊತ್ತ ಹಾಗೂ ರಾಜ್ಯದ ಅನ್ನದಾತರಿಗೆ ಏನೆಲ್ಲಾ ನೀಡಿದ್ದಾರೆ ಅನ್ನೋದನ್ನು ವಿವರವಾಗಿ ಇಲ್ಲಿ ನೀಡಲಾಗಿದೆ.
2023-24 ರಲ್ಲಿ ರಾಜ್ಯದ 223 ತಾಲ್ಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ಸಂಕಷ್ಟಕ್ಕೆ ಸಿಲುಕಿದ ಕರ್ನಾಟಕದ ರೈತರಿಗೆ ತುಸು ನೆಮ್ಮದಿ ನೀಡಲು ಎನ್‌ಡಿಆರ್‌ಎಫ್ ನಿಧಿಯಿಂದ 18,171 ಕೋಟಿ ರೂ.ಗಳ ಬರ ಪರಿಹಾರವನ್ನು ರಾಜ್ಯಕ್ಕೆ ನೀಡಲು ಕೋರಿ ಕೇಂದ್ರ ಸರ್ಕಾರಕ್ಕೆ 3 ಮೆಮೊರಾಂಡಮ್‌ಗಳನ್ನು ಸಲ್ಲಿಸಿದ್ದರೂ ಸಹ ಕೇಂದ್ರ ಸರ್ಕಾರವು ಯಾವುದೇ ರೀತಿಯ ಸ್ಪಂದನೆಯನ್ನು ನೀಡಿರುವುದಿಲ್ಲ. ಆದಾಗ್ಯೂ ಕೇಂದ್ರ ಸರ್ಕಾರದ ಅನುದಾನಕ್ಕೆ ಕಾಯದೇ ಬರವನ್ನು ಸಮರ್ಥವಾಗಿ ನಿಭಾಯಿಸಲು ರಾಜ್ಯ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ವೇಳೆ ಹೇಳಿದ್ದಾರೆ.
ಬರ ನಿರ್ವಹಣೆಯ ವಿವಿಧ ಉಪಶನಗಳ ವಿವರ ಇಲ್ಲಿದೆ
- 33.19 ಲಕ್ಷ ರೈತರಿಗೆ ತಲಾ 2,000 ರೂ.ಗಳವರೆಗೆ ಇನ್‌ಪುಟ್ ಸಬ್ಸಿಡಿ 629 ಕೋಟಿ ರೂ. ಅನುದಾನವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ
- ಬರದ ತೀವ್ರತೆಯನ್ನು ತಗ್ಗಿಸಲು 20 ಕೋಟಿ ರೂ.ಗಳ ವೆಚ್ಚದಲ್ಲಿ ಮಿನಿ ಮೇವಿನ ಕಿಟ್ ವಿತರಿಸಲಾಗುತ್ತಿದೆ
- ಅಂತರ್ಜಲ ಮಟ್ಟ ವೃದ್ಧಿಸಲು ಕೃಷಿ ಭಾಗ್ಯ ಯೋಜನೆಯಡಿಯಲ್ಲಿ 200 ಕೋಟಿ ರೂ.ಗಳನ್ನು ಒದಗಿಸಲಾಗುತ್ತಿದ
- ಸಣ್ಣ ನೀರಾವರಿ ಇಲಾಖೆಯ ಮೂಲಕ 100 ಕೋಟಿ ರೂ.ಗಳ ವೆಚ್ಚದ ಜಲ ಸಂರಕ್ಷಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ
- ಪ್ರಸಕ್ತ ಸಾಲಿನಲ್ಲಿ ರಾಜ್ಯ ವಿಪತ್ತು ಉಪಶಮನ ನಿಧಿಯಿಂದ ಒಟ್ಟು 500 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಬರ ಉಪಶಮನ ಕ್ರಮಗಳನ್ನು ತೆಗೆದುಕೊಳ್ಳಲು ಕ್ರಮವಹಿಸಲಾಗುವುದು ಎಂದು ಹೇಳಿದ್ದಾರೆ.
ಸರ್ಕಾರವು ದಾಖಲೆ ರಹಿತ ಜನವಸತಿ ಪ್ರದೇಶಗಳಾದ ತಾಂಡ, ಹಟ್ಟಿ, ಹಾಡಿ, ದೊಡ್ಡಿ, ಪಾಳ್ಯ, ಮಜರೆ, ಕ್ಯಾಂಪ್, ಕಾಲೋನಿ ಇತ್ಯಾದಿಗಳನ್ನು ಗುರುತಿಸಿ ಹೊಸ ಕಂದಾಯ ಗ್ರಾಮ ಹಾಗೂ ಉಪ ಗ್ರಾಮಗಳೆಂದು ಘೋಷಿಸಿದ್ದು, ಅಲ್ಲಿನ ಸುಮಾರು 2 ಲಕ್ಷ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲು ಕ್ರಮವಹಿಸುವುದಾಗಿ ಇದೇ ವೇಳೆ ಘೋಷಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ 42 ತಾಲ್ಲೂಕಾ ಆಡಳಿತ ಸೌಧದ ಕಾಮಗಾರಿಗಳಿಗೆ 80 ಕೋಟಿ ರೂ. ಹಾಗೂ 14 ಜಿಲ್ಲಾಡಳಿತ ಸೌಧದ ಕಾಮಗಾರಿಗಳಿಗೆ 50 ಕೋಟಿ ರೂ. ಒದಗಿಸಲಾಗಿದೆ. ವಿಜಯಪುರ ಮತ್ತು ಬೀದರ್ ಜಿಲ್ಲೆಗಳಲ್ಲಿ ಹೊಸ ಜಿಲ್ಲಾಡಳಿತ ಕಛೇರಿಗಳು ಹಾಗೂ ಅಗತ್ಯವಿರುವ ತಾಲ್ಲೂಕುಗಳಲ್ಲಿ ತಾಲ್ಲೂಕಾ ಆಡಳಿತ ಕಚೇರಿಗಳನ್ನು ನಿರ್ಮಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. (This copy first appeared in Hindustan Times Kannada website. To read more like this please logon to kannada.hindustantimes.com).