Rameshwaram Cafe blast: ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ; ಆ ಕ್ಷಣದ ವಿಡಿಯೋ ಬಹಿರಂಗ, ಇಲ್ಲಿದೆ ವೀಕ್ಷಿಸಿ
Mar 01, 2024 06:12 PM IST
ಬೆಂಗಳೂರಿನ ದಿ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ (ಮಾ.1) ಮಧ್ಯಾಹ್ನ ನಿಗೂಢ ಸ್ಫೋಟ ಸಂಭವಿಸಿದೆ. ಸ್ಫೋಟದ ಬಳಿಕ ರಾಮೇಶ್ವರಂ ಕೆಫೆಯ ಮುಂಭಾಗ ಮತ್ತು ಸೈಡ್‌ನ ನೋಟ. ಮುಂಭಾಗ ಖಾಲಿ ಇದ್ದರೆ ಒಳಗೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡುತ್ತಿರುವುದು ಕಾಣಬಹುದು.
ಬೆಂಗಳೂರಿನ ವೈಟ್‌ಫೀಲ್ಡ್ ಸಮೀಪದ ರಾಮೇಶ್ವರಂ ಕೆಫೆಯಲ್ಲಿ ಇಂದು (ಮಾ.1) ಮಧ್ಯಾಹ್ನ ನಿಗೂಢ ಸ್ಫೋಟ ಸಂಭವಿಸಿದ್ದು 9 ಜನ ಗಾಯಗೊಂಡಿದ್ದಾರೆ. ಈ ಘಟನೆ ನಡೆದ ತತ್‌ಕ್ಷಣದ ವಿಡಿಯೋ ಸದ್ಯ ಬಹಿರಂಗವಾಗಿದ್ದು, ಎಕ್ಸ್‌ನಲ್ಲಿ ಪ್ರತ್ಯಕ್ಷದರ್ಶಿಯೊಬ್ಬರು ಶೇರ್ ಮಾಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ.
ಬೆಂಗಳೂರು: ವೈಟ್‌ಫೀಲ್ಡ್ ಸಮೀಪದ ರಾಮೇಶ್ವರಂ ಕೆಫೆಯಲ್ಲಿ ಇಂದು (ಮಾ.1) ಮಧ್ಯಾಹ್ನ ನಿಗೂಢ ಸ್ಫೋಟ ಸಂಭವಿಸಿದ್ದು, ಸ್ಫೋಟಕ್ಕೆ ಕಾರಣವೇನು ಎಂಬುದು ಇನ್ನೂ ಖಚಿತವಾಗಿಲ್ಲ. ಈ ದುರಂತದಲ್ಲಿ ಕನಿಷ್ಠ 9 ಜನ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ವಿಚಾರವನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ ಖಚಿತಪಡಿಸಿದ್ದಾರೆ. ಈ ನಡುವೆ, ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷದರ್ಶಿಯೊಬ್ಬರು ಸ್ಫೋಟ ಸಂಭವಿಸಿದ ಕೂಡಲೇ ಚಿತ್ರೀಕರಿಸಿದ್ದ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಕ್ಕ ರಾಮೇಶ್ವರಂ ಕೆಫೆ ಸ್ಫೋಟದ ವಿಡಿಯೋ
ಕುಂದಲಹಳ್ಳಿ ಸಮೀಪದ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ (ಮಾ.1) ಮಧ್ಯಾಹ್ನ ಸ್ಫೋಟ ಸಂಭವಿಸಿದೆ. ಈ ಸ್ಫೋಟ ಸಂಭವಿಸಿ ಬಹಳ ಹೊತ್ತಿನ ಬಳಿಕ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಸಂಜೆ 4.45ರ ವೇಳೆಗೆ ಕುಮಾರ್ ಅಲಂಕೃತ್ ಎಂಬುವವರು ಶೇರ್ ಮಾಡಿದ ವಿಡಿಯೋ ಬಹುಬೇಗ ವೈರಲ್ ಆಯಿತು. ಅದುವೇ ರಾಮೇಶ್ವರಂ ಕೆಫೆ ಸ್ಫೋಟ ಸಂಭವಿಸಿದ ಕೂಡಲೇ ಚಿತ್ರೀಕರಿಸಿದ ವಿಡಿಯೋವಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಕ್ಕ ರಾಮೇಶ್ವರಂ ಕೆಫೆ ಸ್ಫೋಟದ ಮೊದಲ ವಿಡಿಯೋ ಅದುವೇ ಆಗಿತ್ತು.
ಅದರಲ್ಲಿ ವಿಡಿಯೋ ಶೇರ್ ಮಾಡ್ತಾ, “ಮಧ್ಯಾಹ್ನ 1 ಗಂಟೆಗೆ ನಾನು ರಾಮೇಶ್ವರಂ ಕೆಫೆ ಬ್ರೂಕ್‌ಫೀಲ್ಡ್‌ನಲ್ಲಿ ಊಟ ಮಾಡುತ್ತಿದ್ದೆ.ಕೆಫೆಯೊಳಗೆ ದೊಡ್ಡ ಸ್ಫೋಟ ಸಂಭವಿಸಿದೆ. ನಾನು ಸ್ಫೋಟದಿಂದ ಕೆಲವು ಮೀಟರ್ ದೂರದಲ್ಲಿದ್ದೆ. ನಾನು ಸುರಕ್ಷಿತವಾಗಿದ್ದೇನೆ. ಹಲವಾರು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರು ಬೇಗ ಚೇತರಿಸಿಕೊಳ್ಳಲು ದೇವರು ಸಹಾಯ ಮಾಡಲಿ” ಎಂದು ಕುಮಾರ್ ಅಲಂಕೃತ್ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
ಈ ವಿಡಿಯೋ 44 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಅನೇಕರು ಪ್ರತಿಕ್ರಿಯೆ ನೀಡಿದ್ದು, ಕಳವಳ ವ್ಯಕ್ತಪಡಿಸಿದ್ದಾರೆ.
ಅನುಮಾನ ಮೂಡಿಸಿದ ಬ್ಯಾಗ್; ರಾಮೇಶ್ವರಂ ಕೆಫೆ ಎಂಡಿ ಶಂಕೆ
ದಿ ರಾಮೇಶ್ವರಂ ಕೆಫೆ ಎಂಡಿ ದಿವ್ಯಾ ರಾಘವೇಂದ್ರ ರಾವ್ ಅವರು ಟಿವಿ9 ಕನ್ನಡಕ್ಕೆ ಹೇಳಿಕೆ ನೀಡುತ್ತ, ಹೋಟೆಲ್‌ನಲ್ಲಿರುವ ವಸ್ತುಗಳಿಂದ ಸ್ಫೋಟ ಸಂಭವಿಸಿಲ್ಲ. ಸಿಲಿಂಡರ್, ಬಾಯ್ಲರ್ ಎಲ್ಲವೂ ಸುರಕ್ಷಿತವಾಗಿದ್ದವು. ಸ್ಫೋಟ ಸಂಭವಿಸಿದ ಸ್ಥಳದಿಂದ ಬ್ಯಾಗ್, ಐಡಿ ಕಾರ್ಡ್ ಮತ್ತು ಬ್ಯಾಟರಿ ಸಿಕ್ಕಿದೆ. ಎಲ್ಲವೂ ಸುಟ್ಟ ಸ್ಥಿತಿಯಲ್ಲಿದೆ ಎಂದು ಹೇಳಿದರು.
ಈ ರೀತಿ ಅನುಮಾನಾಸ್ಪದ ಬ್ಯಾಗ್ ಕೆಫೆಯಲ್ಲಿ ಕಂಡುಬರುತ್ತಿರುವುದು ಇದೇ ಮೊದಲಲ್ಲ. ಹಿಂದೆ ಎರಡು ಬಾರಿ ಈ ರೀತಿ ಆಗಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದೆವು ಎಂದು ದಿವ್ಯಾ ರಾಘವೇಂದ್ರ ರಾವ್ ಹೇಳಿದ್ದಾರೆ.
ರಾಮೇಶ್ವರಂ ಕೆಫೆ ಸ್ಫೋಟ; ಬಾಂಬ್ ಸ್ಫೋಟ ಎಂದು ಹೇಳಿದ್ದ ಸಂಸದ ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ ಅವರು ರಾಮೇಶ್ವರಂ ಕೆಫೆ ಸ್ಫೋಟ ಬಾಂಬ್ ಸ್ಫೋಟ ಎಂದು ಅಪರಾಹ್ನ 3.35ಕ್ಕೆ ಟ್ವೀಟ್ ಮಾಡಿದ್ದರು. ರಾಮೇಶ್ವರಂ ಕೆಫೆ ಮಾಲೀಕರ ಜೊತೆಗೆ ಮಾತನಾಡಿದ್ದೇನೆ. ಅವರ ರೆಸ್ಟೋರೆಂಟ್‌ನಲ್ಲಿ ನಡೆದಿರುವ ಬ್ಲಾಸ್ಟ್ ಸಂದರ್ಭದಲ್ಲಿ ಬ್ಯಾಗ್ ಇತ್ತು. ಗ್ರಾಹಕರೊಬ್ಬರು ಬಿಟ್ಟು ಹೋಗಿದ್ದರು. ಕೆಫೆಯ ಉದ್ಯೋಗಿ ಗಾಯಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಇದನ್ನು ಗಮನಿಸಿದರೆ ಇದು ಬಾಂಬ್ ಸ್ಫೋಟ ಎಂಬುದು ಖಚಿತವಾಗುತ್ತದೆ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು.
(This copy first appeared in Hindustan Times Kannada website. To read more like this please logon to kannada.hindustantimes.com)