logo
ಕನ್ನಡ ಸುದ್ದಿ  /  ಕರ್ನಾಟಕ  /  Lalbagh History: ನಾಲ್ಕು ಎಕರೆಯಲ್ಲಿ ನಿರ್ಮಾಣವಾದ ಲಾಲ್‌ಬಾಗ್ 100 ಎಕರೆಗೆ ವಿಸ್ತಾರಗೊಂಡಿದ್ದು ಹೇಗೆ? ಇಲ್ಲಿದೆ 4 ಶತಮಾನಗಳ ಇತಿಹಾಸ

Lalbagh History: ನಾಲ್ಕು ಎಕರೆಯಲ್ಲಿ ನಿರ್ಮಾಣವಾದ ಲಾಲ್‌ಬಾಗ್ 100 ಎಕರೆಗೆ ವಿಸ್ತಾರಗೊಂಡಿದ್ದು ಹೇಗೆ? ಇಲ್ಲಿದೆ 4 ಶತಮಾನಗಳ ಇತಿಹಾಸ

HT Kannada Desk HT Kannada

Jul 16, 2023 06:26 PM IST

google News

ಲಾಲ್‌ಬಾಗ್

    • Bengaluru Lalbagh garden: ಲಾಲ್‌ಬಾಗ್​​ಗೆ ನಾಲ್ಕು ಶತಮಾನಗಳ ಇತಿಹಾಸವಿದೆ. ಹೈದರ್ ಮತ್ತು ಟಿಪ್ಪು ಕಾಲದಲ್ಲಿಯೇ ಈ ತೋಟದ ನಿರ್ಮಾಣ ಆರಂಭವಾಗುತ್ತದೆ. ಹೈದರಾಲಿಗೆ ತೋಟದ ಹುಚ್ಚು ಬಹಳ. ಈ ಹುಚ್ಚಿನ ಫಲವೇ ಲಾಲ್‌ಬಾಗ್.
ಲಾಲ್‌ಬಾಗ್
ಲಾಲ್‌ಬಾಗ್

ಬೆಂಗಳೂರಿಗೆ ಬರುವ ಯಾವೊಬ್ಬ ಪ್ರವಾಸಿಯೂ ಲಾಲ್ ಬಾಗ್ ನೋಡದೆ ಹೋಗಲಾರ. ನೋಡದೆ ಇದ್ದರೆ ಆತನ ಬೆಂಗಳೂರು ಪ್ರವಾಸ ಅಪೂರ್ಣ. ಲಾಲ್‌ಬಾಗ್​​ಗೆ ನಾಲ್ಕು ಶತಮಾನಗಳ ಇತಿಹಾಸವಿದೆ. ಹೈದರ್ ಮತ್ತು ಟಿಪ್ಪು ಕಾಲದಲ್ಲಿಯೇ ಈ ತೋಟದ ನಿರ್ಮಾಣ ಆರಂಭವಾಗುತ್ತದೆ. ಹೈದರಾಲಿಗೆ ತೋಟದ ಹುಚ್ಚು ಬಹಳ. ಈ ಹುಚ್ಚಿನ ಫಲವೇ ಲಾಲ್‌ಬಾಗ್.

ಈತ 1760ರಲ್ಲಿ ತನ್ನ ಬೆಂಗಳೂರು ಕೋಟೆಯ ಪೂರ್ವ ಭಾಗದಲ್ಲಿ ಒಂದು ಮೈಲಿ ದೂರದಲ್ಲಿ ನಾಲ್ಕು ಎಕರೆಯಷ್ಟು ಜಮೀನನ್ನು ತೋಟ ಮಾಡಲು ಅಣಿಗೊಳಿಸಿ ರಾಜೋದ್ಯಾನವನ್ನು ನಿರ್ಮಿಸುತ್ತಾನೆ. ತೋಟಗಾರಿಕೆಯಲ್ಲಿ ಪರಿಣಿತಿ ಹೊಂದಿದವರನ್ನು ದೆಹಲಿ, ಲಾಹೋರ್ ಮುಲ್ತಾನ್ ಮೊದಲಾದ ಪ್ರದೇಶಗಳಿಗೆ ಕಳುಹಿಸಿ ಅತ್ಯಂತ ಶ್ರೇಷ್ಠ ಮತ್ತು ಕಣ್ಣಿಗೆ ಮುದ ನೀಡುವ ಗುಲಾಬಿ, ಅಂಜೂರ, ದಾಳಿಂಬೆ ಮೊದಲಾದ ಫಲಪುಷ್ಪ ಗಿಡಗಳನ್ನು ತರಿಸಿ ನೆಡುತ್ತಾನೆ. ಈ ತೋಟಕ್ಕೆ ಪಕ್ಕದಲ್ಲೇ ಇದ್ದ ಕೆರೆಯ ನೀರನ್ನು ಬಳಕೆ ಮಾಡಲಾಗುತ್ತಿರುತ್ತದೆ. ಈ ಕೆರೆಗೆ ಸುತ್ತ ಕಟ್ಟೆಯನ್ನು ಕಟ್ಟಿಸಿ ಕೆರೆಯನ್ನು ಭದ್ರಗೊಳಿಸುತ್ತಾನೆ. ಹೈದರನ ನಂತರ ಈ ತೋಟ ಟಿಪ್ಪು ಸುಲ್ತಾನ್ ವಶಕ್ಕೆ ಬರುತ್ತದೆ. ಈತನೂ ಹತ್ತಾರು ಬಗೆಯ ಗಿಡಗಳನ್ನು ನೆಡಿಸುತ್ತಾನೆ. ಜತೆಗೆ ಕ್ರೀಡೋದ್ಯಾನವನ್ನಾಗಿಯೂ ಬಳಸಲು ಆರಂಭಿಸುತ್ತಾನೆ. ಟಿಪ್ಪು ನೆಡಸಿದ ಮೂರು ಮಾವಿನ ಮರಗಳು ಇಂದಿಗೂ ಲಾಲ್‌ಬಾಗ್ ನಲ್ಲಿ ಕಾಣಬಹುದಾಗಿದೆ.

ಓಪ್ಪು 1797ರಲ್ಲಿ ತನ್ನ ಇಬ್ಬರು ರಾಯಭಾರಿಗಳನ್ನು ಫ್ರಾನ್ಸ್ ನ ಮಾರಿಷಸ್ ಗೆ ಕಳುಹಿಸಿ ಅಲ್ಲಿಂದ ವೈವಿಧ್ಯಮಯ ಆಪ್ರಿಕಾಟ್, ಸೇಬು, ರಾಸಪೆರಿ, ಬ್ಲಾಕ್ ಬರ‍್ರಿ, ಅಂಜೂರ, ಗೋಡಂಬಿ, ಪರಂಗಿ, ಪೀನಾಪಲ್, ಸ್ವೀಟ್ ಲೈಂಬ್ಸ್, ಚೀನಾ ಕಿತ್ತಲೆ, ಖರ್ಜೂರ ಸೇರಿದಂತೆ ಇಪ್ಪತ್ತು ಬಗೆಯ ಗಿಡಗಳನ್ನು ತರಿಸುತ್ತಾನೆ. ಇವರು ತರುವ ಗಿಡ ಬಳ್ಳಿಗಳನ್ನು ಬೆಂಗಳೂರಿಗೆ ತರಲು ಮಂಗಳೂರಿಗೆ ಒಂಟೆ ಕುದುರೆಗಳನ್ನು ಕಳುಹಿಸುತ್ತಾನೆ. ಇದು ಉದ್ಯಾನವನದ ಮೇಲೆ ಟಿಪ್ಪು ಇಟ್ಟಿರುವ ಪ್ರೀತಿಯನ್ನು ತೋರುತ್ತದೆ. 1799ರಲ್ಲಿ ಟಿಪ್ಪು ಮರಣದ ನಂತರ ಲಾಲ್ ಬಾಗ್ ಬ್ರಿಟೀಷರ ವಶವಾಗುತ್ತದೆ. ಅವರ ಕಾಲದಲ್ಲಿಯೂ ಮತ್ತಷ್ಟು ಅಭಿವೃದ್ಧಿಯಾಗುತ್ತದೆ.

1831ರಲ್ಲಿ ಮೈಸೂರು ರಾಜ್ಯಭಾರವನ್ನು ಮುಮ್ಮುಡಿ ಕೃಷ್ಣರಾಜ ಒಡೆಯರ್ ಅವರಿಂದ ಇಂಗ್ಲೀಷರು ಪಡೆದುಕೊಳ್ಳುತ್ತಾರೆ. ಆಗ ಲಾಲ್ ಬಾಗ್ ಚೀಫ್ ಕಮೀಷನರ್ ಅವರ ವಶಕ್ಕೆ ಬರುತ್ತದೆ 1839ರಲ್ಲಿ ಚೀಫ್ ಕಮೀಷನರ್ ಆಗಿದ್ದ ಸರ ಮಾರ್ಕ್ ಕಬ್ಬನ್ ವ್ಯವಸಾಯ ಮತ್ತು ಕೈತೋಟಗಳ ಸಂಘವೊಂದನ್ನು ಸ್ಥಾಪಿಸಿ ಅದಕ್ಕೆ ಈ ತೋಟದ ನಿರ್ವಹಣೆಯನ್ನು ವಹಿಸುತ್ತಾರೆ. ತೋಟದಲ್ಲಿ ಕೆಲಸ ಮಾಡಲು ಕೈದಿಗಳನ್ನು ಕಳುಹಿಸಲಾಗುತ್ತಿತ್ತು. ದಕ್ಷಿಣ ಭಾರತದ ಅರಣ್ಯ ಇಲಾಖೆ ಮುಖ್ಯಸ್ಥ ಡಾ.ಕ್ಲೆಗ್ ಹಾರನ್ ಅವರು ಬೆಂಗಳೂರಿಗೆ ಆಗಮಿಸಿ ಇಲ್ಲಿ ಒಂದು ಸುಂದರವಾದ ತೋಟವನ್ನು ನಿರ್ಮಾಣ ಮಾಡುವ ಉದ್ಧೇಶವನ್ನು ವ್ಯಕ್ತಪಡಿಸುತ್ತಾರೆ. ಕಬ್ಬನ್ ಅವರು ಲಾಲ್‌ಬಾಗ್ ಉತ್ತಮ ಎಂಬ ಸಲಹೆ ನೀಡುತ್ತಾರೆ. ಬೆಳೆಗಳ ಸಂಶೋಧನೆ ಮತ್ತು ದೇಶೀಯ ಗಿಡಮರಗಳನ್ನೇ ಬೆಳೆಸಬೇಕೆಂಬ ತೀರ್ಮಾನವನ್ನೂ ಮಾಡಲಾಗುತ್ತದೆ. ಕಾಲಕಾಲಕ್ಕೆ ಅಧಿಕಾರಿಗಳ ನೇಮಕವಾಗುತ್ತಿರುತ್ತದೆ. ಇವರೆಲ್ಲರೂ ದೇಶ ಮತ್ತು ವಿದೇಶಗಳಿಂದ ಅಂಜೂರ, ಸೇಬು, ದ್ರಾಕ್ಷಿ ,ಕಿತ್ತಲೆ, ನಿಂಬು ಯುಕಾಲಿಪ್ಟಸ್ ಮೊದಲಾದ ಗಿಡಗಳನ್ನು ತರಿಸಿ ಪೋಷಿಸುತ್ತಾರೆ. ನೀರಾವರಿ ಸೌಲಭ್ಯ, ಕೆರೆಗಳ ದುರಸ್ತಿ ಮಾಡಲಾಗುತ್ತದೆ.

1860ರ ಆಸುಪಾಸಿನಲ್ಲಿ ಇಲ್ಲಿ ಗ್ರಂಥಾಲಯವೊಂದನ್ನು ಸ್ಥಾಪಿಸಲಾಗುತ್ತದೆ. ಗಿಡಮರಗಳ ಗಣತಿ ಮಾಡಲಾಗುತ್ತದೆ. ಇಲ್ಲಿ ಯಾವ ಯಾವ ಹೂ, ಹಣ್ಣಿನ ಗಿಡಗಳಿವೆ ಎಂಬ ಮಾಹಿತಿ ಎಡಿನ್ ಬರೋದಲ್ಲಿದ್ದ ಬಾಟನಿಕಲ್ ಸೊಸೈಟಿ ನಡೆಸುತ್ತಿದ್ದ 1861 ಜುಲೈ ಸಂಚಿಕೆಯಲ್ಲಿ ಪ್ರಕಟವಾಗುತ್ತದೆ. ಒಬ್ಬೊಬ್ಬ ಅಧಿಕಾರಿಯ ಅವಧಿಯಲ್ಲೂ ಹೊಸ ಹೊಸ ಗಿಡ ಮರ ಹೂ ಹಣ್ಣಿನ ಸಸ್ಯಗಳು ಸೇರ್ಪಡೆಯಾಗುತ್ತಾ ಹೋಗುತ್ತವೆ. 1889ರಲ್ಲಿ ಲಾಲ್‌ಬಾಗ್ ಗೆ ಹೊಸದಾಗಿ 30 ಎಕರೆಯನ್ನು ಸೇರ್ಪಡೆ ಮಾಡಲಾಗುತ್ತದೆ. ಈ ಕೀರ್ತಿ ಅಂದಿನ ಅಧಿಕಾರಿ ಜಾನ್ ಕ್ಯಾಮರಾನ್ ಅವರಿಗೆ ಸಲ್ಲಬೇಕು. 1891ರಲ್ಲಿ ಕೆಂಪೇಗೌಡ ಗೋಪುರವಿದ್ದ ಜಾಗವೂ ಸೇರಿದಂತೆ 13 ಎಕರೆಯನ್ನು ಲಾಲ್‌ಬಾಗ್ ಗೆ ಸೇರ್ಪಡೆ ಮಾಡಲಾಗುತ್ತದೆ. ಈ ಗೋಪುರ ಇಂದಿಗೂ ಲಾಲ್‌ಬಾಗ್ ಗೆ ಕಳಸಪ್ರಾಯವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. 1894ರಲ್ಲಿ ಮತ್ತೆ 9 ಎಕರೆ ಸೇರ್ಪಡೆ ಮಾಡಲಾಗುತ್ತದೆ ಹೀಗೆ 19ನೇ ಶತಮಾನದ ಅಂತ್ಯದ ವೇಳೆಗೆ ಲಾಲ್ ಬಾಗ್ ವಿಸ್ತೀರ್ಣ 100 ಎಕರೆ ದಾಟುತ್ತದೆ.

1889 ನವಂಬರ್ 28ರಂದು ಲಾಲ್ ಬಾಗ್ ನಲ್ಲಿ ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್ ಅವರು ಇಂಗ್ಲೆಂಡ್ ರಾಜಕುಮಾರ ಹೆಚ್.ಆರ್.ಹೆಚ್.ಪ್ರಿನ್ಸ್ ಆಫ್ ವೇಲ್ಸ್ ಅಚರಿಗೆ ಸತ್ಕಾರ ಕೂಟ ಹಮ್ಮಿಕೊಳ್ಳುತ್ತಾರೆ. ಆಗ ಗಾಜಿನ ಮನೆಗೆ ಶಂಕುಸ್ಥಾಪನೆ ಮಾಡಲಾಗುತ್ತದೆ. ಒಂದೇ ವರ್ಷದಲ್ಲಿ ಇದು ನಿರ್ಮಾಣವಾಗುತ್ತದೆ. ಇಲ್ಲಿ ಲೆಕ್ಕವಿಡದಷ್ಟು ಸತ್ಕಾರ ಕೂಟ ಮತ್ತು ಸಭೆ ಸಮಾರಂಭಗಳೂ ಜರುಗಿವೆ. ಸರ್ ಎಂ.ವಿಶ್ವೇಶ್ವರಯ್ಯ ಅವರಿಗೆ ನೂರು ವರ್ಷ ತುಂಬಿದಾಗ ಇಲ್ಲಿ ಅವರನ್ನು ಸನ್ಮಾನಿಸಲಾಗಿತ್ತು. ಪ್ರಧಾನಿ ನೆಹರೂ ಮತ್ತು ಮೈಸುರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಭಾಗಿಯಾಗಿದ್ದು ಇತಿಹಾಸ. 1919 ರಲ್ಲಿ ರವೀಂದ್ರನಾಥ ಟ್ಯಾಗೂರ್ ಅವರಿಗೆ ಇಲ್ಲಿ ಸನ್ಮಾನ ಕಾರ್ಯಕ್ರಮ ನಡೆಯುತ್ತದೆ.

1908ರಲ್ಲಿ ಮಿ.ಕ್ರುಂಬಿಗಲ್ ಅವರು ಅಧಿಕಾರವಹಿಸಿಕೊಳ್ಳುತ್ತಾರೆ. ಇವರ ಕಾಲದಲ್ಲಿ ಭೂಮಿಯೊಳಗೆ ನೀರಿನ ಪೈಪುಗಳನ್ನು ಅಳವಡಿಸಲಾಗುತ್ತದೆ. ಇವರು ಅಲಂಕಾರಿಕ ಮತ್ತು ಲಾಭದಾಯಕ ಗಿಡಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿ ಅಭಿವೃದ್ಧಿಪಡಿಸುತ್ತಾರೆ. ನಂತರ ರಾವ್ ಬಹದ್ದೂರ್ ಎಚ್.ಸಿ. ಜವರಯ್ಯ ಅಧಿಕಾರವಹಿಸಿಕೊಳ್ಳುತ್ತಾರೆ. ಇವರ ಅವಧಿಯಲ್ಲಿ ವಾಯು ವಿಹಾರ ಆರಂಭವಾಗುತ್ತದೆ. ಇದು ಲಾಲ್‌ಬಾಗ್ ನ ಪುಟ್ಟ ಇತಿಹಾಸ. ಈಗ ಲಾಲ್‌ಬಾಗ್ ನಲ್ಲಿ ವೈವಿಧ್ಯಮಯ ಚಟುವಟಿಕೆಗಳು ನಡೆಯುತ್ತಿವೆ. ಜಗತ್ತಿನ ಅನೇಕ ಗಣ್ಯರು ಇಲ್ಲಿಗೆ ಭೇಟಿ ನೀಡಿದ್ದಾರೆ.

ಇಲ್ಲಿನ ಗಾಜಿನಮನೆಯಲ್ಲಿ ವರ್ಷಕ್ಕೆ ಎರಡು ಬಾರಿ ಫಲಪುಷ್ಪ ಪ್ರದರ್ಶನ ನಡೆಯುತ್ತದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಲವೇ ದಿನಗಳಲ್ಲಿ ಇಲ್ಲಿ ಫಲಪುಷ್ಪ ಪ್ರದರ್ಶನ ಆರಂಭವಾಗಲಿದೆ. ಹೀಗೆ ಹೈದರ್ ಮತ್ತು ಟಿಪ್ಪು ಕಾಲದಲ್ಲಿ ನಾಲ್ಕು ಎಕರೆಯಲ್ಲಿ ಆರಂಭವಾದ ಲಾಲ್‌ಬಾಗ್ ಇಂದು ನೂರು ಎಕರೆಯಲ್ಲಿ ವ್ಯಾಪಿಸಿದೆ. ಬೆಂಗಳೂರಿಗೆ ಉದ್ಯಾನ ನಗರಿ ಎಂಬ ಹೆಸರು ಬರಲು ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಕಾರಣವಾಗಿದೆ. ಒಬ್ಬ ರಾಜನ ಗಿಡಮರಗಳ ಹುಚ್ಚು ಬೆಂಗಳೂರು ನಗರದ ಸೌಂದರ್ಯ ಹೆಚ್ಚಲು ಮತ್ತು ಹಸಿರಿನಿಂದ ಕಂಗೊಳಿಸಲು ಕಾರಣವಾಗುತ್ತದೆ.

ವರದಿ: ಎಚ್.ಮಾರುತಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ