Bengaluru News: ರಸ್ತೆ ಅಪಘಾತದಲ್ಲಿ ಬೆಂಗಳೂರಿಗೆ ಅಗ್ರ ಎರಡನೇ ಸ್ಥಾನ; ಆಕ್ಸಿಡೆಂಟ್‌ಗೆ ದ್ವಿಚಕ್ರವಾಹನ ಮದ್ಯಪಾನ ಪ್ರಮುಖ ಕಾರಣ
Nov 02, 2023 11:32 AM IST
ಬೆಂಗಳೂರು ರಸ್ತೆ ಅಪಘಾತ (Getty Images/iStockphoto/Representational image)
- Bengaluru Accident news: ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ನಡೆಯುವ ಅಪಘಾತಗಳು ಯಾವ ಪ್ರಮಾಣದಲ್ಲಿವೆ ಮತ್ತು ಈ ಅಪಘಾತಗಳಿಗೆ ಕಾರಣಗಳೇನು ಎಂದು ಎಚ್. ಮಾರುತಿ ಇಲ್ಲಿ ವಿಶ್ಲೇಷಿಸಿದ್ದಾರೆ.
ಬೆಂಗಳೂರು: ಇಡೀ ದೇಶದಲ್ಲಿ ರಸ್ತೆ ಅಪಘಾತಗಳು ಸಂಭವಿಸುವ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ರಾಷ್ಟ್ರ ರಾಜಧಾನಿ ದೆಹಲಿ ಮೊದಲ ಸ್ಥಾನದಲ್ಲಿದ್ದು ಇಲ್ಲಿ ಬೆಂಗಳೂರಿನ ಎರಡು ಪಟ್ಟು ಅಪಘಾತಗಳು ಸಂಭವಿಸುತ್ತವೆ. ಬೆಂಗಳೂರಿನಲ್ಲಿ ನಡೆಯುವ ಅಪಘಾತಗಳು ಯಾವ ಪ್ರಮಾಣದಲ್ಲಿವೆ ಮತ್ತು ಈ ಅಪಘಾತಗಳಿಗೆ ಕಾರಣಗಳೇನು ತಿಳಿಯೋಣ.
2022ರಲ್ಲಿ ಉದ್ಯಾನ ನಗರಿ ಬೆಂಗಳೂರಿನಲ್ಲಿ 772 ರಸ್ತೆ ಅಪಘಾತಗಳು ಸಂಭವಿಸಿವೆ. ಎರಡನೇ ಸ್ಥಾನದಲ್ಲಿದ್ದ ಚೆನ್ನೈ ನಗರವನ್ನು ಹಿಂದಿಕ್ಕಿ ಬೆಂಗಳೂರು ದ್ವಿತೀಯ ಸ್ಥಾನಕ್ಕೇರಿದೆ. ಚೆನ್ನೈ ನಲ್ಲಿ ಶೇ.31 ರಷ್ಟು ಅಪಘಾತಗಳು ಕಡಿಮೆಯಾಗಿದ್ದು, ಶೇ.49ರಷ್ಟು ಸಾವುಗಳು ಕಡಿಮೆಯಾಗಿವೆ. ಮುಂಬೈ ನಲ್ಲಿ ಶೇ,15ರಷ್ಟು ಅಪಘಾತಗಳು ಕಡಿಮೆಯಾಗಿದ್ದು, ಶೇ.4ರಷ್ಟು ಸಾವುಗಳು ಕಡಿಮೆಯಾಗಿವೆ.
ಮೆಟ್ರೋ ನಗರಗಳ ಪೈಕಿ ದೆಹಲಿ, ಬೆಂಗಳೂರು ಮತ್ತು ಚೆನ್ನೈ ಮೊದಲ ಮೂರು ಸ್ಥಾನಗಳಲ್ಲಿದ್ದು ಅಪಘಾತಗಳ ನಗರಗಳು ಎಂಬ ಕುಖ್ಯಾತಿಗೆ ಒಳಗಾಗಿವೆ. ಮುಂಬೈ 14 ನೇ ಸ್ಥಾನದಲ್ಲಿದ್ದರೆ ಕೊಲ್ಕತ್ತಾ 38 ನೇ ಸ್ಥಾನದಲ್ಲಿದೆ. ಕಾನ್ಪುರ, ಅಲಹಾಬಾದ್, ಲಖನೌ, ಇಂಡೋರ್, ಜೈಪುರ ಮತ್ತು ರಾಯ್ ಪುರ ಮೊದಲ 10 ಅಪಘಾತಗಳ ಪಟ್ಟಿಯಲ್ಲಿರುವ ಇತರ ನಗರಗಳು. ಈ 10 ನಗರಗಳು ಶೇ.41ರಷ್ಟು ರಸ್ತೆ ಅಪಘಾತಗಳಿಗೆ ಕಾರಣವಾಗಿವೆ.
ದೇಶದ ಇತರ 50 ದೊಡ್ಡ ನಗರಗಳಲ್ಲಿ 17,089 ಮಂದಿ ಮೃತಪಟ್ಟಿದ್ದು, 69,000 ಜನ ಗಾಯಗೊಂಡಿದ್ದಾರೆ. ದೇಶದಲ್ಲಿ 2021ಕ್ಕೆ ಹೋಲಿಸಿದರೆ 2022ರಲ್ಲಿ ಅಪಘಾತಗಳ ಸಂಖ್ಯೆ ಶೇ.9ರಷ್ಟು ಹೆಚ್ಚಳವಾಗಿದೆ.
ಅಪಘಾತಗಳಿಗೆ ಕಾರಣಗಳೇನು?
ದೇಶಾದ್ಯಂತ ಅಪಘಾತಗಳಿಗೆ ಬಹುತೇಕ ಒಂದೇ ರೀತಿಯ ಕಾರಣಗಳನ್ನು ಕಾಣಬಹುದಾಗಿದೆ. ಅಪಘಾತಗಳಿಗೆ ದ್ವಿಚಕ್ರ ವಾಹನಗಳ ಕೊಡುಗೆ ಶೇ.43ರಷ್ಟಿದ್ದು, ಅತಿಯಾದ ವೇಗವೇ ಪ್ರಮುಖ ಕಾರಣ ಎನ್ನುವುದು ತಿಳಿದು ಬಂದಿದೆ. ಎರಡನೇ ಮೂರರಷ್ಟು ಸಾವುಗಳು ದ್ವಿಚಕ್ರ ವಾಹನಗಳ ಅಪಘಾತಗಳಿಂದ ಸಂಭವಿಸುತ್ತಿವೆ.
ಬೆಂಗಳೂರಿನಲ್ಲಿ ಅಪಘಾತಗಳ ಮೂಲ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ 2022ರಲ್ಲಿ ಬೆಂಗಳೂರಿನಲ್ಲಿ 3,872 ಅಪಘಾತಗಳು ಸಂಭವಿಸಿದ್ದು,772 ಮಂದಿ ಪ್ರಾಣ ಕಳೆದುಕೊಂಡಿದ್ದು, 3,189 ವಾಹನ ಸವಾರರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. 2021 ರಲ್ಲಿ 654ಜನರು ಮೃತಪಟ್ಟಿದ್ದರು.
ರಸ್ತೆಗಳ ಕಳಪೆ ಗುಣಮಟ್ಟ ಮತ್ತು ರಸ್ತೆಗುಂಡಿಗಳೇ ಅಪಘಾತಗಳಿಗೆ ಕಾರಣ ಎನ್ನುವುದು ರಹಸ್ಯವೇನಲ್ಲ. ಬೆಂಗಳೂರು ಮಹಾನಗರ ಪಾಲಿಕೆಯ ಅವ್ಯವಸ್ಥೆಯೇ ಕಾರಣ ಎಂದೂ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಪಡೆದಿದೆ. ನ್ಯಾಷನಲ್ ಕ್ರೈಮ್, ರೆಕಾರ್ಡ್ಸ್ ಬ್ಯೂರೋ ಪ್ರಕಾರ 2019 ಮತ್ತು 2020 ರವರೆಗೆ ಸಂಭವಿಸಿರುವ ಅಪಘಾತಗಳಿಗೆ ಬಿಬಿಎಂಪಿ ಆಡಳಿತವೇ ಕಾರಣ ಎನ್ನುವುದು ದೃಢಪಟ್ಟಿದೆ. ನಂತರದ ವರ್ಷಗಳಲ್ಲೂ ಪರಿಸ್ಥಿತಿ ಸುಧಾರಿಸಿಲ್ಲ.
ರಸ್ತೆ ಅಪಘಾತದ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಅಂದಾಜು 60 ಲಕ್ಷ ವಾಹನಗಳಿರುವ ಚೆನ್ನೈನಲ್ಲಿ ಪರಿಸ್ಥಿತಿ ಸುಧಾರಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 1.10 ಕೋಟಿ ವಾಹನಗಳಿವೆ. ರಾಜ್ಯದ ಒಟ್ಟಾರೆ ವಾಹನಗಳ ಪೈಕಿ ಶೇ 50 ರಷ್ಟು ವಾಹನಗಳು ಬೆಂಗಳೂರಿನಲ್ಲಿವೆ.
ವಾಹನ ದಟ್ಟಣೆ ಮತ್ತು ಕಳಪೆ ರಸ್ತೆಗಳಿಂದಾಗಿ ವರ್ಷದಿಂದ ವರ್ಷಕ್ಕೆ ಅಪಘಾತಗಳು ಹೆಚ್ಚುತ್ತಿವೆ. ರಸ್ತೆ ಅಪಘಾತದಿಂದ ಮೃತಪಡುತ್ತಿರುವವರ ಪಟ್ಟಿಯಲ್ಲಿ ಬೆಂಗಳೂರು 2ನೇ ಸ್ಥಾನಕ್ಕೆ ತಲುಪಿದೆ.
ಮದ್ಯ ಸೇವಿಸಿ ವಾಹನ ಚಲಾಯಿಸುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ವಿರುದ್ಧ ಪೊಲೀಸರು ಹೆಚ್ಚಿನ ಪ್ರಕರಣ ದಾಖಲು ಮಾಡುತ್ತಿದ್ದಾರೆ. ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ರಹಿತ ಪ್ರಯಾಣವೂ ಅಪಘಾತ ಮತ್ತು ಸಾವಿನ ಸಂಖ್ಯೆ ಹೆಚ್ಚಾಗಲು ಕೊಡುಗೆ ನೀಡುತ್ತಿದೆ. ರಸ್ತೆಗಳ ಸುಧಾರಣೆ, ಉತ್ತಮ ಸಂಚಾರ ನಿಯಂತ್ರಣ ಕೈಗೊಂಡರೆ ಅಪಘಾತಗಳ ಸಂಖ್ಯೆ ಇಳಿಮುಖವಾಗುತ್ತದೆ. ಪ್ರಯಾಣಿಕರು ಹೆಲ್ಮೆಟ್ ಧರಿಸುವುದು, ಸೀಟ್ ಬೆಲ್ಟ್ ಧರಿಸುವುದು ಮತ್ತು ಸಂಚಾರಿ ನಿಯಮಗಳನ್ನು ಅನುಸರಿಸಿದರೆ ಉತ್ತಮ.
- ವರದಿ: ಎಚ್. ಮಾರುತಿ