COVID 19 Updates: ಕರ್ನಾಟಕದಲ್ಲಿ ಜೆಎನ್1 ಕೋವಿಡ್ ವೇರಿಯೆಂಟ್ ತಡೆಗೆ ಮುಂಜಾಗ್ರತಾ ಕ್ರಮ, ಸಚಿವ ಸಂಪುಟ ಉಪಸಮಿತಿ ರಚನೆ
Dec 22, 2023 07:01 PM IST
ಕೋವಿಡ್ 19ನ ಜೆಎನ್ 1 ವೇರಿಯೆಂಟ್ ಸೋಂಕು ಹರಡದಂತೆ ತಡೆಯಲು ಸರ್ಕಾರ ಮುಂದಾಗಿದ್ದು, ತುರ್ತು ಮುಂಜಾಗ್ರತಾ ಕ್ರಮಕ್ಕಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿದೆ. (ಸಾಂಕೇತಿಕ ಚಿತ್ರ)
ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೋವಿಡ್ 19 ಸೋಂಕು, ಜೆಎನ್ 1 ರೂಪಾಂತರಿಯ ಸೋಂಕಿನ ಕಳವಳ ನಿವಾರಿಸಲು, ತಡೆಯಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಸಚಿವ ಸಂಪುಟ ಉಪಸಮಿತಿಯನ್ನು ಇಂದು ರಚಿಸಿದ್ದು, ಹೆಚ್ಚಿನ ಮುತುವರ್ಜಿ ತೋರಿದೆ. ದಕ್ಷಿಣ ಕನ್ನಡದಲ್ಲಿ ಇಂದು (ಡಿ.22) ಕೋವಿಡ್ ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ.
ಕರ್ನಾಟಕದಲ್ಲಿ ಕೋವಿಡ್ 19 ಮತ್ತು ಅದರ ಹೊಸ ರೂಪಾಂತರ ಜೆಎನ್ 1 ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಭಾಯಿಸಲು, ಕರ್ನಾಟಕ ಸರ್ಕಾರವು ಹೊಸ ಕ್ಯಾಬಿನೆಟ್ ಉಪಸಮಿತಿಯನ್ನು ರಚಿಸಿದೆ. ಇದು ಅಸ್ತಿತ್ವದಲ್ಲಿರುವ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಮನ್ವಯ ಸಾಧಿಸಲಿದೆ. ಈ ಹೊಸ ಉಪ ಸಮಿತಿಯು ವಿವಿಧ ಕ್ಯಾಬಿನೆಟ್ ಮಂತ್ರಿಗಳು ಇದ್ದಾರೆ.
ಕೋವಿಡ್ -19 ಅನ್ನು ನಿಭಾಯಿಸಲು ಹೊಸ ಉಪಸಮಿತಿಯಲ್ಲಿ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷರಾಗಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ರುದ್ರಪ್ಪ ಪಾಟೀಲ್, ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಹದೇವಪ್ಪ ಮತ್ತು ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಸದಸ್ಯರಾಗಿದ್ದಾರೆ.
ಕರ್ನಾಟಕದ ಕೋವಿಡ್ 19 ಹೊಸ ಸೋಂಕುಗಳ ಪ್ರಕರಣ ಗುರುವಾರ ಸಂಜೆ ವೇಳೆಗೆ 24 ಏರಿದ್ದು, ಒಟ್ಟು ಪ್ರಕರಣ 105 ತಲುಪಿತ್ತು. ಇಂದು (ಡಿ.22) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರೊಬ್ಬರು ಮೃತಪಟ್ಟ ವರದಿಯೂ ಬಂದಿದೆ. ಬುಧವಾರದ ಶೇಕಡಾ 2.47 ಕ್ಕೆ ಹೋಲಿಸಿದರೆ ಶೇಕಡಾ 1.06 ರಷ್ಟು ಕೋವಿಡ್ ಪ್ರಕರಣದಲ್ಲಿ ಹೆಚ್ಚಳ ಉಂಟಾಗಿದೆ.
ಆ 24 ಪ್ರಕರಣಗಳಲ್ಲಿ, 23 ಬೆಂಗಳೂರಿನಲ್ಲೇ ಇವೆ. ಉಳಿದ ಒಂದು ಪ್ರಕರಣವು ನೆರೆಯ ರಾಜ್ಯ ಕೇರಳದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಿಂದ ವರದಿಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ದೈನಂದಿನ ಬುಲೆಟಿನ್ ವಿವರಿಸಿದೆ.
ಕೋವಿಡ್ ಸೋಂಕಿತರ ಪೈಕಿ 11 ರೋಗಿಗಳು ಚೇತರಿಸಿದ್ದಾರೆ. 93 ರೋಗಿಗಳು ಬೆಂಗಳೂರಲ್ಲಿದ್ದಾರೆ. 85 ಸೋಂಕು ಪೀಡಿತರು ಅವರ ಮನೆಗಳಲ್ಲಿ ಪ್ರತ್ಯೇಕಿಸಲ್ಪಟ್ಟಿದ್ದರೆ, 20 ಆಸ್ಪತ್ರೆಗೆ ದಾಖಲಾಗಿದ್ದಾರೆ. 11 ರೋಗಿಗಳು ಸಾಮಾನ್ಯ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆದರೆ, ಐಸಿಯುಗಳಲ್ಲಿನ ರೋಗಿಗಳ ಸಂಖ್ಯೆ ನಿನ್ನೆಯ ಏಳರಿಂದ ಒಂಬತ್ತಕ್ಕೆ ಏರಿದೆ.
ಕರ್ನಾಟಕದ ಒಟ್ಟು ಕೋವಿಡ್ ಸಂಖ್ಯೆ 40.89 ಲಕ್ಷ ತಲುಪಿದೆ. ರಾಜ್ಯದಲ್ಲಿ 2,263 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅವುಗಳಲ್ಲಿ 1,791 ಆರ್‌ಟಿ-ಪಿಸಿಆರ್ ಪರೀಕ್ಷೆಗಳು, 472 ರಾಪಿಡ್ ಆಂಟಿಜೆನ್ ಪರೀಕ್ಷೆಗಳಾಗಿವೆ.
ರಾಜ್ಯದಲ್ಲಿ ಕೋವಿಡ್ ಸೋಂಕಿತರ ಎರಡು ಸಾವಿನ ಪ್ರಕರಣ ಬುಧವಾರ ವರದಿಯಾಗಿದ್ದು, ಇಬ್ಬರೂ ಪುರುಷರು. ಅವರ ವಯಸ್ಸು 44 ಮತ್ತು 76 ವರ್ಷ ಇತ್ತು ಎಂದು ವರದಿ ವಿವರಿಸಿದೆ. ಈ ಪೈಕಿ 44 ವರ್ಷದವರಿಗೆ ಯಾವುದೇ ರೋಗಲಕ್ಷಣಗಳು ಇರಲಿಲ್ಲ. ಆದರೆ ಇನ್ನೊಬ್ಬರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ಪಿಟಿಐ ವರದಿ ಮಾಡಿದೆ.
ಮೃತರು ಜೆಎನ್ 1 ಎಂಬ ಹೊಸ ಕೋವಿಡ್ ವೇರಿಯೆಂಟ್‌ನಿಂದ ಸೋಂಕಿತರಾಗಿದ್ದರೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಜೆಎನ್ - 1 ಸೋಂಕು ಈಗ ವಿವಿಧೆಡೆ ಕಾಣಿಸಿಕೊಂಡಿದ್ದು, ಇದರ ಅಪಾಯ ಇನ್ನೂ ಖಚಿತವಾಗಿಲ್ಲ ಎಂದು ವರದಿ ವಿವರಿಸಿದೆ.
ಇದಕ್ಕೂ ಮುನ್ನ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ (ಡಿ.21) ಉನ್ನತ ಮಟ್ಟದ ಸಭೆ ನಡೆಯಿತು. ದೇಶದಲ್ಲಿ ಜೆಎನ್-1 ಎಂಬ ಹೊಸ ತಳಿಯ ವೈರಸ್ ಪತ್ತೆಯಾಗಿದ್ದು, ಕರ್ನಾಟಕದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದೆ. ಕರ್ನಾಟಕದಲ್ಲಿ ಬುಧವಾರದ ಲೆಕ್ಕಾಚಾರ ಪ್ರಕಾರ 92 ಸಕ್ರಿಯ ಕೋವಿಡ್ ಕೇಸ್‌ಗಳಲ್ಲಿ 72 ಸೋಂಕಿತರು ಮನೆಯಲ್ಲಿಯೇ ಪ್ರತ್ಯೇಕ (Home Isolation) ವಾಗಿದ್ದರು. ಇನ್ನೂ 20 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದರೆ, ಅವರಲ್ಲಿ ಏಳು ಕೋವಿಡ್ ಸೋಂಕಿತರು ಐಸಿಯುನಲ್ಲಿದ್ದು, ಇವರೆಲ್ಲರೂ ಇತರ ಸಮಸ್ಯೆಗಳಿಂದಲೂ ಬಳಲುತ್ತಿದ್ದಾರೆ ಎಂಬ ಅಂಶ ಸಭೆಯಲ್ಲಿ ಉಲ್ಲೇಖವಾಗಿತ್ತು.