Actor Ganesh: ತಾತ್ಕಾಲಿಕ ಶೆಡ್ ನಿರ್ಮಿಸಲು ಚಿತ್ರನಟ ಗಣೇಶ್‌ಗೆ ನೀಡಿದ್ದ ಅನುಮತಿ ರದ್ದು ಎಂದ ಸಚಿವ ಈಶ್ವರ ಖಂಡ್ರೆ
Sep 05, 2023 09:22 PM IST
ಗೋಲ್ಡನ್ ಸ್ಟಾರ್ ಗಣೇಶ್, ಸಚಿವ ಈಶ್ವರ ಖಂಡ್ರೆ
Actor Ganesh: ನಟ ಗಣೇಶ್ ಅವರಿಗೆ ಜಕ್ಕಳ್ಳಿಯ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ತಾತ್ಕಾಲಿಕ ಕಟ್ಟಡ ನಿರ್ಮಿಸಲು ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಆದರೆ, ಅವರು ಶಾಶ್ವತ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಅನುಮತಿ ರದ್ದು ಮಾಡಲಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಬೆಂಗಳೂರು: ಚಲನಚಿತ್ರ ನಟ ಗಣೇಶ್ (Golden Star Ganesh) ಅವರಿಗೆ ಬಂಡೀಪುರ ಅರಣ್ಯದ ಸಮೀಪ ಗುಂಡ್ಲುಪೇಟೆ ತಾಲೂಕಿನ ಜಕ್ಕಳ್ಳಿಯಲ್ಲಿ ತಾತ್ಕಾಲಿಕ ಕಟ್ಟಡ ನಿರ್ಮಿಸಲು ನೀಡಿದ್ದ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಮಂಗಳವಾರ (ಸೆ.5) ತಿಳಿಸಿದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ (Bandipur Tiger Reserve) ದ ವ್ಯಾಪ್ತಿಯಲ್ಲಿ ಗಣೇಶ್ ಅವರ ಜಮೀನು ಇದೆ. ಅವರು ಮನೆ ನಿರ್ಮಿಸುತ್ತಿರುವ ವಿಚಾರವಾಗಿ ಆಕ್ಷೇಪ ವ್ಯಕ್ತವಾಗಿದೆ.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ನಟ ಗಣೇಶ್ ಅವರಿಗೆ ಜಕ್ಕಳ್ಳಿಯ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ತಾತ್ಕಾಲಿಕ ಕಟ್ಟಡ ನಿರ್ಮಿಸಲು ಕ್ರಮಬದ್ಧವಾಗಿ, ನಿಯಮಬದ್ಧವಾಗಿ ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಆದರೆ, ಅವರು ಶಾಶ್ವತ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಅನುಮತಿ ರದ್ದು ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ| ಬಂಡೀಪುರ ಸೂಕ್ಷ್ಮ ವಲಯದಲ್ಲಿ ನಟ ಗೋಲ್ಡನ್ ಸ್ಟಾರ್ ಗಣೇಶ್ ಬೃಹತ್ ಕಟ್ಟಡ ನಿರ್ಮಾಣಕ್ಕೆ ತೀವ್ರ ಆಕ್ಷೇಪ
ಪರವಾನಗಿ ರದ್ದುಗೊಳಿಸಿದ ಕಾರಣ ಗಣೇಶ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಆದ್ದರಿಂದ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಏನಿದು ಪ್ರಕರಣ; ಆಕ್ಷೇಪ ಯಾಕೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಪರಿಸರ ಸೂಕ್ಷ್ಮವಲಯದಲ್ಲಿ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಕಟ್ಟಡ ನಿರ್ಮಿಸುತ್ತಿರುವುದಕ್ಕೆ ಪರಿಸರವಾದಿಗಳಿಂದ ಆಕ್ಷೇಪ ವ್ಯಕ್ತವಾಗಿತ್ತು.
ಖ್ಯಾತ ಚಿತ್ರ ನಟರು ಈ ರೀತಿಯ ಬೃಹತ್ ಕಟ್ಟಡ ನಿರ್ಮಾಣ ಮಾಡುವ ಮೂಲಕ ಪರಿಸರ ಸೂಕ್ಷ್ಮವಲಯದಲ್ಲಿ ಕಟ್ಟಡ ನಿರ್ಮಿಸುತ್ತಿರುವುದು ದುರಾದೃಷ್ಟಕರ. ಜಮೀನು ಪರಿಸರ ಸೂಕ್ಷ್ಮ ವಲಯ ಹಾಗೂ ಆನೆ ಕಾರಿಡಾರ್‌ನಲ್ಲಿದೆ ಎಂದು ತಿಳಿದಿದ್ದರೂ ಮಾನಿಟರಿಂಗ್ ಕಮಿಟಿ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ಕಟ್ಟಡ ನಿರ್ಮಿಸಲು ಅವಕಾಶ ನೀಡಿರುವುದು ದುರಂತ ಎಂದು ಪರಿಸರವಾದಿ ಜೋಸೆಫ್ ಹೂವರ್ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ| ಬಂಡೀಪುರ ಬಳಿ ಕಟ್ಟಡ ನಿರ್ಮಾಣ: ಗೋಲ್ಡನ್ ಸ್ಟಾರ್ ಗಣೇಶ್‌ಗೆ ನೋಟಿಸ್ ಜಾರಿ, ಕಾಮಗಾರಿ ಸ್ಥಗಿತಕ್ಕೆ ಸೂಚನೆ
ವಾಸ ಹಾಗೂ ಕೃಷಿ ಉಪಕರಣಗಳನ್ನು ಇರಿಸಲು ಮನೆ ನಿರ್ಮಿಸಲು ಅನುಮತಿ ನೀಡಬೇಕು ಎಂದು ಗಣೇಶ್ 2023 ರ ಮಾರ್ಚ್ 15ರಂದು ಕೋರಿದ್ದರು. ಜಮೀನಿನಲ್ಲಿ ಸ್ವಂತ ಉಪಯೋಗಕ್ಕೆ ಮನೆ ನಿರ್ಮಿಸಲು ಬಂಡೀಪುರ ನಿರ್ದೇಶಕರು ಅನುಮತಿ ನೀಡಿದ್ದಾರೆ. ಅನುಮತಿಗಿಂತ ಹೆಚ್ಚು ಜಾಗದಲ್ಲಿ ಮನೆ ನಿರ್ಮಿಸುವಂತಿಲ್ಲ. ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಿಸುವಂತಿಲ್ಲ ಎಂಬ ಷರತ್ತನ್ನೂ ಹಾಕಿದ್ದರು. ಆದರೆ ಸ್ಥಳದಲ್ಲಿ ದೊಡ್ಡ ಕಾಂಕ್ರೀಟ್ ಪಿಲ್ಲರ್‌ಗಳನ್ನು ನಿರ್ಮಿಸಲಾಗಿದೆ ಎಂಬುದರ ಕಡೆಗೆ ಜೋಸೆಫ್ ಹೂವರ್ ಗಮನಸೆಳೆದಿದ್ದಾರೆ.