logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Cafe Blast: ಬೆಂಗಳೂರು ಕೆಫೆ ಸ್ಫೋಟ; 28 ರಿಂದ 30 ವರ್ಷದ ಶಂಕಿತ ಆರೋಪಿಯ, ಆತನ ಬಂಧನಕ್ಕೆ ಸಿಸಿಬಿ ಪೊಲೀಸರ ಬಲೆ

Bengaluru Cafe Blast: ಬೆಂಗಳೂರು ಕೆಫೆ ಸ್ಫೋಟ; 28 ರಿಂದ 30 ವರ್ಷದ ಶಂಕಿತ ಆರೋಪಿಯ, ಆತನ ಬಂಧನಕ್ಕೆ ಸಿಸಿಬಿ ಪೊಲೀಸರ ಬಲೆ

Umesh Kumar S HT Kannada

Mar 02, 2024 11:06 AM IST

google News

ಬೆಂಗಳೂರಿನ ಕುಂದಲಹಳ್ಳಿಯಲ್ಲಿ ಬಾಂಬ್ ಸ್ಫೋಟಕ್ಕೆ ಒಳಗಾದ ದಿ ರಾಮೇಶ್ವರಂ ಕೆಫೆಗೆ ಪೊಲೀಸ್ ಬಂದೋಬಸ್‌ ಮತ್ತು ಕೆಫೆಯ ಎದುರು ಮಾಧ್ಯಮ ಪ್ರತಿನಿಧಿಗಳು (ಮಾ.1ರ ಚಿತ್ರ)

  • ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದ ಮಹತ್ವದ ಸುಳಿವು ದೊರಕಿದೆ. ಪ್ರಮುಖ ಶಂಕಿತ ಆರೋಪಿಯ ಚಲನವಲನ ಸಿಸಿಟಿವಿಯಲ್ಲಿ ದೊರಕಿದ್ದು, 28 ರಿಂದ 30 ವರ್ಷದ ಯುವಕ ಎಂದು ಅಂದಾಜಿಸಲಾಗಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದನ್ನು ಖಚಿತಪಡಿಸಿದ್ದಾರೆ. 

ಬೆಂಗಳೂರಿನ ಕುಂದಲಹಳ್ಳಿಯಲ್ಲಿ ಬಾಂಬ್ ಸ್ಫೋಟಕ್ಕೆ ಒಳಗಾದ ದಿ ರಾಮೇಶ್ವರಂ ಕೆಫೆಗೆ ಪೊಲೀಸ್ ಬಂದೋಬಸ್‌ ಮತ್ತು ಕೆಫೆಯ ಎದುರು ಮಾಧ್ಯಮ ಪ್ರತಿನಿಧಿಗಳು (ಮಾ.1ರ ಚಿತ್ರ)
ಬೆಂಗಳೂರಿನ ಕುಂದಲಹಳ್ಳಿಯಲ್ಲಿ ಬಾಂಬ್ ಸ್ಫೋಟಕ್ಕೆ ಒಳಗಾದ ದಿ ರಾಮೇಶ್ವರಂ ಕೆಫೆಗೆ ಪೊಲೀಸ್ ಬಂದೋಬಸ್‌ ಮತ್ತು ಕೆಫೆಯ ಎದುರು ಮಾಧ್ಯಮ ಪ್ರತಿನಿಧಿಗಳು (ಮಾ.1ರ ಚಿತ್ರ) (PTI)

ಬೆಂಗಳೂರು: ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಸ್ಫೋಟದ ಪ್ರಮುಖ ಆರೋಪಿಯನ್ನು ಸಿಸಿಟಿವಿ ದೃಶ್ಯದಲ್ಲಿ ಗುರುತಿಸಲಾಗಿದೆ. ಇದರ ಆಧಾರ ಪ್ರಕಾರ, ಆರೋಪಿಯು 28 ರಿಂದ 30 ವರ್ಷದ ಯುವಕ ಎಂಬುದು ಕಂಡುಬಂದಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶುಕ್ರವಾರ ತಡರಾತ್ರಿ ತಿಳಿಸಿದರು.

ಆರೋಪಿಯು ರಾಮೇಶ್ವರಂ ಕೆಫೆಗೆ ಭೇಟಿ ನೀಡಿ ಅಲ್ಲಿ ರವಾ ಇಡ್ಲಿ ಆರ್ಡರ್ ಮಾಡಿದ್ದಾನೆ. ಆತ ಬಿಟ್ಟು ಹೋದ ಚೀಲ ಡಸ್ಟ್ ಬಿನ್ ಸಮೀಪ ಇತ್ತು. ಅದು ಸ್ಫೋಟಗೊಂಡ ಕಾರಣ, ಅಲ್ಲಿ ಸಮೀಪದಲ್ಲೇ ಇದ್ದ 10 ಜನ ಗಾಯಗೊಂಡರು. ಅವರಲ್ಲಿ ಒಬ್ಬ ಮಹಿಳೆಯ ಪರಿಸ್ಥಿತಿ ಗಂಭೀರವಾಗಿದೆ.

ಈ ನಡುವೆ, ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಹತ್ತು ಜನರು ಗಾಯಗೊಂಡಿದ್ದಾರೆ. ಕಡಿಮೆ ತೀವ್ರತೆಯ ಸುಧಾರಿತ ಸ್ಫೋಟಕ ಸಾಧನದಿಂದ (ಐಇಡಿ) ಸ್ಫೋಟ ಸಂಭವಿಸಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಂಜೆ ದೃಢಪಡಿಸಿದ್ದರು.

ರಾಮೇಶ್ವರಂ ಕೆಫೆ ಸ್ಫೋಟ; ಆರೋಪಿ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದು ಇಷ್ಟು

ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ ಆರೋಪಿ ಯುವಕ ಆರ್ಡರ್ ಮಾಡಿ ಆಹಾರ ಸ್ವೀಕರಿಸದೇ ಹೋದ ಕುರಿತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿರುವುದು ಹೀಗೆ.

“ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಸ್ಫೋಟ ಸಂಭವಿಸಿದೆ. ಸುಮಾರು 28 ರಿಂದ 30 ವರ್ಷದ ಯುವಕನೊಬ್ಬ ಕೆಫೆಯ ಕ್ಯಾಶ್ ಕೌಂಟರ್‌ಗೆ ಬಂದು ರವಾ ಇಡ್ಲಿ ಖರೀದಿಸುವಾಗ, ತನ್ನ ಕೈಯಲ್ಲಿದ್ದ ಪುಟ್ಟ ಚೀಲವನ್ನು ಅಲ್ಲೇ ಪಕ್ಕದಲ್ಲಿದ್ದ ಕಂಬದ ಬಳಿ ಇರಿಸಿದ್ದ. ಬಳಿಕ ರವಾ ಇಡ್ಲಿ ಸ್ವೀಕರಿಸಿಲ್ಲ. ಆತ ಅಲ್ಲಿಂದ ಹೊರಟು ಹೋದ ಒಂದು ಗಂಟೆಯ ನಂತರ ಸ್ಫೋಟ ಸಂಭವಿಸಿದೆ” ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ಅವರು ಗೃಹ ಸಚಿವ ಜಿ ಪರಮೇಶ್ವರ್ ಜೊತೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಈ ವಿಚಾರ ಹೇಳಿದರು.

ಈ ವಿಷಯದ ತನಿಖೆಯ ಸಮಯದಲ್ಲಿ ಈ ವಿಷಯದ ಅನೇಕ ಅಂಶಗಳನ್ನು ಪರಿಗಣಿಸಲಾಗಿದೆ. ಆದಾಗ್ಯೂ ಈ ಸ್ಫೋಟದ ವಿಚಾರದಲ್ಲಿ ಬೆಂಗಳೂರಿಗರು ಕಳವಳ ಪಡಬೇಕಾದ್ದು ಇಲ್ಲ. ಧೈರ್ಯವಾಗಿರಿ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದೇ ವೇಳೆ ಹೇಳಿದರು.

ಶಂಕಿತ ಆರೋಪಿಯ ಪತ್ತೆಗೆ ಸಿಸಿಬಿ ಪೊಲೀಸರ ಶೋಧ

ಪ್ರಸ್ತುತ ಈ ಪ್ರಕರಣದ ತನಿಖೆಯನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ನಡೆಸುತ್ತಿದೆ. ಘಟನೆಯ ಸ್ಥಳವನ್ನು ಎಫ್ಎಸ್ಎಲ್ ಮತ್ತು ಬಾಂಬ್ ಸ್ಕ್ವಾಡ್ ತಂಡವು ತನಿಖೆ ನಡೆಸಿತು. ಪೊಲೀಸ್ ತನಿಖೆಯಲ್ಲಿ ಹಸ್ತಕ್ಷೇಪ ಇರುವುದಿಲ್ಲ. ಅಪರಾಧಿಯನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಲಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ವಿರೋಧ ಪಕ್ಷ ಬಿಜೆಪಿಯ ಟೀಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, "ಅವರು ಏನೇ ಆರೋಪಗಳನ್ನು ಮಾಡಲಿ... ನಮಗೆ ಇದು ಆರೋಪಗಳಲ್ಲ, ನಾವು ಕರ್ನಾಟಕದ ಚಿತ್ರಣವನ್ನು ನೋಡುತ್ತಿದ್ದೇವೆ" ಎಂದು ಅವರು ಹೇಳಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ 2022 ರಲ್ಲಿ ನಡೆದ ಕುಕ್ಕರ್ ಸ್ಫೋಟವನ್ನು ಉಲ್ಲೇಖಿಸಿದ ಅವರು, "ನಾನು ಇಲ್ಲಿ ಯಾರನ್ನೂ ದೂಷಿಸಲು ಬಯಸುವುದಿಲ್ಲ" ಎಂದು ಹೇಳಿದರು.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ