Chandrayaan 3: ಚಂದ್ರನ ಮೇಲೆ ಲ್ಯಾಂಡರ್ ಇಳಿದ ಸ್ಥಳಕ್ಕೆ 'ಶಿವಶಕ್ತಿ' ಎಂದು ಹೆಸರಿಟ್ಟ ಪ್ರಧಾನಿ ಮೋದಿ
Aug 26, 2023 08:36 AM IST
ಚಂದ್ರನ ಮೇಲೆ ಲ್ಯಾಂಡರ್ ಇಳಿದ ಸ್ಥಳಕ್ಕೆ ಶಿವಶಕ್ತಿ ಎಂದು ಹೆಸರಿಟ್ಟ ಮೋದಿ
- Shivshakti: ಇಸ್ರೋ ವಿಜ್ಞಾನಿಗಳ ಪ್ರಯತ್ನಗಳಿಗೆ ಸೆಲ್ಯೂಟ್ ಹೇಳಿದ ಮೋದಿ, ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಸ್ಥಳವನ್ನು 'ಶಿವಶಕ್ತಿ' ಎಂದು ಕರೆಯಲಾಗುವುದು ಎಂದು ಘೋಷಿಸಿದರು.
ಬೆಂಗಳೂರು: ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಸ್ಥಳವನ್ನು 'ಶಿವಶಕ್ತಿ' ಎಂದು ಕರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಮತ್ತು ಚಂದ್ರಯಾನ 3 ಮಿಷನ್‌ನಲ್ಲಿ ತೊಡಗಿದ್ದ ಇಸ್ರೋ ತಂಡದ ಇತರ ವಿಜ್ಞಾನಿಗಳನ್ನು ಪಿಎಂ ಮೋದಿ ಇಂದು (ಆಗಸ್ಟ್ 26, ಶನಿವಾರ) ಭೇಟಿ ಮಾಡಿದರು.
ಇಸ್ರೋ ಪ್ರಧಾನ ಕಚೇರಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ಚಪ್ಪಾಳೆ ತಟ್ಟುತ್ತಾ ಚಂದ್ರಯಾನ 3 ಯಶಸ್ಸಿನ ಹಿಂದಿರುವ ವಿಜ್ಞಾನಿಗಳನ್ನು ಅಭಿನಂದಿಸಿದರು. ಬಳಿಕ ಚಂದ್ರಯಾನ 3ರ ಉಪಕರಣಗಳ ಮಾದರಿಗಳನ್ನು ತೋರಿಸುತ್ತಾ ಸೋಮನಾಥ್ ಅವರು ಮೋದಿಗೆ ವಿವರಿಸಿದರು.
ಈ ವೇಳೆ ಇಸ್ರೋ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ, "ಇಂದು, ನಾನು ವಿಭಿನ್ನ ಮಟ್ಟದ ಸಂತೋಷವನ್ನು ಅನುಭವಿಸುತ್ತಿದ್ದೇನೆ. ಇಂತಹ ಸಂದರ್ಭಗಳು ಬರುವುದು ಬಹಳ ಅಪರೂಪ. ಚಂದ್ರಯಾನದ ಯಶಸ್ಸಿನ ಸಮಯದಲ್ಲಿ ನಾನು ದಕ್ಷಿಣ ಆಫ್ರಿಕಾದಲ್ಲಿದ್ದೆ. ಆದರೆ ನನ್ನ ಮನಸ್ಸು ಮಾತ್ರ ನಿಮ್ಮೊಂದಿಗೆ ಇತ್ತು" ಎಂದು ಹೇಳಿದರು.
“ನಾನು ಆದಷ್ಟು ಬೇಗ ನಿಮ್ಮನ್ನು ಭೇಟಿಯಾಗಲು ಬಯಸುತ್ತಿದ್ದೆ, ನಿಮಗೆ ಸೆಲ್ಯೂಟ್ ಮಾಡಲು ಬಯಸುತ್ತಿದ್ದೆ. ನಿಮ್ಮ ಪ್ರಯತ್ನಗಳಿಗೆ ಸೆಲ್ಯೂಟ್” ಎಂದು ಹೇಳಿದ ಮೋದಿ, ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಸ್ಥಳವನ್ನು 'ಶಿವಶಕ್ತಿ' ಎಂದು ಕರೆಯಲಾಗುವುದು ಎಂದು ಘೋಷಿಸಿದರು.