logo
ಕನ್ನಡ ಸುದ್ದಿ  /  ಕರ್ನಾಟಕ  /  Explainer: ಹುಲಿ ಉಗುರು ಲಾಕೆಟ್‌ಗಳ ಮೇಲೆ ಯಾಕಿಷ್ಟು ಒಲವು, ಜುವೆಲ್ಲರಿ ಟ್ರೆಂಡ್, ಫ್ಯಾಷನ್ ಮತ್ತು ಕಾನೂನುಗಳ 5 ಅಂಶದ ವಿವರಣೆ

Explainer: ಹುಲಿ ಉಗುರು ಲಾಕೆಟ್‌ಗಳ ಮೇಲೆ ಯಾಕಿಷ್ಟು ಒಲವು, ಜುವೆಲ್ಲರಿ ಟ್ರೆಂಡ್, ಫ್ಯಾಷನ್ ಮತ್ತು ಕಾನೂನುಗಳ 5 ಅಂಶದ ವಿವರಣೆ

Umesh Kumar S HT Kannada

Oct 25, 2023 05:18 PM IST

google News

ನಕಲಿ ಹುಲಿ ಉಗುರುಗಳ ಆಭರಣ (ಸಾಂಕೇತಿಕ ಚಿತ್ರ)

  • ಹುಲಿ ಉಗುರುಗಳ ಆಭರಣ ಸದ್ಯ ಹಾಟ್ ಟಾಪಿಕ್. ಎಲ್ಲೇ ಹೋದರೂ ಇದರದ್ದೇ ಚರ್ಚೆ. ಜುವೆಲ್ಲರಿ ಶಾಪ್‌ಗಳಲ್ಲಿ, ಅಧಿಕೃತ ಚಿನ್ನದ ವ್ಯಾಪಾರಿ ಮಳಿಗೆಗಳಲ್ಲಿ ಸಿಗುವ ಹುಲಿ ಉಗುರುಗಳ ಆಭರಣ ಅಸಲಿಯೇ ನಕಲಿಯೇ ಎಂಬ ಸಂದೇಹವೂ ಇದರೆಡೆ ನುಸುಳಿಕೊಂಡಿದೆ. ಭಾರತದ ಕಾನೂನು ಹೇಳುವುದೇನು, ಹುಲಿ ಉಗುರು ಜುವೆಲ್ಲರಿ ಟ್ರೆಂಡ್‌ ಮುಂತಾದವುಗಳ ಕುರಿತು 5 ಅಂಶಗಳ ವಿವರಣೆ ಇಲ್ಲಿದೆ.  

ನಕಲಿ ಹುಲಿ ಉಗುರುಗಳ ಆಭರಣ (ಸಾಂಕೇತಿಕ ಚಿತ್ರ)
ನಕಲಿ ಹುಲಿ ಉಗುರುಗಳ ಆಭರಣ (ಸಾಂಕೇತಿಕ ಚಿತ್ರ) (PC- Swarna/ Ajiliyaa)

ಹುಲಿ ಉಗುರುಗಳಿಂದ ಮಾಡಿದ ಲಾಕೆಟ್‌ಗಳನ್ನು ಧರಿಸಿಕೊಂಡು ಓಡಾಡುವುದು ಬಹುಕಾಲದ ಫ್ಯಾಷನ್‌. ಕೆಲವರು ಪಕ್ಕಾ ಹುಲಿ ಉಗುರುಗಳದ್ದೇ ಆಭರಣ ಮಾಡಿಸಿಕೊಂಡು ಧರಿಸಿಕೊಂಡರೆ, ಅನೇಕರು ಜುವೆಲ್ಲರಿಗಳಿಂದ ಖರೀದಿ ಮಾಡಿಕೊಂಡು ಧರಿಸಿಕೊಂಡು ಓಡಾಡುತ್ತಿದ್ದಾರೆ. ಆದರೆ ಈಗ ಎಲ್ಲರೂ ಆತಂಕಕ್ಕೆ ಒಳಗಾಗಿದ್ದಾರೆ.

ಹೀಗಾಗಿ ಹುಲಿ ಉಗುರುಗಳ ಆಭರಣ ಧರಿಸಿ ಫೋಟೋ ತೆಗೆಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಶೇರ್‌ ಮಾಡಿದ್ದವರೆಲ್ಲ ಆ ಫೋಟೋಗಳನ್ನು ಡಿಲೀಟ್ ಮಾಡಲಾರಂಭಿಸಿದ್ದಾರೆ. ಅನೇಕರು ಆಭರಣ ತೆಗೆದು ಅಡಗಿಸಿಟ್ಟುಕೊಂಡಿದ್ದಾರೆ. ಬಿಗ್ ಬಾಸ್ 10 ಸ್ಪರ್ಧಿ ಸಂತೋಷ್ ಹುಲಿ ಉಗುರುಗಳ ಪೆಂಡೆಂಟ್ ಧರಿಸಿದ್ದಕ್ಕೆ ಜೈಲು ಸೇರಿರುವುದು ಮತ್ತು ಇದರ ಬೆನ್ನಿಗೆ ಈ ರೀತಿ ಹುಲಿ ಉಗುರುಗಳ ಆಭರಣ ಧರಿಸಿದವರ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿರುವುದು ಇದಕ್ಕೆ ಕಾರಣ.

ಅಷ್ಟೇ ಅಲ್ಲ, ಮಂಗಳವಾರ (ಅ.24) ಹುಲಿ ಉಗುರುಗಳ ಆಭರಣ ಧರಿಸಿದವರನ್ನು ಹುಡುಕಿ ಅವರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸುವ ಕೆಲಸ ಶುರುಮಾಡಿದೆ. ಚಿಕ್ಕಮಗಳೂರಿನಲ್ಲಿ ಹುಲಿ ಉಗುರು ಆಭರಣ ಧರಿಸಿ ಪ್ರದರ್ಶಿಸಿದ ಇಬ್ಬರನ್ನು ಬಂಧಿಸಲಾಗಿದೆ. ಹುಲಿ ಉಗುರು ಮಾರಾಟ ಮಾಡುತ್ತಿದ್ದವರ ಮೇಲೂ ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

ಈ ನಡುವೆ, ಹುಲಿ ಉಗುರುಗಳ ಆಭರಣದ ಧರಿಸಿದ್ದಾಗಿ ದೂರು ಬಂದರೆ ಕ್ರಮ ಜರುಗಿಸುವುದಾಗಿ ಕರ್ನಾಟಕದ ಅರಣ್ಯ ಸಚಿವ ಈಶ್ವರ ಖಂಡ್ರೆ ಬುಧವಾರ ಎಚ್ಚರಿಸಿದ್ದಾರೆ.

1 ಜನ ಯಾಕೆ ಹುಲಿ ಉಗುರುಗಳ ಆಭರಣ ಧರಿಸುತ್ತಾರೆ

ಜನರಿಗೆ ಹುಲಿ ಉಗುರು ಆಭರಣಗಳ ಮೇಲೆ ಯಾಕಿಷ್ಟು ಒಲವು ಎಂಬ ಕುತೂಹಲ ಸಹಜ. ಹುಲಿ ಉಗುರು ಉಪಯೋಗ ಏನು ಎಂದು ಕೇಳಿದರೆ ಅದಕ್ಕೂ ಸಿಗುವ ಉತ್ತರ ಹೀಗಿದೆ. ಹುಲಿಯನ್ನು ಪೌರುಷ ಸಂಕೇತವಾಗಿ ಜನ ಕಾಣುತ್ತಾರೆ. ಭಾರತದ ಅನೇಕ ಭಾಗಗಳಲ್ಲಿ, ಹುಲಿ ಉಗುರುಗಳನ್ನು ದುಷ್ಟ ಶಕ್ತಿಗಳ ಹೊಡೆದೋಡಿಸುವ ಮಾಂತ್ರಿಕ ಶಕ್ತಿಯುಳ್ಳವು. ಅದೃಷ್ಟದಾಯಿ ಎಂದು ನಂಬಲಾಗಿದೆ. ಹುಲಿ ಉಗುರುಗಳನ್ನು ಧರಿಸಿದವರಲ್ಲಿ ಧೈರ್ಯ ಹೆಚ್ಚು ಎಂಬ ನಂಬಿಕೆಯೂ ಇದೆ.

2 ಹುಲಿ ಉಗುರುಗಳ ಆಭರಣ ಹೆಚ್ಚಾಗಿ ಯಾರು ಧರಿಸುತ್ತಾರೆ

ಹುಲಿ ಉಗುರುಗಳ ಆಭರಣ ಅಥವಾ ಹುಲಿ ಉಗುರು ಲಾಕೆಟ್‌ಗಳನ್ನು ಹೆಚ್ಚಾಗಿ ಪುರುಷರು ಧರಿಸುತ್ತಾರೆ. ಆದರೆ ಮಹಿಳೆಯರು ಧರಿಸುವುದಿಲ್ಲ ಎಂದಲ್ಲ. ಮಹಿಳೆಯರೂ ಹುಲಿ ಉಗುರುಗಳ ಆಭರಣದ ಟ್ರೆಂಡ್‌ ಅನುಸರಿಸುತ್ತಿರುವುದನ್ನು ಜುವೆಲ್ಲರಿ ಟ್ರೆಂಡ್‌ ಗಮನಿಸುವವರು ಸುಲಭವಾಗಿ ಗ್ರಹಿಸಿಬಿಡುತ್ತಾರೆ.

3 ಆಭರಣಗಳಲ್ಲಿ ಅಳವಡಿಸುವ ಹುಲಿ ಉಗುರು ಅಸಲಿಯೇ ನಕಲಿಯೇ?

ಸಾಮಾನ್ಯವಾಗಿ ಚಿನ್ನಾಭರಣ ಮಾರುಕಟ್ಟೆಯಲ್ಲಿ ವಿಶೇಷವಾಗಿ ಜುವೆಲ್ಲರಿ ಶಾಪ್‌ಗಳಲ್ಲಿ ಅಸಲಿ ಹುಲಿ ಉಗುರುಗಳ ಚಿನ್ನಾಭರಣ ಮಾಡುವುದಿಲ್ಲ. ನಕಲಿ ಹುಲಿ ಉಗುರುಗಳನ್ನು ಬಳಸಿ ಇಂತಹ ಆಭರಣಗಳನ್ನು ಮಾಡುತ್ತಾರೆ. ಅದನ್ನು ಅವರು ಫೌಕ್ಸ್‌ ಟೈಗರ್ ನೇಲ್‌ (Faux Tiger Nail) ಎಂದೇ ಉಲ್ಲೇಖಿಸುತ್ತಾರೆ. ಚಿನ್ನದ ಬೆಲೆಯನ್ನಾಧರಿಸಿ ಇವುಗಳ ದರ ನಿಗದಿಯಾಗುತ್ತವೆ. ಅಧಿಕೃತ ಜುವೆಲ್ಲರಿ ಶಾಪ್‌ಗಳಲ್ಲಿ, ಮಾರಾಟ ಮಳಿಗೆಗಳಲ್ಲಿ ಅಸಲಿ ಹುಲಿ ಉಗುರುಗಳ ಆಭರಣ ಮಾರಾಟ ಮಾಡುವುದಿಲ್ಲ.

4 ಅಸಲಿ ಹುಲಿ ಉಗುರುಗಳ ಆಭರಣ ಧರಿಸುವುದು ಅಪರಾಧವೇ?

ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ ಪ್ರಕಾರ ಅಸಲಿ ಹುಲಿ ಉಗುರುಗಳ ಆಭರಣ ಮಾಡುವುದು, ಮಾರಾಟ ಮಾಡುವುದು, ಧರಿಸುವುದು ಎಲ್ಲವೂ ಅಪರಾಧ. ಹೀಗಾಗಿಯೇ ಅಸಲಿ ಹುಲಿ ಉಗುರುಗಳ ಆಭರಣ ಧರಿಸಿದವರ ವಿರುದ್ಧ ಪ್ರಕರಣ ದಾಖಲಾಗುತ್ತಿರುವುದು ಮತ್ತು ಅವರನ್ನು ಬಂಧಿಸುತ್ತಿರುವುದು.

5 ವನ್ಯಜೀವಿ ಸಂರಕ್ಷಣಾ ಕಾಯಿದೆ ಪ್ರಕಾರ ಹುಲಿ ಉಗುರುಗಳ ಮಾರಾಟ, ಖರೀದಿ, ಪ್ರದರ್ಶನಕ್ಕೆ ಏನು ಶಿಕ್ಷೆ

ಭಾರತದ ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಪ್ರಕಾರ, ಹುಲಿ ಉಗುರುಗಳ ಮಾರಾಟ, ಖರೀದಿ ಮತ್ತು ಅಕ್ರಮ ಬಳಕೆ ಅಪರಾಧ. ಇಂತಹ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧದ ಆರೋಪ ಸಾಬೀತಾದರೆ ದಂಡ ಮತ್ತು ಸಜೆ ಎರಡೂ ಸಿಗಬಹುದು. ಜೈಲು ಶಿಕ್ಷೆ ಕನಿಷ್ಠ 3 ವರ್ಷದಿಂದ 7 ವರ್ಷ ತನಕ ಸಿಗಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ