ಹುಲಿ ಉಗುರು ವಿವಾದ: ದರ್ಶನ್, ಜಗ್ಗೇಶ್ ಪ್ರಕರಣದ ಮಾಹಿತಿ ಇಲ್ಲ ಎಂದ ಅರಣ್ಯ ಸಚಿವ ಈಶ್ವರ ಖಂಡ್ರೆ
Oct 25, 2023 03:34 PM IST
ದರ್ಶನ್ ಮತ್ತು ಜಗ್ಗೇಶ್ ಹುಲಿ ಉಗುರು ಧರಿಸಿದ್ದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮಧ್ಯ ಚಿತ್ರದಲ್ಲಿರುವವರು ಅರಣ್ಯ ಸಚಿವ ಈಶ್ವರ ಖಂಡ್ರೆ
- ಹುಲಿ ಉಗುರು ಕೊರಳಲ್ಲಿ ಹಾಕಿಕೊಂಡಿರುವ ಬಗ್ಗೆ ದೂರು ಬರುತ್ತಿವೆ. ಯಾವುದೇ ದೂರು ಬಂದರೂ ತನಿಖೆ ನಡೆಸಿ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದು ಸಚಿವರು ತಿಳಿಸಿದರು.
ಕಲಬುರಗಿ: ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಕುತ್ತಿಗೆಯಲ್ಲಿ ಹುಲಿ ಉಗುರು ಕಾಣಿಸಿಕೊಂಡ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಚಿತ್ರನಟ ದರ್ಶನ್ ಮತ್ತು ಜಗ್ಗೇಶ್ ಅವರು ಸಾರ್ವಜನಿಕವಾಗಿ ಹುಲಿ ಉಗುರು ಧರಿಸಿದ, ವಿನಯ್ ಗುರೂಜಿ ಹುಲಿ ಚರ್ಮ ಬಳಸಿದ ಚಿತ್ರಗಳು ಇದೀಗ ವೈರಲ್ ಆಗಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಸರ್ಕಾರದ ನಿಲುವು ಸ್ಪಷ್ಟಪಡಿಸಿದ್ದಾರೆ. 'ಕಾನೂನು ಉಲ್ಲಂಘಿಸಿ ಆಕ್ಷೇಪಾರ್ಹವಾಗಿ ನಡೆದುಕೊಂಡವರ ವಿರುದ್ಧ ಕ್ರಮ ಜರುಗಿಸಲು ಅಧಿಕಾರಿಗಳು ಬದ್ಧರಾಗಿದ್ದಾರೆ. ಸಾರ್ವಜನಿಕರು ಈ ನಿಟ್ಟಿನಲ್ಲಿ ದೂರು ನೀಡಿದರೆ, ನೆಲದ ಕಾನೂನಿನ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು' ಎಂದು ಸಚಿವರು ಭರವಸೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಣಿಜನ್ಯ ವಸ್ತುಗಳ ಬಳಕೆ, ಸಂಗ್ರಹ, ಸಾಗಾಟಕ್ಕೆ ಹಿಂದಿನಿಂದಲೂ ನಿಷೇಧವಿದೆ. ಈ ಅಪರಾಧಕ್ಕೆ ಏಳು ವರ್ಷಗಳ ಶಿಕ್ಷೆ ಇದೆ. ವನ್ಯಜೀವಿ ಸಂರಕ್ಷಣೆ ಕಾಯ್ದೆ 1972ರಲ್ಲಿ ಜಾರಿಗೆ ಬಂದಿದೆ. ಅದಾದ ನಂತರ 80ರ ದಶಕದಲ್ಲಿ, 2002ರಲ್ಲಿ, 2022ರಲ್ಲಿ ತಿದ್ದುಪಡಿಯಾಯಿತು. ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿಯಲ್ಲಿ ವನ್ಯಪ್ರಾಣಿಗಳ ಅಂದರೆ ಹುಲಿ ಚರ್ಮ, ಆನೆಯ ದಂತ, ಹುಲಿ ಉಗುರು, ಚಿಂಕೆ ಚರ್ಮ, ಕೊಂಬು ಇತ್ಯಾದಿಗಳನ್ನು ಯಾವುದನ್ನೂ ಉಪಯೋಗ ಮಾಡಲು, ಸಂಗ್ರಹ ಮಾಡಲು, ಸಾಗಾಟ ಮಾಡಲು, ಸ್ವಂತಕ್ಕೆ ಇಟ್ಟುಕೊಳ್ಳಲು ಅವಕಾಶವಿಲ್ಲ. ಯಾರಾದರೂ ಆ ರೀತಿ ಮಾಡಿದ್ದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಸಚಿವರ ವಿವರಿಸಿದರು.
ಇದನ್ನೂ ಓದಿ: ಹುಲಿ ಉಗುರು ಧರಿಸಿದ್ದ ಜಗ್ಗೇಶ್ ವಿರುದ್ಧ ದೂರು
ಕೆಲ ಸೆಲಬ್ರಿಟಿಗಳು ಹುಲಿಯ ಉಗುರನ್ನು ತಮ್ಮ ಕೊರಳಲ್ಲಿ ಹಾಕಿಕೊಂಡಿದ್ದಾರೆ. ಕೆಲವರು ಹುಲಿ ಚರ್ಮ ಉಪಯೋಗ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಕುರಿತು ಅರಣ್ಯ ಇಲಾಖೆ ತನಿಖೆ ನಡೆಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಿದೆ ಎಂದರು. ಈ ನೆಲದ ಕಾನೂನು ಎಲ್ಲರಿಗೂ ಒಂದೇ ರೀತಿ ಅನ್ವಯವಾಗುತ್ತದೆ. ಯಾರೂ ಕಾನೂನಿಗೆ ಮೀರಿದವರು ಇಲ್ಲ. ಎಷ್ಟೇ ಪ್ರಭಾವವಿದ್ದರೂ ಸರ್ಕಾರ ಕಾನೂನು ಕ್ರಮ ಜರುಗಿಸುತ್ತದೆ ಎಂದು ತಿಳಿಸಿದರು.
ನಮಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ, ದೂರು ನೀಡಿದರೆ ಪರಿಶೀಲನೆ ಮಾಡಲಾಗುತ್ತದೆ. ಹುಲಿ ಉಗುರು ಕೊರಳಲ್ಲಿ ಹಾಕಿಕೊಂಡಿರುವ ಬಗ್ಗೆ ದೂರು ಬರುತ್ತಿವೆ. ಯಾವುದೇ ದೂರು ಬಂದರೂ ತನಿಖೆ ನಡೆಸಿ ಇಲಾಖೆ ಕ್ರಮ ಕೈಗೊಳ್ಳುತ್ತದೆ. ನಟ ದರ್ಶನ್, ಜಗ್ಗೇಶ್ ಬಳಿ ಹುಲಿ ಉಗುರು ಇದೆ ಎನ್ನಲಾದ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ ಯಾರೇ ದೂರು ನೀಡಿದರೂ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.