Vidyarthi Bhavan: ವಿದ್ಯಾರ್ಥಿ ಭವನದ ಗೋಡೆಯ ಮೇಲೆ ಜೀವ ತಳೆದ ಬಸವನಗುಡಿ, ಮಸಾಲೆ ದೋಸೆ ಸವಿಯುವಾಗ ಈ ಚಿತ್ರಗಳನ್ನೂ ಕಣ್ತುಂಬಿಕೊಳ್ಳಿ
Nov 07, 2024 05:33 PM IST
ಬೆಂಗಳೂರು ಗಾಂಧೀಬಜಾರ್‌ನ ಗೋಡೆಯ ಮೇಲಿರುವ ಬಸವನಗುಡಿಯ ಸಾಂಸ್ಕೃತಿಕ ಹೆಗ್ಗುರುತುಗಳು (ಎಡಚಿತ್ರ). ಕಲಾವಿದರಾದ ಭರತ್ ಕುಮಾರ್ ಆರಾಧ್ಯ, ವಿನಾಯಕ ಚಿಕ್ಕೋಡಿ, ಅಶೋಕ್ ಮಾನೆ.
- ಬೆಂಗಳೂರು ಗಾಂಧೀಬಜಾರ್‌ನ ಸಾಂಸ್ಕೃತಿಕ ಗುರುತುಗಳ ಪಟ್ಟಿಯಲ್ಲಿ ವಿದ್ಯಾರ್ಥಿ ಭವನಕ್ಕೆ ಖಂಡಿತ ಒಂದು ಸ್ಥಾನ ಸದಾ ಇದ್ದೇ ಇರುತ್ತದೆ. ಬೆಂಗಳೂರು ಪರಂಪರೆಯ ಭಾಗವೇ ಆಗಿರುವ ಈ ಪ್ರತಿಷ್ಠಿತ ಹೋಟೆಲ್‌ನಲ್ಲಿ ಅಪರೂಪದ ಕಲಾ ಪ್ರಯೋಗವೊಂದು ಸದ್ದಿಲ್ಲದೆ ನಡೆದಿದೆ. ಇಲ್ಲಿ ಕೆಲಸ ಮಾಡಿದ ಎಲ್ಲ ಸಿಬ್ಬಂದಿಯನ್ನು ಕ್ಯಾರಿಕೇಚರ್ ರೂಪದಲ್ಲಿ ಸ್ಮರಿಸಲಾಗಿದೆ.
ಬೆಂಗಳೂರು: ನಗರದ ಗಾಂಧೀಬಜಾರ್‌ನಲ್ಲಿ ಇರುವ ವಿದ್ಯಾರ್ಥಿ ಭವನ್ ಹೋಟೆಲ್ ಬಹಳ ಫೇಮಸ್. ಅಲ್ಲಿನ ಮಸಾಲೆ ದೋಸೆ, ರವೆ ವಡೆ, ಬೆಳಗ್ಗೆ ವೇಳೆ ಸಿಗುವಂಥ ಸಾಗು ಮಸಾಲೆ, ಇವೆಲ್ಲಕ್ಕೂ ಚಾರಿತ್ರಿಕ ಎನಿಸುವಷ್ಟು ಹಿನ್ನೆಲೆ ಹಾಗೂ ಖ್ಯಾತಿ ಇದೆ. ಅತಿರಥ- ಮಹಾರಥ ಸಾಹಿತಿಗಳು, ಕರ್ನಾಟಕದ ಅರ್ಧ ಡಜನ್‌ಗೂ ಹೆಚ್ಚು ಮುಖ್ಯಮಂತ್ರಿಗಳು ಹಾಗೂ ಮಾಜಿ ಪ್ರಧಾನಿ ದೇವೇಗೌಡರು, ಹಲವು ಸಂಸದರು ಹಾಗೂ ಇವೆಲ್ಲಕ್ಕೂ ಮಿಗಿಲಾಗಿ ಕನ್ನಡದ ಮೇರು ನಟ ರಾಜ್ ಕುಮಾರ್, ಕನ್ನಡ ಚಿತ್ರಂಗದ ನಟ-ನಟಿಯರು, ವಿಜ್ಞಾನಿಗಳೂ ಒಳಗೊಂಡಂತೆ ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳು ಇಲ್ಲಿಯ ಮಸಾಲೆ ದೋಸೆಯನ್ನು ಸವಿದಿದ್ದಾರೆ. ಈ ಹೋಟೆಲ್‌ನ ಪಾರ್ಸೆಲ್ ಕೌಂಟರ್ ಹಾಗೂ ಹೋಟೆಲ್ ಪ್ರವೇಶಿಸುವ ಮೊದಲೇ ಸಿಗುವ ಬಲಭಾಗದ ಗೋಡೆ ಮೇಲೆ ತುಂಬ ಚಂದದ ಚಿತ್ರಗಳನ್ನು “ಇಂಕ್ ರೇಜ್”ನ ಭರತ್ ಕುಮಾರ್ ಆರಾಧ್ಯ ಹಾಗೂ ಸ್ನೇಹಿತರು ತುಂಬ ಚೆನ್ನಾಗಿ ಬಿಡಿಸಿದ್ದಾರೆ.
ಅದರಲ್ಲೂ ಪಾರ್ಸಲ್ ಕೌಂಟರ್ ಬಳಿ ವಿದ್ಯಾರ್ಥಿ ಭವನಕ್ಕೆ ಕೆಲಸ ಮಾಡುತ್ತಿರುವವರ ಕ್ಯಾರಿಕೇಚರ್‌ಗಳು ಸೊಗಸಾಗಿ ಮೂಡಿಬಂದಿವೆ. ನೀವೇನಾದರೂ ಈ ಹೋಟೆಲ್‌ಗೆ ನಿಯಮಿತವಾಗಿ ಭೇಟಿ ನೀಡುವವರು ಅಂತಾದರಂತೂ ಆ ವ್ಯಕ್ತಿಗಳ ಮುಖ ಕಣ್ಣೆದುರು ಬಂದು ನಿಲ್ಲುತ್ತವೆ. ಇನ್ನು ಬಸವನಗುಡಿ- ಗಾಂಧೀಬಜಾರಿನ ದೊಡ್ಡಗಣಪತಿ ಗುಡಿ, ಹೂವು ಮಾರುವವರು, ವೈವಿಧ್ಯತೆಯನ್ನು ಪ್ರತಿನಿಧಿಸುವ ವಿವಿಧ ರೀತಿಯ ಜನರು, ಆ ಎಲ್ಲದರ ಮಧ್ಯೆ ತನ್ನದೊಂದು ಅಸ್ಮಿತೆಯನ್ನು ಉಳಿಸಿಕೊಂಡು ಬಂದಿರುವ ವಿದ್ಯಾರ್ಥಿ ಭವನವನ್ನು ತುಂಬ ಚೆನ್ನಾಗಿ ಚಿತ್ರಗಳಲ್ಲಿ ರಚಿಸಲಾಗಿದೆ. ಇದನ್ನು ರೂಪಿಸಿರುವವರು ಭರತ್ ಕುಮಾರ್ ಆರಾಧ್ಯ, ವಿನಾಯಕ ಚಿಕ್ಕೋಡಿ ಹಾಗೂ ಅಶೋಕ್ ಮಾನೆ ಈ ಮೂವರ ತಂಡ.
ಬಹುಮುಖ ಪ್ರತಿಭೆ ಭರತ್ ಆರಾಧ್ಯ
ವಿದ್ಯಾರ್ಥಿ ಭವನ್ ಗೋಡೆಗಳ ಮೇಲಿನ ಚಿತ್ರಗಳ ಮೂಲಕ ಕುತೂಹಲ ಮೂಡಿಸಿದರು ಎಂಬ ಕಾರಣಕ್ಕೆ ಭರತ್ ಆರಾಧ್ಯ ಅವರನ್ನು ಬನಶಂಕರಿ ಎರಡನೇ ಹಂತದ ಬಿಡಿಎ ಕಾಂಪ್ಲೆಕ್ಸ್ ಎದುರಲ್ಲೇ ಇರುವ ಇಂಕ್ ರೇಜ್ ಆರ್ಟ್ ಅಂಡ್ ಟ್ಯಾಟೂ ಸ್ಟುಡಿಯೋದಲ್ಲಿ ಭೇಟಿ ಮಾಡಿ ಮಾತನಾಡಿಸಲಾಯಿತು. ಆಗಲೇ ಗೊತ್ತಾಗಿದ್ದು ಈ ಭರತ್ ಆರಾಧ್ಯ ಬಹುಮುಖ ಪ್ರತಿಭೆ. ಐದು ವರ್ಷಗಳ ಕಾಲ ಬಿಎಫ್ಎ (ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್) ಕೋರ್ಸ್ ಮಾಡಿಕೊಂಡಿದ್ದಾರೆ. ತುಂಬ ಸೊಗಸಾಗಿ ಚಿತ್ರವನ್ನು ಬಿಡಿಸುತ್ತಾರೆ. ಕನ್ನಡ ಭಾಷೆ, ಕನ್ನಡ ಸಿನಿಮಾಗಳು ಅಂದರೆ ಪ್ರೀತಿ. ಕನ್ನಡದ ಹಿರಿಯ ನಟರು ಅಂದರೆ, ಮನೆಯ ಹಿರಿಯರ ಎದುರು ಹೇಗೆ ನಡೆದುಕೊಳ್ಳಬೇಕು ಆ ರೀತಿ ಇರಬೇಕು ಎಂದು ಮನೆಯಲ್ಲಿ ಹೇಳಿಕೊಟ್ಟಿರುವ ಪಾಠ. ಇನ್ನು ಸ್ವತಃ ಈ ವ್ಯಕ್ತಿಯೇ ಒಂದು ಚಂದದ ಸಿನಿಮಾ ಮಾಡಬಲ್ಲಷ್ಟು ಸೂಪರ್ ಐಡಿಯಾ- ಕಾನ್ಸೆಪ್ಟ್ ಇಟ್ಟುಕೊಂಡಿರುವವರು.
ವಿದ್ಯಾರ್ಥಿ ಭವನ ಎಂಬ ನಾಟಕವನ್ನು ಈ ಹಿಂದೆ ಪ್ರದರ್ಶಿಸಲಾಗಿತ್ತು. ಅದರ ನಿರ್ದೇಶಕ ಅರ್ಜುನ್ ಕಬ್ಬಿನ. ಅವರು ಈ ಭರತ್ ಅವರ ತಂಗಿ ದೀಪಿಕಾ ಪಿ. ಆರಾಧ್ಯ ಮೂಲಕ ಪರಿಚಯ ಆಗಿದ್ದಾರೆ. 'ಅಮ್ಮಚ್ಚಿ ಎಂಬ ನೆನಪು' ಸಿನಿಮಾ ಬಂತಲ್ಲ, ಅದರಲ್ಲಿ ಇದೇ ದೀಪಿಕಾ ಅಕ್ಕು ಪಾತ್ರದಲ್ಲಿ ನಟಿಸಿದ್ದಾರೆ. ದೀಪಿಕಾ ಮೂಲತಃ ರಂಗಭೂಮಿ ಕಲಾವಿದೆ. ಅರ್ಜುನ್ ಅವರು ತಮ್ಮ ನಾಟಕಕ್ಕಾಗಿ ಈ ಭರತ್ ಅವರಿಂದ ಪೋಸ್ಟರ್ ಡಿಸೈನ್ ಮಾಡಿಸಿದ್ದಾರೆ. ಅದು ಬಹಳ ಚೆನ್ನಾಗಿ ಬಂದಿದೆ ಎಂದೆನಿಸಿ, ವಿದ್ಯಾರ್ಥಿ ಭವನ ಹೋಟೆಲ್ ನ ಮಾಲೀಕರಾದ ರಾಮಕೃಷ್ಣ ಅಡಿಗ ಅವರ ಮಗ ಅರುಣ್ ಅವರು ತಮ್ಮ ಹೋಟೆಲ್ ನಲ್ಲಿ ಇವರಿಂದ ಚಿತ್ರ ಬಿಡಿಸುವುದಕ್ಕೆ ಕಾರಣ ಆಗಿದೆ. ಆದರೆ ಇದರಲ್ಲಿ ಭರತ್ ಆರಾಧ್ಯ, ವಿನಾಯಕ ಚಿಕ್ಕೋಡಿ ಹಾಗೂ ಅಶೋಕ್ ಮಾನೆ ಮೂರೂ ಜನರ ಶ್ರಮ ಸಮಾನವಾಗಿ ಇದೆ. ಈಗ ಹೋಟೆಲ್ ಗ್ರಾಹಕರಿಗೆ ಕಾಣುವ ಎರಡು ಚಿತ್ರಗಳ ಜೊತೆಗೆ ಮತ್ತೂ ಎರಡು ಫ್ಲೋರ್ ನಲ್ಲಿ ಸಹ ಚಿತ್ರಗಳನ್ನು ಬಿಡಿಸಲಾಗಿದೆ ಎಂದು ಭರತ್ ತಿಳಿಸಿದರು.
ಒಂದು ವಾರಗಳ ಸಮಯ ಇದಕ್ಕಾಗಿ ತೆಗೆದುಕೊಂಡಿದೆ. ಮೂಲತಃ ದಕ್ಷಿಣ ಬೆಂಗಳೂರಿನವರೇ ಆದ ಭರತ್ ಅವರಿಗೆ ಕಡ್ಲೇಕಾಯಿ ಪರಿಷೆ, ಗಾಂಧೀಬಜಾರ್, ಬಸವನಗುಡಿ, ವಿದ್ಯಾರ್ಥಿ ಭವನ ಇವೆಲ್ಲ ಭಾವನಾತ್ಮಕವಾಗಿ ತುಂಬ ಹಚ್ಚಿಕೊಂಡ ಸಂಗತಿಗಳು. ಇನ್ನು ಬಿಎಂಡಬ್ಲ್ಯು, ಐಬಿಸ್ ಹೋಟೆಲ್ ಸಮೂಹ, ಬೆಂಗಳೂರಿನ ಹಲವು ಜಿಮ್ ಗಳಲ್ಲಿ ಭರತ್ ಮತ್ತು ತಂಡದವರ ಸಿಗ್ನೇಚರ್ ಎನಿಸುವ ಕಲಾಕೃತಿಗಳಿವೆ.
ಕನ್ನಡವೇ ಸರ್ವಸ್ವ ಎನ್ನುವ ಕಲಾವಿದ
ಅಪ್ಪಟ ಕನ್ನಡದ ಹುಡುಗ ಭರತ್ ತುಂಬ ಚಂದದ ಕನ್ನಡ ಮಾತನಾಡುತ್ತಾರೆ. ಇಂಗ್ಲಿಷ್ ಮಾತನಾಡುವುದಕ್ಕೆ ಬಂದಿದ್ದರೆ ಡ್ರೀಮ್ ವರ್ಕ್ಸ್‌ನಂಥ ಸಂಸ್ಥೆಯಲ್ಲಿ ಅವಕಾಶ ಗಿಟ್ಟಿಸಿಕೊಂಡಿರುತ್ತಿದ್ದರು. “ಇವತ್ತಿಗೂ ಇಂಗ್ಲಿಷ್ ಏನೂ ಬರಲ್ಲ, ಹಾಗಂತ ನನಗೆ ಯಾವ ಬೇಸರವೂ ಇಲ್ಲ. ಅಮ್ಮ- ತಂಗಿ, ಹೆಂಡತಿ, ಜೊತೆಯಲ್ಲಿ ಸ್ನೇಹಿತರು, ಇಂಕ್ ರೇಜ್ ತಂಡ ಇವರೆಲ್ಲ ಸಹಾಯ ಮಾಡಿದ್ದರಿಂದ ಸ್ವಂತದ್ದೊಂದು ಟ್ಯಾಟೂ ಸ್ಟುಡಿಯೋ ಮಾಡಿದ್ದೀನಿ. ಚಿತ್ರಕಲೆ ನನ್ನ ಬದುಕು, ಮನೆಗಿಂತ ಹೆಚ್ಚಿನ ಸಮಯ ಇರುವ ನನ್ನ ಸ್ಟುಡಿಯೋವನ್ನು ಅಭಿರುಚಿಗೆ ತಕ್ಕಂತೆ ರೂಪಿಸಿಕೊಂಡಿದ್ದೇನೆ.
“ಮನೆಗಳಲ್ಲಿ ಮ್ಯೂರಲ್ ಆರ್ಟ್, ಪೇಂಟ್ ಅಥವಾ ಬೇರೆ ಯಾವುದೇ ಚಿತ್ರಕಲೆಗೆ ಸಂಬಂಧಿಸಿದಂಥ ಕೆಲಸಗಳನ್ನು ಮಾಡಿಸಿಕೊಳ್ಳಬೇಕು ಅಂತ ಯಾರಾದರೂ ಬಯಸಿದಲ್ಲಿ ಖಂಡಿತಾ ಮಾಡಿಕೊಡುತ್ತೇನೆ. ಅವೆಲ್ಲ ಕೌಶಲ, ಸಾಮರ್ಥ್ಯ, ಸಮಯವನ್ನು ಬೇಡುವಂಥದ್ದು. ಖರ್ಚು ಬರುವುದು ಸಹ ಹೌದು. ಆದರೆ ಅದಕ್ಕೆ ಮುಂಚಿತವಾಗಿಯೇ ಮಾತನಾಡಿಕೊಳ್ಳುತ್ತೇನೆ. ನನಗಿರುವ ಕಲಾವಿದರ ಸ್ನೇಹಿತರ ಬಳಗವೂ ದೊಡ್ಡದು. ಯಾವುದೇ ರೀತಿಯ ಕಲೆಗೆ ಸಂಬಂಧಿಸಿದ ಕೆಲಸವನ್ನು ಸೊಗಸಾಗಿ ಮಾಡಿಕೊಡುತ್ತೇನೆ. ವರ್ಲಿ ಚಿತ್ರಗಳನ್ನು ಬಿಡಿಸಿಕೊಡುತ್ತೇನೆ” ಎಂದು ಅವರು ಹೇಳಿದರು.
(ಬರಹ: ಶ್ರೀನಿವಾಸ ಮಠ)