logo
ಕನ್ನಡ ಸುದ್ದಿ  /  ಜೀವನಶೈಲಿ  /  Vidyarthi Bhavan: 1943 ರಿಂದ ಇಂದಿಗೂ ಅದೇ ಖ್ಯಾತಿ ಉಳಿಸಿಕೊಂಡಿರುವ ಬೆಂಗಳೂರಿನ ವಿದ್ಯಾರ್ಥಿ ಭವನ; ಗಣ್ಯಾತಿ ಗಣ್ಯರು ಮೆಚ್ಚಿದ ಹೋಟೆಲ್‌ ಇದು

Vidyarthi Bhavan: 1943 ರಿಂದ ಇಂದಿಗೂ ಅದೇ ಖ್ಯಾತಿ ಉಳಿಸಿಕೊಂಡಿರುವ ಬೆಂಗಳೂರಿನ ವಿದ್ಯಾರ್ಥಿ ಭವನ; ಗಣ್ಯಾತಿ ಗಣ್ಯರು ಮೆಚ್ಚಿದ ಹೋಟೆಲ್‌ ಇದು

Rakshitha Sowmya HT Kannada

Jul 14, 2023 06:57 PM IST

google News

ಜನ ಸಾಮಾನ್ಯರು, ಗಣ್ಯರ ಮೆಚ್ಚಿನ ವಿದ್ಯಾರ್ಥಿ ಭವನ

  • ವಿದ್ಯಾರ್ಥಿ ಭವನದಲ್ಲಿ ದೋಸೆ ತಿಂದು ಕೈ ತೊಳೆದರೂ ಅದರ ಸುವಾಸನೆ ಕೈಯಲ್ಲಿ ಇರುತ್ತದೆ ಎನ್ನುವುದು ಇಲ್ಲಿ ದೊಸೆ ರುಚಿ ನೋಡಿದವರ ಮಾತು. ಇಲ್ಲಿ ಯಾವುದೇ ಕೃತಕ ಆಹಾರ ಸಾಮಗ್ರಿಗಳನ್ನು ಬಳಸುವುದಿಲ್ಲ, ಶುದ್ಧ ಬೆಣ್ಣೆಯಿಂದ ಮಾಡಿದ ತುಪ್ಪ ಹಾಗೂ ಮಸಾಲೆ ದೋಸೆಯ ಮೇಲೆ ಹಳ್ಳಿಯಿಂದ ತರಿಸಲಾದ ಅದೇ ಬೆಣ್ಣೆಯನ್ನು ಹಾಕಿದರೆ ಅದರ ಘಮ ನಾಲಿಗೆಗೆ ರುಚಿ ಹತ್ತದೆ ಇರದು.

ಜನ ಸಾಮಾನ್ಯರು, ಗಣ್ಯರ ಮೆಚ್ಚಿನ ವಿದ್ಯಾರ್ಥಿ ಭವನ
ಜನ ಸಾಮಾನ್ಯರು, ಗಣ್ಯರ ಮೆಚ್ಚಿನ ವಿದ್ಯಾರ್ಥಿ ಭವನ (PC: Vidyarthi Bhavan Facebook)

ಮಸಾಲೆ ದೋಸೆ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಮುಂದಿನ ಬಾರಿ ಹೋಟೆಲ್‌ಗೆ ಹೋದಾಗ ಬೇರೆ ಏನಾದರೂ ಟ್ರೈ ಮಾಡೋಣ ಎಂದುಕೊಳ್ಳುವವರು ಆ ಹೋಟೆಲ್‌ಗೆ ಹೋಗುತ್ತಿದ್ದಂತೆ ಥಟ್‌ ಅಂತ ಮತ್ತೆ ಮತ್ತೆ ಆರ್ಡರ್‌ ಮಾಡುವುದೇ ಮಸಾಲೆ ದೋಸೆಯನ್ನ. ಅದೇ ನಮ್ಮ ನಿಮ್ಮೆಲ್ಲರ ಮೆಚ್ಚಿನ ''ವಿದ್ಯಾರ್ಥಿ ಭವನ''.

ಬೆಂಗಳೂರಿಗರಿಗೆ ವಿದ್ಯಾರ್ಥಿ ಭವನ ಎಂದರೆ ಹೆಮ್ಮೆ. ಹಾಗೇ ಹೊರಗಡೆಯಿಂದ ಬೆಂಗಳೂರಿಗೆ ಬಂದವರು ಒಮ್ಮೆಯಾದರೂ ಈ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡದೆ ಇರುವುದಿಲ್ಲ. ಇಲ್ಲಿ ಹೋಗಿ ಆ ಜನಜಂಗುಳಿಯಲ್ಲಿ ಕಾದು ನಿಂತು ಒಂದು ಮಸಾಲೆ ದೋಸೆ, ಒಂದು ಕಪ್‌ ಕಾಫಿ ಕುಡಿಯದೇ ಬರುವುದಿಲ್ಲ. ವಿದ್ಯಾರ್ಥಿ ಭವನ ಇಂದು ನಿನ್ನೆ ಆರಂಭವಾದದ್ದಲ್ಲ. ಇದಕ್ಕೆ 80 ವರ್ಷಗಳ ಇತಿಹಾಸವಿದೆ. ಇದು ಶುರು ಆಗಿದ್ದು 1943ರಲ್ಲಿ. ವಿದ್ಯಾರ್ಥಿ ಭವನ ಹೋಟೆಲ್‌ ಶುರು ಮಾಡಿದ್ದು ಯಾರು? ಇಷ್ಟು ವರ್ಷಗಳು ಕಳೆದರೂ ಏಕೆ ಇದು ಇಷ್ಟು ಫೇಮಸ್‌? ಇನ್ನಿತರ ವಿಚಾರಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಅಂದು ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದಿದ್ದ ನಿತ್ಯೋತ್ಸವ ಕವಿ ಕೆಎಸ್‌ ನಿಸ್ದಾರ್‌ ಅಹಮದ್

ವೆಂಕಟರಾಮ ಉರಾಳರು ಸ್ಥಾಪಿಸಿದ ವಿದ್ಯಾರ್ಥಿ ಭವನ

ವಿದ್ಯಾರ್ಥಿ ಭವನವನ್ನು 1943ರಲ್ಲಿ ಉಡುಪಿಯ ವೆಂಕಟರಮಣ ಉರಾಲ್ ಎನ್ನುವವರು ಸ್ಥಾಪಿಸಿದರು. ಸಮೀಪದಲ್ಲಿದ್ದ ಶಾಲೆ, ಕಾಲೇಜಿನ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಹೋಟೆಲ್‌ ಆರಂಭಿಸಲಾಯ್ತು. ಆರಂಭದಲ್ಲಿ ಇಲ್ಲಿಗೆ ವಿದ್ಯಾರ್ಥಿಗಳೇ ತಿಂಡಿ ಸವಿಯಲು ಬರುತ್ತಿದ್ದರಿಂದ ಸ್ನೇಹಿತರೊಬ್ಬರ ಸಲಹೆ ಮೇರೆಗೆ ವೆಂಕಟರಮಣ ಉರಾಲ್, ಇದಕ್ಕೆ ವಿದ್ಯಾರ್ಥಿ ಭವನ ಎಂದು ಹೆಸರಿಟ್ಟರು. ಈ ಹೋಟೆಲ್‌ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿತು. ವೆಂಕಟರಮಣ ಉರಾಲ್ ಅವರ ನಂತರ ಅವರ ಸಹೋದರ ಪರಮೇಶ್ವರ ಉರಾಳ ವಿದ್ಯಾರ್ಥಿ ಭವನದ ಜವಾಬ್ದಾರಿ ವಹಿಸಿಕೊಂಡರು.

1970ರಲ್ಲಿ ಕುಂದಾಪುರದ ರಾಮಕೃಷ್ಣ ಅಡಿಗರಿಗೆ ವಿದ್ಯಾರ್ಥಿ ಭವನವನ್ನು ಮಾರಲಾಯ್ತು. ಕ್ರಮೇಣ ಅಡಿಗರಿಗೆ ಆರೋಗ್ಯ ಕೈ ಕೊಟ್ಟಿತು, ಜೊತೆಗೆ ಮಕ್ಕಳು ಕೂಡಾ ಒಳ್ಳೆ ಕೆಲಸದಲ್ಲಿ ಇದ್ದಿದ್ದರಿಂದ ವಿದ್ಯಾರ್ಥಿ ಭವನ ಹೋಟೆಲ್‌ ಮುಚ್ಚಿ ಅಲ್ಲೊಂದು ಕಮರ್ಷಿಯಲ್‌ ಕಾಂಪ್ಲೆಕ್ಸ್‌ ಕಟ್ಟಲು ನಿರ್ಧರಿಸಿದ್ದರು. ಆದರೆ ಇನ್ಫೋಸಿಸ್ ಸಂಸ್ಥೆ ನಾರಾಯಣಮೂರ್ತಿ ಅವರ ಸಲಹೆ ಮೇರೆಗೆ ಅಡಿಗರ ಪುತ್ರ ಅರುಣ್‌ ಅಡಿಗರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ತಂದೆಯೊಂದಿಗೆ ಈ ಹೋಟೆಲ್‌ ಮುಂದುವರೆಸಿಕೊಂಡು ಬಂದಿದ್ದಾರೆ. ಈಗ ಇದು ವಿದ್ಯಾರ್ಥಿಗಳು ಮಾತ್ರವಲ್ಲ ಜನ ಸಾಮಾನ್ಯರು, ಸೆಲೆಬ್ರಿಟಿಗಳ ಇಷ್ಟದ ಸ್ಥಳವಾಗಿದೆ.‌

ಡಾ. ರಾಜ್‌ಕುಮಾರ್‌ ದಂಪತಿ, ಶಿವಣ್ಣ ದಂಪತಿಯ ಫೇವರೆಟ್‌ ಸ್ಪಾಟ್

ವಿದ್ಯಾರ್ಥಿ ಭವನ ಏಕಿಷ್ಟು ಫೇಮಸ್‌?

ವಿದ್ಯಾರ್ಥಿ ಭವನದಲ್ಲಿ ದೋಸೆ ತಿಂದು ಕೈ ತೊಳೆದರೂ ಅದರ ಸುವಾಸನೆ ಕೈಯಲ್ಲಿ ಇರುತ್ತದೆ ಎನ್ನುವುದು ಇಲ್ಲಿ ದೊಸೆ ರುಚಿ ನೋಡಿದವರ ಮಾತು. ಇಲ್ಲಿ ಯಾವುದೇ ಕೃತಕ ಆಹಾರ ಸಾಮಗ್ರಿಗಳನ್ನು ಬಳಸುವುದಿಲ್ಲ, ಶುದ್ಧ ಬೆಣ್ಣೆಯಿಂದ ಮಾಡಿದ ತುಪ್ಪ ಹಾಗೂ ಮಸಾಲೆ ದೋಸೆಯ ಮೇಲೆ ಹಳ್ಳಿಯಿಂದ ತರಿಸಲಾದ ಅದೇ ಬೆಣ್ಣೆಯನ್ನು ಹಾಕಿದರೆ ಅದರ ಘಮ ನಾಲಿಗೆಗೆ ರುಚಿ ಹತ್ತದೆ ಇರದು. ಒಮ್ಮೆ ಇಲ್ಲಿ ಮಸಾಲೆ ದೋಸೆ ತಿಂದು ಕಾಫಿ ಕುಡಿದರೆ ಮತ್ತೆ ಮತ್ತೆ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚು. ಪ್ರತಿದಿನ ಏನಿಲ್ಲವೆಂದರೂ 1000 ಮಸಾಲೆ ದೋಸೆಗಳು, ವೀಕೆಂಡ್‌ಗಳಲ್ಲಿ ಅದರ ಎರಡರಷ್ಟು ಮಸಾಲೆ ದೋಸೆಗಳು ಖರ್ಚಾಗುತ್ತವೆ.

ಇಲ್ಲಿ ಮಸಾಲೆ ದೋಸೆ ಮಾತ್ರವಲ್ಲದೆ , ಇಡ್ಲಿ, ಖಾರಾ ಬಾತ್, ಕೇಸರಿ ಬಾತ್, ಪೂರಿ ಸಾಗು, ಕಾಫಿ ಹಾಗೂ ರವೆ ವಡೆ ಕೂಡಾ ಫೇಮಸ್.‌ ಆಗ ಆರಂಭವಾದ ಬಿಲ್ಡಿಂಗ್‌ ಈಗಲೂ ಇದೆ. ಹೋಟೆಲ್‌ ಚಿಕ್ಕದಾದರೂ ಇಲ್ಲಿ ಬರುವವರ ಸಂಖ್ಯೆ ಸಾವಿರಾರು. ಇಲ್ಲಿನ ಮಾಣಿಯೊಬ್ಬರು ಒಂದೇ ಸಮಯಕ್ಕೆ 14 ಪ್ಲೇಟ್‌ಗಳನ್ನು ತೆಗೆದುಕೊಂಡು ಹೋಗಿ ಜನರಿಗೆ ಸರ್ವ್‌ ಮಾಡುವ ವಿಡಿಯೋ ಇತ್ತೀಚೆಗೆ ವೈರಲ್‌ ಆಗಿತ್ತು. ಈ ವಿಡಿಯೋಗೆ ಖ್ಯಾತ ಉದ್ಯಮಿ ಆನಂದ ಮಹೀಂದ್ರಾ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದರು.‌

ಇತರ ತಿಂಡಿಗಳಿಗಿಂತ ಮಸಾಲೆ ದೊಸೆ, ಫಿಲ್ಟರ್‌ ಕಾಫಿ ಇಲ್ಲಿ ಬಹಳ ಫೇಮಸ್

ಸಾಹಿತಿ, ರಾಜಕೀಯ, ಸಿನಿಮಾ ಗಣ್ಯರಿಗೂ ಅಚ್ಚುಮೆಚ್ಚಿನ ತಾಣ

ವಿದ್ಯಾರ್ಥಿ ಭವನ ಕೇವಲ ಹೋಟೆಲ್‌ ಅಲ್ಲ, ಇದೊಂದು ಸಾಂಸ್ಕೃತಿಕ ತಾಣ, ಇದೊಂದು ಭಾವನಾತ್ಮಕ ಕಟ್ಟಡ. ಜನ ಸಾಮಾನ್ಯರು ಮಾತ್ರವಲ್ಲ, ಇಲ್ಲಿ ಸಾಹಿತಿಗಳು, ರಾಜಕೀಯ ನಾಯಕರು, ಸಿನಿಮಾ ಗಣ್ಯರು ಕೂಡಾ ತಿಂಡಿ ಸವಿದಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಈಗಲೂ ಇಲ್ಲಿ ಬಂದು ಮಸಾಲೆ ದೋಸೆ ತಿಂದು ಹೋಗುತ್ತಾರೆ. ಡಾ. ರಾಜ್‌ಕುಮಾರ್‌, ಜಿಪಿ ರಾಜರತ್ನಂ, ಕೆ.ಎಸ್‌. ನಿಸಾರ್‌ ಅಹಮದ್‌, ಎನ್‌ಎಸ್‌ ಲಕ್ಷ್ಮಿನಾರಾಯಣ ಭಟ್‌, ಎಚ್ಎಸ್‌ ವೆಂಕಟೇಶ ಮೂರ್ತಿ, ಕ್ರಿಕೆಟಿಗರಾದ ಜಿಆರ್ ವಿಶ್ವನಾಥ್‌, ಚಂದ್ರಶೇಖರ್‌, ಈಗಿನ ರಾಜಕೀಯ ನಾಯಕರಾದ ಬಿಎಸ್‌ ಯಡಿಯೂರಪ್ಪ, ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಎಲ್ಲರಿಗೂ ಇದು ಅಚ್ಚುಮೆಚ್ಚಿನ ತಾಣ. ಸಿಲಿಕಾನ್‌ ಸಿಟಿಯಲ್ಲಿ ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಿದ್ದರೂ, ನಾನಾ ರೀತಿಯ ತಿಂಡಿಗಳು ದೊರೆತರೂ ವಿದ್ಯಾರ್ಥಿ ಭವನದ ದೋಸೆ ರುಚಿ ಮುಂದೆ ಯಾವ ರುಚಿಯೂ ಇಲ್ಲ ಎನ್ನುವುದು ಇಲ್ಲಿ ರುಚಿ ನೋಡಿದವರ ಅಭಿಪ್ರಾಯ. ಇತ್ತೀಚೆಗೆ ಮಲ್ಲೇಶ್ವರಂನಲ್ಲಿ ಕೂಡಾ ವಿದ್ಯಾರ್ಥಿ ಭವನದ ಎರಡನೇ ಶಾಖೆ ಆರಂಭವಾಗಿದೆ. ವಿದೇಶಿಗರೂ ಇಲ್ಲಿ ಬಂದು ಮಸಾಲೆ ದೋಸೆ ಸವಿಯುತ್ತಾರೆ.‌

ಅನಂತ್‌ ನಾಗ್‌ ದಂಪತಿ, ರಮೇಶ್‌ ಅರವಿಂದ್‌ ದಂಪತಿ, ರಚಿತಾ ರಾಮ್

ಸಮಯ ಏನು?

ವಿದ್ಯಾರ್ಥಿ ಭವನದಲ್ಲಿ ಪ್ರತಿ ಸೋಮವಾರದಿಂದ ಗುರುವಾರದವರೆಗೂ ಬೆಳಗ್ಗೆ 6.30 ರಿಂದ 11.30 ವರೆಗೂ ತಿಂಡಿ ದೊರೆಯುತ್ತದೆ. ಮತ್ತೆ ಮಧ್ಯಾಹ್ನ 2 ರಿಂದ ರಾತ್ರಿ 8 ವರೆಗೂ ತಿಂಡಿ ಲಭ್ಯವಿದೆ. ಶುಕ್ರವಾರ ರಜಾದಿನ. ಮತ್ತೆ ಶನಿವಾರ ಹಾಗೂ ಭಾನುವಾರ ಬೆಳಗ್ಗೆ 6.30 ರಿಂದ 12 ವರೆಗ್ ಮಧ್ಯಾಹ್ನ 1.30 ರಿಂದ ರಾತ್ರಿ 8ವರೆಗೆ ವಿದ್ಯಾರ್ಥಿ ಭವನದಲ್ಲಿ ನಿಮಗಿಷ್ಟವಾದ ತಿಂಡಿಯನ್ನು ಸವಿಯಬಹುದು.

ಹೋಗುವುದು ಹೇಗೆ?

ವಿದ್ಯಾರ್ಥಿ ಭವನ, ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿದೆ. ಬೆಂಗಳೂರಿನ ದಕ್ಷಿಣ ಭಾಗದ ಕೇಂದ್ರದಲ್ಲಿ ಎಲ್ಲರ ಅಚ್ಚು ಮೆಚ್ಚಿನ ವಿದ್ಯಾರ್ಥಿ ಭವನ ಇದೆ. ಬೆಂಗಳೂರಿಗೆ ಬಂದವರು ಒಮ್ಮೆ ಇಲ್ಲಿಗೆ ಭೇಟಿ ನೀಡಿ.‌

-ರಕ್ಷಿತ

ಈ ಕಾಲಂ ಬಗ್ಗೆ ನಿಮ್ಮ ಅಭಿಪ್ರಾಯ, ಸಲಹೆಯನ್ನು ನಮಗೆ ತಿಳಿಸಿ

ಇ-ಮೇಲ್‌: ht.kannada@htdigital.in

ಇಂಥಹ ಮತ್ತಷ್ಟು ಅಂಕಣಗಳನ್ನು ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ