logo
ಕನ್ನಡ ಸುದ್ದಿ  /  ಕರ್ನಾಟಕ  /  ಅವಕಾಶ ಅರಸಿ ಬಂದ ನಂತ್ರ ವಿ ಮೇಡ್ ಬೆಂಗಳೂರು ಗ್ರೇಟ್ ಅಂತ ಯಾಕೆ ಹೇಳ್ತೀರಿ, ದೇವರ ಸ್ವಂತ ಊರು ಬಿಟ್ಟು ಇಲ್ಯಾಕೆ ಬಂದ್ರಿ: ನಟ ಪ್ರಕಾಶ್ ಬೆಳವಾಡಿ

ಅವಕಾಶ ಅರಸಿ ಬಂದ ನಂತ್ರ ವಿ ಮೇಡ್ ಬೆಂಗಳೂರು ಗ್ರೇಟ್ ಅಂತ ಯಾಕೆ ಹೇಳ್ತೀರಿ, ದೇವರ ಸ್ವಂತ ಊರು ಬಿಟ್ಟು ಇಲ್ಯಾಕೆ ಬಂದ್ರಿ: ನಟ ಪ್ರಕಾಶ್ ಬೆಳವಾಡಿ

Umesh Kumar S HT Kannada

Aug 29, 2024 05:37 PM IST

google News

ಹಿರಿಯ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ

  • Actor Prakash Belawadi; ಬೆಂಗಳೂರ ನಮ್ಮೂರು. ಅದರ ಬಗ್ಗೆ ಯಾರಾದ್ರೂ ಏನಾದ್ರೂ ಅಂದ್ರೆ, ಅವರಿಗೆ ನೋವಾಗುವ ರೀತಿ ನಾವೂ ಮಾತನಾಡ್ತೇವೆ. ಅವಕಾಶ ಅರಸಿ ಬಂದ ನಂತ್ರ ವಿ ಮೇಡ್ ಬೆಂಗಳೂರು ಗ್ರೇಟ್ ಅಂತ ಯಾಕೆ ಹೇಳ್ತೀರಿ, ದೇವರ ಸ್ವಂತ ಊರು ಬಿಟ್ಟು ಇಲ್ಯಾಕೆ ಬಂದ್ರಿ ಎಂದು ಪ್ರಶ್ನಿಸುವುದಾಗಿ ಹಿರಿಯ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಹೇಳಿದ್ದೀಗ ಚರ್ಚೆಗೆ ಗ್ರಾಸವಾಗಿದೆ

ಹಿರಿಯ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ
ಹಿರಿಯ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ದೇಶ ವಿದೇಶಗಳ ಜನರಿಗೆ ನೆಲೆ ಒದಗಿಸಿರುವ ತಾಣ. ನಾನಾ ಭಾಷೆ, ಸಂಸ್ಕೃತಿ, ಸೊಗಡು ಹೊಂದಿ ತನ್ನದೇ ಆದ ವೈಶಿಷ್ಟ್ಯವನ್ನು ಕಾಪಾಡಿಕೊಂಡುಬಂದಿದೆ. ಇಲ್ಲಿ ಸ್ಥಳೀಯರು ಮತ್ತು ಹೊರಗಿನಿಂದ ಬಂದವರು ಎಂಬ ಚರ್ಚೆ ಪದೇಪದೆ ಆಗುತ್ತಿರುತ್ತದೆ. ಈಗಲೂ ಅಷ್ಟೆ ಸೋಷಿಯಲ್ ಮೀಡಿಯಾ ಗಮನಿಸಿದರೆ ಇಂತಹ ಚರ್ಚೆ ಗಮನಿಸಬಹುದು.

ಜನಪ್ರಿಯ ನಟ, ನಿರ್ದೇಶ ಪ್ರಕಾಶ್ ಬೆಳವಾಡಿ ಅವರ ಮಾತು ಈಗ ಈ ಚರ್ಚೆಗೆ ಇನ್ನಷ್ಟು ಗ್ರಾಸವನ್ನು ಒದಗಿಸಿದೆ. ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತ ಪ್ರಕಾಶ್ ಬೆಳವಾಡಿ ಅವರು, “ ಉತ್ತರ ಭಾರತದಿಂದ ಬಂದವರು ಕೆಲವರು ವಿ ಮೇಡ್ ಬೆಂಗಳೂರು ಗ್ರೇಟ್ ಅಂತಿರ್ತಾರೆ. ಈ ರೀತಿ ಇತ್ತೀಚೆಗೊಬ್ಬ ಮಾತನಾಡಿದ್ದ. ಯಾಕಪ್ಪ ಬೆಂಗಳೂರಿಗೆ ಬಂದೆ ಅಂತ ಆತನಿಗೆ ಕೇಳಿದೆ. ಅದಕ್ಕಾತ, ಇಲ್ಲಿ ಬಹಳಷ್ಟು ಅವಕಾಶಗಳಿವೆ ಎಂದ. ಹಾಗಾದ್ರೆ ನೀನು ಬರೋದಕ್ಕೂ ಮೊದಲೇ ಬೆಂಗಳೂರು ಗ್ರೇಟ್ ಆಗಿತ್ತಲ್ವ. ನೀನೇನು ಮಾಡ್ದೆ ಮತ್ತೆ ಅಂತ ಕೇಳಿದ್ರೆ ಸುಮ್ನಾದ” ಎಂದು ಹೇಳಿದ್ದಾರೆ.

ಬೆಂಗಳೂರು ಬಗ್ಗೆ ಬೇಕಾಬಿಟ್ಟಿ ಮಾತನಾಡೋ ಮೊದಲು ಆಲೋಚಿಸಿ- ಪ್ರಕಾಶ್ ಬೆಳವಾಡಿ

ಬೆಂಗಳೂರಿಗರಲ್ಲದ ಜನ ಬೆಂಗಳೂರಿಗೆ ಬಂದು, ನಗರದ ಅಭಿವೃದ್ಧಿಗೆ ನಾವೇ ಕಾರಣ ಎಂದು ಹೇಗೆ ಹೇಳುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ. ವಾಸ್ತವವೆಂದರೆ ಅವರು ಇಲ್ಲಿಗೆ ಬರುವ ಮೊದಲೇ ಬೆಂಗಳೂರು ಮಹಾನಗರವಾಗಿತ್ತು. ಬೆಂಗಳೂರನ್ನು ಇಂದಿನ ಸ್ಥಿತಿಗೆ ನಾವೇ ತಂದಿದ್ದೇವೆ ಎಂಬ ಭ್ರಮಾಲೋಕದಲ್ಲಿ ಅವರು ಬದುಕುತ್ತಿದ್ದಾರೆ. ಅವರು ನಗರವನ್ನು ಬಿಟ್ಟು ಹೋಗಬಹುದು. ಬೆಂಗಳೂರು ಇನ್ನೂ ಅಭಿವೃದ್ಧಿ ಹೊಂದುತ್ತದೆ" ಎಂದು ಪ್ರಕಾಶ್ ಬೆಳವಾಡಿ ಮಾತುಕತೆಯಲ್ಲಿ ಹೇಳಿದ್ದಾರೆ.

ಬೆಂಗಳೂರಿನ ಅಭಿವೃದ್ಧಿಗೆ ನಾವೇ ಕಾರಣ ಎಂದು ಭಾವಿಸುವ ಉತ್ತರ ಭಾರತೀಯರು ನಗರವನ್ನು ತೊರೆಯಬೇಕು ಎಂದು ಪ್ರಕಾಶ್ ಬೆಳವಾಡಿ ಹೇಳಿದರು. “ಉತ್ತರ ಭಾರತೀಯರನ್ನು ಬೆಂಗಳೂರಿಗೆ ಏಕೆ ಬಂದಿದ್ದೀರಿ ಎಂದು ಕೇಳಿದಾಗ, ಅವರು ಉತ್ತಮ ಅವಕಾಶಗಳಿಗಾಗಿ ಇಲ್ಲಿಗೆ ಬಂದಿರುವುದಾಗಿ ಹೇಳುತ್ತಾರೆ. ಹಾಗಾದರೆ ಅವರಿಗೆ ಈ ಉತ್ತಮ ಅವಕಾಶಗಳನ್ನು ಕೊಟ್ಟವರು ಯಾರು? ಅನವಶ್ಯಕವಾಗಿ ವಿ ಮೇಡ್ ಬೆಂಗಳೂರು ಗ್ರೇಟ್‌ ಎಂದು ಹೇಳಿಕೊಳ್ಳುವ ಮೊದಲು ಈ ವಿಚಾರವಾಗಿ ಅವರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು" ಎಂದು ಬೆಳವಾಡಿ ಎಚ್ಚರಿಸಿದರು.

ನಮ್ಮೂರು ಅಂದಮೇಲೆ ಅದು ನಮ್ಮೂರೇ

ಬೆಂಗಳೂರು ನಮ್ಮೂರು. ಹಾಗಾಗಿ ಬೆಂಗಳೂರನ್ನು ಬಿಟ್ಟು ಹೋಗುವುದಿಲ್ಲ. ಈ ಮಹಾನಗರದಲ್ಲೇ ನೆಲೆಸುತ್ತೇನೆ ಎಂದು ಸ್ಪಷ್ಟಪಡಿಸಿದ ಪ್ರಕಾಶ್‌ ಬೆಳವಾಡಿ, "ನನ್ನ ಪ್ರದರ್ಶನಗಳಿಗಾಗಿ ನಾನು ಸಾಕಷ್ಟು ಪ್ರದೇಶಗಳಿಗೆ ಪ್ರಯಾಣಿಸುತ್ತೇನೆ. ಆಸ್ಟ್ರೇಲಿಯಾದಲ್ಲಿ ನಾನು ಹೆಚ್ಚು ಕಾಲ ಇದ್ದೆ. ಬೇರೆ ದೇಶದಲ್ಲಿ ನೆಲೆಸಲು ಬಯಸುತ್ತೀರಾ ಎಂದು ಅನೇಕ ಜನರು ನನ್ನನ್ನು ಕೇಳುತ್ತಾರೆ. ಬೇರೆ ದೇಶವನ್ನು ಮರೆತುಬಿಡಿ, ನಾನು ಬೆಂಗಳೂರು ಬಿಡುವುದಿಲ್ಲ. ನಾನು ಇಲ್ಲಿಯೇ ಬೆಳೆದಿದ್ದೇನೆ ಮತ್ತು ನಾನು ಈ ನಗರವನ್ನು ಬಿಡಲು ಸಾಧ್ಯವಿಲ್ಲ”ಎಂದು ಹೇಳಿದರು.

ಬೆಂಗಳೂರಿನಲ್ಲಿರುವ ಕೇರಳದವರ ಬಗ್ಗೆಯೂ ಪ್ರಕಾಶ್‌ ಬೆಳವಾಡಿ ಮಾತನಾಡಿದ್ದು, "ಬೆಂಗಳೂರಿನಲ್ಲಿ ನಾನು ಬಹಳಷ್ಟು ಮಲಯಾಳಿಗಳನ್ನು ನೋಡುತ್ತೇನೆ. ಅವರು ಕೇರಳವನ್ನು ‘ದೇವರ ಸ್ವಂತ ನಾಡು’ ಎಂದು ಕರೆಯುತ್ತಾರೆ. ಅವರು ‘ದೇವರ ಸ್ವಂತ ನಾಡು’ ಬಿಟ್ಟು ಬೆಂಗಳೂರಿಗೆ ಯಾಕೆ ಬಂದರು ಎಂಬ ಅನುಮಾನ ನನ್ನದು ಎಂದು ಹೇಳಿದ್ದಾರೆ.

ಬೆಳವಾಡಿಯವರ ಪ್ರದೇಶಾಭಿಮಾನದ ಕುರಿತಾದ ಕಾಮೆಂಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿವೆ. ಆದರೆ ಅನೇಕರು ನಟರ ಅಭಿಪ್ರಾಯಗಳನ್ನು ಮೆಚ್ಚಿದರೂ, ಕೆಲವರು ಅವರೊಂದಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರುವುದು ಕಂಡುಬಂದದಿದೆ.

ಸ್ಕಾಂಡಿಮ್ಯಾನ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಕಾಶ್ ಬೆಳವಾಡಿ ಅವರ ಪಾಡ್‌ಕಾಸ್ಟ್‌ ಲಿಂಕ್ ಇಲ್ಲಿದೆ

www.youtube.com/watch?v=m0lMe9ixGvg

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ