ಅಪ್ರಾಪ್ತ ವಯಸ್ಸಿನ ಮಗಳಿಂದ ಗೇರ್ ಸೈಕಲ್ ಕಳ್ಳತನ ಮಾಡಿಸ್ತಿದ್ದವ ಅಂದರ್; ಪಾಲಿಷ್ ನೆಪದಲ್ಲಿ 1.25 ಕೆಜಿ ಚಿನ್ನ ಎಗರಿಸಿದ್ದ ಭೂಪ
Oct 08, 2024 10:19 PM IST
ಅಪ್ರಾಪ್ತ ವಯಸ್ಸಿನ ಮಗಳಿಂದ ಗೇರ್ ಸೈಕಲ್ ಕಳ್ಳತನ ಮಾಡಿಸ್ತಿದ್ದವ ಅಂದರ್
- Bengaluru Police: ಅಪ್ರಾಪ್ತ ವಯಸ್ಸಿನ ಮಗಳ ಮೂಲಕ ಗೇರ್ ಸೈಕಲ್ ಕಳ್ಳತನ ಮಾಡಿಸುತ್ತಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಪಾಲಿಷ್ ಮಾಡಿಕೊಡುವ ನೆಪದಲ್ಲಿ 1.25 ಕೆಜಿ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. (ವರದಿ-ಎಚ್.ಮಾರುತಿ)
ಬೆಂಗಳೂರು: ನೀವು ಇಟಲಿ ಭಾಷೆಯ ಬೈಸಿಕಲ್ ಥೀವ್ಸ್ ಸಿನಿಮಾ ನೋಡಿರಬಹುದು. ದ್ವಿತೀಯ ಮಹಾಯುದ್ದ ನಡೆದ ನಂತರ ನಿರ್ಗತಿಕನೊಬ್ಬ ಹೊಟ್ಟೆಪಾಡಿಗಾಗಿ ತನ್ನ ಮಗನೊಂದಿಗೆ ಸೇರಿ ಸೈಕಲ್ಗಳನ್ನು ಕದ್ದು ಮಾರಾಟ ಮಾಡಿ ಬದುಕುವ ಈ ಸಿನಿಮಾವನ್ನು1948ರಲ್ಲಿ ವಿಟ್ಟೊರಿಯೊಡೆ ಸಿಕಾ ಎಂಬ ನಿರ್ದೇಶಕರು ನಿರ್ದೇಶನ ಮಾಡಿದ್ದರು. ಇದೀಗ ಅಂತಹುದೇ ಘಟನೆ ಬೆಂಗಳೂರಿನಲ್ಲಿಯೂ ನಡೆದಿದೆ. ಅಲ್ಲಿ ಅಪ್ಪ ಮಗ ಕದ್ದರೆ ಇಲ್ಲಿ ಮಲ ತಂದೆ ಮತ್ತು ಮಲ ಮಗಳು ಈ ಕೆಲಸ ಮಾಡುತ್ತಾರೆ! ಮಲ ತಂದೆಯೊಬ್ಬ ತನ್ನ ಮಲ ಮಗಳ ಮೂಲಕ ಗೇರ್ ಸೈಕಲ್ಗಳನ್ನು ಕದಿಯುತ್ತಿರುತ್ತಾನೆ.
ಮಲ ತಂದೆ ತನ್ನ ಮಲ ಮಗಳನ್ನು ಮುಂದೆ ಬಿಟ್ಟು ಆಕೆಯ ಮೂಲಕ ಸೈಕಲ್ಗಳನ್ನು ಕದ್ದುಕೊಂಡು ಬರುವಂತೆ ತಯಾರು ಮಾಡಿರುತ್ತಾನೆ. ಈ ರೀತಿ 40 ಗೇರ್ ಸೈಕಲ್ಗಳನ್ನು ಕದ್ದಿರುತ್ತಾರೆ. 41ನೇ ಸೈಕಲ್ ಕದಿಯುವ ವೇಳೆಗೆ ಪೊಲೀಸರು ಇವರನ್ನು ಬಂಧಿಸುತ್ತಾರೆ. ರಾಯಚೂರು ಮೂಲದ 24 ವರ್ಷದ ಮಹಮದ್ ಫಯಾಜುದ್ದೀನ್ ಎಂಬ ಕಾರ್ಮಿಕ ಬೇಗೂರು-ಕೊಪ್ಪ ರಸ್ತೆಯ ಹುಲ್ಲಹಳ್ಳಿ ಗೇಟ್ ಸಮೀಪ ವಾಸವಾಗಿರುತ್ತಾನೆ. ಈತ ತನ್ನ 15 ವರ್ಷದ ಅಪ್ರಾಪ್ತ ವಯಸ್ಸಿನ ಮಲ ಮಗಳನ್ನು ಸೈಕಲ್ ಗಳನ್ನು ಕದಿಯಲು ಮುಂದೆ ಬಿಡುತ್ತಾನೆ. ಬಡತನದ ಕಾರಣಕ್ಕಾಗಿ ಆಕೆಯ ಮೂಲಕ ಈ ಕೆಲಸ ಮಾಡುತ್ತಿರುತ್ತಾನೆ.
ಇವರು ಬಹುತೇಕ ಗೇರ್ ಸೈಕಲ್ಗಳನ್ನು ಮಾತ್ರ ಕದ್ದಿರುತ್ತಾರೆ. ಇವರಿಂದ 22 ಸೈಕಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಫಯಾಜುದ್ದೀನ್ ತನ್ನ ಮಲ ಮಗಳನ್ನು ತನ್ನ ಸ್ಕೂಟರ್ನಲ್ಲಿ ಕರದುಕೊಂಡು ಹೋಗುತ್ತಿದ್ದ. ಇಬ್ಬರೂ ಗೇರ್ ಸೈಕಲ್ಗಳನ್ನು ಎಲ್ಲಿ ನಿಲ್ಲಿಸಿರುತ್ತಾರೆ ಎಂದು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಬೀಗ ಹಾಕಿಲ್ಲದ ಸೈಕಲ್ ಕಾಣಿಸುತ್ತಿದ್ದಂತೆ ಫಯಾಜುದ್ದೀನ್ ತನ್ನ ಸ್ಕೂಟರ್ ಅನ್ನು ಸಮೀಪದಲ್ಲಿ ನಿಲ್ಲಿಸುತ್ತಿದ್ದ. ಆಗ ಆತನ ಪುತ್ರಿ ಕಣ್ಣು ಮಿಟುಕಿಸುವುದೊರಳಗೆ ಸೈಕಲ್ ಏರಿಕೊಂಡು ಪರಾರಿಯಾಗುತ್ತಿದ್ದಳು.
ನಂತರ ಈ ಗೇರ್ ಸೈಕಲ್ಗಳನ್ನು 8 ಸಾವಿರ ರೂ.ಗಳಿಗೆ ಮಾರಾಟ ಮಾಡುತ್ತಿದ್ದರು. ಫಯಾಜುದ್ದೀನ್ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿರುತ್ತಾನೆ. ಹಾಗಾಗಿ ಸೈಕಲ್ ಕಳ್ಳತನಕ್ಕೆ ಶಾಲೆ ಬಿಟ್ಟಿದ್ದ ಮಗಳನ್ನು ಪ್ರೆರೇಪಿಸುತ್ತಾನೆ. ಸಣ್ಣ ಮಕ್ಕಳು ಸೈಕಲ್ ಕದ್ದುಕೊಂಡು ಹೋಗುತ್ತಿದ್ದರೆ ಯಾರಿಗೂ ಅನುಮಾನ ಬರುವುದಿಲ್ಲ ಎನ್ನುವುದು ಈತನ ಆಲೋಚನೆ ಆಗಿರುತ್ತದೆ. ಒಂದು ವೇಳೆ ಸಿಕ್ಕಿ ಹಾಕಿಕೊಂಡರೆ ಅಪ್ರಾಪ್ತ ವಯಸ್ಸಿನವಳಾಗಿರುವುದರಿಂದ ಶಿಕ್ಷೆಯ ಪ್ರಮಾಣ ಕಡಿಮೆ ಎನ್ನವುದು ಈತನ ದುರಾಲೋಚನೆಯಾಗಿರುತ್ತದೆ. ಪೊಲೀಸರು ಫಯಾಜುದ್ದೀನ್ ನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಿದ್ದಾರೆ. ಬಾಲಕಿಯನ್ನು ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗಿದೆ. ಆಕೆಯನ್ನು ರಾಯಚೂರಿನಲ್ಲಿರುವ ತಾಯಿಯ ಬಳಿಗೆ ಕಳುಹಿಸಲಾಗಿದೆ.
ಪಾಲಿಷ್ ಮಾಡಿಕೊಡುವ ನೆಪದಲ್ಲಿ 1.25 ಕೆಜಿ ಚಿನ್ನಾಭರಣ ಕಳವು
ಹರಳುಗಳನ್ನು ಜೋಡಿಸಿ ಪಾಲಿಷ್ ಮಾಡಲು ತೆಗೆದುಕೊಂಡು ಹೋಗಿದ್ದ 1 ಕೆಜಿ 277 ಗ್ರಾಂ ಚಿನ್ನವನ್ನು ಹಿಂತಿರುಗಿಸದೆ ವಂಚಿಸಿ ರಾಜಸ್ತಾನಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹಲಸೂರು ಗೇಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ಪಾಲಿಷ್ ನೀಡಲು ನೀಡಿದ್ದ ಆಭರಣಗಳನ್ನು ಹಿಂತಿರುಗಿಸಿಲ್ಲ ಎಂದು ನಗರ್ತಪೇಟೆಯಲ್ಲಿ ಚಿನ್ನಾಭರಣ ಅಂಗಡಿ ಮಾಲೀಕ ದೂರು ನೀಡಿದ್ದರು. ದೂರುದಾರರಿಗೆ ಆರೋಪಿಯು ಮೊದಲಿನಿಂದಲೂ ಹರಳು ಜೋಡಿಸಿ ಪಾಲಿಷ್ ಮಾಡಿಕೊಡುತ್ತಿರುತ್ತಾನೆ. ಆದರೆ ಈ ಬಾರಿ ಆತ ಚಿನ್ನದ ಆಭರಣಗಳೊಂದಿಗೆ ಪರಾರಿಯಾಗಿದ್ದ.
ಆರೋಪಿಯ ಪೂರ್ವಾಪರಗಳನ್ನು ಕಲೆ ಹಾಕಿದಾಗ ಈತ ರಾಜಸ್ಥಾನದ ತನ್ನ ಊರಿನಲ್ಲಿ ನೆಲೆಸಿದ್ದ ಎನ್ನುವ ಮಾಹಿತಿ ಲಭ್ಯವಾಗಿರುತ್ತದೆ. ಪೊಲೀಸರು ಬಿಲ್ವಾರ ಜಿಲ್ಲೆ ಆಸಿಂದ ತಾಲೂಕಿನ ಕಲಿಯಾಸ್ ಗ್ರಾಮದಲ್ಲಿ ನೆಲೆಸಿದ್ದ ಈತನನ್ನು ಪೊಲೀಸರು ಬಂಧಿಸಿ ಕರೆ ತಂದಿದ್ದಾರೆ. ಆರೋಪಿಯು ಈಗಾಗಲೇ ಚಿನ್ನದ ಆಭರಣಗಳನ್ನು ಕರಗಿಸಿ ಗಟ್ಟಿ ಮಾಡಿ ಬೆಂಗಳೂರಿನಲ್ಲೇ ಮಾರಾಟ ಮಾಡಿರುತ್ತಾನೆ. ವಿವಿಧ ಚಿನ್ನಭರಣ ಅಂಗಡಿಗಳಿಂದ ಈತ ಮಾರಾಟ ಮಾಡಿದ್ದ ೨೮ ಲಕ್ಷ ರೂ ಬೆಲೆ ಬಾಳುವ 383 ಗ್ರಾಂ ಚಿನ್ನ ಮತ್ತು ಮನೆಯಲ್ಲಿಟ್ಟಿದ್ದ 10 ಲಕ್ಷ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.