ವಾಹನ ಸವಾರರೇ ಎಚ್ಚರ! ಬೆಂಗಳೂರು ರಸ್ತೆ ಗುಂಡಿಗಳು ಬಾಯ್ತೆರೆದುಕೊಂಡಿವೆ, ನೀರು ತುಂಬಿದ ರಸ್ತೆಯಲ್ಲಿ ಸಂಚರಿಸುವಾಗ ಹುಷಾರು, ಈ 5 ಅಂಶ ನೆನಪಿರಲಿ
Oct 23, 2024 03:24 PM IST
ಬೆಂಗಳೂರು ರಸ್ತೆ ಗುಂಡಿಗಳು ಬಾಯ್ತೆರೆದುಕೊಂಡಿವೆ, ನೀರು ತುಂಬಿದ ರಸ್ತೆಯಲ್ಲಿ ಸಂಚರಿಸುವಾಗ ಹುಷಾರು. (ವಿಡಿಯೋದಿಂದ ತೆಗೆದ ಚಿತ್ರ)
ಬೆಂಗಳೂರು ಮಳೆ ಹಲವರಿಗೆ ಖುಷಿ ಕೊಟ್ಟಿರಬಹುದು. ನೀರು ತುಂಬಿದ ರಸ್ತೆಗಳಲ್ಲಿ ಸಂಚರಿಸುವುದು ಥ್ರಿಲ್ ಕೊಟ್ಟಿರಬಹುದು. ಆದರೆ ವಾಹನ ಸವಾರರೇ ಎಚ್ಚರ! ಬೆಂಗಳೂರು ರಸ್ತೆ ಗುಂಡಿಗಳು ಬಾಯ್ತೆರೆದುಕೊಂಡಿವೆ, ನೀರು ತುಂಬಿದ ರಸ್ತೆಯಲ್ಲಿ ಸಂಚರಿಸುವಾಗ ಹುಷಾರು. ಇಲ್ಲಿರುವ ವೈರಲ್ ವಿಡಿಯೋ ನೋಡ್ತಾ ಈ 5 ಅಂಶ ನೆನಪಿನಲ್ಲಿ ಇಟ್ಟುಕೊಂಡಿರಿ.
ಬೆಂಗಳೂರು: ನಿರಂತರ ಮಳೆಗೆ ಬೆಂಗಳೂರಿಗರು ಹೈರಾಗಿರುವುದು ವಾಸ್ತವ. ನೀರು ತುಂಬಿದ ರಸ್ತೆಯಲ್ಲಿ ವಾಹನ ಚಾಲನೆಯೂ ಪ್ರಾಣ ಪಣಕ್ಕೆ ಇಟ್ಟು ಮಾಡುವ ದೊಡ್ಡ ಸಾಹಸ. ವಿಶೇಷವಾಗಿ ದ್ವಿಚಕ್ರ ಚಾಲನೆಯಂತೂ ಬಹಳ ಅಪಾಯಕಾರಿ. ಕಳೆದ ಒಂದು ವಾರದ ಅವಧಿಯಲ್ಲಿ ಎಲ್ಲರೂ ನೋಡುತ್ತಿರುವಂತೆಯೇ ರಸ್ತೆ ಗುಂಡಿ ಕಾರಣಕ್ಕೆ ಬಿದ್ದವರೆಷ್ಟೋ ಜನ. ಹೀಗೆ ಎಲ್ಲರೂ ಬಿದ್ದಾಗ ವಿಡಿಯೋ ರೆಕಾರ್ಡ್ ಆಗಿರಲ್ಲ. ಅಲ್ಲೊಬ್ಬರು, ಇಲ್ಲೊಬ್ಬರ ವಿಡಿಯೋ ಚಿತ್ರೀಕರಣಗೊಂಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿಬಿಡುತ್ತದೆ. ಸೋಷಿಯಲ್ ಮೀಡಿಯಾದಲ್ಲಿ “Bengaluru Pothole” ಅಂತ ಹುಡುಕಿದರೆ ಸಾಕು, ಹತ್ತಾರು ವಿಡಿಯೋಗಳು ಗಮನಸೆಳೆಯುತ್ತವೆ. ಅಂತಹ ವಿಡಿಯೋಗಳ ಪೈಕಿ ಇದೂ ಒಂದು. ಆಟೋ ರಿಕ್ಷಾದ ಒಳಗೆ ಕುಳಿತ ಪ್ರಯಾಣಿಕರೊಬ್ಬರು ಜಲಾವೃತವಾಗಿರುವ ರಸ್ತೆಯ ವಿಡಿಯೋ ಮಾಡುತ್ತಿದ್ದರು. ಅದೇ ದಾರಿಯಲ್ಲಿ ಬಂದ ದ್ವಿಚಕ್ರ ವಾಹನ ಬಿದ್ದ ದೃಶ್ಯವೂ ಅದರಲ್ಲಿ ಸೇರಿಕೊಂಡಿತು.
ಬೆಂಗಳೂರು ರಸ್ತೆ ಗುಂಡಿ; ನೋಡ್ತಾ ಇರುವಂತೆಯೇ ಬಿದ್ದ ದ್ವಿಚಕ್ರ ವಾಹನ ಸವಾರ- ವೈರಲ್ ವಿಡಿಯೋ
ನವೀನ್ ಅಗರ್‌ವಾಲ್ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ನಿನ್ನೆ (ಅಕ್ಟೋಬರ್ 22) ಶೇರ್ ಮಾಡಿಕೊಂಡ ವಿಡಿಯೋದಲ್ಲಿ ದ್ವಿಚಕ್ರ ವಾಹನ ಸವಾರ ರಸ್ತೆಗುಂಡಿ ಕಾರಣ ಬೀಳುವ ದೃಶ್ಯವಿದೆ. ಸವಾರ ತಮ್ಮ ಸ್ಕೂಟರ್‌ನಲ್ಲಿ ಹೋಗವಾಗ ಎರಡೂ ಕಾಲುಗಳನ್ನು ಮೇಲೆತ್ತಿಕೊಂಡು ನೀರು ತುಂಬಿಕೊಂಡಿರುವ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ರಸ್ತೆ ಕಾಣುತ್ತಿರಲಿಲ್ಲ. ರಸ್ತೆ ಗುಂಡಿ ಎಲ್ಲಿ ಕಾಣಬೇಕು. ಸ್ಕೂಟರ್ ಸಹಿತ ಸವಾರ ರಸ್ತೆ ಗುಂಡಿಗೆ ಬಿದ್ದ ದೃಶ್ಯ ಗೋಚರಿಸಿತು. ನೀವೂ ನೋಡಿ..
ಬೆಂಗಳೂರು ರಸ್ತೆ ಗುಂಡಿ ಸಮಸ್ಯೆ; ದೇವರೇ ಕಾಪಾಡು
ಎಎಪಿ ಬೆಂಗಳೂರು ತನ್ನ ಖಾತೆಯಲ್ಲಿ ನಿನ್ನೆ ಶೇರ್ ಮಾಡಿದ ಇನ್ನೊಂದು ವಿಡಿಯೋದಲ್ಲಿ ರಸ್ತೆ ಗುಂಡಿಗೆ ಬಿದ್ದ ಸ್ಕೂಟರ್ ಮತ್ತು ಸವಾರ ಇಬ್ಬರೂ ಎತ್ತರಕ್ಕೆ ಎಸೆಯಲ್ಪಟ್ಟು ರಸ್ತೆ ಬಿದ್ದ ದೃಶ್ಯವಿದೆ. ಎಎಪಿ ಈ ವಿಡಿಯೋ ಶೇರ್ ಮಾಡುವಾಗ, “ದೇವರೇ ಕಾಪಾಡು , ರಸ್ತೆ ಗುಂಡಿಗಳಿಂದ ಮತ್ತು ರಾಜಕಾರಣಿಗಳಿಂದ ನಮ್ಮ ನಾಗರೀಕರ ಜೀವವನ್ನು ರಕ್ಷಿಸು🙏” ಎಂಬ ಸ್ಟೇಟಸ್ ಅನ್ನೂ ಹಾಕಿದೆ.
ಅರೆ ಇದೇನಿದು ಟ್ರ್ಯಾಕ್ಟರ್ ಕಾಣಿಸುತ್ತಿದೆಯಲ್ಲ. ಇದೇನು ವಿಡಿಯೋ ಅಂತ ಮೊದಲ ನೋಟಕ್ಕೆ ಅನಿಸಬಹುದು. ಕೆಲವು ಸೆಕೆಂಡ್ ಮುಂದೆ ಸರಿದಂತೆ ಅಲ್ಲಿ, ಎರಡು ದ್ವಿಚಕ್ರಗಳು ಕಾಣಿಸುತ್ತವೆ. ಆ ಪೈಕಿ ಒಂಟಿಯಾಗಿ ಹೋಗುತ್ತಿದ್ದ ಸವಾರನಿದ್ದ ಸ್ಕೂಟರ್ ರಸ್ತೆ ಗುಂಡಿಗೆ ಬಿದ್ದು ಸ್ಕೂಟರ್ ಮತ್ತು ಸವಾರ ಇಬ್ಬರೂ ಮೇಲೆಗರಿ ಬೀಳುವ ದೃಶ್ಯ ಮೈ ನಡುಕ ಹುಟ್ಟಿಸುವಂತೆ ಇದೆ.
ಯಾವ ಧೈರ್ಯದಲ್ಲಿ ಸಂಚರಿಸ್ತಾರೋ ಕಾಣೆ
ಪೂರ್ವ ಬೆಂಗಳೂರಿನ ನಿವಾಸಿಗಳು ಶೇರ್ ಮಾಡಿರುವ ಈ ವಿಡಿಯೋದಲ್ಲಿ ದ್ವಿಚಕ್ರ ಸವಾರನೊಬ್ಬ ಹೆಲ್ಮೆಟ್ ಕೂಡ ಹಾಕದೆ ಕೇವಲ ಅಂದಾಜಿನ ಮೇಲೆ ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿರುವದ ದೃಶ್ಯವಿದೆ. ಯಾವ ಧೈರ್ಯದಲ್ಲಿ ಈ ರೀತಿ ಸ್ಕೂಟರ್ ಚಲಾಯಿಸಿಕೊಂಡು ಹೋಗ್ತಾರೋ ಗೊತ್ತಿಲ್ಲ ಎಂಬ ಕಾಮೆಂಟ್‌ಗಳು ಸೋಷಿಯಲ್ ಮೀಡಿಯಾದಲ್ಲಿದೆ.
ಅಂಗವೈಕಲ್ಯ ಹೊಂದಿರುವ ಮಹಿಳೆಯೊಬ್ಬರು ಸ್ಕೂಟಿಯಿಂದ ಬಿದ್ದ ದೃಶ್ಯದ ವಿಡಿಯೋ ವೈರಲ್
ಅಂಗವೈಕಲ್ಯ ಹೊಂದಿರುವ ಮಹಿಳೆಯೊಬ್ಬರು ಸ್ಕೂಟಿಯಲ್ಲಿ ಹೋಗುವಾಗ ರಸ್ತೆ ಗುಂಡಿಗೆ ಬಿದ್ದು ರಸ್ತೆಗೆ ಬಿದ್ದ ಸಂದರ್ಭದ ವಿಡಿಯೋ ರಾಜಕೀಯವಾಗಿ ಬಹಳ ಬಳಕೆಯಾಯಿತು. ಬಿಜೆಪಿ, ಜೆಡಿಎಸ್, ಎಎಪಿ ನಾಯಕರು ಈ ವಿಡಿಯೋವನ್ನು ಶೇರ್ ಮಾಡಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಜೆಡಿಎಸ್ ಶೇರ್ ಮಾಡಿದ ಆ ವಿಡಿಯೋ ಇಲ್ಲಿದೆ.
ದ್ವಿಚಕ್ರ ವಾಹನ ಸವಾರರೇ ಮುನ್ನೆಚ್ಚರಿಕೆ ಇರಲಿ
ಬೆಂಗಳೂರು ರಸ್ತೆ ಗುಂಡಿ ಸಮಸ್ಯೆ ಬಗ್ಗೆ ಎಲ್ಲರಿಗೂ ಗೊತ್ತಿರುವಂಥದ್ದೇ. ನಿಮ್ಮ ಜಾಗರೂಕತೆಯಲ್ಲಿ ನೀವಿರುವುದು ಒಳ್ಳೆಯದು. ಬಿದ್ದಾಗ ವಿಡಿಯೋ ಮಾಡುವವರು, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವವರು ಸಿಗುತ್ತಾರೆ. ಯಾರು ನೆರವಿನ ಹಸ್ತ ಚಾಚಿದರೂ ಬಿದ್ದವರು ತಾನೇ ನೋವು ಉಣ್ಣಬೇಕಾದ್ದು. ಹಾಗಾಗಿ ಬೆಂಗಳೂರು ರಸ್ತೆ ಗುಂಡಿಗಳ ನಡುವೆ ಸಂಚರಿಸುವಾಗ ಈ ಮುನ್ನೆಚ್ಚರಿಕೆ ಇರಲಿ
1) ನೀರು ತುಂಬಿದ ರಸ್ತೆಗಳಲ್ಲಿ ಸಂಚರಿಸಬೇಡಿ. ಸಾಧ್ಯವಾದಷ್ಟೂ ಅಂತಹ ಸಂದರ್ಭ ಬಾರದಂತೆ ನೋಡಿಕೊಳ್ಳಿ
2) ಅಕಸ್ಮಾತ್ ನೀರು ತುಂಬಿದ ರಸ್ತೆಯಲ್ಲಿ ಸಂಚರಿಸಬೇಕಾಗಿ ಬಂದರೆ ಸಾಧ್ಯವಾದಷ್ಟೂ ನಿಧಾನವಾಗಿ ಚಲಿಸಿ. ರಸ್ತೆ ಗುಂಡಿ ಆಳ ಅಗಲ ಏನೂ ಗೊತ್ತಿರಲ್ಲ ಅಲ್ವ ಅದಕ್ಕೆ ಇಂತಹ ಉಪಕ್ರಮ ಬೆಸ್ಟ್
3) ಸ್ಕೂಟರ್ ಸವಾರರು ಗಮನಿಸಿ- ಸವಾರಿ ಮಾಡುವಾಗ ಬೈಕ್‌ನಲ್ಲಿರುವಂತೆ ಸ್ಕೂಟರ್ ಮೇಲೆ ಸವಾರನಿಗೆ ಗ್ರಿಪ್ ಇರಲ್ಲ. ಸಣ್ಣ ರಸ್ತೆ ಗುಂಡಿ ಸಿಕ್ಕರೂ ಬೀಳುವುದು ಖಚಿತ. ಸ್ಕೂಟರ್ ಟೈರ್ ಕೂಡ ಸಣ್ಣದು ಎಂಬುದು ನೆನಪಿರಲಿ.
4) ಅಕ್ಕ ಪಕ್ಕ ಗುಂಡಿ ಇದ್ದು ನಡುವೆ ಸ್ಕೂಟರ್‌ನ ಚಕ್ರ ಹೋಗುವಷ್ಟು ದಾರಿ ಗ್ಯಾಪ್ ಇದೆ ಎಂದು ಅದರ ಮೇಲೆ ಹೋಗಬೇಡಿ. ಆ ಗುಂಡಿಗೆ ಇಳಿಸಿಯೇ ವಾಹನ ಮುನ್ನಡೆಸಿ. ಇಲ್ಲ ಹೋಗುತ್ತೆ ಎಂಬ ಭರವಸೆ ಮೇಲೆ ಹೋದಾಗ ಹಿಂದಿನ ಚಕ್ರ ಜಾರಿದರೆ ನೀವು ಅತ್ಯಂತ ಕಡಿಮೆ ವೇಗದಲ್ಲಿದ್ದರೂ ಬಿದ್ದು ಏಟು ಮಾಡಿಕೊಳ್ಳೋದು ಖಚಿತ. (ಇದು ಅನುಭವದ ಮಾತು)
5) ಇನ್ನು ಚಕ್ರಗಳು ನೀರಿನಲ್ಲಿರುವಾಗ ಬ್ರೇಕ್ ಹಿಡಿದರೆ ಗಾಡಿ ನಿಲ್ಲದು. ಬದಲಾಗಿ ಸ್ಕಿಡ್ ಆಗಿ ಪಲ್ಟಿಯಾಗುವ ಸಾಧ್ಯತೆ ಹೆಚ್ಚು. ಈ ವಿಷಯ ಬೈಕ್ ಮತ್ತು ಸ್ಕೂಟರ್, ದೊಡ್ಡ ವಾಹನಗಳಿಗೂ ಅನ್ವಯ.