ದೀಪಾವಳಿ ಗಡಿಬಿಡಿ; ಬೆಂಗಳೂರಿಗರಿಗೆ ಊರು ಸೇರುವ ತವಕ, ಸಂಚಾರ ದಟ್ಟಣೆಗೆ ಹೈರಾಣಾದ ಜನ; ಹೊಸೂರು ರಸ್ತೆ ಟ್ರಾಫಿಕ್ ವಿಡಿಯೋ ವೈರಲ್
Oct 31, 2024 08:07 AM IST
ದೀಪಾವಳಿ ಗಡಿಬಿಡಿ; ಬೆಂಗಳೂರಿಗರಿಗೆ ಊರು ಸೇರುವ ತವಕದ ಕಾರಣ ಬಸ್ ನಿಲ್ದಾಣಗಳ ಸಮೀಪ ಪ್ರಯಾಣಿಕ ದಟ್ಟಣೆ ಕಂಡುಬಂತು. ವಿವಿಧೆಡೆ ರಸ್ತೆಗಳಲ್ಲಿ ಸಂಚಾರ ದಟ್ಟಣೆಯೂ ಇದ್ದ ಕಾರಣ ಜನ ಹೈರಾಣಾದರು.
Bengaluru Traffic: ಬೆಂಗಳೂರಿಗರಿಗೆ ಊರಿಗೆ ಹೋಗುವ ತವಕದಿಂದ ದೀಪಾವಳಿ ರಶ್ ಉಂಟಾಗಿದ್ದು, ಬೃಹತ್ ಪ್ರಮಾಣದ ಸಂಚಾರ ದಟ್ಟಣೆ ಮತ್ತು ಪ್ರಯಾಣಿಕ ದಟ್ಟಣೆ ವಿವಿಧೆಡೆ ಕಂಡುಬಂತು. ಈ ಪೈಕಿ ಹೊಸೂರು ರಸ್ತೆ ಟ್ರಾಫಿಕ್‌ನ ವಿಡಿಯೋ ವೈರಲ್ ಆಗಿದ್ದು, ಒಟ್ಟಾರೆ ವಿದ್ಯಮಾನದ ವಿವರ ಇಲ್ಲಿದೆ.
ಬೆಂಗಳೂರು: ದೀಪಾವಳಿ ಹಬ್ಬ, ವಾರಾಂತ್ಯದ ರಜೆಯ ಸಂಭ್ರಮ, ಸಡಗರದೊಂದಿಗೆ ಬೆಂಗಳೂರು ಬಿಟ್ಟು ಊರಿಗೆ ಹೋಗುವ ತವಕ. ನಿನ್ನೆ (ಅಕ್ಟೋಬರ್ 30) ಸಂಜೆ ಬೆಂಗಳೂರು ಮಹಾನಗರದ ವಿವಿಧೆಡೆ ಸಂಚಾರ ದಟ್ಟಣೆ ಕಾಣಿಸಿಕೊಂಡಿತ್ತು. ಬೆಂಗಳೂರು ಟ್ರಾಫಿಕ್ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಬೆಂಗಳೂರು ಸಂಚಾರ ಪೊಲೀಸರು ಕೂಡ ಸಂಚಾರ ದಟ್ಟಣೆ ನಿವಾರಣೆಗೆ ಅಗತ್ಯ ಮುಂಜಾಗ್ರತೆ ತೆಗೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಎರಡು ದಿನ ಮುಂಚಿತವಾಗಿಯೆ ಮನವಿ ಮಾಡಲಾರಂಭಿಸಿದ್ದಾರೆ. ಆದರೂ, ಸಂಚಾರ ದಟ್ಟಣೆ ನಿರ್ವಹಣೆ ಸುಲಭವಲ್ಲ. ಹಲವೆಡೆ ಸಂಚಾರ ದಟ್ಟಣೆ, ಬಸ್ ನಿಲ್ದಾಣಗಳಲ್ಲಿ ಜನದಟ್ಟಣೆ ಕಂಡುಬಂತು. ಗುರುವಾರ (ಅಕ್ಟೋಬರ್ 31) ನರಕ ಚತುರ್ದಶಿ, ಶುಕ್ರವಾರ ಕನ್ನಡ ರಾಜ್ಯೋತ್ಸವ (ನವೆಂಬರ್1), ಶನಿವಾರ ಬಲಿಪಾಡ್ಯಮಿ (ನವೆಂಬರ್ 2) ಹಬ್ಬವಿದ್ದು, ಭಾನುವಾರ (ನವೆಂಬರ್ 3) ವಾರಾಂತ್ಯದ ರಜೆ. ಹೀಗಾಗಿ ಒಟ್ಟು ನಾಲ್ಕು ದಿನಗಳ ಸರ್ಕಾರಿ ರಜೆಯಿದೆ. ಹೀಗಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಅನ್ಯ ಜಿಲ್ಲೆಯ ಜನರು ಬುಧವಾರದಿಂದಲೇ ತಮ್ಮ ಊರುಗಳತ್ತ ಹೊರಟಿರುವುದು ಈ ಸಂಚಾರ ದಟ್ಟಣೆ, ಪ್ರಯಾಣಿಕ ದಟ್ಟಣೆಗೆ ಕಾರಣ.
ಮೆಜೆಸ್ಟಿಕ್, ಶಾಂತಿನಗರ, ಮೈಸೂರು ರಸ್ತೆ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕ ದಟ್ಟಣೆ
ಮೆಜೆಸ್ಟಿಕ್, ಶಾಂತಿನಗರ, ಮೈಸೂರು ರಸ್ತೆ ಬಸ್ ನಿಲ್ದಾಣ ಸೇರಿದಂತೆ ಪ್ರಯಾಣಿಕರ ಪಿಕಪ್ ಪಾಯಿಂಟ್‌ಗಳಲ್ಲಿ ಬುಧವಾರ (ಅಕ್ಟೋಬರ್ 30) ರಾತ್ರಿ ಜನರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿತ್ತು. ತಡ ರಾತ್ರಿ 1 ಗಂಟೆಯ ಬಳಿಕವೂ ಜನ ಬಸ್ ನಿಲ್ದಾಣಗಳಲ್ಲಿ ಬಸ್‌ಗಾಗಿ ಕಾದು ಕುಳಿತಿದ್ದರು. ಹೆಚ್ಚಿನ ಪ್ರಮಾಣದಲ್ಲಿ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು, ಖಾಸಗಿ ವಾಹನಗಳು ನಗರದಿಂದ ಹೊರಟ ಕಾರಣದಿಂದಾಗಿ ಬೆಂಗಳೂರಿನ ಹೊರಭಾಗದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಪ್ರಯಾಣಿಕರ ಒತ್ತಡ ಹೆಚ್ಚಲಿದೆ ಎಂದು ಮೊದಲೇ ತಿಳಿದಿದ ಕೆಎಸ್‌ಆರ್‌ಟಿಸಿ ಅಕ್ಟೋಬರ್ 29 ರಿಂದಲೇ ಹೆಚ್ಚುವರಿಯಾಗಿ ಎರಡು ಸಾವಿರ ಬಸ್‌ಗಳನ್ನು ಕಾರ್ಯಾಚರಣೆ ಶುರುಮಾಡಿದೆ. ಬುಧವಾರ ರಾತ್ರಿಯೂ ಹೆಚ್ಚುವರಿ ಬಸ್‌ಗಳ ಮೂಲಕ ಸೇವೆಯನ್ನು ಕೆಎಸ್‌ಆರ್‌ಟಿಸಿ ನೀಡಿತ್ತು. ನಿರೀಕ್ಷೆಯಂತೆ ಪ್ರಯಾಣಿಕ ದಟ್ಟಣೆ ಕಂಡುಬಂತು.
ಹೊಸೂರು ರಸ್ತೆಯಲ್ಲಿ 2 ಗಂಟೆಗೂ ಹೆಚ್ಚು ಟ್ರಾಫಿಕ್ ಜಾಮ್; 360 ಡಿಗ್ರಿ ವಿಡಿಯೋ ವೈರಲ್
ಬೆಂಗಳೂರು ಹೊರಭಾಗದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಅನುಭವಕ್ಕೆ ಬಂದಿರುವುದಾಗಿ ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ, ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಎರಡನೆ ಹಂತದ ಸರ್ವೀಸ್ ರಸ್ತೆ ಬಳಿಯ ಹೊಸೂರು ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ನೈಸ್ ರಸ್ತೆ ನಿರ್ಗಮನದ ಸಮೀಪ ಇರುವ ಸರ್ವೀಸ್ ರಸ್ತೆಯಲ್ಲಿ ತಾಗಿಕೊಂಡಂತೆ ಸಾಗುತ್ತಿದ್ದ ದೃಶ್ಯ ಗಮನಸೆಳೆಯಿತು. ಇದಕ್ಕೆ ಸಂಬಂಧಿಸಿದ 360 ಡಿಗ್ರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗಿದ್ದು, ವೈರಲ್ ಅಗಿದೆ. ನಿನ್ನೆ (ಅಕ್ಟೋಬರ್ 30) ರಾತ್ರಿ 7.30ರ ದೃಶ್ಯ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ನಮ್ಮ ಬೆಂಗಳೂರೂ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿರುವ ವಿಡಿಯೋ ನೀವೂ ನೋಡಬಹುದು.
ಬೆಂಗಳೂರು ಹೊಸೂರು ರಸ್ತೆಯ ಈ ಸಂಚಾರ ದಟ್ಟಣೆಗೆ ಮಳೆಯೂ ಒಂದು ಕಾರಣ. ಬುಧವಾರ (ಅಕ್ಟೋಬರ್ 30) ಹಠಾತ್ತನೆ ಸುರಿದ ಗುಡುಗು ಸಹಿತ ಭಾರಿ ಮಳೆಗೆ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ಸವಾರರು ಗಂಟೆಗಟ್ಟಲೆ ನಿಧಾನಗತಿಯ ವಾಹನ ಚಲನೆಯಿಂದ ಹೈರಾಣಾಗಿ ಅಸಮಾಧಾನಗೊಂಡರು. ಅತ್ತಿಬೆಲೆಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಸಂಚಾರ ದಟ್ಟಣೆ ಉಂಟಾಗಿತ್ತು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿರಜಾ ದಿನದ ಪ್ರಯುಕ್ತ ಜನರು ತಮ್ಮ ಊರುಗಳತ್ತ ಏಕಕಾಲದಲ್ಲಿ ಪ್ರಯಾಣ ಬೆಳೆಸಿದ್ದು ಒಂದೆಡೆ, ಇನ್ನೊಂದೆಡೆ ಮಳೆಯಿಂದಾಗಿ ರಸ್ತೆಯಲ್ಲಿ ಸಮಸ್ಯೆ ಆದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿತ್ತು.