ಬೆಂಗಳೂರು: ಕಾಲೇಜು ಕ್ರಿಕೆಟ್ ಟೀಂಗೆ ಆಯ್ಕೆಯಾಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ; ಇತರೆ ಅಪರಾಧ ಸುದ್ದಿ
Nov 19, 2024 08:21 AM IST
ಬೆಂಗಳೂರು: ಕಾಲೇಜು ಕ್ರಿಕೆಟ್ ಟೀಂಗೆ ಆಯ್ಕೆಯಾಗಲಿಲ್ಲ ಎಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಕಳವಳಕಾರಿ ಘಟನೆ ವರದಿಯಾಗಿದೆ. ಅಪರಾಧ ಸುದ್ದಿಗೆ ಸಾಂಕೇತಿಕವಾಗಿ ಈ ಚಿತ್ರ ಬಳಸಲಾಗಿದೆ.
ಕಾಲೇಜು ಕ್ರಿಕೆಟ್ ಟೀಂಗೆ ಆಯ್ಕೆಯಾಗಲಿಲ್ಲ ಎಂದು ಪಿಯು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಕಳವಳಕಾರಿ ಘಟನೆ ಬೆಂಗಳೂರಿನಿಂದ ವರದಿಯಾಗಿದೆ. ಡ್ರಗ್ಸ್ ಸಾಗಾಣೆ ಮಾಡುತ್ತಿದ್ದೀರಿ ಎಂದು ಬೆದರಿಸಿ ಯುವತಿಯಿಂದ 40 ಲಕ್ಷ ರೂ. ಸುಲಿಗೆ ಮಾಡಿದ ಖತರ್‌ನಾಕ್ ಆರೋಪಿ ವಿರುದ್ಧ ದೂರು ದಾಖಲಾಗಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಕಾಲೇಜು ಕ್ರಿಕೆಟ್ ತಂಡಕ್ಕೆ ಅಯ್ಕೆಯಾಗಲಿಲ್ಲ ಎಂದು ಮನನೊಂದು 16 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗೆದ್ದಲಹಳ್ಳಿಯಲ್ಲಿ ವಾಸವಾಗಿರುವ ಐಟಿ ಉದ್ಯೋಗಿಯೊಬ್ಬರ ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಇವರು ಮಂತ್ರಿ ಸ್ಪ್ಲೆಂಡರ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. ಈತ ಸೋಮವಾರ ಮುಂಜಾನೆ ಪೋಷಕರು ನಿದ್ರೆಯಲ್ಲಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಬೆಂಗಳೂರು ಇಂಟರ್‌ನ್ಯಾಶನಲ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ. ಈತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಇದರಿಂದ ಬೇಸತ್ತಿದ್ದ. ಕಾಲೇಜನ್ನು ಬದಲಾಯಿಸುವಂತೆ ಪೋಷಕರ ಮೇಲೆ ಒತ್ತಡ ಹೇರಿದ್ದ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಇದು ಅಸಾಧ್ಯ ಎಂದು ಪೋಷಕರು ನಿರಾಕರಿಸಿದ್ದರು. ಇದೇ ವಿಷಯಕ್ಕೆ ಮನೆಯಲ್ಲಿ ಜಗಳವಾಡಿಕೊಂಡು ಮನೆಯಿಂದ ಹೊರಗೆ ಹೋಗಿದ್ದ. ಪೋಷಕರು ಸಂಪರ್ಕಿಸಿದಾಗ ಸಂಜೆ ಮನೆಗೆ ಹಿಂತಿರುಗುವಂತೆ ಹೇಳಿದ್ದ. ಸ್ನೇಹಿತನ ಮನೆಯಲ್ಲಿರಬಹುದು ಎಂದು ಭಾವಿಸಿದ ಪೋಷಕರು ನಿದ್ರೆ ಮಾಡುತ್ತಿದ್ದರು. ಈತ ಬಹುಶಃ ಬೆಳಗಿನ ಜಾವ 1.30 ರಿಂದ 5 ಗಂಟೆಯೊಳಗೆ ಹಿಂತಿರುಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮನೆಯಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಕಂಡು ಬಂದಿಲ್ಲ. ಪೊಲೀಸರು ಅಸ್ವಾಭಾವಿಕ ಪ್ರಕರಣ ದಾಖಲಿಸಕೊಂಡು ತನಿಖೆ ನಡೆಸುತ್ತಿದ್ದಾರೆ.
ಅನುಮಾನಾಸ್ಪದವಾಗಿ ಗೃಹಿಣಿ ಸಾವು
ಗೃಹಿಣಿಯೊಬ್ಬರು ಅನುಮಾನಾಸ್ಪಾದವಾಗಿ ಮೃಪಟ್ಟಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಂಧ್ರಪ್ರದೇಶ ಮೂಲದ 36 ವರ್ಷದ ದೀಪಾ ಮೃತಪಟ್ಟ ಗೃಹಿಣಿ. ಈಕೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪತಿ ಸುರೇಶ್ ಅವರೊಂದಿಗೆ ವಾಸಿಸುತ್ತಿದ್ದರು. ಇವರ ಪತಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದರು. ವಿವಿಧ ಕಾರಣಗಳಿಗಾಗಿ ಸುರೇಶ್ ಬ್ಯಾಂಕ್ ಹಾಗೂ ವ್ಯಕ್ತಿಗಳಿಂದ ಭಾರಿ ಮೊತ್ತದ ಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಆರ್ಥಿಕ ಸಮಸ್ಯೆಯಿಂದ ಇವರಿಗೆ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಇದೇ ವಿಚಾರಕ್ಕೆ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಸೋಮವಾರ ಮಧ್ಯಾಹ್ನವೂ ದಂಪತಿ ಮಧ್ಯೆ ಜೋರು ಗಲಾಟೆ ನಡೆದಿತ್ತು. ನಂತರ ಕೆಲವೇ ಕ್ಷಣಗಳಲ್ಲಿ ಗೃಹಿಣಿ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎನ್ನುವುದು ಕಂಡು ಬಂದಿದೆ. ತನಿಖೆ ಬಳಿಕ ಗೃಹಿಣಿಯ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.
ಡ್ರಗ್ಸ್ ಸಾಗಾಣೆ, ಯುವತಿಯಿಂದ 40 ಲಕ್ಷ ರೂ. ಸುಲಿಗೆ ಮಾಡಿದ ಖತರ್ ನಾಕ್ ಆರೋಪಿ
ವಿದೇಶಕ್ಕೆ ಮಾದಕ ವಸ್ತುಗಳನ್ನು ಕಳ್ಳ ಸಾಗಾಣೆ ಮಾಡುತ್ತಿರುವುದಕ್ಕೆ ಸಂಬಂಧಪಟ್ಟ ಪ್ರಕರಣದಲ್ಲಿ ಭಾಗಿಯಾದ ಆರೋಪ ಇದೆ ಎಂದು ಟೆಕ್ಕಿಯೊಬ್ಬರನ್ನು ಬೆದರಿಸಿ ವಂಚಕರು 40.18 ಲಕ್ಷ ರೂ ಸುಲಿಗೆ ಮಾಡಿದ್ದಾರೆ. ಈ ಸಂಬಂಧ ಪಶ್ಚಿಮ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ರಾಜರಾಜೇಶ್ವರಿ ನಗರದ ನಿವಾಸಿ ಪ್ರಕೃತಿ ದೂರು ನೀಡಿದ್ದಾರೆ. ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನವೆಂಬರ್ 7ರಂದು ವಂಚಕ ಡಿಎಚ್‌ಎಲ್ ಕೊರಿಯರ್ ಕಂಪನಿಯೊಂದರ ಪ್ರತಿನಿಧಿ ಎಂದು ಪರಿಚಯ ಮಾಡಿಕೊಂಡು ದೂರುದಾರ ಯುವತಿಗೆ ಕರೆ ಮಾಡಿದ್ದ. ನಿಮ್ಮ ಹೆಸರಿನಲ್ಲಿ ಮುಂಬೈನಿಂದ ಇರಾನ್‌ಗೆ ಕಳುಹಿಸಿರುವ ಪಾರ್ಸೆಲ್‌ನಲ್ಲಿ ಎಂಡಿಎಂಎ ಸೇರಿದಂತೆ ಡ್ರಗ್ಸ್ ಇದೆ. ನಿಮ್ಮ ವೈಯಕ್ತಿಕ ದಾಖಲಾತಿಗಳು ಮತ್ತು ಮೊಬೈಲ್ ನಂಬರ್ ಕೊರಿಯರ್‌ಗೆ ಲಿಂಕ್ ಆಗಿದೆ ಎಂದು ಹೆದರಿಸಿದ್ದ. ಅಲ್ಲದೇ ಕಸ್ಟಮ್ಸ್ ಅಧಿಕಾರಿಗಳಿಗೆ ಕರೆ ವರ್ಗಾವಣೆ ಮಾಡುತ್ತೇನೆ ಎಂದೂ ಬೆದರಿಕೆ ಒಡ್ಡಿದ್ದ. ಪ್ರಕರಣದ ತನಿಖೆ ನಡೆಸಿ, ಆರೋಪದಿಂದ ಮುಕ್ತಗೊಳಿಸುತ್ತೇನೆಂದು ಭರವಸೆ ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
'ನಂತರ, ದೂರುದಾರರ ವೈಯಕ್ತಿಕ ದಾಖಲೆಗಳು,ಕುಟುಂಬದ ಸದಸ್ಯರ ವಿವರ, ಬ್ಯಾಂಕ್ ಖಾತೆಯ ವಿವರ ಸಂಗ್ರಹಿಸಿದ್ದ. ಆರೋಪಿಗಳ ಮಾತನ್ನು ನಿಜ ಎಂದು ನಂಬಿದ ಯುವತಿ ತನ್ನ ಮೂರು ವಿವಿಧ ಬ್ಯಾಂಕ್ ಖಾತೆಗಳಿಂದ 40.18 ಲಕ್ಷ ರೂ ವರ್ಗಾವಣೆ ಮಾಡಿದ್ದಾರೆ. ನಂತರ ಇದೊಂದು ವಂಚನೆ ಎಂದು ಅರಿವಿಗೆ ಬಂದ ನಂತರ ಟೆಕ್ಕಿ ದೂರು ದಾಖಲಿಸಿದ್ದಾರೆ.
(ವರದಿ- ಎಚ್.ಮಾರುತಿ, ಬೆಂಗಳೂರು)