logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru History: ಶತಮಾನಗಳ ಹಿಂದೆ ಬೆಂಗಳೂರು ಮಾರಾಟವಾಗಿತ್ತಂತೆ; ಮಾರಾಟ ಮಾಡಿದವರು ಮತ್ತು ಕೊಂಡವರ ಬಗ್ಗೆ ಇಲ್ಲಿದೆ ಕುತೂಹಲಕರ ಮಾಹಿತಿ

Bengaluru History: ಶತಮಾನಗಳ ಹಿಂದೆ ಬೆಂಗಳೂರು ಮಾರಾಟವಾಗಿತ್ತಂತೆ; ಮಾರಾಟ ಮಾಡಿದವರು ಮತ್ತು ಕೊಂಡವರ ಬಗ್ಗೆ ಇಲ್ಲಿದೆ ಕುತೂಹಲಕರ ಮಾಹಿತಿ

HT Kannada Desk HT Kannada

Jul 11, 2023 08:15 AM IST

google News

ಸಾಂದರ್ಭಿಕ ಚಿತ್ರ

    • ಶತಮಾನಗಳ ಹಿಂದೆ ಬೆಂಗಳೂರು ಮಾರಾಟವಾಗಿತ್ತು ಗೊತ್ತಾ? ಹಾಗಾದರೆ ಮಾರಾಟ ಮಾಡಿದವರು ಯಾರು? ಕೊಂಡವರು ಯಾರು? ಇವರ ಒಡೆತನದಿಂದ ಬೆಂಗಳೂರಿನ ಚರಿತ್ರೆಯೇ ಬದಲಾಯಿತು. ತಿಳಿಯಬೇಕೇ? ಹಾಗಾದರೆ ಇಲ್ಲಿದೆ ಓದಿ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನಾವೆಲ್ಲಾ ಅಷ್ಟಿಷ್ಟು ಇತಿಹಾಸ ಓದಿಕೊಂಡು ಬೆಳೆದವರು. ಆಳಕ್ಕಿಳಿದು ಅಧ್ಯಯನ ನಡೆಸಿದವರಲ್ಲ. ಕುತೂಹಲಕ್ಕಾಗಿ ಇತಿಹಾಸದ ಪುಟಗಳನ್ನು ಹೊಕ್ಕಿ ನೀಡಿದಾಗ ಏನೆಲ್ಲಾ ಘಟನೆಗಳು ಸಂಭವಿಸಿವೆ ಎಂದು ಅಚ್ಚರಿಯಾಗದೆ ಇರದು. ಹಾಗೆ ಕುತೂಹಲ ಮೂಡಿಸಿದ ಚರಿತ್ರೆಯ ಪುಟಗಳಲ್ಲಿ ದಾಖಲಾದ ಸಂಗತಿ ಬೆಂಗಳೂರು ಮಾರಾಟವಾದ ಇತಿಹಾಸ! ನೀವು ನಂಬಲೇಬೇಕು. ನಿಜ! ಆರು ಶತಮಾನಗಳ ಹಿಂದೆ ಬೆಂಗಳೂರು ಮಾರಾಟವಾಗಿತ್ತು. ಹಾಗಾದರೆ ಮಾರಾಟ ಮಾಡಿದವರು ಯಾರು? ಕೊಂಡವರು ಯಾರು?

ಬೆಂಗಳೂರು ನಿರ್ಮಾತೃ ಕೆಂಪೇಗೌಡರ(1516-1591) ನಂತರ ಆತನ ಪುತ್ರ ಇಮ್ಮಡಿ ಕೆಂಪೇಗೌಡ(1591-1658)ಬೆಂಗಳೂರಿನ ರಾಜ್ಯಭಾರ ನಡೆಸುತ್ತಿರುತ್ತಾನೆ. ಬೆಂಗಳೂರಿನ ಸುತ್ತ ಮುತ್ತಲಿನ ಪ್ರದೇಶಗಳಾದ ಬೇಗೂರು, ಚನ್ನಪಟ್ಟಣ, ಸೋಲೂರು ಸೇರಿದಂತೆ 20ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಪಾಳೆಯಗಾರರು ಆಳ್ವಿಕೆ ನಡೆಸುತ್ತಿರುತ್ತಾರೆ. ಆದರೆ ಪರಸ್ಪರ ವಿಶ್ವಾಸ ಇರುವುದಿಲ್ಲ. ಬದಲಾಗಿ ದ್ವೇಷ ಅಸೂಯೆ ತುಂಬಿರುತ್ತದೆ. ಇವರಲ್ಲಿ ಒಬ್ಬ ಬಸವಾಪಟ್ಟಣದ ಪಾಳೆಯಗಾರ ಕೆಂಗ ಹನುಮಪ್ಪ ನಾಯಕ ಬಿಜಾಪುರದ ಸುಲ್ತಾನ ಆದಿಲ್ ಷಾ ಮೊರೆ ಹೋಗುತ್ತಾನೆ. ಕೆಂಗನಿಗೆ ನಾಗಮಂಗಲ, ಬೇಗೂರು ಮೊದಲಾದ ಪ್ರದೇಶಗಳ ಪಾಳೆಯಗಾರರು ಕೈ ಜೋಡಿಸುತ್ತಾರೆ.

ಅನಾಯಾಸವಾಗಿ ಸಿಕ್ಕ ಅವಕಾಶವನ್ನು ಆದಿಲ್ ಷಾ ಬಿಟ್ಟಾನೆಯೇ? ತುಂಬಾ ವರ್ಷಗಳಿಂದ ಆತನೂ ಬೆಂಗಳೂರಿನ ಮೇಲೆ ಕಣ ್ಣಟ್ಟಿರುತ್ತಾನೆ. ಬೆಂಗಳೂರನ್ನು ವಶಪಡಿಸಿಕೊಳ್ಳಲು ಸೇನಾಧಿಪತಿ ರಣದುಲ್ಲಾ ಖಾನ್ ಮತ್ತು ಈತನÀ ಸಹಾಯಕ್ಕೆ ಷಾಹಜಿ ಎಂಬಾತನನ್ನು ನೇಮಿಸುತ್ತಾನೆ. ಷಾಹಜಿ ಶಿವಾಜಿಯ ತಂದೆ. ಸುಲ್ತಾನನಿಗೆ ಹರಪನಹಳ್ಳಿ, ಕನಕಗಿರಿ ಉಜ್ಜನಿ, ರಾಯದುರ್ಗ ಮೊದಲಾದ ಪ್ರಾಂತಗಳ ಪಾಳೆಯಗಾರರು ಸಹಾಯಕ್ಕೆ ಧಾವಿಸುತ್ತಾರೆ. ಸೈನ್ಯದ ಬಲ ಹೆಚ್ಚುತ್ತದೆ. ಎಷ್ಟೇ ಪರಾಕ್ರಮಿಯಾದರೂ ಇಮ್ಮಡಿ ಕೆಂಪೇಗೌಡ ಸೋಲನ್ನಪ್ಪುವ ಪರಿಸ್ಥಿತಿ ಎದುರಾಗುತ್ತದೆ. ಆಗ ರಣದುಲ್ಲಾ ಖಾನ್ ಜತೆಯಲ್ಲಿ ಒಪ್ಪಂದ ಮಾಡಿಕೊಳ್ಳುತ್ತಾನೆ. ಒಪ್ಪಂದದಂತೆ ಬೆಂಗಳೂರು ಬಿಟ್ಟುಕೊಡಬೆಕಾದ ಪರಿಸ್ಥಿತಿ ಎದುರಾಗುತ್ತದೆ. ಬದಲಾಗಿ ಮಾಗಡಿಯನ್ನು ಕೆಂಪೇಗೌಡನಿಗೆ ಜಹಗೀರಾಗಿ ಕೊಡಲಾಗುತ್ತದೆ. ಸುಲ್ತಾನನನ ಆದೇಶದಂತೆ ಬೆಂಗಳೂರಿನಲ್ಲಿ ಷಾಹಜಿ ಆಳ್ವಿಕೆ ನಡೆಸುತ್ತಾನೆ. ಷಾಹಜಿ ನಂತರ ಆತನ ಮಗ ವೆಂಕೋಜಿ ಅಥವಾ ಏಕೋಜಿ ರಾಜ್ಯಭಾರ ಮಾಡುತ್ತಾನೆ. ಈತನ ಸಹೋದರ ಶಿವಾಜಿ ಪುಣೆಯಲ್ಲಿ ಆಳ್ವಿಕೆ ಮಾಡುತ್ತಿರುತ್ತಾನೆ. ಇಬ್ಬರ ನಡುವೆ ಆಸ್ತಿ ಹಂಚಿಕೆ ಕುರಿತು ಮನಸ್ತಾಪವಿರುತ್ತದೆ.

ಕಾಲಕ್ರಮೇಣ ತಂಜಾವೂರಿನ ರಾಜ ಮರಣವನ್ನಪ್ಪುತ್ತಾನೆ. ಬಿಜಾಪುರ ಸುಲ್ತಾನ ವೆಂಕೋಜಿಯನ್ನು ಅಲ್ಲಿಗೆ ಕಳುಹಿಸುತ್ತಾನೆ. ಆದರೆ ಆತ ಬೆಂಗಳೂರಿಗೆ ಮರಳುವುದೇ ಇಲ್ಲ. ತಂಜಾವೂರಿನಲ್ಲಿಯೇ ಆಳ್ವಿಕೆ ಮಾಡಲು ಆರಂಭಿಸುತ್ತಾನೆ. ಇತ್ತ ಬೆಂಗಳೂರು ಅಧಿಪತಿ ಇಲ್ಲದೆ ಅನಾಥವಾಗುತ್ತದೆ. ಹಾಗೆಯೇ ಬಿಟ್ಟರೆ ಶತ್ರುಗಳ ಪಾಲಾಗುತ್ತದೆ ಎಂಬ ಭೀತಿ ವೆಂಕೋಜಿಗೆ ಕಾಡುತ್ತದೆ. ಆಗ ಆತ ಉತ್ತಮ ಬೆಲೆಗೆ ಬೆಂಗಳೂರನ್ನು ಮಾರಾಟ ಮಾಡುವ ಆಲೋಚನೆ ಮಾಡುತ್ತಾನೆ. ಈ ವಿಷಯ ಗೂಢಾಚಾರರ ಮೂಲಕ ಶ್ರೀರಂಗಪಟ್ಟಣದಲ್ಲಿ ಆಳ್ವಿಕೆ ನಡೆಸುತ್ತಿದ್ದ ಚಿಕ್ಕದೇವರಾಜ ಒಡೆಯರ್ ಅವರ ಕಿವಿಗೆ ಬೀಳುತ್ತದೆ. ಅವರು ವೆಂಕೋಜಿ ಬಳಿಗೆ ವಕೀಲರೊಬ್ಬರನ್ನು ಕಳುಹಿಸುತ್ತಾರೆ. ಅಂತಿಮವಾಗಿ 3 ಲಕ್ಷ ರೂ.ಗಳಿಗೆ ಬೆಂಗಳೂರನ್ನು ಮಾರಾಟ ಮಾಡುವ ಒಪ್ಪಂದ ವಾಗುತ್ತದೆ. ಬೆಂಗಳೂರು ನನಗೆ ಬೇಕು ಎಂದು ಶಿವಾಜಿಯೂ ಮಾರಾಟಕ್ಕೆ ಅಡ್ಡಿಪಡಿಸುತ್ತಾನೆ. ತಂಜಾವೂರಿಗೆ ತೆರಳಿ ಯುದ್ಧ ನಡೆಸಿ ಬೆಂಗಳೂರನ್ನು ವಶಪಡಿಸಿಕೊಳ್ಳುತ್ತಾನೆ. ಬೇಸರಗೊಂಡ ವೆಂಕೋಜಿ ಅಣ್ಣನೊಂದಿಗೆ ಸಂಧಾನ ನಡೆಸಿ ಬೆಂಗಳೂರನ್ನು ತನ್ನ ಪತ್ನಿಯ ಭಾಗಕ್ಕೆ ಬರುವಂತೆ ಮಾಡಿಕೊಳ್ಳುತ್ತಾನೆ. ಇದಾದ ಎರಡೇ ವರ್ಷದಲ್ಲಿ ಶಿವಾಜಿ ಅಸುನೀಗುತ್ತಾನೆ.

ಗೋಲ್ಕಂಡದಲ್ಲಿದ್ದ ಔರಂಗಜೇಬ ಬೆಂಗಳೂರನ್ನು ವಶಪಡಿಸಿಕೊಳ್ಳಲು ತನ್ನ ಸೇನಾಧಿಪತಿ ಖಾಸಿಂ ಖಾನ್ ಎಂಬಾತನನ್ನು ಕಳುಹಿಸುತ್ತಾನೆ. ಅನಾಯಾಸವಾಗಿ ಬೆಂಗಳೂರು ಔರಂಜೇಬನ ವಶವಾಗುತ್ತದೆ. ಇಲ್ಲಿ ಖಾಸಿಂಖಾನ್ ರಾಜ್ಯಭಾರ ನಡೆಸುತ್ತಿರುತಾನೆ. ಕೆಲ ವರ್ಷಗಳ ನಂತರ ಮೊಗಲ್ ಚಕ್ರವರ್ತಿ ಔರಂಗಜೇಬ, ಖಾಸಿಂಖಾನನನ್ನು ಶಿರ್ಯಾ(ಈಗಿನ ಶಿರಾ)ಗೆ ನೇಮಕ ಮಾಡುತ್ತಾನೆ. ಬೆಂಗಳೂರಿನಿಂದ ಖಾಸಿಂ ನಿರ್ಗಮಿಸುತ್ತಾನೆ. ಬೆಂಗಳೂರಿನಿಂದ ಶಿರ್ಯಾಕ್ಕೆ ವ್ಯಾಪಾರ ವಹಿವಾಟುಗಳು ಸ್ಥಳಾಂತರವಾಗುತ್ತವೆ.

ದೂರದೃಷ್ಟಿಯ ಫಲವೋ ಎಂಬಂತೆ ಚಿಕ್ಕದೇವರಾಜ ಬೆಂಗಳೂರಿನ ಮೇಲಿನ ವ್ಯಾಮೋಹವನ್ನು ಬಿಡುವುದಿಲ್ಲ. ಚಿಕ್ಕ ಮೊತ್ತಕ್ಕೆ ಒಂದು ಹೊಸ ಪ್ರದೇಶ ಸಿಗುವ ಅವಕಾಶವನ್ನು ಬಿಡಬಾರದು ಎನ್ನುವುದು ಅವರ ತರ್ಕ. ಮೆಲಾಗಿ ಬೆಂಗಳೂರು ಎತ್ತರದ ಪ್ರದೇಶದಲ್ಲಿದ್ದು, ಉತ್ತಮ ಹವಾಗುಣವನ್ನು ಹೊಂದಿದೆ ಎನ್ನುವುದು ಅವರಿಗೆ ತಿಳಿದಿತ್ತು. ಈ ಉದ್ದೇಶಕ್ಕಾಗಿಯೇ ಅವರು ಔರಂಗಜೇಬನೊಂದಿಗೆ ಉತ್ತಮ ಬಾಂಧವ್ಯ ಸಾಧಿಸುತ್ತಾರೆ. ಹಾಗಾಗಿ ವೆಂಕೋಜಿಗೆ ಕೊಡಬೇಕಿದ್ದ 3 ಲಕ್ಷ ರೂ.ಗಳನ್ನು ಖಾಸಿಂಖಾನನಿಗೆ ನೀಡುತ್ತಾರೆ. ಆದರೆ ಆತ ಇಂದು ನಾಳೆ ಎಂದು ಸಬೂಬು ಹೇಳುತ್ತಾ ಮೂರು ವರ್ಷ ಬಿಟ್ಟುಕೊಡುವುದೇ ಇಲ್ಲ. ಅಂತಿಮವಾಗಿ 1687ರಲ್ಲಿ ಬಿಟ್ಟುಕೊಟ್ಟ ಎಂದು ಇತಿಹಾಸದ ಪುಟಗಳು ಹೇಳುತ್ತವೆ.

ಖಾಸಿಂಖಾನನ ಆಳ್ವಿಕೆಯಲ್ಲಿ ಬೆಂಗಳೂರಿನಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಆಡಳಿತ ಭಾಷೆಯಾಗಿದ್ದ ಮರಾಠಿಗೆ ಬದಲಾಗಿ ಉರ್ದು ಆಡಳಿತ ಭಾಷೆಯಾಗುತ್ತದೆ. ತಾರಾ ಮಂಡಲ ಪೇಟೆಯಲ್ಲಿ ಜುಮ್ಮಾ ಮಸೀದಿ ನಿರ್ಮಾಣವಾಗುತ್ತದೆ. ದೇವಾಲಯಗಳಿಗಿದ್ದ ಪ್ರಾಮುಖ್ಯತೆ ಮಸೀದಿ, ದರ್ಗಾಗಳಿಗೂ ಲಭ್ಯವಾಗುತ್ತದೆ.

ಮುಂದೆ ಚಿಕ್ಕದೇವರಾಜ ಒಡೆಯರ್ ಆಳ್ವಿಕೆಯಲ್ಲಿ ಬೆಂಗಳೂರು ಅಭಿವೃದ್ಧಿ ಹೊಂದುತ್ತದೆ. ಆಡಳಿತದಲ್ಲಿ ಕನ್ನಡ, ಮರಾಠಿ ಮತ್ತು ಉರ್ದು ಭಾಷೆಗಳು ಉಳಿದುಕೊಂಡರೆ ವ್ಯವಹಾರದಲ್ಲಿ ಮರಾಠಿ ಉರ್ದು ಭಾಷೆಗಳು ಪ್ರಾಬಲ್ಯ ಮೆರೆಯುತ್ತವೆ. ಬೆಂಗಳೂರಿನಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗುತ್ತದೆ. ಇವರ ಕಾಲದಲ್ಲಿ ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನ ನಿರ್ಮಾಣವಾಗುತ್ತದೆ. ಚಿಕ್ಕದೇವರಾಜ ಒಡೆಯರ್ ತರುವಾಯ ಅವರ ಪುತ್ರ ಕಂಠೀರವ ನರಸರಾಜ ಒಡೆಯರ್ ಆಳ್ವಿಕೆ ನಡೆಸುತ್ತಾನೆ. ಕಾಲ ಕ್ರಮೇಣ ಬೆಂಗಳೂರು ಮೈಸೂರು ಹುಲಿ ಟಿಪ್ಪು ವಶವಾಗುತ್ತದೆ. ಟಿಪ್ಪು ಮರಣಾನಂತರ ಬೆಂಗಳೂರು ಮತ್ತೆ ಮುಮ್ಮಡಿ ಕೃಷ್ಣರಾಜ ಒಡೆಯರ್ ವಶಕ್ಕೆ ಬರುತ್ತದೆ. ಆಗ ದಿವಾನರ ಆಳ್ವಿಕೆ ಆರಂಭವಾಗುತ್ತದೆ. ಯಾರೇ ಆಡಳಿತ ನಡೆಸಿದರೂ ಬೆಂಗಳೂರು ಅಭಿವೃದ್ಧಿ ನಿರಂತರವಾಗುತ್ತದೆ. ಇಂದಿಗೂ…

(ಬರಹ: ಎಚ್.ಮಾರುತಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ