ಬೆಂಗಳೂರಲ್ಲಿ ಮೈ ನಡುಕದ ಚಳಿ, ಹಗುರ ಮಳೆ, ಕರ್ನಾಟಕದ ಉತ್ತರ ಒಳನಾಡು ಭಾಗದಲ್ಲಿ ಮೈ ಕೊರೆವ ಚಳಿ, ಹೀಗಿರಲಿದೆ ಕರ್ನಾಟಕ ಹವಾಮಾನ ಇಂದು
Nov 29, 2024 07:56 AM IST
ಕರ್ನಾಟಕ ಹವಾಮಾನ: ಬೆಂಗಳೂರಲ್ಲಿ ಮೈ ನಡುಕದ ಚಳಿ, ಹಗುರ ಮಳೆ, ಬರುವ ಸಾಧ್ಯತೆ ಇದೆ. ಕರ್ನಾಟಕದ ಉತ್ತರ ಒಳನಾಡು ಭಾಗದಲ್ಲಿ ಮೈ ಕೊರೆವ ಚಳಿ ಮತ್ತು ಒಣಹವೆ ಇರಲಿದೆ.
Bengaluru Weather: ಕರ್ನಾಟಕದ ದಕ್ಷಿಣ ಒಳನಾಡು ಭಾಗದಲ್ಲಿ ಇಂದು ಚಳಿ ಮತ್ತು ಮಳೆಯ ದಿನ, ಉತ್ತರ ಒಳನಾಡು ಭಾಗದಲ್ಲಿ ಚಳಿ, ಒಣಹವೆ. ಬೆಂಗಳೂರಲ್ಲಿ ಮೈ ನಡುಕದ ಚಳಿ, ಹಗುರ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿರುವ ಹವಾಮಾನ ಮುನ್ಸೂಚನೆ ವಿವರ ಹೇಳಿದೆ.
Bengaluru Weather: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಉಂಟಾಗಿರುವ ಚಂಡಮಾರುತ ತಮಿಳು ನಾಡು, ಕೇರಳ ಮತ್ತು ಕರ್ನಾಟಕದ ದಕ್ಷಿಣ ಭಾಗದಲ್ಲಿ ಮಳೆಗೆ ಕಾರಣವಾಗಿದೆ. ಇದರಂತೆ ಇಂದು (ನವೆಂಬರ್ 29) ಕರ್ನಾಟಕದ ದಕ್ಷಿಣ ಒಳನಾಡಲ್ಲಿ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಸುತ್ತಮುತ್ತ ಅಂದರೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಮಂಡ್ಯ, ಮೈಸೂರು ಭಾಗದಲ್ಲಿ ಮಳೆಯಾಗಬಹುದು. ಉಳಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಮೈ ನಡುಕದ ಚಳಿ ಮತ್ತು ಒಣ ಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನಾ ವರದಿ ಹೇಳಿದೆ.
ಕರ್ನಾಟಕ ಹವಾಮಾನ ಇಂದು; ಎಲ್ಲೆಲ್ಲಿ ಮಳೆ, ಚಳಿ, ಒಣಹವೆ, ತೇವಾಂಶ ಕುಸಿತ
ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳ ಒಂದೆರೆಡು ಕಡೆಗಳಲ್ಲಿ ಹಗುರ / ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಒಂದೆರೆಡು ಕಡೆಗಳಲ್ಲಿ ಮುಂಜಾನೆ ಮಂಜು/ ಇಬ್ಬನಿ ಇರುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಒಂದೆರೆಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1-3 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರಬಹುದು ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿ ಡಾ ಎನ್ ಪುವಿಯರಸನ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಕಂಡುಬಂದಿರುವ ವಾಯುಭಾರ ಕುಸಿತದ ಪರಿಣಾಮ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದೆ. ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದ್ದು, ಇಂದು ನಸುಕಿನಲ್ಲಿ ತಮಿಳುನಾಡು, ಪುದುಚೇರಿಯ ಕರಾವಳಿಗೆ ಅಪ್ಪಳಿಸಿದೆ. ಇದರ ಪರಿಣಾಮ ಕರ್ನಾಟಕದಲ್ಲಿಯೂ ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಹವಾಮಾನ ಪರಿಸ್ಥಿತಿಗಳ ಪರಿಣಾಮ ಇಂದಿನಿಂದ (ನವೆಂಬರ್ 29) ಡಿಸೆಂಬರ್ 5 ರ ತನಕ ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಹಗುರ ಅಥವಾ ಸಾಧಾರಣ ಮಳೆಯಾಗಬಹುದು. ಉತ್ತರ ಒಳನಾಡು, ಕರಾವಳಿ ಮತ್ತು ಮಳೆನಾಡು ಜಿಲ್ಲೆಗಳಲ್ಲಿ ಡಿಸೆಂಬರ್ 1 ರಿಂದ ಡಿಸೆಂಬರ್ 4 ರವರೆಗೆ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ನವೆಂಬರ್ 30 ಮತ್ತು ಡಿಸೆಂಬರ್ 1 ರಂದು ಅಲ್ಲಲ್ಲಿ ಚದುರಿದಂತೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ.
ಬೆಂಗಳೂರು ಹವಾಮಾನ ಇಂದು; ಬೆಂಗಳೂರು ನಗರ, ಗ್ರಾಮಾಂತರಗಳಲ್ಲಿ ಹಗುರ ಮಳೆ, ಮೈ ನಡುಕದ ಚಳಿ
ನಾಳೆ (ನವೆಂಬರ್ 30) ಬೆಳಗ್ಗೆ ತನಕ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ ಪ್ರಕಾರ, ಇಂದು ಕೆಲವು ಕಡೆಗಳಲ್ಲಿ ಮುಂಜಾನೆ ಮಂಜು, ಮೈ ನಡುಕದ ಚಳಿ ಅನುಭವಕ್ಕೆ ಬರಬಹುದು. ಅಪರಾಹ್ನ ತನಕ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ ಸುಮಾರು 26 ಮತ್ತು 17 ಡಿಗ್ರಿ ಸೆಲ್ಸಿಯಸ್ ಆಗಿರಬಹುದು. ಆ ನಂತರ ನಾಳೆ ಬೆಳಗ್ಗೆ ತನಕ ಭಾಗಶಃ ಮೋಡ ಕವಿದ ವಾತಾವರಣ ಕಾಣಬಹುದು. ಕೆಲವು ಕಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 26 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನೀಡಿರುವ ಹವಾಮಾನ ಮುನ್ಸೂಚನೆ ವರದಿ ಹೇಳಿದೆ.