ಚಿಕ್ಕಬಳ್ಳಾಪುರ: ಯೋಗ ಶಿಕ್ಷಕಿ ಅರೆಬೆತ್ತಲೆಗೊಳಿಸಿ ಜೀವಂತ ಹೂತು ಹಾಕಿದ್ದ ದುರುಳರು; ಸತ್ತಂತೆ ನಟಿಸಿ ಎದ್ದು ಬಂದು ದೂರು ಕೊಟ್ಟ ಮಹಿಳೆ!
Nov 08, 2024 01:06 PM IST
ಚಿಕ್ಕಬಳ್ಳಾಪುರ: ಯೋಗ ಶಿಕ್ಷಕಿ ಅರೆಬೆತ್ತಲೆಗೊಳಿಸಿ ಜೀವಂತ ಹೂತು ಹಾಕಿದ್ದ ದುರುಳರು; ಸತ್ತಂತೆ ನಟಿಸಿ ಎದ್ದು ಬಂದು ದೂರು ಕೊಟ್ಟ ಮಹಿಳೆ!
- Chikkaballapur: ಗಂಡನ ಜೊತೆ ಅನೈತಿಕ ಸಂಬಂಧ ಹೊಂದಿದ್ದಕ್ಕೆ ಯೋಗ ಶಿಕ್ಷಕಿ ಕಿಡ್ನಾಪ್‍ಗೆ ಸುಪಾರಿ ನೀಡಿದ್ದ ಮಹಿಳೆ ಸೇರಿ 6 ಮಂದಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ದಿಬ್ಬೂರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸುಫಾರಿ ಪಡೆದಿದ್ದ ದುರುಳರು ಯೋಗ ಶಿಕ್ಷಕಿ ಅರೆಬೆತ್ತಲೆಗೊಳಿಸಿ ಜೀವಂತ ಹೂತು ಹಾಕಿದ್ದರು.
ಚಿಕ್ಕಬಳ್ಳಾಪುರ: ತನ್ನ ಗಂಡನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಯೋಗ ಶಿಕ್ಷಕಿಯನ್ನು ಅಪಹರಿಸಿ ಕೊಲೆ ಮಾಡಲು ಸುಪಾರಿ ನೀಡಿದ್ದ ಮಹಿಳೆ ಸೇರಿ 6 ಮಂದಿ ಅಪಹರಣಕಾರರನ್ನು ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ದಿಬ್ಬೂರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಅಂದಹಾಗೆ ಬೆಂಗಳೂರು (Bengaluru) ಮೂಲದ ಅರ್ಚನಾ ಕಿಡ್ನಾಪ್ (Kidnap) ಆಗಿದ್ದ ಮಹಿಳೆ. ಕಿಡ್ನಾಪ್‌ಗೆ ಸುಪಾರಿ ನೀಡಿದ್ದು ಬಿಂದುಶ್ರಿ. ಪತಿ ಸಂತೋಷ್ ಕುಮಾರ್ ಜೊತೆ ಯೋಗ ಶಿಕ್ಷಕಿ ಅರ್ಚನಾ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಸತೀಶ್ ರೆಡ್ಡಿ ಎಂಬಾತನಿಗೆ ಬಿಂದು ಕೊಲೆ ಮಾಡಲು ಸುಪಾರಿ ನೀಡಿದ್ದಳಂತೆ.
ಸುಪಾರಿ ಮೇರೆಗೆ ಸತೀಶ್ ರೆಡ್ಡಿ, ಅರ್ಚನಾ ಬಳಿ ಯೋಗ ಕಲಿಯುವ ನೆಪದಲ್ಲಿ ಆಕೆಯನ್ನು ಪರಿಚಯ ಮಾಡಿಕೊಂಡು ಸಲುಗೆ ಬೆಳೆಸಿಕೊಂಡಿದ್ದನಂತೆ. ಇನ್ನೂ ಆಕ್ಟೋಬರ್ 23 ರಂದು ಸುಲೋಚನಾಗೆ ಗನ್ ಶೂಟ್ ಟ್ರೈನಿಂಗ್ (Shoot Training) ಕೊಡುವುದಾಗಿ ಹೇಳಿ ನಂಬಿಸಿ ಸತೀಶ್ ರೆಡ್ಡಿ ಮನೆಯಿಂದ ಕರೆದುಕೊಂಡು ಹೋಗಿದ್ದಾನೆ. ಸತೀಶ್ ರೆಡ್ಡಿ ತನ್ನ ಸಹಚರರಾದ ನಾಗೇಂದ್ರ ರೆಡ್ಡಿ, ರಮಣಾರೆಡ್ಡಿ, ರವಿಚಂದ್ರನ ಜೊತೆ ಸೇರಿ ಸುಲೋಚನಾ ಕಾರಿನಲ್ಲಿ ಹೊರಟಿದ್ದು, ಇಡೀ ದಿನ ಬೆಂಗಳೂರಿನ ಹಲವೆಡೆ ಸುತ್ತಾಡಿ ಕೊನೆಗೆ ರಾತ್ರಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಧನಮಿಟ್ಟೇನಹಳ್ಳಿ ಬಳಿಯ ಅರಣ್ಯ ಪ್ರದೇಶದಲ್ಲಿ ಸುಲೋಚನಾಳನ್ನ ಕಾರಿನಿಂದ ಕೆಳೆಗೆ ಇಳಿಸಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ.
ಸತ್ತಂತೆ ನಟಿಸಿದ ಯೋಗ ಶಿಕ್ಷಕಿ
ಹಲ್ಲೆ ಮಾತ್ರವಲ್ಲ, ಅರೆಬೆತ್ತಲೆಗೊಳಿಸಿ ಲೈಂಗಿಕ ದೌರ್ಜನ್ಯ ನಡೆಸಿ ಕೊನೆಗೆ ಕಾರಿನಲ್ಲಿದ್ದ ಚಾರ್ಜರ್ ವೈರ್ನಿಂದ ಕುತ್ತಿಗೆಗೆ ಬಲವಾಗಿ ಬಿಗಿದು ಕೊಲೆ ಮಾಡಲು ಯತ್ನಿಸಿದ್ದಾರೆ. ಆದರೆ ಯೋಗ ಶಿಕ್ಷಕಿಯಾಗಿದ್ದ ಅರ್ಚನಾ ಕುತ್ತಿಗೆ ಬಿಗಿದಾಗ ನಾಲಿಗೆ ಹೊರ ಚಾಚಿ ಸತ್ತಂತೆ ನಾಟಕ ಮಾಡಿ ಉಸಿರು ಬಿಗಿದು ಇಟ್ಟುಕೊಂಡಿದ್ದಾಳಂತೆ. ಸತ್ತಳೆಂದು ಗುಂಡಿ ತೋಡಿ, ಸ್ವಲ್ಪ ಮಣ್ಣು ಹಾಕಿ, ಪಕ್ಕದಲ್ಲೆ ಇದ್ದ ಮರದ ಕೊಂಬೆಗಳನ್ನು ಹಾಕಿ ಮುಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಅರ್ಚನಾ ರಾತ್ರಿಯಲ್ಲಾ ದಾರಿ ಹುಡುಕಿ ಮುಂಜಾನೆ 5:30 ರ ವೇಳೆ ಒಂಟಿ ಮನೆಗೆ ಬಂದು ಆಶ್ರಯ ಪಡೆಯುತ್ತಾಳೆ.
ನಂತರ ಅರ್ಚನಾ ಬೆಳಿಗ್ಗೆ ಎದ್ದು ಬಂದು ಧನಮಿಟ್ಟೇನ ಹಳ್ಳಿಯಲ್ಲಿ ಸ್ಥಳೀಯರ ಮನೆಗೆ ಹೋಗಿ ಘಟನೆ ವಿವರಿಸಿ, ದಿಬ್ಬೂರಹಳ್ಳಿ ಪೊಲೀಸರನ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿ ದೂರು ನೀಡಿದ್ದಳು. ದೂರಿನನ್ವಯ ಪೊಲೀಸರು ಸುಪಾರಿ ನೀಡಿದ್ದ ಬಿಂದು ಹಾಗೂ ಕಿಡ್ನಾಪ್ ಮಾಡಿದ್ದ ಸತೀಶ್ ರೆಡ್ಡಿ, ನಾಗೇಂದ್ರ ರೆಡ್ಡಿ, ರಮಣಾರೆಡ್ಡಿ, ರವಿ ಸೇರಿಂದತೆ ಕಿಡ್ನಾಪ್ ಮಾಡಲು ಕಳ್ಳತನ ಮಾಡಿದ್ದ ಕಾರು ವಶಕ್ಕೆ ಪಡೆದು ಕಳ್ಳತನ ಮಾಡಿದ್ದ ಅಪ್ರಾಪ್ತ ಬಾಲಕನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಅರ್ಚನಾ ಯಾರು?
ಪ್ರಾಣಾಪಾಯದಿಂದ ಪಾರಾದ ಅರ್ಚನಾ, 13 ವರ್ಷಗಳ ಹಿಂದೆ ದೇವನಹಳ್ಳಿ ತಾಲೂಕಿನ ಎಲಿಯೂರು ಗ್ರಾಮದ ವಿಶ್ವನಾಥ್ ಎಂಬವರನ್ನು ಮದುವೆಯಾಗಿದ್ದಳು. ಈ ದಂಪತಿಗೆ ಇಬ್ಬರು ಮಕ್ಕಳು. ಕೌಟುಂಬಿಕ ಕಲಹದಿಂದ 2 ವರ್ಷಗಳ ಹಿಂದೆ ಗಂಡನನ್ನು ಬಿಟ್ಟು ಪೋಷಕರ ಜೊತೆಯಲ್ಲಿ ಬೆಂಗಳೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಿರುವ ಅರ್ಚನಾ, ಗಂಡ ವಿಶ್ವನಾಥ್ಗೆ ಅಪಘಾತವಾದಾಗ ಆತನ ಸ್ನೇಹಿತ ಸಂತೋಷ್ ಪರಿಚಯ ಆಗುತ್ತದೆ. ಸಂತೋಷ್ ಅರ್ಚನಾಳನ್ನು ಬಹಳ ಸಲುಗೆಯಿಂದ ಮಾತನಾಡಿಸುತ್ತಿದ್ದ. ಇದು ಸಂತೋಷ್ನ ಹೆಂಡತಿ ಬಿಂದುಶ್ರಿಗೆ ಅನುಮಾನ ಬರುವಂತೆ ಮಾಡುತ್ತದೆ. ಹಾಗಾಗಿ ಅರ್ಚನಾ ಕೊಲೆ ಮಾಡಲು ಸತೀಶ್ ರೆಡ್ಡಿಗೆ ಸುಪಾರಿ ನೀಡುತ್ತಾಳೆ.