ಉತ್ತರ ಕರ್ನಾಟಕ- ದಕ್ಷಿಣ ಕರ್ನಾಟಕ ಆಹಾರ ಪದ್ಧತಿ ವ್ಯತ್ಯಾಸ ಗೊತ್ತೆ? ಖಡಕ್ ಜೋಳದ ರೊಟ್ಟಿ, ಇಡ್ಲಿ ದೋಸೆ ಅನ್ನ ಸಾಂಬಾರ್ ಚಟ್ನಿ
ಉತ್ತರ ಕರ್ನಾಟಕದ ಆಹಾರ ಪದ್ಧತಿಗೂ ದಕ್ಷಿಣ ಕರ್ನಾಟಕದ ಆಹಾರ ಪದ್ಧತಿಗೂ ಸಾಕಷ್ಟು ವ್ಯತ್ಯಾಸವಿದೆ. ಕೆಲವು ಆಹಾರ ಪದ್ಧತಿಗಳಿಗೆ ಸಾಮ್ಯತೆಯೂ ಇದೆ. ದಕ್ಷಿಣ ಕರ್ನಾಟಕದಲ್ಲಿ ಅಕ್ಕಿ, ಉತ್ತರ ಕರ್ನಾಟಕದಲ್ಲಿ ಜೋಳ ಪ್ರಮುಖ ಆಹಾರ. ಬನ್ನಿ ಈ ಎರಡು ಪ್ರದೇಶಗಳ ಆಹಾರ ಸಂಸ್ಕೃತಿಯ ಕುರಿತು ತಿಳಿದುಕೊಳ್ಳೋಣ.
ಕರ್ನಾಟಕದ ಆಹಾರ ಪದ್ಧತಿ ಅತಿಸುಂದರ. ರಾಜ್ಯದ ವಿವಿಧ ಊರುಗಳಲ್ಲಿ ವಿವಿಧ ಬಗೆಯ ಆಹಾರಗಳು ದೊರಕುತ್ತವೆ. ಬೆಂಗಳೂರಿನಂತಹ ನಗರಗಳಲ್ಲಿ ಕರ್ನಾಟಕದ ಎಲ್ಲಾ ಕಡೆಯ ಆಹಾರಗಳು ದೊರಕುತ್ತವೆ. ಕರ್ನಾಟಕದ ಆಹಾರ ಪದ್ಧತಿಗಳಲ್ಲಿ ಪ್ರಮುಖವಾಗಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಆಹಾರ ಪದ್ಧತಿ ಎಂದು ಎರಡು ವಿಭಾಗ ಮಾಡಬಹುದು. ಖುಷಿಯ ವಿಚಾರವೆಂದರೆ ಒಮ್ಮೊಮ್ಮೆ ಉತ್ತರ ಕರ್ನಾಟಕದವರೂ ದಕ್ಷಿಣ ಕರ್ನಾಟಕದ ಆಹಾರಗಳನ್ನು ಖುಷಿಯಿಂದ ತಿನ್ನುತ್ತಾರೆ. ದಕ್ಷಿಣ ಕರ್ನಾಟಕದವರು ಬೆಂಗಳೂರಿನಂತಹ ನಗರಗಳಲ್ಲಿ ಆಗಾಗ ಖಡಕ್ ಜೋಳದ ರೊಟ್ಟಿ ತಿಂದು ಖುಷಿ ಪಡುತ್ತಾರೆ.
ದಕ್ಷಿಣ ಕರ್ನಾಟಕದಲ್ಲಿ ಅಕ್ಕಿ ಪ್ರದಾನ ಆಹಾರ ಸೇವನೆ ಹೆಚ್ಚು. ಉತ್ತರ ಕರ್ನಾಟಕದಲ್ಲಿ ಜೋಳ, ಶೇಂಗಾ, ಈರುಳ್ಳಿ, ಮೆಣಸಿನ ಕಾಯಿಗಳನ್ನು ಬೆಳೆಯುತ್ತಾರೆ. ಉತ್ತರ ಕರ್ನಾಟಕದಲ್ಲಿ ಜೋಳವು ಪ್ರಮುಖ ಆಹಾರವಾಗಿದೆ. ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿರುವ ರಾಗಿ ಜೋಳವನ್ನು ಇಲ್ಲಿ ಸಾಮಾನ್ಯವಾಗಿ ರೊಟ್ಟಿ ರೂಪದಲ್ಲಿ ಸವಿಯಲಾಗುತ್ತದೆ. ಇದಕ್ಕೆ ತಕ್ಕಂತೆ ಬದನೆಕಾಯಿ ಎಣ್ಣೆಗಾಯಿ ಎಂಬ ಮೇಲೋಗರವೂ ಇರುತ್ತದೆ. ಇಲ್ಲಿ ಸುಸ್ಲಾ ಎಂದು ಕರೆಯಲ್ಪಡುವ ಅನ್ನವೂ ಇರುತ್ತದೆ. ಜೋಳವನ್ನು ಸೌತೆಕಾಯಿ, ಈರುಳ್ಳಿ ಜತೆ ಬೆರೆಸಿ ಪರೋಟವಾಗಿ ಮಾಡಿಯೂ ಸೇವಿಸುವುದು ಸಾಮಾನ್ಯ. ಉತ್ತರ ಕರ್ನಾಟಕದಲ್ಲಿ ಖಾರ ಹೆಚ್ಚು. ಕಡಲೆಕಾಯಿ ಮತ್ತು ಮೆಣಸಿನ ಕಾಯಿಯ ಬಳಕೆ ಹೆಚ್ಚು. ಉತ್ತರ ಕರ್ನಾಟಕದ ಅಡುಗೆಗಳಲ್ಲಿ ಮೊಳಕೆಕಾಳು, ಹಸಿ ತರಕಾರಿಗಳ ಬಳಕೆ ಹೆಚ್ಚು.
ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಕೆಲವು ಆಹಾರಗಳನ್ನು ನೋಡೋಣ.
ದಕ್ಷಿಣ ಕರ್ನಾಟಕದ ಆಹಾರ ಪದ್ಧತಿ
ಇಲ್ಲಿ ಅಕ್ಕಿ ಪ್ರಧಾನ ಆಹಾರ. ವಿವಿಧ ಸಾಂಬಾರ್, ಪಲ್ಯ ಬಕ್ಷ್ಯಗಳೊಂದಿಗೆ ಬಡಿಸಲಾಗುತ್ತದೆ. ಗೋಧಿಯಿಂದ ರೋಟಿಗಳನ್ನು ಮಾಡಲಾಗುತ್ತದೆ. ಆದರೆ, ಇಲ್ಲಿಯ ರೋಟಿಗಳು ಉತ್ತರ ಕರ್ನಾಟಕದಂತೆ ಖಡಕ್ ಇರುವುದಿಲ್ಲ.
ದಕ್ಷಿಣ ಕರ್ನಾಟಕದಲ್ಲಿ ವಿವಿಧ ಬಗೆಯ ಸಾಂಬಾರ್‌ಗಳನ್ನು ಮಾಡಲಾಗುತ್ತದೆ. ಮಸಾಲೆ ಮತ್ತು ತರಕಾರಿ ಸಾಂಬಾರ್‌ಗಳು ಜನಪ್ರಿಯವಾಗಿದೆ.
ಮಂಗಳೂರಿನ ಮೀನು ಕರಿ ದಕ್ಷಿಣ ಕರ್ನಾಟಕದಲ್ಲಿ ಜನಪ್ರಿಯತೆ ಪಡೆದಿದೆ.
ಹುಣಸೆಹಣ್ಣು, ಟೊಮೆಟೊ ಮತ್ತು ಮಸಾಲೆಯ ಸೂಪ್ "ರಸಂ" ಕೂಡ ದಕ್ಷಿಣ ಕರ್ನಾಟಕದಲ್ಲಿ ಫೇಮಸ್. ಅನ್ನ ಜತೆಗೆ ರಸಂ ಇದ್ದರೆ ಹೊಟ್ಟೆ ತುಂಬಾ ಊಟ ಮಾಡಬಹುದು.
ದಕ್ಷಿಣ ಕರ್ನಾಟಕದ ಪಾಕದಲ್ಲಿ ತೆಂಗಿನಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಕರಾವಳಿಯಲ್ಲಿ ತೆಂಗಿನಕಾಯಿಯನ್ನು ಹೆಚ್ಚು ಬಳಸಲಾಗುತ್ತದೆ.
ಸಾಂಬಾರ್, ಪಲ್ಯಗಳಿಗೆ ಸುವಾಸನೆ ಹೆಚ್ಚಿಸಲು ಕರಿಬೇವಿನ ಎಲೆಗಳ ಒಗ್ಗರಣೆ ಇರಲೇಬೇಕು.
ದಕ್ಷಿಣ ಕರ್ನಾಟಕದಲ್ಲಿ ಮೈಸೂರು ಪಾಕ್, ಕಜ್ಜಾಯ ಮುಂತಾದ ಸಿಹಿತಿಂಡಿ ಜನಪ್ರಿಯ.
ಉತ್ತರ ಕರ್ನಾಟಕದ ಆಹಾರ ಪದ್ಧತಿ
ಜೋಳದ ರೊಟ್ಟಿ ಪ್ರಮುಖ ಆಹಾರ. ಇದರೊಂದಿಗೆ ರಾಗಿ ಬಳಕೆಯೂ ಹೆಚ್ಚು. ರಾಗಿ ಮುದ್ದೆ ತಿಂದರೆ ರೈತರು ನೆಮ್ಮದಿಯಿಂದ ಕೃಷಿ ಕೆಲಸಕ್ಕೆ ಹೋಗುತ್ತಾರೆ.
ಉತ್ತರ ಕರ್ನಾಟಕದಲ್ಲಿ ಬಿಸಿಬೇಳೆ ಬಾತ್ ಕೂಡ ಹೆಚ್ಚಿದೆ. ಅಕ್ಕಿ ಮತ್ತು ಉದ್ದಿನ ಬೇಳೆಯ ಕಿಚಡಿಯೂ ಇಲ್ಲಿನವರಿಗೆ ಅಚ್ಚುಮೆಚ್ಚು.
ಎಣ್ಣೆಗಾಯಿ ಎಂಬ ಬದನೆಕಾಯಿ ಭಕ್ಷ್ಯ ಹೆಚ್ಚಾಗಿರುತ್ತದೆ.
ಉತ್ತರ ಕರ್ನಾಟಕದ ಮಸಾಲೆ ದಕ್ಷಿಣ ಕರ್ನಾಟಕಕ್ಕಿಂತ ಭಿನ್ನ. ಕೆಂಪು ಮೆಣಸಿನ ಕಾಯಿ ಬಳಸಿ ಹೆಚ್ಚು ಮಸಾಲೆಯುಕ್ತವಾಗಿ ತಯಾರಿಸಲಾಗುತ್ತದೆ. ಕಡಲೆಕಾಯಿ, ಎಳ್ಳನ್ನು ಹೆಚ್ಚಾಗಿ ಗ್ರೇವಿಗಳಲ್ಲಿ ಬಳಸಲಾಗುತ್ತದೆ.
ಚಿರೋಟಿ, ಪೇಡದಂತಹ ತಿಂಡಿಗಳು ಉತ್ತರ ಕರ್ನಾಟಕದಲ್ಲಿ ಜನಪ್ರಿಯತೆ ಪಡೆದಿವೆ.
ನಮ್ಮೂರು ಚಂದವೋ, ನಿಮ್ಮೂರು ಚಂದವೋ
ದಕ್ಷಿಣ ಕರ್ನಾಕಟದಲ್ಲಿ ಸಾಮಾನ್ಯವಾಗಿ ಬಿಸಿಬಿಸಿ ಕಾಫಿಯಿಂದ, ಉತ್ತರ ಕರ್ನಾಟಕದಲ್ಲಿ ಖಡಕ್ ಚಾಯ್‌ನಿಂದ ದಿನ ಆರಂಭವಾಗುತ್ತದೆ. ಎರಡೂ ಕಡೆ ಚಹಾ-ಕಾಫಿ ಇಷ್ಟಪಡುವವರೂ ಇರುತ್ತಾರೆ.
ದಕ್ಷಿಣ ಕರ್ನಾಟಕದಲ್ಲಿ ಇಡ್ಲಿ, ವಡೆ, ದೋಸೆ, ಚಟ್ನಿ, ಸಾಂಬಾರ್ ಇತ್ಯಾದಿಗಳು ಇರುತ್ತವೆ. ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ ಇತ್ಯಾದಿಗಳು ಇರುತ್ತವೆ. ದಕ್ಷಿಣ ಕರ್ನಾಟಕದ ಹೋಟೆಲ್‌ಗಳು ದರ್ಶಿನಿ, ಸಾಗರ್ ಎಂದೆಲ್ಲ ಇರುತ್ತವೆ. ಉತ್ತರ ಕರ್ನಾಟಕದಲ್ಲಿ ಖಾನಾವಳಿಗಳು ಇರುತ್ತವೆ.
ದಕ್ಷಿಣ ಕರ್ನಾಟಕದಲ್ಲಿ ಕೇಸರಿಬಾತ್, ಮೈಸೂರು ಪಾಕ್, ಬೇಳೆ ಹೋಳಿಗೆ ಫೇಮಸ್, ಉತ್ತರ ಕರ್ನಾಟಕದಲ್ಲಿ ಧಾರವಾಡ ಪೇಡ, ಶೇಂಗಾ ಹೋಳಿಗೆ, ಕೊಬ್ಬರಿ ಹೋಳಿಗೆ ಫೇಮಸ್.
ಉತ್ತರ ಕರ್ನಾಟಕದಲ್ಲಿ ಮಿರ್ಚಿ ಬಜ್ಜಿ, ದಕ್ಷಿಣ ಕರ್ನಾಟಕದಲ್ಲಿ ಬಾಳೆಕಾಯಿ ಬಜ್ಜಿ, ಅಂಬೋಡೆ ಫೇಮಸ್.
ಹೀಗೆ ಉತ್ತರ ಕರ್ನಾಟಕ- ದಕ್ಷಿಣ ಕರ್ನಾಟಕದ ಆಹಾರ ಪದ್ಧತಿ ಭಿನ್ನವಾಗಿರಲು ಆಯಾ ಊರಿನ ಸಂಸ್ಕೃತಿ, ವಾತಾವರಣ, ಜನಜೀವನ, ಕೃಷಿ ಇತ್ಯಾದಿ ಅಂಶಗಳು ಪ್ರಮುಖ ಕಾರಣವಾಗಿವೆ.