logo
ಕನ್ನಡ ಸುದ್ದಿ  /  ಕರ್ನಾಟಕ  /  Bhatkal Ramadan Market: ಭಟ್ಕಳದಲ್ಲಿ ಕಳೆಗಟ್ಟುತ್ತಿದೆ ರಮ್ಜಾನ್ ಮಾರುಕಟ್ಟೆ ಖದರ್‌, ಉಡುಪಿ, ಕಾರವಾರಗಳಿಂದಲೂ ಖರೀದಿಗೆ ಬರುತ್ತಾರೆ !

Bhatkal Ramadan Market: ಭಟ್ಕಳದಲ್ಲಿ ಕಳೆಗಟ್ಟುತ್ತಿದೆ ರಮ್ಜಾನ್ ಮಾರುಕಟ್ಟೆ ಖದರ್‌, ಉಡುಪಿ, ಕಾರವಾರಗಳಿಂದಲೂ ಖರೀದಿಗೆ ಬರುತ್ತಾರೆ !

Umesha Bhatta P H HT Kannada

Apr 07, 2024 04:08 PM IST

ಭಟ್ಕಳದಲ್ಲಿ ರಮ್ಜಾನ್‌ ಹಬ್ಬದ ಖರೀದಿ ಜೋರಾಗಿದೆ.

    • Ramadan Festival ರಮ್ಜಾನ್‌ ಹಬ್ಬ ಎಂದರೆ ಮುಸ್ಲೀಂರಿಗೆ ವಿಶೇಷ ಹಬ್ಬ. ತಾವೂ ಖರೀದಿಸಿ ಬಡವರಿಗೆ ಹಂಚಲು ಬಟ್ಟೆಯನ್ನು ಖರೀದಿಸುವುದುಂಟು. ಈ ಬಾರಿ ಭಟ್ಕಳದಲ್ಲಿ ಬಟ್ಟೆ ಖರೀದಿ ಜೋರಾಗಿಯೇ ಇದೆ.
    • ವರದಿ: ಹರೀಶ ಮಾಂಬಾಡಿ, ಮಂಗಳೂರು
ಭಟ್ಕಳದಲ್ಲಿ ರಮ್ಜಾನ್‌ ಹಬ್ಬದ ಖರೀದಿ ಜೋರಾಗಿದೆ.
ಭಟ್ಕಳದಲ್ಲಿ ರಮ್ಜಾನ್‌ ಹಬ್ಬದ ಖರೀದಿ ಜೋರಾಗಿದೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಕ್ಷಿಣ ಭಾಗದಲ್ಲಿರುವ ಭಟ್ಕಳ ಪೇಟೆ ಕಡಲತಡಿಯ ಸುಂದರ ಪ್ರದೇಶವೂ ಹೌದು. ಸ್ವಲ್ಪ ಮುಂದೆ ದಕ್ಷಿಣದತ್ತ ಸಾಗಿದರೆ, ಉಡುಪಿ ಜಿಲ್ಲೆಯ ಬೈಂದೂರು, ಉತ್ತರಕ್ಕೆ ಸಾಗಿದರೆ ಕಾರವಾರ. ಹಲವು ವೈವಿಧ್ಯ ವಿಚಾರಗಳಿಂದ ಭಟ್ಕಳ ರಾಜಕೀಯವಾಗಿ, ಧಾರ್ಮಿಕವಾಗಿ ಗಮನ ಸೆಳೆಯುತ್ತದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಧರ್ಮೀಯರು ಇರುವ ಕಾರಣ ರಮ್ಜಾನ್ ಆಚರಣೆಯ ವೇಳೆ ತೆರೆಯಲ್ಪಡುವ ಮಾರುಕಟ್ಟೆಗೆ ಉಳಿದೆಲ್ಲ ಕಡೆಗಳಿಗಿಂತ ಹೆಚ್ಚಿನ ಮಹತ್ವವಿದೆ. ಅದರಲ್ಲೂ ಕಳೆದ ಒಂದೂವರೆ – ಎರಡು ದಶಕಗಳ ಅವಧಿಯಲ್ಲಿ ಆರಂಭಗೊಂಡ ರಂಜಾನ್ ಮಾರ್ಕೆಟ್ ಹೆಚ್ಚಿನ ಪ್ರಸಿದ್ಧಿಯನ್ನು ಪಡೆದಿದೆ. ಈ ಬಾರಿ ಲೋಕಸಭೆ ಚುನಾವಣೆ ನೀತಿ ಸಂಹಿತೆಯ ನಡುವೆಯೂ ವ್ಯಾಪಾರ ವಹಿವಾಟು ಭಟ್ಕಳದಲ್ಲಿ ಜೋರಾಗಿಯೇ ನಡೆದಿದೆ.

ಟ್ರೆಂಡಿಂಗ್​ ಸುದ್ದಿ

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಬಾಗಲಕೋಟೆ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ; ವಜ್ರಮಟ್ಟಿಯ ಅಂಕಿತಾಗೆ ಐಎಎಸ್ ಆಗುವ ಕನಸು

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ರೈತನ ಮಗಳು ಅಂಕಿತಾ ಬಸಪ್ಪ ಕೊಣ್ಣೂರು ರಾಜ್ಯಕ್ಕೆ ಪ್ರಥಮ; ಬಡತನದಲ್ಲಿ ಅರಳಿದ ಪ್ರತಿಭೆ

SSLC Result 2024: ತುಮಕೂರು ಜಿಲ್ಲೆಯ ಶಿರಾ ವಿದ್ಯಾರ್ಥಿನಿ ರಾಜ್ಯಕ್ಕೆ 2ನೇ ಸ್ಥಾನ; 625ಕ್ಕೆ 624 ಅಂಕ ಗಳಿಸಿದ ಹರ್ಷಿತಾ

ವಿಧಾನ ಪರಿಷತ್ ಚುನಾವಣೆ; ಮೇಲ್ಮನೆಯ 6 ಸ್ಥಾನಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ, ಕಾಂಗ್ರೆಸ್‌ನಲ್ಲಿ ಹುಮ್ಮಸ್ಸು, ಮೈತ್ರಿ ಗೊಂದಲ ಬಿಜೆಪಿಗೆ

ಹೊರರಾಜ್ಯಗಳ ವ್ಯಾಪಾರಿಗಳು ಬರ್ತಾರೆ

ರಮ್ಜಾನ್ ಸಂದರ್ಭ ಒಂದು ತಿಂಗಳ ಉಪವಾಸದ ವೇಳೆ ಪ್ರತಿ ಊರಿನಲ್ಲೂ ಸಂಜೆಯ ವೇಳೆ ಮಾರುಕಟ್ಟೆಗಳು ತೆರೆಯಲ್ಪಡುತ್ತವೆ. ಇಲ್ಲಿ ವಿಶೇಷವಾಗಿ ಬಟ್ಟೆ, ತಿಂಡಿ, ತಿನಸುಗಳು, ಆಟಿಕೆಗಳು ಹಾಗೂ ಅಗತ್ಯಕ್ಕೆ ಬೇಕಾದ ವಸ್ತುಗಳ ಮಾರಾಟ ಜಾಸ್ತಿಯೇ ಇರುತ್ತದೆ. ಸಾಮಾನ್ಯವಾಗಿ ಆಯಾ ಊರಿನಲ್ಲಿ ಆಯಾ ಊರಿನ ವ್ಯಾಪಾರಿಗಳೇ ಕಂಡುಬಂದರೆ, ಭಟ್ಕಳದಲ್ಲಿ ಹಾಗಲ್ಲ. ಹೊರರಾಜ್ಯಗಳ ವ್ಯಾಪಾರಿಗಳೂ ಧಾರಾಳ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ ಸೇರಿ ಹಲವು ರಾಜ್ಯಗಳಿಂದ ವ್ಯಾಪಾರಿಗಳು ಉಪವಾಸ 15 ದಿನಗಳು ಬಾಕಿ ಇರುವಾಗಲೇ ಭಟ್ಕಳಕ್ಕೆ ಆಗಮಿಸುತ್ತಾರೆ. ಬಟ್ಟೆ, ಅಲಂಕಾರಿಕ ವಸ್ತುಗಳು, ಬ್ಯಾಗ್, ಚಪ್ಪಲಿ, ಮನೆ ಬಳಕೆಯ ವಸ್ತುಗಳನ್ನು ಹರಡಿಬಿಡುತ್ತಾರೆ. ಹೀಗೆ ರಮ್ಜಾನ್ ಮಾರ್ಕೆಟ್ ಕಳೆಗಟ್ಟುತ್ತದೆ.

ಮಧ್ಯಮ ವರ್ಗದವರಿಗೆ ಇಷ್ಟ

ಮಧ್ಯಮ ವರ್ಗದವರಿಗೆ ಒಪ್ಪುವಂಥ ಸೆಲೆಕ್ಷನ್ ಗಳು ರಮ್ಜಾನ್ ಮಾರುಕಟ್ಟೆಯಲ್ಲಿ ಕಂಡುಬರುವ ಹಿನ್ನೆಲೆಯಲ್ಲಿ ಭಟ್ಕಳದ ಈ ಮಾರ್ಕೆಟ್ ತನ್ನದೇ ಆದ ವೈಶಿಷ್ಟ್ಯವನ್ನು ಪ್ರದರ್ಶಿಸಿ, ಆಕರ್ಷಿಸುತ್ತದೆ. ಅಲ್ಲಲ್ಲಿ ತಿಂಡಿ, ತಿನಿಸುಗಳ ಮಾರಾಟ, ಉಪವಾಸ ಮುಗಿಸಿ, ಹಬ್ಬ ಆಚರಿಸುವವರಿಗೆ ಹೇಳಿ ಮಾಡಿಸಿದಂತಿದೆ. ಇಲ್ಲಿ ಎಲ್ಲ ಧರ್ಮೀಯರೂ ಆಗಮಿಸುತ್ತಾರೆ. ಸುತ್ತಮುತ್ತಲಿನ ಹೊನ್ನಾವರ, ಕುಂದಾಪುರ, ಶಿರೂರು ಅಷ್ಟೇ ಅಲ್ಲ ಉಡುಪಿಯಿಂದಲೂ ಇಲ್ಲಿಗೆ ಬರ್ತಾರೆ. ಹಬ್ಬ ಹತ್ತಿರವಾಗುತ್ತಿದ್ದಂತೆ ರಮ್ಜಾನ್ ಪೇಟೆ ಕಳೆಗಟ್ಟುತ್ತದೆ. ಆರಂಭದಲ್ಲಿ ಮಂದಗತಿಯಲ್ಲಿ ಕಾಣಿಸಿಕೊಳ್ಳುವ ವ್ಯಾಪಾರ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತದೆ.

ಚುನಾವಣಾ ನೀತಿ ಸಂಹಿತೆ ಬಿಸಿ

ಭಟ್ಕಳದ ಮುಖ್ಯರಸ್ತೆಯಲ್ಲಿ ಹಾಕಲಾಗಿರುವ ರಮ್ಜಾನ್ ಮಾರುಕಟ್ಟೆಗೆ ಒಂದು ವಾರದ ಅನುಮತಿ ನೀಡಲಾಗಿದೆ. ಇದಕ್ಕೆ ಕಾರಣ ಚುನಾವಣಾ ನೀತಿಸಂಹಿತೆ. ಹೀಗಾಗಿ ವ್ಯಾಪಾರಿಗಳು ಆದಾಯದ ಲಾಭ ನಿರೀಕ್ಷೆಯ ಮಟ್ಟಿಗೆ ನಿರಾಶೆ ತಾಳಿದ್ದರೂ ಕೊನೇ ದಿನ ಹೆಚ್ಚಿನ ವ್ಯಾಪಾರವಾಗಬಹುದು ಎಂಬ ಆಶಾಭಾವನೆಯಲ್ಲಿದ್ದಾರೆ. ಹಿಂದೆ ಕೋವಿಡ್ ಕಾಟ ಕೊಟ್ಟಿತು. ಕಳೆದ ಎರಡು ವರ್ಷಗಳಿಂದ ಚುನಾವಣಾ ನೀತಿ ಸಂಹಿತೆ ಬಿಸಿ. ಆದರೂ ಕೊನೇ ನಾಲ್ಕು ದಿನಗಳು ಭರ್ಜರಿ ವ್ಯಾಪಾರ ಆಗಬಹುದು ಎಂಬ ನಂಬಿಕೆ ಕೆಲವು ವ್ಯಾಪಾರಿಗಳಿಗಿದೆ. ಆನ್ಲೈನ್ ಭರಾಟೆಯಲ್ಲೂ ಸಂತೆಮಾರುಕಟ್ಟೆ ವ್ಯಾಪಾರಕ್ಕೆ ಜನರು ಆಗಮಿಸುವುದು ವಿಶೇಷವಾಗಿರುವ ಹಿನ್ನೆಲೆಯಲ್ಲಿ ಭಟ್ಕಳದ ರಮ್ಜಾನ್ ಮಾರುಕಟ್ಟೆ ಸಮಸ್ತ ಧರ್ಮೀಯರನ್ನೂ ಒಡಲಿಗೆ ಸೇರಿಸಿಕೊಂಡು ಭಾವೈಕ್ಯದ ಸಂದೇಶವನ್ನೂ ನೀಡುತ್ತಿದೆ.

ಇಲ್ಲಿ ಉತ್ತಮವಾದ ಹಾಗೂ ಬಗೆಬಗೆಯ ಉಡುಪುಗಳು ಮಕ್ಕಳು, ಹಿರಿಯರು, ಮಹಿಳೆಯರಿಗೆ ಕಡಿಮೆ ದರದಲ್ಲಿ ಸಿಗುತ್ತವೆ. ಈ ಕಾರಣಕ್ಕೆ ಪ್ರತಿವರ್ಷ ಹಬ್ಬಕ್ಕೆ ಇಲ್ಲಿಗೆ ಬರುತ್ತೇವೆ. ಈ ಬಾರಿಯೂ ಚೆನ್ನಾಗಿರುವ ಉಡುಪುಗಳೇ ದೊರೆತಿದೆ. ಇಡೀ ಕುಟುಂಬದ ಸದಸ್ಯರಿಗೆ ಒಂದೇ ಕಡೆ ಬಟ್ಟೆಯನ್ನು ಭಟ್ಕಳದಲ್ಲಿ ಖರೀದಿಸಿದ್ದೇವೆ ಎನ್ನುವುದು ಉಡುಪಿ ಜಿಲ್ಲೆ ಕುಂದಾಪುರ ಮೂಲದ ಕುಟುಂಬವೊಂದರ ನುಡಿ.

(ವರದಿ: ಹರೀಶ ಮಾಂಬಾಡಿ, ಮಂಗಳೂರು)

    ಹಂಚಿಕೊಳ್ಳಲು ಲೇಖನಗಳು