logo
ಕನ್ನಡ ಸುದ್ದಿ  /  ಕರ್ನಾಟಕ  /  Sslc Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಬಾಗಲಕೋಟೆ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ; ವಜ್ರಮಟ್ಟಿಯ ಅಂಕಿತಾಗೆ ಐಎಎಸ್ ಆಗುವ ಕನಸು

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಬಾಗಲಕೋಟೆ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ; ವಜ್ರಮಟ್ಟಿಯ ಅಂಕಿತಾಗೆ ಐಎಎಸ್ ಆಗುವ ಕನಸು

Raghavendra M Y HT Kannada

May 09, 2024 06:50 PM IST

google News

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಅಂಕಿತಾ ಬಸಪ್ಪ ಕನ್ನೂರ್ ಮುಂದೆ ಐಎಎಸ್ ಆಗಬೇಕೆಂದು ತಮ್ಮ ಭವಿಷ್ಯದ ಗುರಿಯ ಬಗ್ಗೆ ಮಾತನಾಡಿದ್ದಾರೆ.

    • ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ಪ್ರಥಮ ಸ್ಥಾನ ಬಂದಿರುವ ಬಾಗಲಕೋಟೆಯ ವಜ್ರಮಟ್ಟಿ ಗ್ರಾಮದ ಅಂಕಿತಾ ಭವಿಷ್ಯದಲ್ಲಿ ಐಎಎಸ್ ಆಗಬೇಕೆಂಬ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ. (ವರದಿ: ಸಮಿವುಲ್ಲಾ ಉಸ್ತಾದ್)
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಅಂಕಿತಾ ಬಸಪ್ಪ ಕನ್ನೂರ್ ಮುಂದೆ ಐಎಎಸ್ ಆಗಬೇಕೆಂದು ತಮ್ಮ ಭವಿಷ್ಯದ ಗುರಿಯ ಬಗ್ಗೆ ಮಾತನಾಡಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಅಂಕಿತಾ ಬಸಪ್ಪ ಕನ್ನೂರ್ ಮುಂದೆ ಐಎಎಸ್ ಆಗಬೇಕೆಂದು ತಮ್ಮ ಭವಿಷ್ಯದ ಗುರಿಯ ಬಗ್ಗೆ ಮಾತನಾಡಿದ್ದಾರೆ.

ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದ ಗ್ರಾಮೀಣ ಪ್ರತಿಭೆ ಅಂಕಿತಾ ಕೊಣ್ಣೂರ (Ankita Kannur) ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ (Karnataka SSLC Result 2024) 625 ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು (SSLC Topper 2024) ವಜ್ರದಂತಹ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ವಜ್ರಮಟ್ಟಿ ಗ್ರಾಮದ ರೈತ ಬಸಪ್ಪ ಮತ್ತು ಗೀತಾ ದಂಪತಿಯ ಮಗಳಾದ ಅಂಕಿತಾ ಕೊಣ್ಣೂರ ಈ ಅನುಪಮ ಸಾಧನೆ ತೋರಿದ್ದು, ಬಾಲಕಿಯ ಸಾಧನೆಗೆ ಇಡೀ ಕರ್ನಾಟಕದಾದ್ಯಂತ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ. ಸ್ವ-ಗ್ರಾಮದ ಎಲ್.ಕೆ. ಮೆಮೋರಿಯಲ್ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಪಡೆದ ಅಂಕಿತಾ ನಂತರ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಮೂಲಕ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ಶಾಲೆಗೆ ಪ್ರವೇಶ ಪಡೆದು 6 ರಿಂದ 10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ.

ಐಎಎಸ್ ಅಧಿಕಾರಿಯಾಗುವ ಕನಸು

ರಾಜ್ಯದಲ್ಲಿಯೇ ಎಸ್‌ಎಸ್‌ಎಲ್‌ಸಿಯಲ್ಲಿ ಟಾಪರ್ ಆಗಿ ಹೊರಹೊಮ್ಮಿರುವ ಅಂಕಿತಾ ಐಎಎಸ್ ಅಧಿಕಾರಿಯಾಗಿ ಉತ್ತಮ ಆಡಳಿತಾಧಿಕಾರಿ ಮೂಲಕ ಜನಸೇವೆ ಮಾಡುವ ದೊಡ್ಡ ಕನಸು ಹೊಂದಿದ್ದಾರೆ. ಪರೀಕ್ಷೆಗೆ ಪೂರಕವಾದ ತಯಾರಿ ಕೈಗೊಂಡು ಈ ಕನಸನ್ನು ನನಸಾಗಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.

ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದುಕೊಂಡ ನಂತರ ಮಾತನಾಡಿದ ಅಂಕಿತಾ, ಐಎಎಸ್ ಅಧಿಕಾರಿಯಾಗಬೇಕು ಎಂಬುದು ನನ್ನ ಆಸೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಅತ್ಯಂತ ಸಂತೋಷ ಮೂಡಿಸಿದೆ. ನನ್ನ ತಂದೆ, ತಾಯಿಯ ಅನುಗ್ರಹ, ಶಿಕ್ಷಕರ ಮಾರ್ಗದರ್ಶನದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಹೀಗಾಗಿ ನನ್ನ ಸಾಧನೆಗೆ ಇವರೇ ಪ್ರೇರಣೆ, ನನ್ನ ಸಾಧನೆ ಪಾಲಕರು ಹಾಗೂ ಶಿಕ್ಷಕರಿಗೆ ಸಮರ್ಪಣೆ ಎಂದು ಸಂತೋಷದಿಂದ ನುಡಿದಿದ್ದಾರೆ.

ಜಿಲ್ಲಾಡಳಿತದಿಂದ ಅಭಿನಂದನೆ ಹಾಗೂ ಅಭಯ

ಬಾಗಲಕೋಟೆಯ ಅಂಕಿತಾ ಬಸಪ್ಪ ಕಣ್ಣೂರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರುವುದಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಅಂಕಿತಾ ಅವರನ್ನು ಜಿಲ್ಲಾಡಳಿತ ಪರವಾಗಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಅಭಿನಂದಿಸಿದ್ದಾರೆ. ಬಾಲಕಿಯ ಸಾಧನೆಯನ್ನು ಅಪಾರವಾಗಿ ಮೆಚ್ಚಿಕೊಂಡಿರುವ ಜಿಲ್ಲಾಡಳಿತ ವಿದ್ಯಾರ್ಥಿನಿಯ ಭವಿಷ್ಯದ ಶಿಕ್ಷಣಕ್ಕೆ ಸಕಲ ರೀತಿಯಿಂದಲೂ ಸಹಾಯ ಕಲ್ಪಿಸುವ ಅಭಯವನ್ನು ನೀಡಿದೆ. ಕು.ಅಂಕಿತಾ ಅವರ ಸಾಧನೆ ಎಲ್ಲರಿಗೂ ಪ್ರೇರಣೆ, ಮುಂದೆಯೂ ಈ ರೀತಿ ಅಂಕಿತಾ ಸಾಧನೆಯ ಪರಂಪರೆ ಮುಂದುವರೆಸಲಿ. ಅವರಿಗೆ ಅಗತ್ಯವಿರುವ ಸಹಾಯವನ್ನು ಜಿಲ್ಲಾಡಳಿತ ಕಲ್ಪಿಸಲಿದೆ ಎಂದು ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಅವರು ಹೇಳಿದ್ದಾರೆ.

ತಮ್ಮ ಅಧ್ಯಯನ ಕ್ರಮದ ಬಗ್ಗೆಯೂ ವಿವರಿಸಿದ ಅಂಕಿತಾ, ಅಧ್ಯಯನ ಶಿಸ್ತುಬದ್ಧವಾಗಿರಬೇಕು, ಕಠಿಣ ಶ್ರಮ ಹಾಗೂ ಸ್ಮಾರ್ಟ್ ವರ್ಕ್ ಎರಡೂ ಬೇಕು. ಕೇವಲ ಸ್ಮಾರ್ಟ್ ವರ್ಕ್ ಮಾಡುತ್ತೇನೆ ಹಾರ್ಡ್ ವರ್ಕ್ ಮಾಡುವುದಿಲ್ಲ ಎಂದರೆ ನಡೆಯುವುದಿಲ್ಲ. ಕೇವಲ ಹಾರ್ಡ್ ವರ್ಕ್ ಮಾಡುತ್ತೇನೆ ಸ್ಮಾರ್ಟ್ ವರ್ಕ್ ಇಲ್ಲ ಎಂದರೆ ಸಾಧನೆ ಸಾಧ್ಯವಾಗುವುದಿಲ್ಲ. ಮೊಬೈಲ್ ಫೋನ್‌ನ್ನು ಕೇವಲ ಓದಿನ ವಿಷಯಕ್ಕೆ ಮಾತ್ರ ಬಳಸಿದೆ. ಅನಾವಶ್ಯಕವಾಗಿ ಮೊಬೈಲ್ ಬಳಸುತ್ತಲೇ ಇರಲಿಲ್ಲ, ಇದು ಹೆಚ್ಚಿನ ಸಮಯ ಓದಿಗೆ ವಿನಿಯೋಗಿಸುವಂತೆ ಮಾಡಿತು.

ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಬೇಕಿದ್ರೆ ಯುಟ್ಯೂಬ್‌ನಲ್ಲಿ ನೋಡುತ್ತಿದ್ದೆ. ಮೊಬೈಲ್ ಕೇವಲ ಅಧ್ಯಯನ ವಿಷಯಕ್ಕಷ್ಟೇ ಸೀಮಿತವಾಗಲಿ ಎಂದು ಸಲಹೆ ನೀಡಿದ ಅಂಕಿತಾ, ಕೆಲವರು ಚೆನ್ನಾಗಿ ಓದುತ್ತಾರೆ, ಆದರೆ ಪರೀಕ್ಷೆ ಬರೆಯುವುದರಲ್ಲಿ ಗಡಿಬಿಡಿ ಮಾಡಿಕೊಂಡು ಸಾಧನೆ ತೋರಲು ವಿಫಲರಾಗುತ್ತಾರೆ, ಹೀಗಾಗಿ ಏಕಾಗ್ರತೆಯೂ ಅತ್ಯಂತ ಅಗತ್ಯ ಎಂದಿದ್ದಾರೆ. (ವರದಿ: ಸಮಿವುಲ್ಲಾ ಉಸ್ತಾದ್)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ