Gruha Jyothi: ಬೀದರ್‌ನಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ; ಬಡಜನರ ಆರ್ಥಿಕ ಹೊರೆತಗ್ಗಿಸಲು ಗ್ಯಾರಂಟಿ ಯೋಜನೆ ನೆರವು: ಸಚಿವ ಈಶ್ವರ್ ಖಂಡ್ರೆ
Aug 13, 2023 06:59 AM IST
ಬೀದರ್‌ನಲ್ಲಿ ಗೃಹಜ್ಯೋತಿ ಯೋಜನೆಗೆ ಸಚಿವ ಈಶ್ವರ್ ಖಂಡ್ರೆ ಚಾಲನೆ ನೀಡಿದರು.
ಬೀದರ್‌ನಲ್ಲಿ 3,67,871 ಜನ ವಿದ್ಯುತ್ ಬಳಕೆದಾರರಿದ್ದು, ಇದರಲ್ಲಿ 2,99,628 ಜನ ಗೃಹಜ್ಯೋತಿ ಯೋಜನೆಯಡಿ ನೋಂದಣಿ ಮಾಡಿಸಿಕೊಂಡಿರುವುದರಿಂದ ಶೇ.81 ಪ್ರತಿಶತ ಜನರು ಈ ಯೋಜನೆ ಲಾಭ ಪಡೆಯಲಿದ್ದಾರೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಬೀದರ್: ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಜ್ಯೋತಿ (Gruha Jyothi) ಯೋಜನೆಯಿಂದ ಬಡಜನರ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಹೊರೆ ತಗ್ಗಿಸುವುದರ ಜೊತೆಗೆ ಅವರ ಮನೆ ಬೆಳಗಲಿದೆ ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚವಿರಾದ ಈಶ್ವರ ಬಿ.ಖಂಡ್ರೆ ಹೇಳಿದ್ದಾರೆ.
ಶನಿವಾರ (ಆಗಸ್ಟ್ 12) ನಗರದ ಪ್ರತಾಪ ನಗರದ ಹತ್ತಿರದ ಘಾಳೆ ಲಕ್ಸುರಿ ಕನ್ವೆನ್ಷನ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಆಗಸ್ಟ್ 5 ರಂದು ಕಲಬುರಗಿಯಲಿ ಮುಖ್ಯಮಂತ್ರಿಗಳು ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿದ್ದಾರೆ. ಅದರಂತೆ ಬೀದರ್‌ನಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿದ್ದೇನೆ. ಜಿಲ್ಲೆಯಲ್ಲಿ 3,67,871 ಜನ ವಿದ್ಯುತ್ ಬಳಕೆದಾರರಿದ್ದು, ಇದರಲ್ಲಿ 2,99,628 ಜನ ಗೃಹಜ್ಯೋತಿ ಯೋಜನೆಯಡಿ ನೋಂದಣಿ ಮಾಡಿಸಿಕೊಂಡಿರುವುದರಿಂದ ಶೇ.81 ಪ್ರತಿಶತ ಜನರು ಈ ಯೋಜನೆ ಲಾಭ ಪಡೆಯಲಿದ್ದಾರೆ ಎಂದಿದ್ದಾರೆ.
ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿ ಮಾಡಲಾಗುತ್ತಿದೆ. ಅದರಂತೆ ಈಗಾಗಲೇ ಜಾರಿ ಮಾಡಿರುವ ಶಕ್ತಿ ಯೋಜನೆಯಡಿ ದಿನನಿತ್ಯ 50 ಲಕ್ಷ ಮಹಿಳೆಯರು ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ನೀಡಲು ನಿರ್ಧರಿಸಲಾಗಿತ್ತು. ಆದರೆ ಅಕ್ಕಿ ಹೊಂದಿಸಲು ಆಗದೇ ಇರುವುದರಿಂದ ತಲಾ 170 ರೂ. ರಂತೆ ಪಡಿತರ ಕುಟುಂಬರ ಮುಖ್ಯಸ್ಥರ ಖಾತೆಗಳಿಗೆ ಹಣ ಜಮೆ ಮಾಡಲಾಗಿದೆ ಎಂದು ಹೇಳಿದರು.
ಆಗಸ್ಟ್ 27ಕ್ಕೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ
ಇನ್ನೂಳಿದ ಯೋಜನೆಗಳಾದ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ನೋಂದಣಿ ಪ್ರಾರಂಭವಾಗಿದ್ದು, 1 ಕೋಟಿ ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಸಂಖ್ಯೆ 1.50 ಕೋಟಿಗೆ ದಾಟುವ ಸಂಭವ ಇದೆ. ಈ ಯೋಜನೆಗೆ ಆಗಸ್ಟ್ 27 ರಂದು ಚಾಲನೆ ನೀಡಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಅದೇ ರೀತಿ ನಿರುದ್ಯೋಗಿ ಯುವಕ ಯುವತಿಯರಿಗೆ ನೀರುದ್ಯೋಗ ಪದವೀಧರರಿಗೆ 3000 ರೂ. ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ರೂ. ನೀಡುವ ಯುವನಿಧಿ ಯೋಜನೆಗೆ ಜನವರಿಯಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದ್ದಾರೆ.
ಅರಣ್ಯ ಇಲಾಖೆಯಿಂದ ರಾಜ್ಯದ್ಯಾಂತ 5 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಲಾಗಿತ್ತು, ಈಗಾಗಲೇ 41 ದಿನಗಳಲ್ಲಿ ರಾಜ್ಯದಲ್ಲಿ 3 ಕೋಟಿ 10 ಲಕ್ಷ ಸಸಿಗಳನ್ನು ನೆಡಲಾಗಿದೆ. ಬೀದರ ಜಿಲ್ಲೆಯಲ್ಲಿ 10.5 ಲಕ್ಷ ಸಸಿಗಳನ್ನು ನೆಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಕೃಷ್ಣಾಮೃಗ ಮೀಸಲು ಪ್ರದೇಶ ನಿರ್ಮಿಸಲು ನಿರ್ಧರಿಸಿದ್ದು ಅರಣ್ಯ ಇಲಾಖೆಯಿಂದ 2 ಕೋಟಿ ಅನುದಾನ ನೀಡಲಾಗಿದೆ. ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 3 ಸಾವಿರ ಕೋಟಿ ಅನುದಾನ ನೀಡಿದ್ದು ಕಳೆದ ಬಾರಿ 2 ಸಾವಿರ ಕೋಟಿ ಅನುದಾನ ಸೇರಿ ಒಟ್ಟು 5 ಸಾವಿರ ಕೋಟಿ ಅನುದಾನ ಕೆಕೆಆರ್‌ಡಿಬಿಯಡಿ ಇದ್ದು, ಮುಂದಿನ ದಿನಗಳ ಈ ಭಾಗದ ಅಭಿವೃದ್ಧಿಗೆ ಅದನ್ನು ಹಂತ ಹಂತವಾಗಿ ಬಳಕೆ ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ತ್ಯಾಜವನ್ನು ಹೊರಸೂಸಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಕೈಗಾರಿಕೆಗಳ ಬಗ್ಗೆ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ವಹಿಸುವಂತೆ ಅಧಿಕಾರಿಗಳಿ ಸೂಚಿಸಿದ್ದೇನೆ. ಇಗಾಗಲೇ 8 ಕೈಗಾರಿಕೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪರಿಸರದ ನಿಯಮಗಳನ್ನು ಮೀರಿ ಕೈಗಾರಿಕೆಗಳನ್ನು ನಡೆಸುತ್ತಿದ್ದರೆ ಅವರ ವಿರುದ್ಧವು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಮಹಿಳೆಯರ ಆರ್ಥಿಕ ಪ್ರಗತಿಗೆ ಗೃಹಲಕ್ಷ್ಮಿ ಸಹಕಾರಿ
ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಮಾತನಾಡಿ, ತಿಂಗಳ ವಿದ್ಯುತ ಬಿಲ್ ಕಟ್ಟಲಾಗದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಕೆಲವು ಜನರಿದ್ದಾರೆ ಅವರಿಗೆ ಗೃಹಜ್ಯೋತಿ ಯೋಜನೆಯಿಂದ ಲಾಭವಾಗಲಿದೆ. ಅದೇ ರೀತಿ ಗೃಹಲಕ್ಷ್ಮೀ ಯೋಜನೆಯಿಂದ ಮನೆಯ ಯಜಮಾನಿಯರು 2 ಸಾವಿರ ಪಡೆಯಲಿದ್ದಾರೆ ಇದು ಅವರ ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಐದು ಮಹತ್ವಕಾಂಕ್ಷಿ ಯೋಜನೆಗಳ ಲಾಭವನ್ನು ರಾಜ್ಯದ ಶೇ.80 ರಿಂದ 90 ಪ್ರತಿಶತ ಜನ ಲಾಭ ಪಡೆಯಲಿದ್ದಾರೆ. ಇದು ದೇಶಕ್ಕೆ ಮಾದರಿಯಾಗಲಿದೆ. ಮಹಿಳೆಯರಿಗೆ, ಯುವಕರಿಗೆ, ಸೇರಿದಂತೆ ರಾಜ್ಯದ ಎಲ್ಲಾ ಜನರು ಈ ಐದು ಯೋಜನೆಗಳಲ್ಲಿ ಒಂದಲ್ಲಾ ಒಂದು ಯೋಜನೆಯ ಲಾಭ ಪಡೆಯಲಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಗೃಹಜ್ಯೋತಿ ಯೋಜನೆಯಡಿ ಲಾಭ ಪಡೆದ ಫಲಾನುಭವಿಗಳಿಗೆ ಜೀರೊ ವಿದ್ಯುತ್ ಬಿಲ್ ವಿತರಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ ಸದಸ್ಯರುಗಳಾದ ಅರವಿಂದಕುಮಾರ ಅರಳಿ, ಭೀಮವಾರ ಬಿ. ಪಾಟೀಲ್, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಜೆಸ್ಕಾಂ ಕಲಬುರಗಿ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಪಾಂಡ್ವೆ ರಾಹುಲ್ ತುಕಾರಾಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಿಭಾಗ