Bidar News: ಬೀದರ್ ಮಾರ್ಗವಾಗಿ ರೈಲ್ವೆ ಡಬಲ್ ಲೈನ್ ನಿರ್ಮಾಣಕ್ಕೆ ಕೇಂದ್ರ ಸರಕಾರ ಅಸ್ತು; ಸಚಿವ ಭಗವಂತ ಖೂಬಾ
ಯಶವಂತಪುರ ಬೀದರ ಹಾಗೂ ಇತರೆ ವೇಗದೂತ ರೈಲುಗಳು ಸಮಯಕ್ಕೆ ಸರಿಯಾಗಿ ಬೀದರಗೆ ತಲುಪುವ ಉದ್ದೇಶದಿಂದ ಈ ಸಮಯ ಬದಲಾವಣೆ ಮಾಡಿಸಲಾಗಿದೆ, ಕ್ಷೇತ್ರದ ಎಲ್ಲಾ ಪ್ರಯಾಣಿಕರು ಈ ಸಮಯ ಬದಲಾವಣೆಯ ಸದೂಪಯೋಗ ಪಡೆದುಕೊಳ್ಳಬೇಕೆಂದು ಕೇಂದ್ರ ಸಚಿವ ಭಗವಂತ ಖೂಬಾ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬೀದರ್: ಬೀದರ್ ರೈಲ್ವೆಗೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ಆಶೀರ್ವಾದದಿಂದ ಹಲವಾರು ಅಭಿವೃದ್ದಿ ಕಾಮಗಾರಿಗಳು, ಹೊಸ ರೈಲುಗಳು ಮುಂತಾದ ಸೌಲಭ್ಯಗಳು ನಮ್ಮ ಜನತೆಗೆ ಸಿಗುತ್ತಿದ್ದು, ಇದರ ಜೊತೆಗೆ ವಿಕಾರಾಬಾದನಿಂದ ಪರಳಿ ವಾಯಾ ಬೀದರ್ ಮಾರ್ಗವಾಗಿ ಒಟ್ಟು 267.77 ಕಿಮೀ ರೈಲ್ವೆ ಲೈನ್‌ಗೆ ಡಬಲ್ ಲೈನ್ ಮಾಡಲು ಫೈನಲ್ ಲೋಕೇಷನ್ ಸರ್ವೆ ಮಾಡಲು ರೈಲ್ವೆ ಇಲಾಖೆ ಮಂಜುರಾತಿ ನೀಡಿದ್ದು, ಇದು ಮತ್ತೊಂದು ಜಿಲ್ಲೆಯ ಜನತೆಗೆ ಸಿಹಿ ಸುದ್ಧಿಯಾಗಿದೆ ಎಂದು ಕೇಂದ್ರ ರಸಾನಿಯಕ ಹಾಗೂ ರಸಗೊಬ್ಬರ ಸಚಿವ ಭಗವಂತ ಖೂಬಾ ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈಲ್ವೆ ಡಬಲ್ ಲೈನ್ ನಿರ್ಮಾಣದ ಸರ್ವೆ ಕಾರ್ಯಕ್ಕಾಗಿ ರೂ. 5.36 ಕೋಟಿ ಅನುದಾನ ಮೀಸಲಿಡಲಾಗಿದೆ. ಶೀಘ್ರದಲ್ಲಿ ಟೆಂಡರ್ ಕರೆದು, ಸರ್ವೆ ಕಾಮಗಾರಿ ಪ್ರಾರಂಭಿಸಲಾಗುವುದು, ಡಬಲ್ ಲೈನ್ ಅಭಿವೃದ್ದಿಗೊಂಡಲ್ಲಿ ನಮ್ಮ ಜಿಲ್ಲೆಯ ಜನರಿಗೆ ತುಂಬಾ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಡಬಲ್ ಲೈನ್ ಇಲ್ಲದ ಕಾರಣ ನಮ್ಮ ರೈಲುಗಳು ವಿಕಾರಾಬಾದ ಮೇಲೆ ನಿಲ್ಲುತ್ತಿವೆ ಇದರಿಂದ ಬೀದರ್‌ಗೆ ರೈಲುಗಳು ಸಮಯಕ್ಕೆ ಸರಿಯಾಗಿ ಬರಲು ಕೆಲವೊಂದು ಸಲ ವಿಳಂಬವಾಗುತ್ತಿದೆ. ಡಬಲ್ ಲೈನ್ ನಿರ್ಮಾಣದಿಂದ ನಮ್ಮ ರೈಲುಗಳು ಎಲ್ಲಿಯೂ ನಿಲ್ಲದೆ ಸಮಯಕ್ಕೆ ಸರಿಯಾಗಿ ರೈಲುಗಳು ಬೀದರ್‌ಗೆ ತಲುಪುತ್ತವೆ. ಈ ಡಬಲ್ ಲೈನ್ ಮಾಡಲು ಸರ್ವೆ ಮಾಡಲು ಮಂಜೂರಾತಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹಾಗೂ ರೈಲ್ವೆ ಸಚಿವರಾದ ಅಶ್ವೀನಿ ವೈಷ್ಣವರವರಿಗೆ ಕೇಂದ್ರ ಸಚಿವ ಭಗವಂತ ಖೂಬಾ ಧನ್ಯವಾದಗಳು ತಿಳಿಸಿದ್ದಾರೆ.
ಯಶವಂತಪೂರ ಬೀದರ್ ರೈಲು ಸಮಯಕ್ಕೆ ಸರಿಯಾಗಿ ಬೀದರ್ ತರುವ ಉದ್ಧೇಶದಿಂದ ಬೀದರ್ –ಕಲಬುರಗಿ ಮಧ್ಯೆ ಇರುವ 2 ಡೆಮೋ ರೈಲುಗಳ ಸಮಯ ಸಹ ಬದಲಾಯಿಸಲಾಗಿದೆ. ಎರಡ್ಮೂರು ದಿನಗಳಲ್ಲಿ ರೈಲು ಸಂಖ್ಯೆ: 07761, ಬೀದರನಿಂದ ಕಲಬುರಗಿಗೆ ಬೆಳಿಗ್ಗೆ 7.30ರ ಬದಲಾಗಿ 6.45ಕ್ಕೆ ಬೀದರನಿಂದ ಹೊರಡಲಿದೆ, ಕಲಬುರಗಿಗೆ ಬೆಳಗ್ಗೆ 9.30ಕ್ಕೆ ತಲುಪಲಿದೆ ಮತ್ತು ರೈಲು ಸಂಖ್ಯೆ: 07748, ಸಾಯಂಕಾಲ 4.40ರ ಬದಲಾಗಿ 5.30ಕ್ಕೆ ಬೀದರನಿಂದ ಹೊರಟು ರಾತ್ರಿ 8.20ಕ್ಕೆ ಕಲಬುರಗಿ ಬರಲಿದೆ ಎಂದು ತಿಳಿಸಿದ್ದಾರೆ.
ರೈಲು ಸಂಖ್ಯೆ: 07745 ಬೆಳಗ್ಗೆ 7.30ರ ಬದಲಾಗಿ 6.45ಕ್ಕೆ ಕಲಬುರಗಿಯಿಂದ ಹೊರಟು ಬೆಳಗ್ಗೆ 9.30ಕ್ಕೆ ಬೀದರ ತಲುಪಲಿದೆ, ರೈಲು ಸಂಖ್ಯೆ: 07764 ಸಾಯಂಕಲಾ 4.40ರ ಬದಲಾಗಿ ಸಾಯಂಕಲಾ 5.30೦ಕ್ಕೆ ಕಲಬುರಗಿಯಿಂದ ಹೊರಟು ರಾತ್ರಿ 8.05ಕ್ಕೆ ಬೀದರಗೆ ತಲುಪಲಿದೆ ಎಂದು ತಿಳಿಸಿದ್ದಾರೆ.
(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)