ಬೆಂಗಳೂರಿನಲ್ಲಿ ಆಯುಧ ಪೂಜೆ, ವಿಜಯದಶಮಿ ಸಂಭ್ರಮ, ಬಡವರಿಗೆ ಹೂವು,ಬೂದುಗುಂಬಳ, ಹಣ್ಣುಗಳು ಗಗನಕುಸುಮ; ಗ್ರಾಹಕರಿಗೆ ಬೆಲೆ ಏರಿಕೆಯ ಬರೆ
Oct 10, 2024 11:38 AM IST
ಬೆಂಗಳೂರಿನಲ್ಲಿ ಆಯುಧ ಪೂಜೆ, ವಿಜಯದಶಮಿ ಸಂಭ್ರಮ ನೆಲೆಸಿದೆ. ಈ ನಡುವೆ, ಗ್ರಾಹಕರಿಗೆ ಬೆಲೆ ಏರಿಕೆಯ ಬರೆ ಬಿದ್ದಿದ್ದು, ಬಡವರಿಗೆ ಹೂವು,ಬೂದುಗುಂಬಳ, ಹಣ್ಣುಗಳು ಗಗನಕುಸುಮವಾಗಿವೆ.
ಆಯುಧ ಪೂಜೆ, ವಿಜಯದಶಮಿ ಆಚರಣೆಗಾಗಿ ಬೆಂಗಳೂರು ಸಜ್ಜಾಗಿದೆ. ಹಬ್ಬದ ಸಂಭ್ರಮದ ನಡುವೆ ಹೂವು, ಹಣ್ಣು, ಬೂದುಗುಂಬಳದ ಬೆಲೆ ಏರಿದ್ದು, ಬಡವರಿಗೆ ಇವೆಲ್ಲವೂ ಗಗನಕುಸುಮವಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಹೂವು, ಹಣ್ಣು, ಬೂದುಗುಂಬಳ ದರ ಈಗ ಹೇಗಿದೆ ನೋಡೋಣ.
ಬೆಂಗಳೂರು: ನವರಾತ್ರಿ ಹಬ್ಬವೂ ಕೊನೆಯ ಹಂತದಲ್ಲಿದ್ದು, ನಾಳೆ (ಅಕ್ಟೋಬರ್ 11) ಆಯುಧ ಪೂಜೆ, ನಾಡಿದ್ದು (ಅಕ್ಟೋಬರ್ 12) ವಿಜಯದಶಮಿ ಆಚರಣೆಗೆ ಬೆಂಗಳೂರಿಗೆ ಬೆಂಗಳೂರೇ ಸಜ್ಜಾಗಿದೆ. ಹೂವು, ಹಣ್ಣು, ತರಕಾರಿ ಬೆಲೆ ಗಗನಮುಖಿಯಾಗಿವೆ. ಹೂವು ಮತ್ತು ಬೂದುಗುಂಬಳದ ಬೆಲೆ ಏರತೊಡಗಿದೆ. ಹಬ್ಬದ ದಿನದ ಬೆಲೆ ಏರಿಕೆ ಬಿಸಿ ತಟ್ಟದಂತೆ ಎರಡು ದಿನ ಮುಂಚಿತವಾಗಿಯೆ ಹೂವು, ಹಣ್ಣು, ತರಕಾರಿ ಖರೀದಿಗೆ ಜನ ಮಾರುಕಟ್ಟೆಗಳಲ್ಲಿ ಬಂದಿರುವುದು ಬುಧವಾರವೇ ಕಂಡುಬಂತು. ಇಂದು (ಅಕ್ಟೋಬರ್ 10) ಕೂಡ ಮಾರುಕಟ್ಟೆಗಳಲ್ಲಿ ಬೆಳಗ್ಗೆಯೇ ಜನದಟ್ಟಣೆ ಇತ್ತು. ಶುಕ್ರವಾರದ ಆಯುಧ ಪೂಜೆ ಸಂದರ್ಭದಲ್ಲಿ ವಾಹನಪೂಜೆ, ಕೈಗಾರಿಕಾ ಸ್ಥಾಪನೆಗಳಲ್ಲಿ ಪೂಜೆ ನಡೆಯುವುದು ವಾಡಿಕೆ. ಆದ್ದರಿಂದಲೇ ಹೂವು, ಬೂದುಗುಂಬಳಕ್ಕೆ ಭಾರಿ ಬೇಡಿಕೆ. ಶುಕ್ರವಾರ, ಶನಿವಾರ, ಭಾನುವಾರ ರಜೆ ಇರುವ ಕಾರಣ ಅನೇಕ ಕಡೆ ಇಂದೇ ಆಯುಧ ಪೂಜೆ ಮಾಡುತ್ತಿದ್ದಾರೆ. ಹೀಗಾಗಿ ಹೂವು ಮತ್ತು ಬೂದುಗುಂಬಳ ರೇಟ್ ನಿಧಾನವಾಗಿ ಏರತೊಡಗಿದೆ. ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ಮಡಿವಾಳ, ದಾಸರಹಳ್ಳಿ, ವಿಜಯನಗರ, ಗಾಂಧಿ ಬಜಾರ್, ಜಯನಗರ ಸೇರಿ ಬೆಂಗಳೂರಿನ ಕೆಲವು ತಾತ್ಕಾಲಿಕ ಮಾರುಕಟ್ಟೆಗಳು ತುಂಬಿತುಳುಕತೊಡಗಿವೆ.
ತಮಿಳುನಾಡು, ಆಂಧ್ರದಿಂದ ಬೂದುಗುಂಬಳ ಬೆಂಗಳೂರಿಗೆ
ಆಯುಧ ಪೂಜೆಗೆ ಬೂದುಗುಂಬಳವೇ ಮುಖ್ಯ. ಕಾರ್ಖಾನೆ, ಕಚೇರಿ, ಅಂಗಡಿ ಮುಂಗಟ್ಟು, ಮನೆಗಳಲ್ಲಿ ಆಯುಧ ಪೂಜೆಗೆ, ವಾಹನ ಪೂಜೆಗೂ ಬೂದುಗುಂಬಳ ಒಡೆಯುವುದು ವಾಡಿಕೆ. ಬೆಂಗಳೂರಿಗೆ ಹೆಚ್ಚಾಗಿ ತಮಿಳುನಾಡು ಮತ್ತು ಆಂಧ್ರದಿಂದಲೇ ಬೂದುಗುಂಬಳ ಪೂರೈಕೆಯಾಗುತ್ತದೆ. ಈ ಬಾರಿ ಕೂಡ ಅಲ್ಲಿಂದ ಬೂದುಗುಂಬಳ ಬೆಂಗಳೂರು ತಲುಪಿವೆ. ಆದರೆ ದರ ಏರಿಕೆಯಾಗಿದೆ. ಮಳೆ ಕಾರಣ ಇಳುವರಿ ಕಡಿಮೆಯಾಗಿರುವುದು ಇದಕ್ಕೆ ಕಾರಣ. ಬೂದುಗುಂಬಳ ಸಗಟು ದರ ಕಿಲೋಗೆ 30 ರೂಪಾಯಿಯಿಂದ 35 ರೂಪಾಯಿ ಇದ್ದರೆ, ಚಿಲ್ಲರೆ ಮಾರಾಟ ದರ 40 ರಿಂದ 50 ರೂಪಾಯಿ ತನಕ ಇದೆ. ಕೆಲವರು ತೂಕದ ಬದಲು ಗಾತ್ರ ನೋಡಿ ದರ ನಿಗದಿ ಮಾಡುತ್ತಾರೆ. ಸಣ್ಣ ಗಾತ್ರದ ಕುಂಬಳ ಕಾಯಿ 100 ರೂ.ನಿಂದ 150 ರೂಪಾಯಿಗೆ ಮಾರಾಟವಾದರೆ ಮಧ್ಯಮ ಗಾತ್ರದ್ದು 200 ರೂಪಾಯಿ ಆಸುಪಾಸಿನಲ್ಲೂ, ದೊಡ್ಡ ಗಾತ್ರದ್ದು ಇನ್ನೂ ಹೆಚ್ಚಿನ ದರಕ್ಕೆ ಮಾರಾಟ ಆಗುತ್ತಿದೆ.
ದುಬಾರಿಯಾಗಿದೆ ಹೂವು, ಹಣ್ಣು
ಮಳೆ ಹಿನ್ನೆಲೆಯಲ್ಲಿ ಹೂವಿನ ದರ ಏರಿಕೆಯಾಗಿದೆ. ಬುಧವಾರ ಕೆ.ಆರ್. ಮಾರುಕಟ್ಟೆಯಲ್ಲಿ ಸೇವಂತಿಗೆ ಹೂವು ಕೆ.ಜಿ.ಗೆ 100-300 ರೂ., ಚೆಂಡು ಹೂವು ಕೆ.ಜಿ.ಗೆ 60 ರಿಂದ 80 ರೂ. ಕನಕಾಂಬರಿ 600 ರೂ., ಕಾಕಡ 600, ಮಲ್ಲಿಗೆ ಮೊಗ್ಗು 500 ರೂ., ಸುಗಂಧರಾಜ ಕೆ.ಜಿ. 400 ರೂ.ಗೆ ಮಾರಾಟವಾಯಿತು. ಪಾಲಿ ಹೌಸ್‌ಗಳಲ್ಲಿ ಬೆಳೆದ ಸೇವಂತಿಗೆ, ಚೆಂಡು ಹೂವಿಗೆ ಬೇಡಿಕೆ ಹೆಚ್ಚಿದೆ.
ಹೂವು, ಹಣ್ಣು, ತರಕಾರಿಗಳ ದರ ಬೇರೆ ಬೇರೆ ಏರಿಯಾಗಳಲ್ಲಿ ಬೇರೆ ಬೇರೆ ರೀತಿ ಇದೆ. ಇಲ್ಲಿ ಕೊಟ್ಟಿರುವ ದರವು ಒಟ್ಟು ದರದ ಮಟ್ಟವನ್ನು ಸೂಚಿಸುವುದಕ್ಕೆ ಮಾತ್ರ ಸೀಮಿತ. ಮಾರುಕಟ್ಟೆಯಲ್ಲಿ ದರದ ಮಟ್ಟ ಯಾವ ರೀತಿ ಇದೆ ಎಂದು ಅಂದಾಜಿಸಲು ನೆರವಾಗುವ ಮಾಹಿತಿ ಮಾತ್ರ ಇದು.
ಕಡ್ಲೆಪುರಿಗೆ ಭಾರಿ ಬೇಡಿಕೆ ಕಾರಣ ದುಬಾರಿ: ಆಯುಧ ಪೂಜೆ ಹಾಗೂ ವಿಜಯ ದಶಮಿ ದಿನ ಪೂಜೆ ನೆರವೇರಿಸಿದ ಬಳಿಕ ಹಣ್ಣು ಮತ್ತು ಸಿಹಿಯೊಂದಿಗೆ ಕಡ್ಲೆಪುರಿ ವಿತರಿಸುವುದು ವಾಡಿಕೆ. ಹೀಗಾಗಿ ಬೆಂಗಳೂರಿನಲ್ಲಿ ಕಡ್ಲೆಪುರಿಗೆ ಬೇಡಿಕೆ ಹೆಚ್ಚಿದೆ. ಒಂದು ಸೇರಿಗೆ 10-15 ರೂ.ವರೆಗೆ ಮಾರಾಟವಾಗುತ್ತಿದೆ. ಬಾಳೆಕಂಬ ಮಧ್ಯಮ ಗಾತ್ರದ ಜೋಡಿಗೆ 100 ರೂ., ಮಾವಿನ ತೋರಣ 20 ರೂ., 100 ವೀಳ್ಯದೆಲೆ 100 ರೂ., ಗರಿಕೆ ಕಟ್ಟು 30 ರೂ., ಬಿಲ್ವಪತ್ರೆ 20 ರೂಪಾಯಿ ಇದೆ.