logo
ಕನ್ನಡ ಸುದ್ದಿ  /  ಜೀವನಶೈಲಿ  /  ಹೂವು, ಹಣ್ಣು ತರಕಾರಿ, ಅಡುಗೆ ಎಣ್ಣೆ ದರ ಹೆಚ್ಚಳ; ಸಾಮಾನ್ಯರ ಬಾಳಲ್ಲಿ ಬೆಲೆ ಏರಿಕೆಯ ದರ್ಬಾರ್‌, ದಸರಾ, ನವರಾತ್ರಿ ಆಚರಣೆ ದುಬಾರಿ

ಹೂವು, ಹಣ್ಣು ತರಕಾರಿ, ಅಡುಗೆ ಎಣ್ಣೆ ದರ ಹೆಚ್ಚಳ; ಸಾಮಾನ್ಯರ ಬಾಳಲ್ಲಿ ಬೆಲೆ ಏರಿಕೆಯ ದರ್ಬಾರ್‌, ದಸರಾ, ನವರಾತ್ರಿ ಆಚರಣೆ ದುಬಾರಿ

Umesh Kumar S HT Kannada

Oct 03, 2024 12:08 PM IST

google News

ಹಣ್ಣು ತರಕಾರಿ, ಅಡುಗೆ ಎಣ್ಣೆ ದರ ಹೆಚ್ಚಳ (ಸಾಂಕೇತಿಕ ಚಿತ್ರ)

  • ನವರಾತ್ರಿ, ದಸರಾ ಹಬ್ಬದ ಹಿನ್ನೆಲೆಯಲ್ಲಿ ಸಹಜವಾಗಿಯೇ ಹೂವು, ಹಣ್ಣು, ತರಕಾರಿ ಮತ್ತು ಇತರೆ ಅಗತ್ಯ ವಸ್ತುಗಳ ದರ ಏರಿಕೆಯಾಗುತ್ತದೆ. ಈ ಬಾರಿ ಹೂವು, ಹಣ್ಣು ತರಕಾರಿ, ಅಡುಗೆ ಎಣ್ಣೆ ದರ ಹೆಚ್ಚಳವಾಗಿದ್ದು, ಸಾಮಾನ್ಯರ ಬಾಳಲ್ಲಿ ಬೆಲೆ ಏರಿಕೆಯ ದರ್ಬಾರ್‌ ನಡೆದಿದೆ. ಅವರಿಗೆ ದಸರಾ, ನವರಾತ್ರಿ ಆಚರಣೆ ದುಬಾರಿಯಾಗಿದ್ದು, ದರ ಏರಿಕೆಯ ವಿವರ ಇಲ್ಲಿದೆ.

ಹಣ್ಣು ತರಕಾರಿ, ಅಡುಗೆ ಎಣ್ಣೆ ದರ ಹೆಚ್ಚಳ (ಸಾಂಕೇತಿಕ ಚಿತ್ರ)
ಹಣ್ಣು ತರಕಾರಿ, ಅಡುಗೆ ಎಣ್ಣೆ ದರ ಹೆಚ್ಚಳ (ಸಾಂಕೇತಿಕ ಚಿತ್ರ) (Pexels)

ಬೆಂಗಳೂರು: ಸಾಮಾನ್ಯರ ಬಾಳಿನಲ್ಲಿ ಬೆಲೆ ಏರಿಕೆಯ ದರ್ಬಾರ್‌ ನಡೆಯುತ್ತಿದ್ದು, ದಸರಾ ಮತ್ತು ನವರಾತ್ರಿ ಆಚರಣೆ ಅವರ ಪಾಲಿಗೆ ದುಬಾರಿಯಾಗಿ ಪರಿಣಮಿಸಿದೆ. ಹೂವು, ಹಣ್ಣು, ತರಕಾರಿ, ಖಾದ್ಯ ತೈಲ ಹೀಗೆ ಪಟ್ಟಿ ಮಾಡುತ್ತ ಹೋಗುವುದಾದರೆ ಅಗತ್ಯ ವಸ್ತುಗಳ ಪಟ್ಟಿ ಬೆಳೆದಂತೆ ಅವುಗಳ ದರವೂ ಗಗನ ಮುಖಿಯಾಗಿರುವುದು ಗಮನಸೆಳೆಯುತ್ತದೆ. ನವರಾತ್ರಿ ಆಚರಣೆಯಲ್ಲಿ ದುರ್ಗಾ ದೇವಿಯ ಒಂಬತ್ತು ಅವತಾರಗಳ ಆರಾಧನೆ. ದಿನಕ್ಕೊಂದು ದೇವಿಯ ಆರಾಧನೆಗೆ, ಪೂಜೆಗೆ ನಿತ್ಯವೂ ಹೂವು, ಹಣ್ಣು ಬೇಕಾಗಿದ್ದು, ಅಡುಗೆಗೆ ತರಕಾರಿಯೂ ಬೇಕು. ಇವೆಲ್ಲವೂ ಈಗ ದುಬಾರಿಯಾಗಿರುವುದು ಸಾಮಾನ್ಯರ ಚಿಂತೆಗೆ ಕಾರಣ. ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ರಾಜ್ಯದ ಉದ್ದಗಲಕ್ಕೂ ಎಂದರೆ ದಕ್ಷಿಣ ಕನ್ನಡದಿಂದ ಹಿಡಿದು ಉತ್ತರ ಕರ್ನಾಟಕವರೆಗೂ ಆಹಾರ ಧಾನ್ಯ ಮತ್ತು ಖಾದ್ಯ ತೈಲ ದರ ಏರಿಕೆಯಾಗಿದೆ. ಹೂವು ಹಣ್ಣುತರಕಾರಿ ಬೆಲೆಯೂ ಏರಿದೆ.

ಬೆಂಗಳೂರಲ್ಲಿ ತರಕಾರಿ ಬೆಲೆ

ಯಶವಂತಪುರ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಯಲ್ಲಿ ಸ್ವಲ್ಪ ಏರಿಕೆ ಉಂಟಾಗಿದೆ. ಸದ್ಯ ಟೊಮ್ಯಾಟೋ ಆವಕದಲ್ಲಿ ಶೇ. 40 ಕೊರತೆ ಇರುವ ಕಾರಣ ಬೆಲೆ ಸ್ವಲ್ಪ ಹೆಚ್ಚಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಪ್ರತಿ ಕಿಲೋಗೆ 4 ರೂಪಾಯಿಯಿಂದ 5 ರೂಪಾಯಿ ತನಕ ಇಳಿಕೆಯಾಗಬಹುದು ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ತರಕಾರಿ ಬೆಲೆ ಏರಿಯಾದಿಂದ ಏರಿಯಾಕ್ಕೆ ಕೊಂಚ ವ್ಯತ್ಯಾಸವಿರಬಹುದು.

ವಿವಿಧ ತರಕಾರಿಗಳ ಬೆಲೆ 

ತರಕಾರಿಹಿಂದಿನ ವಾರದ ದರ (ಕಿಲೋ/ರೂ)ಈಗಿನ ಬೆಲೆ (ಕಿಲೋ/ರೂ)
ಟೊಮೆಟೋ15 30
ನಾಟಿ ಬೀನ್ಸ್ 5060
ನುಗ್ಗೇಕಾಯಿ60120
ಕ್ಯಾಪ್ಸಿಕಂ4060
ಶುಂಠಿ150180
ನಾಟಿ ಬಟಾಣಿ200250
ಫಾರಂ ಬಟಾಣಿ100150
ನವಿಲುಕೋಸು4040
ಬೆಳ್ಳುಳ್ಳಿ400400
ಬಿಳಿ ಬದನೆ6035
ಕ್ಯಾರೆಟ್ ಊಟಿ8060
ಮೆಣಸಿನಕಾಯಿ6050

ತೆಂಗಿನ ಕಾಯಿ ದರ ಏರಿಕೆ

ಈ ಸಲದ ತೆಂಗಿನ ಕಾಯಿ ದರ ಒಂದೇ ವಾರದಲ್ಲಿ ದುಪ್ಪಟ್ಟಾಗಿದೆ. ಹದಿನೈದು ದಿನಗಳ ಹಿಂದ ಒಂದು ಕಿಲೋ ತೆಂಗಿನಕಾಯಿಗೆ 30 - 35 ರೂಪಾಯಿ ಇತ್ತು. ಈಗ 50 - 57 ರೂಪಾಯಿ ಆಗಿದೆ. ಕಳೆದ 14 ವರ್ಷಗಳ ಅವಧಿಯಲ್ಲಿ ತೆಂಗಿನ ಕಾಯಿಗೆ ಈ ಪರಿ ದರ ಏರಿದ್ದು ಇದೇ ಮೊದಲು. ಇದಕ್ಕೂ ಮೊದಲು ಬಿಸಿಲು ಇದ್ದ ಕಾರಣ ಎಳನೀರಿಗೆ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ಬೆಂಗಳೂರಿಗೆ ಕರ್ನಾಟಕದ ಎಲ್ಲ ಭಾಗಗಳಿಂದಲೂ ಎಳನೀರು ಪೂರೈಕೆ ಆಗಿದೆ. ಈ ಬಾರಿ ತೆಂಗಿನ ಕಾಯಿ ಇಳುವರಿ ಕುಸಿದ ಕಾರಣ ಈ ರೀತಿ ಬೆಲೆ ಏರಿಕೆ ದಾಖಲಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

ಖಾದ್ಯ ತೈಲ ಬೆಲೆ ಹೆಚ್ಚಳ: ಕೇಂದ್ರ ಸರ್ಕಾರವು ಹದಿನೈದು ದಿನಗಳ ಹಿಂದೆ ಅಡುಗೆ ಎಣ್ಣೆಯ ಆಮದು ಸುಂಕವನ್ನು ಶೇಕಡ 20 ಹೆಚ್ಚಿಸಿತ್ತು. ಸೂರ್ಯಕಾಂತಿ ಎಣ್ಣೆಗೆ ಶೇಕಡಾ 20 ರಷ್ಟು ಆಮದು ಶುಲ್ಕ ಹೆಚ್ಚಿಸಿದರೆ, ತಾಳೆಎಣ್ಣೆಗೆ ಶೇಕಡಾ 37 ರಷ್ಟು ಏರಿಕೆಯಾಗಿದೆ. ಇದರ ಬೆನ್ನಿಗೆ, ಏಕಾಕಿಯಾಗಿ ಅಡುಗೆ ಎಣ್ಣೆದರ ಏರಿದೆ. ಸೂರ್ಯಕಾಂತಿ ಎಣ್ಣೆ ಒಂದು ಲೀಟರ್‌ಗೆ ಸಗಟು ದರ 10-15 ರೂಪಾಯಿ ಏರಿದರೆ, ತಾಳೆ ಎಣ್ಣೆ ಒಂದು ಲೀಟರ್‌ಗೆ 20 ರಿಂದ 21ರೂಪಾಯಿ ವರೆಗೆ ಹೆಚ್ಚಾಗಿದೆ. ಸರಳವಾಗಿ ಹೇಳಬೇಕು ಎಂದರೆ ಅಡುಗೆ ಎಣ್ಣೆಯ ಸಗಟು ದರ ಲೀಟರ್‌ಗೆ ಸರಾಸರಿ 100 ರೂಪಾಯಿ ಇದ್ದುದು 130 ರೂಪಾಯಿ ಆಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 140 - 150 ರೂಪಾಯಿ ಆಗಿದೆ. ಪಾಮ್ ಆಯಿಲ್‌ 95 ರೂಪಾಯಿ ಇದ್ದುದು 120 ರೂಪಾಯಿ ಆಗಿದೆ.

ಬೆಳ್ಳುಳ್ಳಿ, ಅಕ್ಕಿ, ಬೇಳೆ ಬೆಲೆ ಸ್ಥಿರ: ಕಳೆದ ಎರಡು ತಿಂಗಳು ಗಗನಮುಖಿಯಾಗಿದ್ದ ಬೆಳ್ಳುಳ್ಳಿ ಬೆಲೆ ಈಗ ಸ್ಥಿರವಾಗಿದೆ. ಈರುಳ್ಳಿ ಆವಕದಲ್ಲಿ ಏರಿಕೆಯಾಗಿರುವ ಕಾರಣ ಇದರ ಬೆಲೆಯೂ ಸ್ಥಿರವಾಗಿದೆ. ಅಕ್ಕಿ, ತೊಗರಿಬೇಳೆ, ಉದ್ದಿನಬೇಳೆ, ಬಿಳಿ ಬಠಾಣಿ, ಹೆಸರು, ಹೆಸರುಬೇಳೆ ದರಗಳು ಒಂದೆರಡು ರೂಪಾಯಿ ಕಡಿಮೆಯಾಗಿರುವುದು ಸಮಾಧಾನದ ವಿಚಾರ.

ಡ್ರೈಫ್ರುಟ್ಸ್ ಬೆಲೆ ಕೂಡ ಹೆಚ್ಚಳ: ನವರಾತ್ರಿ, ದಸರಾ ಹಬ್ಬದ ವೇಳೆ ಡ್ರೈಫ್ರುಟ್ಸ್ ಬಳಕೆ ಹೆಚ್ಚಿರುತ್ತದೆ. ಉಡುಗೊರೆ ನೀಡುವುದಕ್ಕೂ ಬಳಕೆಯಾಗುತ್ತದೆ. ಸದ್ಯ ಬಾದಾಮಿ ಕೆಜಿಗೆ 850 ರೂ., ಗೋಡಂಬಿ 1,000 ರೂಪಾಯಿಗೆ ತಲುಪಿದೆ. ಗೋಡಂಬಿಯಲ್ಲಿ ಅದರ ಗಾತ್ರ, ಗುಣಮಟ್ಟ ಆಧರಿಸಿ ಬೆಲೆ ವ್ಯತ್ಯಾಸವಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ