ಕಾವೇರಿ ನೀರಿನ ದಂಧೆ, ಕಾನೂನು ಬಾಹಿರವಾಗಿ ಹಣ ಪಡೆದರೆ ಕ್ರಿಮಿನಲ್ ಕೇಸ್; ರಾಮ್ ಪ್ರಸಾತ್ ಮನೋಹರ್ ಎಚ್ಚರಿಕೆ
Oct 28, 2024 04:19 PM IST
ಕಾವೇರಿ ನೀರಿನ ದಂಧೆ, ಕಾನೂನು ಬಾಹಿರವಾಗಿ ಹಣ ಪಡೆದರೆ ಕ್ರಿಮಿನಲ್ ಕೇಸ್; ರಾಮ್ ಪ್ರಸಾತ್ ಮನೋಹರ್ ಎಚ್ಚರಿಕೆ
- ಕಾವೇರಿ ನೀರು ಸಂಪರ್ಕಕ್ಕೆ ನಿಯಮಬಾಹಿರವಾಗಿ ಹಣ ಕೇಳಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿಸುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ ಅವರು, ಕಾವೇರಿ ನೀರಿನ ಸಂಪರ್ಕಕ್ಕೆ ಅಕ್ರಮವಾಗಿ ಹೆಚ್ಚುವರಿ ಶುಲ್ಕ ಕೇಳುವ ಮತ್ತು ಜಲಮಂಡಳಿ ಹೆಸರು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಆದರೆ ಜಲಮಂಡಳಿ ಹೆಸರು ಬಳಸಿ ಅಕ್ರಮ ನಡೆಸಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಅಧಿಕೃತ ಬಿಡಬ್ಲ್ಯುಎಸ್ಎಸ್ಬಿ ಆನ್ಲೈನ್ ಪೋರ್ಟಲ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬೇಕು. ಇದು ಸುಲಭವಾದ ಪ್ರಕ್ರಿಯೆ. ಆಗ ಸಂಬಂಧಪಟ್ಟ ವಿಭಾಗದ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಹೊಸ ಸಂಪರ್ಕ ಪಡೆಯುವ ಮನೆಗಳು ಅಪಾರ್ಟ್‌ಮೆಂಟ್ಸ್, ಕಮರ್ಷಿಯಲ್ ಬಿಲ್ಡಿಂಗ್ಸ್ ನಿಯಮದಂತೆ ಹಣ ನಿಗದಿಪಡಿಸಿ ಡಿಮ್ಯಾಂಡ್ ನೋಟಿಸ್ ನೀಡಲಾಗುವುದಾಗಿ ತಿಳಿಸಿದ್ದಾರೆ. ಬಿಡಬ್ಲ್ಯುಎಸ್ಎಸ್ಬಿ ಬ್ಯಾಂಕ್ ಖಾತೆಗೆ ಕಾನೂನುಬದ್ಧವಾಗಿ ವಿಧಿಸಿದ ಶುಲ್ಕವನ್ನು ಪಾವತಿ ಮಾಡಿದ ಬಳಿಕ ಹೊಸ ಸಂಪರ್ಕ ನೀಡಲಾಗುತ್ತದೆ.
ಜಲಮಂಡಳಿ ಹೆಸರು ಹೇಳಿಕೊಂಡು ಜನರ ಬಳಿ ದೋಚುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇದೊಂದು ದಂಧೆಯಾಗಿ ಮಾರ್ಪಟ್ಟಿದೆ. ಕಾವೇರಿ ಸಂಪರ್ಕ ನೀಡುತ್ತೇವೆ ಎಂದು ಕಾನೂನು ಬಾಹಿರವಾಗಿ ಹಣ ಕೇಳಿದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ನಿಯಮಬಾಹಿರವಾಗಿ ಹಣ ಕೇಳಿದರೆ ಮಧ್ಯವರ್ತಿಗಳಾಗಲಿ, ಜಲಮಂಡಳಿ ಸಿಬ್ಬಂದಿ ಅಥವಾ ಅಸೋಷಿಯೇಷನ್ ಸದಸ್ಯರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಜಲಮಂಡಳಿಯ ಮುಖ್ಯ ಆಡಳಿತಾಧಿಕಾರಿ ನೇತೃತ್ವದಲ್ಲಿ ವಿಜಿಲೆನ್ಸ್ ತಂಡವನ್ನು ರಚಿಸಲಾಗಿದೆ.
ಇಲ್ಲಿ ದೂರು ನೀಡಿ
ಯಾರೇ ಆಗಲಿ ಹಣ ಕೇಳಿದರೆ ಸಾರ್ವಜನಿಕರು ಇ-ಮೇಲ್ bwssbvigilance@gmail.com ಗೆ ಅಗತ್ಯ ಮಾಹಿತಿಯ ಮೂಲಕ ದೂರು ನೀಡಬಹುದು. ದೂರು ಕೊಟ್ಟವರ ಹೆಸರನ್ನು ಗೋಪ್ಯವಾಗಿ ಇಡಲಾಗುವುದು. ದೂರು ಬಂದ 24 ಗಂಟೆಯ ಒಳಗಾಗಿ ವಿಜಿಲೆನ್ಸ್ ತಂಡ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.