ಮದ್ಯ ಪ್ರಿಯರಿಗೆ ಕಹಿ ಸುದ್ದಿ; ಕರ್ನಾಟಕದಲ್ಲಿ ಬಿಯರ್ ಬೆಲೆ ಮತ್ತೆ ಏರಿಕೆ ಸಾಧ್ಯತೆ, 400 ಕೋಟಿ ನಷ್ಟ ಪಕ್ಕ ಎಂದ ಬಿಎಐ
The Beer Association of India: ಆಲ್ಕೋಹಾಲ್ ಅಂಶದ ಆಧಾರದಂತೆ ಬಿಯರ್ ಮೇಲಿನ ಸುಂಕ ಹೆಚ್ಚಿಸಲು ಕರ್ನಾಟಕ ಸರ್ಕಾರ ಪ್ರಸ್ತಾಪ ಸಿದ್ದಪಡಿಸಿದೆ. ಇದರ ಬೆನ್ನಲ್ಲೇ ಬಿಯರ್ ಅಸೋಸಿಯೇಷನ್ ಆಫ್ ಇಂಡಿಯಾ, ಬೆಲೆ ಮತ್ತೆ ಹೆಚ್ಚಾದರೆ ಆದಾಯ ತೆರಿಗೆ 400 ಕೋಟಿ ನಷ್ಟವಾಗಬಹುದು ಎಂದು ಸರ್ಕಾರಕ್ಕೆ ಪತ್ರಬರೆದಿದೆ.
ಬೆಂಗಳೂರು: ಕರ್ನಾಟಕದ ಮದ್ಯಪಾನ ಪ್ರಿಯರಿಗೆ ಕಹಿ ಸುದ್ದಿಯೊಂದು ಹೊರ ಬಿದ್ದಿದೆ. ಬಿಯರ್ ಬೆಲೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬಿಯರ್ನ ಆಲ್ಕೋಹಾಲ್ ಅಂಶದ ಆಧಾರದ ಮೇಲೆ ಅಬಕಾರಿ ಸುಂಕ ಹೆಚ್ಚಿಸಲು ಪ್ರಸ್ತಾಪಿಸುವ ಹೊಸ ಅಧಿಸೂಚನೆಯನ್ನು ಸರ್ಕಾರ ಸಿದ್ಧಪಡಿಸಿದೆ. ರಾಜ್ಯದಲ್ಲಿ ಸ್ಟ್ರಾಂಗ್ ಬಿಯರ್ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಬಿಯರ್ ತಯಾರಕರಿಗೆ ತೊಂದರೆ ಉಂಟಾಗುವ ಕಾರಣ ಕರಡು ಅಧಿಸೂಚನೆ ಹಿಂತೆಗೆದುಕೊಳ್ಳುವಂತೆ ಬಿಯರ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.
ಕರಡು ಅಧಿಸೂಚನೆಯ ಪ್ರಕಾರ, ಹೆಚ್ಚಿನ ಆಲ್ಕೋಹಾಲ್ ಹೊಂದಿರುವ ಬಿಯರ್ಗಳ ಮೇಲೆ ಶೇಕಡಾ 10 ರಿಂದ 20 ರಷ್ಟು ಬೆಲೆ ಹೆಚ್ಚಳಕ್ಕೆ ಪ್ರಸ್ತಾಪ ಮಾಡಲಾಗಿದೆ. ಗ್ರಾಹಕರಿಗೆ ಬಿಯರ್ಗಳಲ್ಲಿ ಸಕ್ಕರೆ ಅಂಶದ ಪ್ರಮಾಣವನ್ನು ಘೋಷಿಸುವಂತೆ ಸರ್ಕಾರವು ರಾಜ್ಯದ ಬಿಯರ್ ತಯಾರಕರನ್ನುಸೂಚಿಸಿದೆ. ಆದರೆ ಬಿಎಐ ಈ ಕ್ರಮವನ್ನು ವಿರೋಧಿಸಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಅತಿ ಹೆಚ್ಚು ಮದ್ಯದ ಬೆಲೆ ಹೊಂದಿರುವ ಕರ್ನಾಟಕ, ಕಳೆದ 2 ವರ್ಷಗಳಲ್ಲಿ 2 ಬಾರಿ ಮದ್ಯದ ಬೆಲೆಯನ್ನು ಪರಿಷ್ಕರಿಸಿದೆ. ಇದೀಗ ಮೂರನೇ ಬಾರಿಗೆ ಬೆಲೆ ಹೆಚ್ಚಳಕ್ಕೆ ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಶೇಕಡಾ 10 ರಿಂದ 20 ರಷ್ಟು ಹೆಚ್ಚಳಕ್ಕೆ ಸರ್ಕಾರ ಪ್ರಸ್ತಾಪ ಹೊರಡಿಸಿದೆ. ಇದು ಜನರ ತೆರಿಗೆಯನ್ನು ಶೇಕಡಾ 35 ರಷ್ಟಕ್ಕೆ ಹೆಚ್ಚಿಸುವಂತಾಗುತ್ತದೆ. ಆ ಮೂಲಕ ಈ ನಿರ್ಧಾರ ಜನ ಸಾಮಾನ್ಯರಿಗೆ ಬಿಯರ್ ಕೈಗೆಟುಕದಂತೆ ಮಾಡುವಂತಿದೆ. ಅಲ್ಲದೆ, ಮಾರಾಟದ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ಆದಾಯದ ಕುಸಿತವನ್ನು ಎದುರಿಸಬಹುದು ಎಂದು ಬಿಎಐ, ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದೆ. ಸರ್ಕಾರದ ಪ್ರಸ್ತಾಪದಿಂದ ತೆರಿಗೆ ಆದಾಯ 400 ಕೋಟಿ ರೂ ಆದಾಯಕ್ಕೆ ಕುಸಿಯಬಹುದು ಎಂದು ಅಂದಾಜಿಸುತ್ತೇವೆ ಎಂದು ಹೇಳಿದೆ. ಇದು ಬಹುತೇಕ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿ ಸೃಷ್ಟಿಸಿದೆ.
ಜನಪ್ರಿಯ ಬಿಯರ್ ತಯಾರಕರಾದ ಯುನೈಟೆಡ್ ಬ್ರೂವರೀಸ್, ಎಬಿಐಎನ್ಬಿಇವಿ (ABInBev) ಮತ್ತು ಕಾರ್ಲ್ಸ್ ಬರ್ಗ್ ರಾಜ್ಯದಲ್ಲಿ ಭಾರಿ ಹೂಡಿಕೆಗಳನ್ನು ಹೊಂದಿವೆ. ಈ ಹೊಸ ಕ್ರಮ ಕರ್ನಾಟಕದಲ್ಲಿ ಹೊಸ ಹೂಡಿಕೆದಾರರನ್ನು ಯೋಚಿಸುವಂತೆ ಮಾಡುತ್ತದೆ ಎಂದು ಬಿಎಐ ಹೇಳಿದೆ. ಏತನ್ಮಧ್ಯೆ, ಬಿಯರ್ನಲ್ಲಿನ ಸಕ್ಕರೆ ಮತ್ತು ಮಾಲ್ಟ್ ಅಂಶವನ್ನು ಬಹಿರಂಗಪಡಿಸುವಲ್ಲಿ ಸಂಘವು ನಿರಾಸಕ್ತಿಯನ್ನು ತೋರಿಸಿದೆ. "ಇದು ಗ್ರಾಹಕರನ್ನು ದಾರಿ ತಪ್ಪಿಸುತ್ತದೆ ಮತ್ತು ಗೊಂದಲಗೊಳಿಸುತ್ತದೆ. ಬಿಯರ್ ತಯಾರಕರ ಮೇಲೆ ಅನಗತ್ಯ ಅನುಸರಣೆಯ ಹೊರೆಯನ್ನು ಸೇರಿಸುತ್ತದೆ ಎಂದಿದೆ.