Chandrashekhar missing case: ಹೊನ್ನಾಳಿ ಶಾಸಕ ರೇಣುಕಾಚಾರ್ಯರ ತಮ್ಮನ ಮಗ ನಾಪತ್ತೆ; ಸುಳಿವೇ ಸಿಗದೆ ಸಂಕಟದಲ್ಲಿದೆ ಕುಟುಂಬ
Nov 02, 2022 08:18 AM IST
ಚಂದ್ರಶೇಖರ್ ಮತ್ತು ಶಾಸಕ ಎಂ.ಪಿ.ರೇಣುಕಾಚಾರ್ಯ
Chandrashekhar missing case: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ (Honnali BJP MLA MP Renukacharya) ಅವರ ಸಹೋದರನ ಪುತ್ರ ಚಂದ್ರಶೇಖರ್ ಭಾನುವಾರ ನಾಪತ್ತೆಯಾಗಿದ್ದಾರೆ. ಅವರ ಸುಳಿವು ಸಿಗದೆ ಸಂಕಟದಲ್ಲಿದೆ ಕುಟುಂಬ. ಶಾಸಕ ರೇಣುಕಾಚಾರ್ಯ ಕೂಡ ಕಳವಳಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿಮಾಡಿವೆ.
ಬೆಂಗಳೂರು: ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿಯ ಶಾಸಕ ಎಂ.ಪಿ.ರೇಣುಕಾಚಾರ್ಯ (Honnali BJP MLA MP Renukacharya) ಅವರ ತಮ್ಮ ರಮೇಶ್ ಅವರ ಮಗ ಚಂದ್ರಶೇಖರ್ ನಾಪತ್ತೆ (Chandrashekhar missing case) ಯಾಗಿದ್ದಾರೆ. ಭಾನುವಾರ ಮನೆ ಬಿಟ್ಟ ಚಂದ್ರಶೇಖರ್ ಮತ್ತೆ ಮನೆಗೆ ಬಂದಿಲ್ಲ. ಈ ಕುರಿತು ದೂರು ದಾಖಲಾಗಿದ್ದು, ಪೊಲೀಸರು ಶೋಧ ನಡೆಸಿದ್ದಾರೆ.
ಚಂದ್ರಶೇಖರ ನಾಪತ್ತೆಯಾಗಿರುವ ವಿಚಾರ ಮಂಗಳವಾರ ರಾತ್ರಿ ವೇಳೆಗೆ ಬಹಿರಂಗವಾಗಿದೆ. ಭಾನುವಾರ ರಾತ್ರಿವರೆಗೂ ಚಂದ್ರಶೇಖರ್‌ನ ಚಟುವಟಿಕೆಗಳು ಮನೆಯವರಿಗೆ ತಿಳಿದಿತ್ತು. ಅದಾದ ನಂತರ ಸಂಪರ್ಕ ಕಡಿದು ಹೋಗಿದೆ. ಇದರಿಂದ ಕುಟುಂಬ ಕಳವಳಗೊಂಡಿದೆ.
ಶಾಸಕರ ನಿವಾಸಕ್ಕೆ ಹಿತೈಷಿ, ಬಂಧುಗಳ ಆಗಮನ
ಮಾಧ್ಯಮದವರು ಶಾಸಕ ಎಂ.ಪಿ.ರೇಣುಕಾಚಾರ್ಯ ಅವರನ್ನು ಸಂಪರ್ಕಿಸಿದಾಗ ಅವರು ದುಃಖಿತರಾಗಿದ್ದುದು ಕಂಡುಬಂದಿದೆ. ಸಹೋದರನ ಮಗನನ್ನು ನೆನೆದು ಚಂದ್ರು ಎಲ್ಲಿದ್ದೀಯಾ ಬಾರೋ ಎಂದು ಕಣ್ಣೀರು ಹಾಕುತ್ತಿದ್ದಾರೆ. ಎಂಪಿ ರೇಣುಕಾಚಾರ್ಯರ ನಿವಾಸಕ್ಕೆ ಅಪಾರ ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಮತ್ತು ಬಂಧುಗಳು ಆಗಮಿಸುತ್ತಿದ್ದು ಕುಟುಂಬದವರಿಗೆ ಧೈರ್ಯತುಂಬುತ್ತಿದ್ದಾರೆ ಎಂದು ಟಿವಿ9ಕನ್ನಡ ವರದಿ ಮಾಡಿದೆ.
ಕಳವಳ ಮತ್ತು ಕುತೂಹಲ ಸೃಷ್ಟಿಸಿರುವ ಪ್ರಕರಣ
ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಹಳ್ಳಿಗೆ ಭೇಟಿ ನೀಡುತ್ತಿದ್ದ ಚಂದ್ರಶೇಖರ್ ಜನರ ಬೇಕು ಬೇಡಗಳಿಗೆ ಸ್ಪಂದಿಸುತ್ತಿದ್ದರು. ಈ ರೀತಿ ವ್ಯಕ್ತಿ ಇದ್ದಕ್ಕಿದ್ದಂತೆ ನಾಪತ್ತೆ ಆಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ನ್ಯಾಮತಿ ತನಕ ಬಂದ ಚಂದ್ರಶೇಖರ್ ಕಾರು ಸಹಿತ ಸುಳಿವೇ ಸಿಗದಂತೆ ನಾಪತ್ತೆ ಆಗಿರುವುದು ಹೇಗೆ ಎಂಬುದು ನಿಗೂಢವಾಗಿದೆ ಎಂದು ಮೂಲಗಳು ತಿಳಿಸಿವೆ.
ಇತ್ತ ಮನೆಯಲ್ಲಿ, ಚಂದ್ರಶೇಖರ್ ತಂದೆ ರಮೇಶ್ ತಲೆ ಮೇಲೆ ಕೈ ಹೊತ್ತು ಕೂತಿರುವ ದೃಶ್ಯ ಕಂಡುಬಂದಿದೆ.
ಚಂದ್ರಶೇಖರ್ ಎಲ್ಲಿ ಹೋಗಿದ್ದರು?
ಪ್ರಾಥಮಿಕ ಮಾಹಿತಿ ಪ್ರಕಾರ, ಚಂದ್ರಶೇಖರ್‌ಗೆ ಅಧ್ಯಾತ್ಮದ ಕಡೆಗೆ ಒಲವು ಹೆಚ್ಚಾಗಿತ್ತು. ಹೀಗಾಗಿ ಭಾನುವಾರ ಸ್ನೇಹಿತರೊಂದಿಗೆ ಶಿವಮೊಗ್ಗ ಜಿಲ್ಲೆಯ ಗೌರಿಗದ್ದೆಗೆ ಹೋಗಿದ್ದ. ಅಲ್ಲಿ ವಿನಯ್ ಗುರೂಜಿ ಅವರನ್ನು ಭೇಟಿಮಾಡಿ ಅನ್ನದಾನದ ಸಂದರ್ಭದಲ್ಲಿ ಕೆಲವರಿಗೆ ಊಟ ಬಡಿಸಿದ್ದ. ಅಲ್ಲಿಂದ ಸಂಜೆವೇಳೆಗೆ ಹಿಂದಿರುಗಿದ ಚಂದ್ರಶೇಖರ್, ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿಗೆ ಬಂದಿದ್ದ. ನಂತರ ಚಂದ್ರಶೇಖರ್ ಮತ್ತು ಅವರ ಕಾರು ಕೂಡ ಕಂಡಿಲ್ಲ.
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದೇನು?
ಚಂದ್ರಶೇಖರ್ ಅವರ ಕ್ರೇಟಾ ಕಾರು ಶಿವಮೊಗಕ್ಕೆ ಭಾನುವಾರ ರಾತ್ರಿ ಬಂದಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಭಾನುವಾರ ಮಧ್ಯರಾತ್ರಿ 11.56ಕ್ಕೆ ಶಿವಮೊಗ್ಗದಲ್ಲಿ ಚಂದ್ರಶೇಖರ್ ಕಾರು ಹೋಗಿದೆ. ಸೋಮವಾರ ಬೆಳಗ್ಗೆ 6.48ರ ತನಕ ಅವರ ಮೊಬೈಲ್ ಫೋನ್ ಚಾಲನೆಯಲ್ಲಿತ್ತು. ಬಳಿಕ ಸ್ವಿಚ್ ಆಫ್ ಆಗಿದೆ. ಚಂದ್ರಶೇಖರ್ ಚಲಾಯಿಸುತ್ತಿದ್ದ ಕ್ರೇಟಾ ಕಾರು (KA 17 MA 2534) ಪತ್ತೆಯಾಗಿಲ್ಲ. ದಾವಣಗೆರೆ ಪೊಲೀಸರು ತೀವ್ರ ಶೋಧ ಮುಂದುವರಿಸಿದ್ದಾರೆ. ಕುಟುಂಬಸ್ಥರು ಕೂಡ ಶಿವಮೊಗ್ಗ ದಾವಣಗೆರೆ ಚಿತ್ರದುರ್ಗ ಸೇರಿ ಎಲ್ಲ ಜಿಲ್ಲೆಗಳಲ್ಲಿ ತೀವ್ರ ಹುಡುಕಾಟ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.