logo
ಕನ್ನಡ ಸುದ್ದಿ  /  ಕರ್ನಾಟಕ  /  Chintamani News: ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿ ಜತೆಗೆ ಅಸಭ್ಯ ವರ್ತನೆಯ ಫೋಟೋ ವೈರಲ್‌, ಚಿಂತಾಮಣಿ ಶಾಲಾ ಮುಖ್ಯಶಿಕ್ಷಕಿ ಅಮಾನತು

Chintamani News: ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿ ಜತೆಗೆ ಅಸಭ್ಯ ವರ್ತನೆಯ ಫೋಟೋ ವೈರಲ್‌, ಚಿಂತಾಮಣಿ ಶಾಲಾ ಮುಖ್ಯಶಿಕ್ಷಕಿ ಅಮಾನತು

Umesh Kumar S HT Kannada

Dec 29, 2023 04:54 PM IST

google News

ವಿದ್ಯಾರ್ಥಿಯೊಂದಿಗೆ ಅನುಚಿತವಾಗಿ ಫೋಟೋ ವೈರಲ್ ಆದ ಹಿನ್ನೆಲೆಯಲ್ಲಿ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿಯನ್ನು ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ.

  • ಶೈಕ್ಷಣಿಕ ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿ ಜತೆಗೆ ಅಸಭ್ಯವಾಗಿ ವರ್ತಿಸಿದ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕಿಯನ್ನು ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ. ಪ್ರಕರಣದ ಇಲಾಖಾ ವಿಚಾರಣೆ ಇನ್ನಷ್ಟೆ ನಡೆಯಬೇಕಿದೆ.

ವಿದ್ಯಾರ್ಥಿಯೊಂದಿಗೆ ಅನುಚಿತವಾಗಿ ಫೋಟೋ ವೈರಲ್ ಆದ ಹಿನ್ನೆಲೆಯಲ್ಲಿ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿಯನ್ನು ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ.
ವಿದ್ಯಾರ್ಥಿಯೊಂದಿಗೆ ಅನುಚಿತವಾಗಿ ಫೋಟೋ ವೈರಲ್ ಆದ ಹಿನ್ನೆಲೆಯಲ್ಲಿ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿಯನ್ನು ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ.

ಚಿಕ್ಕಬಳ್ಳಾಪುರ: ಶೈಕ್ಷಣಿಕ ಪ್ರವಾಸಕ್ಕೆ ತೆರಳಿದಲ್ಲಿ ಹದಿಹರೆಯದ ವಿದ್ಯಾರ್ಥಿ ಜೊತೆಗೆ ಅಸಭ್ಯವಾಗಿ ಫೋಟೋ ತೆಗೆಸಿಕೊಂಡ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿಯನ್ನು ಶಿಕ್ಷಣ ಇಲಾಖೆ ಅಮಾನತು ಮಾಡಿದೆ.

ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಪುಷ್ಪಲತಾ ಅಮಾನತಿಗೆ ಒಳಗಾದವರು. ಶಾಲೆಯ ಮಕ್ಕಳೊಂದಿಗೆ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಮುಖ್ಯಶಿಕ್ಷಕಿ, ಅಲ್ಲಿ ವಿದ್ಯಾರ್ಥಿಯೊಬ್ಬನ ಜತೆಗೆ ರೊಮ್ಯಾಂಟಿಕ್ ಆಗಿ ನಾನಾ ಭಂಗಿಗಳಲ್ಲಿ ಫೋಟೋ ತೆಗೆದುಕೊಂಡಿದ್ದರು. ತಮ್ಮ ಮೊಬೈಲ್‌ನಲ್ಲೇ ಈ ಫೋಟೋಗಳನ್ನು ತೆಗೆದುಕೊಂಡಿದ್ದರು.

ಮುಖ್ಯಶಿಕ್ಷಕಿ 10ನೇ ತರಗತಿಯ ವಿದ್ಯಾರ್ಥಿ ಜತೆಗೆ ಈ ರೀತಿ ವರ್ತಿಸಿದ್ದರು. ಆ ವಿದ್ಯಾರ್ಥಿ ಮುಖ್ಯಶಿಕ್ಷಕಿಯ ಸೀರೆಯ ಸೆರಗು ಹಿಡಿದ, ಕೆನ್ನೆಗೆ ಮುತ್ತು ಕೊಟ್ಟ, ಮುಖ್ಯಶಿಕ್ಷಕಿಯನ್ನು ಎತ್ತಿದ, ವಿದ್ಯಾರ್ಥಿಯನ್ನು ಬರಸೆಳೆದ, ಹೂವು ಕೊಡುವ ದೃಶ್ಯದ ಫೋಟೋಗಳನ್ನು ತೆಗೆಸಿಕೊಂಡಿದ್ದರು.

ಆದರೆ ಈ ಫೋಟೋಗಳು ಬಳಿಕ ವೈರಲ್ ಆಗಿತ್ತು. ಸಾಮಾಜಿಕ ತಾಣಗಳಲ್ಲಿ ಈ ಫೋಟೋಗಳು ವೈರಲ್ ಆದಬಳಿಕ ಮುಖ್ಯಶಿಕ್ಷಕಿಯ ವರ್ತನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ, ಅಸಮಾಧಾನಗಳು ವ್ಯಕ್ತವಾಗಿದ್ದವು.

ಈ ನಡುವೆ, ಮಕ್ಕಳ ಪಾಲಕರು ಶಾಲೆಗೆ ಹೋಗಿ ಮುಖ್ಯಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೂ ದೂರು ನೀಡಿದ್ದರು. ಘಟನೆ ಕುರಿತು ತನಿಖೆಗೆ ಒತ್ತಾಯಿಸಿ, ಅಸಭ್ಯ ವರ್ತನೆ ತೋರಿದ ಮುಖ್ಯಶಿಕ್ಷಕಿ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರು.

ಮುಖ್ಯಶಿಕ್ಷಕಿಯ ಈ ವರ್ತನೆಯಿಂದ ಶಾಲೆ ಹಾಗೂ ಗ್ರಾಮದ ಮರ್ಯಾದೆ ಹೋಗಿದೆ. ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಶಿಕ್ಷಣ ಇಲಾಖೆಗೆ ಒತ್ತಾಯಿಸಿದ್ದರು.

ಸಾರ್ವಜನಿಕರಿಂದ, ಶಾಲಾ ಮಕ್ಕಳ ಪಾಲಕರಿಂದ ದೂರುಗಳು ಬಂದ ಕಾರಣ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಅವರು ಬುಧವಾರ ಶಾಲೆಗೆ ಭೇಟಿ ನೀಡಿದ ಸಂಬಂಧಪಟ್ಟವರಿಂದ ಮಾಹಿತಿ ಸಂಗ್ರಹಿಸಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ವರದಿ ಸಲ್ಲಿಸಿದ್ದರು.

ಈ ಫೋಟೋಗಳಿಗೆ ಸಂಬಂಧಿಸಿದಂತೆ ಮುಖ್ಯಶಿಕ್ಷಕಿ ಪುಷ್ಪಲತಾ ಸಮಜಾಯಿಷಿ ನೀಡಿದ್ದು, ಶೈಕ್ಷಣಿಕ ಪ್ರವಾಸದ ವೇಳೆ ತೋಟದಲ್ಲಿ ಮನರಂಜನೆಗಾಗಿ ಮಕ್ಕಳಿಂದ ಹಾಡು ಹೇಳಿಸಲಾಗುತ್ತಿತ್ತು. ಆಗ ನೃತ್ಯಮಾಡುತ್ತಿದ್ದಾಗ ತೆಗೆದ ಫೋಟೋಗಳಿವು. ಕೆಟ್ಟ ಉದ್ದೇಶದಿಂದ ಮಕ್ಕಳೊಂದಿಗೆ ವರ್ತಿಸಿಲ್ಲ ಎಂದು ಹೇಳಿಕೊಂಡಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ನೀಡಿರುವ ವರದಿಯನ್ನು ಆಧರಿಸಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿದ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಬೈಲಾಂಜನಪ್ಪ, ಮುಖ್ಯಶಿಕ್ಷಕಿ ಪುಷ್ಪಲತಾ ಅವರನ್ನು ಕೆಲಸದಿಂದ ಅಮಾನತುಗೊಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ