logo
ಕನ್ನಡ ಸುದ್ದಿ  /  ಕರ್ನಾಟಕ  /  Charmadi Ghat: ಚಾರ್ಮಾಡಿ ಘಾಟಿ ಬಿದಿರುತಳ ಸಮೀಪ ಗುಡ್ಡ ಕುಸಿತ; ಸಂಚಾರ ಅಸ್ತವ್ಯಸ್ತ

Charmadi Ghat: ಚಾರ್ಮಾಡಿ ಘಾಟಿ ಬಿದಿರುತಳ ಸಮೀಪ ಗುಡ್ಡ ಕುಸಿತ; ಸಂಚಾರ ಅಸ್ತವ್ಯಸ್ತ

HT Kannada Desk HT Kannada

Jul 24, 2023 03:17 PM IST

google News

ಚಾರ್ಮಾಡಿ ಘಾಟಿ ಬಿದಿರುತಳ ಸಮೀಪ ಗುಡ್ಡ ಕುಸಿತ

    • Landslide at Charmadi Ghat: ಚಾರ್ಮಾಡಿ ಘಾಟಿ ಬಿದಿರುತಳ ಸಮೀಪ ಗುಡ್ಡ ಕುಸಿತದಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. 
ಚಾರ್ಮಾಡಿ ಘಾಟಿ ಬಿದಿರುತಳ ಸಮೀಪ ಗುಡ್ಡ ಕುಸಿತ
ಚಾರ್ಮಾಡಿ ಘಾಟಿ ಬಿದಿರುತಳ ಸಮೀಪ ಗುಡ್ಡ ಕುಸಿತ

ಮಂಗಳೂರು: ಚಾರ್ಮಾಡಿ ಘಾಟಿಯ ಚಿಕ್ಕಮಗಳೂರು ವಿಭಾಗದ ಬಿದಿರುತಳ ಆಲೇಖಾನ್ ಮಧ್ಯದ ರಸ್ತೆಯಲ್ಲಿ ಗುಡ್ಡ ಕುಸಿತ ಉಂಟಾಗಿ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗಿದೆ.

ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಗುಡ್ಡದ ಮಣ್ಣು ಕುಸಿತಗೊಂಡು ರಸ್ತೆಗೂ ಬಂದು ಬಿದ್ದು ವಾಹನಗಳು ಸಂಚರಿಸಲು ಅನಾನುಕೂಲವಾಗಿದೆ. ಇದರಿಂದ ಘಾಟಿ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಮುಂದುವರಿಯಿತು.

ಗುಡ್ಡ ಕುಸಿದ್ದ ಉಂಟಾದ ಸ್ಥಳದ ಪಕ್ಕದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಯಾಗುತ್ತಿದ್ದು, ಈ ರಸ್ತೆಯಲ್ಲಿ ಅಗಲ ತೀವ್ರ ಕಿರಿದಾಗಿದೆ. ಇದು ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ತಂದೊಡ್ಡಿ ಹಲವು ಕಾಲ ಟ್ರಾಫಿಕ್ ಜಾಮ್ ಮುಂದುವರಿಯಿತು. ಬಳಿಕ ಚಿಕ್ಕಮಗಳೂರು ವಿಭಾಗದ ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ಮಣ್ಣು ತೆರವುಗೊಳಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಯಿತು.

ಇನ್ನಷ್ಟು ಕುಸಿತ ಭೀತಿ

ಗುಡ್ಡ ಕುಸಿತ ಪ್ರದೇಶದಲ್ಲಿ ಮಳೆ ನೀರು ಇಳಿದು ಬರುತ್ತಿದ್ದು ಇನ್ನಷ್ಟು ಕುಸಿತ ಸಂಭವಿಸಬಹುದೇ ಎಂಬ ಭೀತಿ ಎದುರಾಗಿದೆ. ಭಾರಿ ಪ್ರಮಾಣದಲ್ಲಿ ಮಳೆಯೂ ಸುರಿಯುತ್ತಿರುವುದರಿಂದ ಗುಡ್ಡದಿಂದ ಹರಿದು ಬರುವ ನೀರಿನ ಪ್ರಮಾಣವು ಹೆಚ್ಚಿದೆ. ಈಗಾಗಲೇ ಮಳೆ ನೀರಿನೊಂದಿಗೆ ಲಘು ಪ್ರಮಾಣದಲ್ಲಿ ಮಣ್ಣು ಕೂಡ ಕುಸಿತವಾಗದ ಸ್ಥಳದಲ್ಲಿ ಬರುತ್ತಿರುವುದು ಅಪಾಯಕಾರಿಯಾಗಿದೆ. ಈ ಗುಡ್ಡ ಇನ್ನಷ್ಟು ಕುಸಿದರೆ ಇಲ್ಲಿ ಸಂಚಾರಕ್ಕೆ ಭಾರಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಚಾರ್ಮಾಡಿ ಘಾಟಿ ಪರಿಸರದಲ್ಲಿ ಮಳೆಗಾಲದಲ್ಲಿ ಮರಗಳು ರಸ್ತೆಗೆ ಉರುಳಿ ಬೀಳುವುದು ಸಾಮಾನ್ಯ. ಕಳೆದ ಎರಡು ಮೂರು ದಿನಗಳಲ್ಲೂ ಅಲ್ಲಲ್ಲಿ ಸಣ್ಣ ಮರಗಳು ಉರುಳಿ ಬಿದ್ದಿದ್ದು ಅರಣ್ಯ ಇಲಾಖೆಯ ಸಕಾಲಿಕ ಸ್ಪಂದನೆಯಿಂದ ಹೆಚ್ಚಿನ ಸಮಸ್ಯೆ ಉಂಟಾಗಿಲ್ಲ. ಪ್ರಸ್ತುತ ಮಳೆಯೊಂದಿಗೆ ಗಾಳಿಯ ಪ್ರಮಾಣವು ಹೆಚ್ಚಿದ್ದು ಇನ್ನಷ್ಟು ಮರಗಳು ಉರುಳಿ ಬೀಳುವ ಸಾಧ್ಯತೆ ಇದೆ.

ಮಳೆಯಿಂದ ಗುಡ್ಡ ಪ್ರದೇಶದಲ್ಲಿ ಮಣ್ಣಿನ ಸವಕಳಿ ಆಗುತ್ತಿದ್ದು ಕಲ್ಲು ಬಂಡೆಗಳು ಉರುಳುವ ಸಾಧ್ಯತೆ ಇದೆ. ಜಲಪಾತಗಳ ನೀರಿನ ಧುಮ್ಮಿಕ್ಕುವ ಪ್ರಮಾಣವು ಅಧಿಕಗೊಂಡಿದ್ದು ಗುಡ್ಡಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ಕಾರಣದಿಂದ ಚಾರ್ಮಾಡಿ ಘಾಟಿಯಲ್ಲಿ ಪ್ರಯಾಣಿಸುವಾಗ ಹೆಚ್ಚಿನ ಮುಂಜಾಗ್ರತೆಯೊಂದಿಗೆ ಅಗತ್ಯ ನೀರು, ಆಹಾರ ಕೊಂಡೊಯ್ಯುವುದು ಉತ್ತಮ. ರಾತ್ರಿ ಪ್ರಯಾಣ ಕೈಗೊಳ್ಳುವ ಯೋಚನೆ ಅಷ್ಟೊಂದು ಒಳ್ಳೆಯದಲ್ಲ.

ವರದಿ: ಹರೀಶ ಮಾಂಬಾಡಿ, ಮಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ