logo
ಕನ್ನಡ ಸುದ್ದಿ  /  ಕರ್ನಾಟಕ  /  ಚಿಕ್ಕಮಗಳೂರು ಭದ್ರಾ ಹುಲಿ ಯೋಜನೆಗೆ ತುಂಬಿತು 25 ವರ್ಷ; ಮಲೆನಾಡ ಪ್ರಮುಖ ಹುಲಿಧಾಮದಲ್ಲಿ ಕಪ್ಪೆಗಳ ಕಲರವವೇ ಅಧಿಕ

ಚಿಕ್ಕಮಗಳೂರು ಭದ್ರಾ ಹುಲಿ ಯೋಜನೆಗೆ ತುಂಬಿತು 25 ವರ್ಷ; ಮಲೆನಾಡ ಪ್ರಮುಖ ಹುಲಿಧಾಮದಲ್ಲಿ ಕಪ್ಪೆಗಳ ಕಲರವವೇ ಅಧಿಕ

Umesha Bhatta P H HT Kannada

Oct 07, 2024 05:12 PM IST

google News

ಭದ್ರಾ ಹುಲಿ ಯೋಜನೆ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.

    • ಕರ್ನಾಟಕದ ಮಲೆನಾಡ ಹೃದಯಭಾಗವಾದ ಚಿಕ್ಕಮಗಳೂರು- ಶಿವಮೊಗ್ಗ ಜಿಲ್ಲೆಯಲ್ಲಿ ಹಬ್ಬಿರುವ ಭದ್ರಾ ಹುಲಿ ಯೋಜನೆಗೆ 25 ವರ್ಷ ತುಂಬಿದ್ದು. ಇದರ ನೆನಪಿಗಾಗಿ ಅಂಚೆ ಚೀಟಿ ಬಿಡುಗಡೆ ಮಾಡಲಾಗಿದೆ.
ಭದ್ರಾ ಹುಲಿ ಯೋಜನೆ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.
ಭದ್ರಾ ಹುಲಿ ಯೋಜನೆ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. (Sagar)

ಚಿಕ್ಕಮಗಳೂರು: ಕರ್ನಾಟಕದ ಪ್ರಮುಖ ಹುಲಿಧಾಮಗಳಲ್ಲಿ ಒಂದಾದ ಭದ್ರಾ ಯೋಜನೆಗೆ ಈಗ ರಜತ ಮಹೋತ್ಸವದ ಸಂಭ್ರಮ.25 ವರ್ಷಗಳ ಹಿಂದೆ ಭಾರತದ 25 ನೇ ಹುಲಿಧಾಮವಾಗಿ ಘೋಷಣೆಯಾದ ಮಲೆನಾಡಿನ ಹೃದಯಭಾಗವಾದ ಭದ್ರಾ ಹುಲಿ ಯೋಜನೆ ವಿಶಾಲವಾಗಿ ಬೆಳೆದಿದೆ. ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಹಂಚಿಹೋಗಿರುವ ಮುತ್ತೋಡಿ ಕೇಂದ್ರಿತ ಭದ್ರಾ ಹುಲಿ ಯೋಜನೆ ಪ್ರಮುಖ ಬೆಟ್ಟಗಳ ಸಾಲಿನಲ್ಲಿದೆ. ಈಗಲೂ ದಟ್ಟಾರಣ್ಯ, ಮಳೆ ತರುವ ಬೆಟ್ಟಗಳ ನಡುವೆ ಹಬ್ಬಿರುವ ಭದ್ರಾ ಹುಲಿಧಾಮ ಪರಿಸರ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ತಾಣ. ಬಂಡೀಪುರ. ನಾಗರಹೊಳೆ, ಬಿಆರ್‌ಟಿ ನಂತರ ಅತಿ ಹೆಚ್ಚು ಕರ್ನಾಟಕದಲ್ಲಿ ಇರುವುದು ಭದ್ರಾದಲ್ಲಿಯೇ.

ಪಶ್ಚಿಮ ಘಟ್ಟಗಳ ಸಾಲಿನ ಈ ಪ್ರದೇಶ ದಟ್ಟಾರಣ್ಯದಿಂದ ಕೂಡಿದೆ. ಹುಲಿ, ಆನೆ, ಕಾಡೆಮ್ಮೆ, ಚಿರತೆ, ಕಡವೆ ಸಹಿತ ಪ್ರಮುಖ ಪ್ರಾಣಿಗಳು, ಹತ್ತಾರು ಬಗೆಯ ಪಕ್ಷಿಗಳ ಆವಾಸ ಸ್ಥಾನವಾಗಿದೆ ಭದ್ರಾ. ಹತ್ತು ಹಲವು ಬಗೆಯ ಸಸ್ಯ ಸಂಪತ್ತು ಕೂಡ ಇಲ್ಲಿದೆ. ಭದ್ರಾ ಹಲವು ಬಗೆಯ ಸಸ್ಯ ಸಂಕುಲ, ಪ್ರಾಣಿ ಸಂಕುಲ, ಕೀಟ ಸಂಕಲ ಇದೆ. ಇಲ್ಲಿ ಇರುವಷ್ಟು ಕಪ್ಪೆಗಳ ವೈವಿಧ್ಯತೆ ಮತ್ತೆಲ್ಲೂ ಕಾಣ ಸಿಗುವುದಿಲ್ಲ.

ಭದ್ರಾ ಹುಲಿ ಸಂರಕ್ಷಿತ ಪ್ರದೇಶವು ನಿಸರ್ಗದತ್ತವಾದ ರಮಣೀಯ ಭೂಪ್ರದೇಶವನ್ನು ಒಳಗೊಂಡಿದೆ. ಇಲ್ಲಿ ವರ್ಷದ 365 ದಿನವೂ ನದಿ, ತೊರೆ, ಹಳ್ಳಗಳು ಹರಿಯುತ್ತಲೇ ಇರುತ್ತವೆ. ಜಲ ಸಮೃದ್ಧಿ, ಸಸ್ಯ ಸಂಕುಲ, ಪ್ರಾಣಿ ಸಂಕುಲ, ಕೀಟ ಸಂಕುಲ ಇರುವ ಈ ಪ್ರದೇಶ ಅತ್ಯಮೂಲ್ಯ ಜೀವವೈಧ್ಯತೆಯಿಂದ ಕೂಡಿದ್ದು, ನೂರಾರು ಪ್ರಬೇಧದ ವನ್ಯಜೀವಿಗಳಿಗೆ ನೆಲೆ ಎನ್ನುವ ಹೆಸರು ಪಡೆದಿದೆ.

ಸಮೃದ್ದ ಕಾಡು

ಭದ್ರಾ ಹುಲಿ ಅಭಯಾರಣ್ಯ ಒಂದು ಸಾವಿರ ಚದರ ಕಿಲೋ ಮೀಟರ್ ವ್ಯಾಪ್ತಿಯ ವಿಶಾಲವಾದ ಸುಭದ್ರ ಅರಣ್ಯವಾಗಿದೆ. ಇದು ವಿಶ್ವ ಪಾರಂಪರಿಕ ತಾಣವಾದ ಪಶ್ಚಿಮ ಘಟ್ಟಗಳ ಶ್ರೀಮಂತ ಅರಣ್ಯ ಸಂಪತ್ತನ್ನು ಒಳಗೊಂಡಿದೆ.

ಅಂದಿನ ಮೈಸೂರು ಸರ್ಕಾರವು ಈ ಪ್ರದೇಶದ ವನ್ಯಜೀವಿಗಳ ಪ್ರಾಮುಖ್ಯತೆಯನ್ನು ಅರಿತು 1951 ರಲ್ಲಿ 124 ಚದರ ಕಿ.ಮೀ ವಿಸ್ತೀರ್ಣವನ್ನು ಜಾಗರ ವ್ಯಾಲಿ ಗೇಂ ರಿಸರ್ವ್ ಎಂಬುದಾಗಿ ಘೋಷಣೆ ಮಾಡಿದ್ದು, ತದ ನಂತರ 1974 ರಲ್ಲಿ 492 ಚದರ ಕಿ.ಮೀ ವ್ಯಾಪ್ತಿಗೆ ವಿಸ್ತರಿಸಿ ಭದ್ರಾ ವನ್ಯಜೀವಿ ಧಾಮವನ್ನಾಗಿ ಕರ್ನಾಟಕ ಸರ್ಕಾರವು ಅಧಿಸೂಚನೆ ಮಾಡಿತು. ಈ ವನ್ಯಧಾಮವನ್ನು 1998 ರಲ್ಲಿ “ಹುಲಿ ಯೋಜನೆ” ಅಡಿಯಲ್ಲಿ ರಾಷ್ಟದ 25ನೇ ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಲಾಗಿದೆ. ಆಗಿನಿಂದಲೂ ಪ್ರಮುಖ ಹುಲಿಧಾಮವಾಗಿ ಭದ್ರಾ ರೂಪುಗೊಂಡಿದೆ.

ಹೆಚ್ಚಿದ ಹುಲಿ ಸಂತತಿ

ಭದ್ರಾ ಅರಣ್ಯವಾಸಿಗಳ ಪುನರ್ವಸತಿಯಾದ ನಂತರದಲ್ಲಿ ಮಾನವ ವನ್ಯಜೀವಿ ಸಂಘರ್ಷ ಗಣನೀಯವಾಗಿ ಕಡಿಮೆಯಾಗಿದೆ. ಆರಂಭದಲ್ಲಿ 8 ಹುಲಿಗಳನ್ನು ಹೊಂದಿದ್ದ ಈ ಸಂರಕ್ಷಿತ ಪ್ರದೇಶದಲ್ಲಿ ಪ್ರಸ್ತುತ 40 ಹುಲಿಗಳಿರುವ ಅಂದಾಜಿದೆ. ಎರಡು ವರ್ಷದ ಹಿಂದೆ ನಡೆದಿದ್ದ ಗಣತಿಯಲ್ಲೂ ಇದು ಸಾಬೀತಾಗಿದೆ. ಭದ್ರಾಗೆ ಆಗಮಿಸುವ ಪ್ರವಾಸಿಗರು ಹಾಗು ಮುತ್ತೋಡಿಯಲ್ಲಿ ಸಫಾರಿ ಹೋಗುವವರಿಗೆ ಹುಲಿ ದರ್ಶವೂ ಇದೆ. ಇದಕ್ಕೆ ಕಾರಣ ಹುಲಿಗಳ ಆವಾಸಸ್ಥಾನದ ಸಂರಕ್ಷಣೆಯೇ ಆಗಿದೆ. ಇಲ್ಲಿ ದಟ್ಟವಾದ ಕಾನನವಿದ್ದು, ಸುಮಾರು 400 ಕ್ಕೂ ಅಧಿಕ ಆನೆಗಳಿರುವ ಲೆಕ್ಕವೂ ಇದೆ.

ಮಾದರಿ ಪುನರ್ವಸತಿ

ಈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಿಂದೆ 16 ಗ್ರಾಮಗಳ 736 ಕುಟುಂಬಗಳು ವಾಸವಿದ್ದು, ಆ ಕುಟುಂಬಗಳು ಸ್ವ ಇಚ್ಛೆಯಿಂದ ಭದ್ರಾ ಪುನರ್ವಸತಿ ಯೋಜನೆಯಡಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೆಳಗೂರು ಹಾಗೂ ಮಳಲಿ ಚನ್ನೇನಹಳ್ಳಿ ಗ್ರಾಮಗಳಿಗೆ ಸ್ಥಳಾಂತರಗೊಂಡಿವೆ. ಎರಡು ದಶಕದ ಹಿಂದೆಯೇ ಇದನ್ನು ಪೂರ್ಣಗೊಳಿಸಲಾಗಿದೆ. ಇದೊಂದು ಭಾರತದಲ್ಲಿಯೇ ಅತ್ಯಂತ ಯಶಸ್ವಿ ಪುನರ್ವಸತಿ ಯೋಜನೆಯಾಗಿದ್ದು, ಹುಲಿ ಸಂರಕ್ಷಣೆಯಲ್ಲಿ ಜನರ ಸಹಭಾಗಿತ್ವದ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಇದೇ ಪ್ರಕಾರವಾಗಿ ರಾಜ್ಯದ ಇತರ ಅರಣ್ಯ ಪ್ರದೇಶದ ಒಳಗೆ ವಾಸಿಸುತ್ತಿರುವವರ ಮನವೊಲಿಸಿ ಅವರೆಲ್ಲರಿಗೂ ಪುನರ್ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಪ್ರಯತ್ನ ಮಾಡಲಾಗುವುದು ಎನ್ನುತ್ತಾರೆ ಅರಣ್ಯಸಚಿವ ಈಶ್ವರ ಖಂಡ್ರೆ.

ಭದ್ರಾದಲ್ಲಿ ಆನೆ ಶಿಬಿರ

ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಭಾಗದ ಕಾಡಾನೆ ಹಾವಳಿ ನಿಯಂತ್ರಿಸಲು ಭದ್ರಾ ಅಭಯಾರಣ್ಯದಲ್ಲಿ ಒಂದು ಆನೆ ಶಿಬಿರ ಸ್ಥಾಪಿಸಲು ಅರಣ್ಯ ಇಲಾಖೆ ಮುಂದಾಗಿದೆ.ಈ ಆನೆ ವಿಹಾರ ಧಾಮದ ಸುಮಾರು 5 ಸಾವಿರ ಎಕರೆ ಪ್ರದೇಶದಲ್ಲಿ ಆನೆಗಳಿಗೆ ಇಷ್ಟವಾದ ಬಿದಿರು, ಹಲಸು, ಹುಲ್ಲು ಇತ್ಯಾದಿ ಬೆಳೆಸಲಾಗುವುದು ಮತ್ತು ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಸೆರೆ ಹಿಡಿದ ಆನೆಗಳನ್ನು ಇಲ್ಲಿ ತಂದು ಬಿಡಲಾಗುವುದು. ಇದರಿಂದ ಕೊಡಗು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಡಿನ ಹೊರಗೆ ಇರುವ ಆನೆಗಳಿಂದ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಸಾಧ್ಯವಾಗುತ್ತದೆ ಎನ್ನುವುದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ನೀಡುವ ವಿವರಣೆ.

.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ