Friendship day: ಕಾಡಿನಲ್ಲೂ ಉಂಟು ಗೆಳೆತನದ ನಂಟು, ಹುಲಿ ಬೇಟೆಯಿಂದ ತಪ್ಪಿಸಿಕೊಳ್ಳಲು ನೆರವಾಗುವ ಜೀವದ ಗೆಳೆಯ ಲಂಗೂರ್
wildlife Friends ಕಾಡಿನಲ್ಲೂ ಸ್ನೇಹಿತರಿದ್ದಾರೆ. ಅಲ್ಲಿ ಜಿಂಕೆ, ಕಡವೆ, ಕಾಡೆಮ್ಮೆಗಳಿಗೆ ಹುಲಿ, ಚಿರತೆಗಳಿಂದ ತಪ್ಪಿಸಿಕೊಳ್ಳಲು ಲಂಗೂರ್‌ಗಳೇ ನಿಜವಾದ ಸ್ನೇಹಿತರು. ಅವರ ಒಡನಾಟದ ಕಥೆ ಇಲ್ಲಿದೆ.
ಅದು ದಟ್ಟ ಕಾಡು. ಅಲ್ಲಿ ನಿಶ್ಯಬ್ದ. ಜಿಂಕೆಗಳು ತಮ್ಮ ಪಾಡಿಗೆ ಹುಲ್ಲು ತಿನ್ನುತ್ತಿವೆ. ಅವುಗಳಿಗೆ ತಿನ್ನುತ್ತಾ ಇರುವುದೇ ದಿನದ ಬಹುತೇಕ ಅವಧಿಯ ಕಾಯಕ. ಮತ್ತೊಂದು ಕಡೆ ಕಾಡೆಮ್ಮ, ದೂರದಲ್ಲೆಲ್ಲೋ ಆನೆ. ಮರದ ಮೇಲೆ ಲಂಗೂರ್‌ನ ಹಿಂಡು. ಲಂಗರು ಹಾಕಿಕೊಂಡು ಮರದ ಮೇಲೆ ಕುಳಿತ ಲಂಗೂರ್ ಏಕಾಏಕಿ ಸದ್ದು ಮಾಡುತ್ತದೆ. ಅದೊಂದು ರೀತಿ ಕಾಡಿನ ಅಲರಂ, ಆ ಸದ್ದು ಸುಮ್ಮನೇ ಮಾಡುವುದಲ್ಲ. ಅದು ಎಚ್ಚರಿಕೆಯ ಗಂಟೆ. ಮತ್ತೊಂದು ಕಡೆ ಸ್ನೇಹದ ಸದ್ದು. ಹುಲಿ ಬರ್ತಾ ಇದೆ ಹುಷಾರು ಎನ್ನುವ ಕಾಳಜಿಯು ಆ ದನಿಯ ಹಿಂದೆ ಅಡಗಿದೆ. ಕಾಡಿನಂತಹ ಕಾಡಿನಲ್ಲಿ ಹಲವು ಪ್ರಾಣಿಗಳನ್ನು ಕಾಪಾಡೋದು ಇದೇ ಸ್ನೇಹ ಹಾಗೂ ಸದ್ದು( ಅಲರಂ).
ಮರದ ಮೇಲೆ ಕುಳಿತು ಅನತಿ ದೂರದಲ್ಲಿ ಯಾವುದೇ ಪಾಣಿ ಬರುತ್ತಿದ್ದರೆ ಚಾಕಚಕ್ಯತೆಯಿಂದ ಗಮನಿಸುವ, ಆ ಮೂಲಕ ಎಚ್ಚರಿಸುವ ಕಾಡಿನ ಗೆಳೆಯ ಲಂಗೂರ್. ಇದರಲ್ಲಿ ನೀಲಗಿರಿ ಲಂಗೂರ್ ಹಾಗೂ ಬೂದು ಬಣ್ಣದ ಲಂಗೂರ್ ಕೂಡ ಇವೆ. ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಭಾಗದ ಹಳ್ಳಿಗಳಲ್ಲಿಯೂ ಒಮ್ಮೊಮ್ಮೆ ಕಾಣಿಸಿಕೊಳ್ಳುವ ಇದನ್ನು ಮುಶ್ಯಾ ಎಂದು ಹಳ್ಳಿಯ ಜನ ಕರೆಯುತ್ತಾರೆ. ಕಪ್ಪು ಮುಖದ ಲಂಗೂರ್ ನೋಡಲು ವಿಚಿತ್ರವಾಗಿ ಕಂಡರೂ ಅದು ಕಾಡಿನಲ್ಲಿ ಮಿಂಚಿನಂತೆ ಓಡುವ, ಕಾಡಿನಲ್ಲಿ ಕಣ್ಣಾಗಲು ಇಡುವ ಭದ್ರತಾ ಅಧಿಕಾರಿ ಇದ್ದ ಹಾಗೆ. ಅಷ್ಟೇ ಅಲ್ಲದೇ ಅದೆಷ್ಟೋ ಪ್ರಾಣಿಗಳಿಗೆ ಸ್ನೇಹಿತನೂ ಹೌದು. ಕೆಲವು ಕಡೆ ಬೂದು ಬಣ್ಣದ ಲಂಗೂರುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತವೆ. ಅವು ಕೂಡ ನೀಲಗಿರಿ ಲಂಗೂರ್‌ನ ಮತ್ತೊಂದು ತಳಿಯ ಕೋತಿಗಳು. ಕೊಂಚ ಭಿನ್ನವಾಗಿದ್ದರೂ ಈ ಲಂಗೂರ್‌ಗಳು ಕರ್ನಾಟಕದ ಭಾಗದ ಕಾಡಿನಲ್ಲಿ ಕಂಡು ಬರುತ್ತವೆ.
ನೀವು ಕಾಡಿನ ಸಫಾರಿಗೆ ಹೋದರೆ ಯಥೇಚ್ಛ ಜಿಂಕೆ ಹಿಂಡುಗಳನ್ನು ನೋಡಬಹುದು. ಮೂರು ಗಂಟೆ ಸಫಾರಿ ಹೋಗಿ ಇಪ್ಪತ್ತು ಕಿ.ಮಿ ಸುತ್ತು ಹಾಕಿಕೊಂಡು ಬಂದರೆ ಅಲ್ಲಿ ನಿಮಗೆ ಹತ್ತರಿಂದ ಇಪ್ಪತ್ತು ಜಿಂಕೆ ಹಿಂಡುಗಳು ಸಿಕ್ಕುತ್ತವೆ. ಆ ಹಿಂಡು ಇರುವ ಬಳಿಯೇ ಅಥವಾ ಅಕ್ಕಪಕ್ಕದಲ್ಲಿ ಈ ಲಂಗೂರ್‌ಗಳ ನಾಲ್ಕೈದರ ಗುಂಪೂ ಇರುತ್ತವೆ. ಗಂಡು ಹೆಣ್ಣು ಮರಿಗಳು ಅವುಗಳ ಕುಟುಂಬ. ಕರ್ನಾಟಕ- ತಮಿಳುನಾಡು- ಕೇರಳ ಭಾಗದಲ್ಲಿ ಮಾತ್ರ ಸಿಗುವ ಇವುಗಳು ನೀಲಗಿರಿ ಜೀವವೈವಿಧ್ಯ ತಾಣದ ಪ್ರಮುಖ ಪ್ರಾಣಿಗಳು. ಈ ಕಾರಣದಿಂದ ಲಂಗೂರ್‌ಗಳಿಗೆ ನೀಲಗಿರಿ ಲಂಗೂರ್ ಎನ್ನುವ ಹೆಸರು ಬಂದಿದೆ. ಇನ್ನು ದೇಹದ ಬಣ್ಣ ಬೂದು ಇರುವ ಕಾರಣಕ್ಕೆ ಬೂದು ಲಂಗೂರ್ ಅಥವಾ ಗ್ರೇ ಲಂಗೂರ್ ಎನ್ನುವ ಹೆಸರು ಬಂದಿದೆ. ಇವು ಉತ್ತರ ಭಾರತದಲ್ಲೂ ಕಂಡು ಬರುತ್ತವೆ. ಲಂಗೂರ್‌ಗಳು ಅಳಿವಿಂಚಿನ ಪಟ್ಟಿಯಲ್ಲಿರುವ ಪ್ರಾಣಿಗಳು. ಅವುಗಳನ್ನು ಔಷಧ ಸೇರಿದಂತೆ ನಾನಾ ಕಾರಣಗಳಿಗೆ ಬೇಟೆ ಆಡುವುದು ಉಂಟು. ಈ ಕಾರಣದಿಂದಲೇ ಇವುಗಳ ಸಂಖ್ಯೆ ಕುಸಿದು ಸೀಮಿತ ಪ್ರದೇಶಗಳಲ್ಲಿ ಉಳಿದುಕೊಂಡಿವೆ.
ಈ ಲಂಗೂರ್‌ಗಳು ಕಾಡಿನಲ್ಲಿ ಒಂದು ಕಡೆ ಒಂದು ಕ್ಷಣವೂ ಕೂಡುವುದಿಲ್ಲ. ಅತ್ತಿಂದಿತ್ತ ಓಡುತ್ತಲೇ ಇರುತ್ತವೆ. ಮರದ ಮೇಲ್ಭಾಗದಲ್ಲಿ ಕುಳಿತು ಯಾರೇ ಬಂದರೂ, ಏನೇ ಘಟಿಸಿದರು ಮೊದಲು ಕಾಣವುದೇ ಲಂಗೂರ್‌ಗಳಿವೆ. ಎಲ್ಲಾ ಕಡೆಯೂ ವಿಚಕ್ಷಣೆ ಮಾಡುವ ಲಂಗೂರ್‌ಗಳು ಕಾಡಿನಲ್ಲಿ ಹಲವು ಪ್ರಾಣಿಗಳ ಸ್ನೇಹಿತರೂ ಹೌದು. ಅದರಲ್ಲೂ ಜಿಂಕೆಗಳಿಗೆ ಇವು ಒಡನಾಡಿ. ಮೇಲೆ ಕುಳಿತು ನೋಡುವಾಗ ಹುಲಿ ಅಥವಾ ಚಿರತೆ ಸಹಿತ ಯಾವುದೇ ಬೇಟೆ ಪ್ರಾಣಿ ಬಂದರೂ ಕೂಡಲೇ ಅಲರಂ ನೀಡುತ್ತವೆ ಲಂಗೂರ್‌ಗಳು.
ವಿಭಿನ್ನವಾಗಿ ದನಿ ಮಾಡುವುದರಿಂದಲೇ ಜಿಂಕೆಗಳು, ಕಡವೆಗಳು, ಕಾಡೆಮ್ಮೆಗಳೂ ಅಲರ್ಟ್ ಆಗಿ ಬಿಡುತ್ತವೆ. ಆ ಅಲರಂ ಎಷ್ಟು ನಿಖರ ಎಂದರೆ ಬೇಟೆ ಪ್ರಾಣಿ ಕಂಡರೆ ಅಥವಾ ಬರುತ್ತಿದ್ದರೆ ನಿಖರವಾಗಿ ಇತರೆ ಪ್ರಾಣಿಗಳಿಗೆ ಸಂದೇಶ ತಲುಪಿ ಬಿಡುತ್ತದೆ. ಅಲ್ಲದೇ ಈ ಲಂಗೂರ್‌ಗಳು ಮರದ ಮೇಲೆ ಕುಳಿತು ಹಣ್ಣುಗಳನ್ನು ಕಿತ್ತು ಎಸೆಯುವುದನ್ನೂ ಮಾಡುತ್ತವೆ. ಕುಣಿದು ಎಲೆ, ಕಾಯಿಗಳನ್ನು ಉದುರಿಸಿ ಜಿಂಕೆಗಳಿಗೆ ಆಹಾರ ಒದಗಿಸುತ್ತವೆ. ಈ ಕಾರಣದಿಂದಲೇ ಲಂಗೂರ್‌ಗಳು ಕಾಡಿನಲ್ಲಿ ಹಲವರ ಸ್ನೇಹಿತ ಎಂದೇ ಕರೆಯಲಾಗುತ್ತದೆ.
ಇದರೊಟ್ಟಿಗೆ ಹಲವಾರು ಹಕ್ಕಿಗಳು ಕೂಡ ಈ ರೀತಿ ಅಲರಂ ಅನ್ನು ನೀಡಿ ಬೇಟೆ ಪ್ರಾಣಿ ಬಂದಾಗ ಇತರೆ ಪ್ರಾಣಿಗಳನ್ನು ಎಚ್ಚರಿಸುವುದು ಉಂಟು. ಇವುಗಳನ್ನೂ ಕೆಲವು ಕಡೆ ಕಾಡು ಪ್ರಾಣಿಗಳ ಸ್ನೇಹಿತ ಎಂದೆ ಕರೆಯಲಾಗುತ್ತದೆ. ಇನ್ನು ಹಲವಾರು ಹಕ್ಕಿಗಳು ಜಿಂಕೆ, ಕಡವೆ, ಕಾಡೆಮ್ಮೆಗಳ ಮೇಲೆ ಕುಳಿತು ಹುಳು ಹುಪ್ಪಟೆ ತಿಂದು ಸ್ನೇಹಿತನಾಗಿ ಕೆಲಸ ಮಾಡುವುದೂ ಇದೆ.
ಕಾಡಿನ ನಂಟೇ ಬೇರೆ. ಅದು ಒಂದು ರೀತಿ ಭಿನ್ನವಾದದ್ದು. ಲಂಗೂರ್‌ಗಳಂತೂ ಜಿಂಕೆ, ಕಡವೆ, ಕಾಡೆಮ್ಮೆ, ಕಾಟಿ ಸಹಿತ ಹಲವು ಪ್ರಾಣಿಗಳ ಮಿತ್ರ. ಅದರಲ್ಲೂ ಜಿಂಕೆ, ಕಡವೆಗಳಂತೂ ಲಂಗೂರ್‌ಗಳ ಸದ್ದಿನಿಂದಲೇ ಹುಲಿ, ಚಿರತೆ ಸಹಿತ ಬೇಟೆಗಳ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಅಣಿಯಾಗುತ್ತವೆ. ಇವುಗಳು ಒಟ್ಟಿಗೆ ಇರುವುದನ್ನು ಕಾಡಲ್ಲಿ ನೋಡಬಹುದು.ಇದು ಒಂದು ರೀತಿಯಲ್ಲಿ ಸ್ನೇಹದ ಸಂಕೇತವೇ. ಕಾಡು ಪ್ರಾಣಿಗಳ ನಿರ್ವಾಜ್ಯ ಪ್ರೀತಿ ಎನ್ನಬಹುದು ಎಂದು ಮೈಸೂರಿನ ಎಸಿಎಫ್ ಹಾಗೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿ ಎನ್.ಲಕ್ಷ್ಮಿಕಾಂತ್ ಹೇಳುತ್ತಾರೆ.