Bommai On Katti: ಗೆಳೆಯ, ಸಹೋದರ ಇನ್ನಿಲ್ಲ ಎಂಬುದು ನಂಬಲಾಗುತ್ತಿಲ್ಲ: ಕತ್ತಿ ನಿಧನಕ್ಕೆ ಬೊಮ್ಮಾಯಿ ಕಣ್ಣೀರು!
Sep 07, 2022 06:33 AM IST
ಕತ್ತಿ ನಿಧನಕ್ಕೆ ಸಿಎಂ ಭಾವುಕ
- ಅರಣ್ಯ ಸಚಿವ ಉಮೇಶ್ ಕತ್ತಿ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಓರ್ವ ಸ್ನೇಹಿತ ಹಾಗೂ ಸಹೋದರನನ್ನು ಕಳೆದುಕೊಂಡಿದ್ದೇನೆ ಎಂದು ಕಣ್ಣೀರಾಗಿದ್ದಾರೆ. ನಾನು ಇಂದು ನನ್ನ ಅತ್ಯಂತ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಕತ್ತಿ ನನಗೆ ಸಹೋದರರಂತೆ ಇದ್ದರು ಎಂದು ಸಿಎಂ ಬೊಮ್ಮಾಯಿ ಅವರು ಕತ್ತಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಬೆಂಗಳೂರು: ಅರಣ್ಯ ಸಚಿವ ಉಮೇಶ್ ಕತ್ತಿ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಓರ್ವ ಸ್ನೇಹಿತ ಹಾಗೂ ಸಹೋದರನನ್ನು ಕಳೆದುಕೊಂಡಿದ್ದೇನೆ ಎಂದು ಕಣ್ಣೀರಾಗಿದ್ದಾರೆ. ಉಮೇಶ್ ಕತ್ತಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೇ, ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದೌಡಾಯಿಸಿದ ಸಿಎಂ ಬೊಮ್ಮಾಯಿ,ಕತ್ತಿ ಇನ್ನಿಲ್ಲ ಎಂದು ತಿಳಿದು ಅತ್ಯಂತ ಭಾವುಕರಾಗಿದ್ದು ಕಂಡುಬಂದಿತು.
ನಿನ್ನೆ(ಸೆ.06-ಮಂಗಳವಾರ) ಐಸಿಯು ಘಟಕದಲ್ಲಿ ಕತ್ತಿ ಪಾರ್ಥಿವ ಶರೀರದ ದರ್ಶನ ಪಡೆದು ಹೊರಬಂದ ಸಿಎಂ ಬೊಮ್ಮಾಯಿ, ಮಾಧ್ಯಮದವರೊಂದಿಗೆ ಮಾತನಾಡಿದರು. ನಾನು ಇಂದು ನನ್ನ ಅತ್ಯಂತ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಕತ್ತಿ ನನಗೆ ಸಹೋದರರಂತೆ ಇದ್ದರು. ಅವರಿಗೆ ಕೆಲವು ಹೃದಯ ಸಮಸ್ಯೆಗಳಿದ್ದವು ಎಂಬುದು ಗೊತ್ತಿತ್ತು. ಆದರೆ ಇಷ್ಟು ಬೇಗ ಅವರನ್ಜು ನಾವು ಕಳೆದುಕೊಳ್ಳುತ್ತೇವೆ ಎಂಬುದು ಗೊತ್ತಿರಲಿಲ್ಲ ಎಂದು ಸಿಎಂ ಬೊಮ್ಮಾಯಿ ಕಂಬನಿ ಮಿಡಿದರು.
ಕತ್ತಿ ರಾಜ್ಯದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರು ಹಲವಾರು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಅವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಸಿಎಂ ಬೊಮ್ಮಾಯಿ ಶೋಕ ವ್ಯಕ್ತಪಡಿಸಿದರು. ಉಮೇಶ್ ಕತ್ತಿ ಅವರ ಮೃತದೇಹವನ್ನು ಏರ್ ಆಂಬುಲೆನ್ಸ್ ಮೂಲಕ ಬೆಳಗಾವಿಗೆ ಕೊಂಡೊಯ್ಯಲಾಗುವುದು. ಸಂಕೇಶ್ವರದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸಿಎಂ ಇದೇ ವೇಳೆ ಮಾಹಿತಿ ನೀಡಿದರು.
ಸಾರ್ವಜನಿಕ ದರ್ಶನದ ಬಳಿಕ ಸಂಜೆ ಐದು ಗಂಟೆ ವೇಳೆಗೆ ಬೆಲ್ಲದ ಬಾಗೇವಾಡಿಗೆ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರವನ್ನು ತರಲಾಗುವುದು. ಅವರ ಸ್ವಗ್ರಾಮದಲ್ಲಿ ಸಕಲ ರ್ಕಾರಿ ಗೌರವಗಳೊಂದಿಗೆ ಉಮೇಶ್ ಕತ್ತಿ ಅಂತ್ಯಕ್ರಿಯೆ ನೆರವೇರಲಿದೆ. ಬೆಳಗಾವಿಯಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಇದೇ ವೇಳೆ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಶೋಕ:
ಇನ್ನು ಸಚಿವ ಉಮೇಶ್ ಕತ್ತಿ ನಿಧನಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಕಂಬನಿ ಮಿಡಿದಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಅರಣ್ಯ ಸಚಿಬವ ಉಮೇಶ್ ಕತ್ತಿ ನಿಧನಕ್ಕೆ ಸಂತಾಪ ಸೂಚಿಸಿದೆ. ಅಲ್ಲದೇ ಭಗವಂತ ಅವರ ಕುಟುಂಬ ವರ್ಗಕ್ಕೆ ಈ ದು:ಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಉಮೇಶ್ ಕತ್ತಿ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ʼʼಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರಾದ ಉಮೇಶ್ ಕತ್ತಿ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಕುಟುಂಬವರ್ಗಕ್ಕೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ..ʼʼಎಂದು ತಿಳಿಸಿದ್ದಾರೆ.
ಅದೇ ರೀತಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕು,ಆರ್, ಮಾಜಿ ಮುಖ್ಯಂಂತ್ರಿ ಮತ್ತು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಉಮೇಶ್ ಕತ್ತಿ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಅದರಂತೆ ಸಚಿವ ಉಮೇಶ್ ಕತ್ತಿ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ರಾಜ್ಯ ಬಿಜೆಪಿ ಘಟಕ, ಪಕ್ಷವು ಓರ್ವ ಜನಪ್ರಿಯ ನಾಯಕ ಮತ್ತು ನಿಷ್ಠಾವಂತ ಕಾರ್ಯಕರ್ತನನ್ನು ಕಳೆದುಕೊಂಡಿದೆ ಎಂದು ದು:ಖ ವ್ಯಕ್ತಪಡಿಸಿದೆ. ಅಲ್ಲದೇ ಈ ದು:ದ ಸಂದರ್ಭದಲ್ಲಿ ಪಕ್ಷವು ಉಮೇಶ್ ಕತ್ತಿ ಅವರ ಕಟುಂಬ ವರ್ಗದೊಂದಿಗೆ ನಿಲ್ಲಲಿದೆ ಎಂದು ಸ್ಪಷ್ಟಪಡಿಸಿದೆ.
ಉಮೇಶ್ ಕತ್ತಿ ಅವರ ಸಂಪುಟ ಸಹೋದ್ಯೋಗಿಗಳು ಹಾಗೂ ಬಿಜೆಪಿ ಮುಖಂಡರು ಬೆಳಗಾವಿಗೆ ತೆರಳಲು ಬೆಳಗ್ಗೆ 11ಗಂಟೆಗೆ ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿದೆ.