ಬೇಲಿಕೇರಿ ಅದಿರು ನಾಪತ್ತೆ ಪ್ರಕರಣ; ಕಾಂಗ್ರೆಸ್ ಶಾಸಕ ಸತೀಶ್ ಸೈಲ್ಗೆ 7 ವರ್ಷ ಕಠಿಣ ಜೈಲು ಶಿಕ್ಷೆ; MLA ಸ್ಥಾನ ರದ್ದು
Oct 26, 2024 05:30 PM IST
ಬೇಲಿಕೇರಿ ಅದಿರು ನಾಪತ್ತೆ ಪ್ರಕರಣ; ಕಾಂಗ್ರೆಸ್ ಶಾಸಕ ಸತೀಶ್ ಸೈಲ್ಗೆ 7 ವರ್ಷ ಕಠಿಣ ಜೈಲು ಶಿಕ್ಷೆ
- ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿ ಜೈಲು ಶಿಕ್ಷೆ ಪ್ರಕಟಿಸಿದೆ. ಹೀಗಾಗಿ ಸೈಲ್ 7 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸಲಿದ್ದು, ಅವರ ಶಾಸಕ ಸ್ಥಾನ ರದ್ದಾಗಲಿದೆ.
ಬೆಂಗಳೂರು: ಬೇಲಿಕೇರಿ ಅದಿರು ನಾಪತ್ತೆ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಈ ಪ್ರಕರಣದ ಪ್ರಮುಖ ಆರೋಪಿ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರಿಗೆ ಆರು ಪ್ರಕರಣಗಳಲ್ಲಿ 7 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 44 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಶಿಕ್ಷೆಯನ್ನು ಪ್ರಕಟಿಸಿದ್ದಾರೆ. 2 ವರ್ಷಕ್ಕಿಂತ ಹೆಚ್ಚು ಅವಧಿಯ ಶಿಕ್ಷೆಯಾದರೆ ಶಾಸಕ ಸ್ಥಾನ ರದ್ದಾಗುತ್ತದೆ.
ಈ ಪ್ರಕರಣದ ಇತರ 7 ಆರೋಪಿಗಳಿಗೂ ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಎಲ್ಲ ಆರೋಪಿಗಳಿಂದ ದಂಡ ವಸೂಲಿ ಮಾಡಲು ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಶುಕ್ರವಾರ ವಿಚಾರಣೆ ನಡೆದಾಗ ಸತೀಶ್ ಸೈಲ್ ಅವರು ತಮಗೆ ಅನಾರೋಗ್ಯ ಕಾಡುತ್ತಿದೆ. ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವಂತೆ ನ್ಯಾಯಾಧೀಶರ ಎದುರು ಮನವಿ ಮಾಡಿಕೊಂಡಿದ್ದರು. ಮತ್ತೊಬ್ಬ ಆರೋಪಿ ಬಂದರಿನ ಅಧಿಕಾರಿ ಮಹೇಶ್ ಬಿಲಿಯಾ, ಈ ಪ್ರಕರಣದಲ್ಲಿ ತಮ್ಮ ಪಾತ್ರ ಇಲ್ಲ ಎಂದು ಹೇಳಿದ್ದರು. ಗುರುವಾರ ಅಂತಿಮ ಆದೇಶ ಹೊರಡಿಸಿದ ಜನಪ್ರತಿನಿಧಿಗಳ ನ್ಯಾಯಾಲಯ ಸತೀಶ್ ಸೈಲ್ ಅವರನ್ನು ದೋಷಿ ಎಂದು ಗುರುತಿಸಿತ್ತು. ನಂತರ ಸಿಬಿಐ ಅಧಿಕಾರಿಗಳು ಅವರನ್ನು ಬಂಧಿಸಿದ್ಧರು. ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಅವರನ್ನು ಪರಪ್ಪನ ಅಗ್ರಹಾರ ಬಂಧೀಖಾನೆಗೆ ಕರೆದೊಯ್ಯಲಾಗಿತ್ತು.
ಪ್ರಕರಣದ ಹಿನ್ನೆಲೆ ಏನು?
ಸೈಲ್ ವಿರುದ್ಧ 2010 ಜೂನ್ ನಲ್ಲಿ ಬೇಲಿಕೇರಿ ಬಂದರಿನಿಂದ ಸುಮಾರು 200 ಕೋಟಿ ರೂಪಾಯಿ ಮೌಲ್ಯದ 11,312 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ ಆರೋಪ ಕೇಳಿ ಬಂದಿತ್ತು. ನಂತರ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ವಹಿಸಿತ್ತು. ಸೈಲ್ ಒಡೆತನದ ಶ್ರೀ ಮಲ್ಲಿಕಾರ್ಜುನ ಶಿಪ್ಪಂಗ್ ಪ್ರೈವೆಟ್ ಕಂಪನಿ ವಿವಿಧ ಏಜೆನ್ಸಿಗಳಿಂದ ವಶಪಡಿಸಿಕೊಂಡ ಕಬ್ಬಿಣದ ಅದಿರನ್ನು ಖರೀದಿ ಮಾಡಿ ರಫ್ತು ಮಾಡಿತ್ತು. ಈ ಕಬ್ಬಿಣದ ಅದಿರನ್ನು ವಿಲೇವಾರಿ ಮಾಡಲು ಅನುಮತಿ ಕೋರಿ ಮಲ್ಲಿಕಾರ್ಜುನ ಶಿಪ್ಪಿಂಗ್ ಮತ್ತು ಇತರ ಕಂಪನಿಗಳು ಹೈಕೋರ್ಟ್ ಮೊರೆ ಹೋಗಿದ್ದವು.
ಅರ್ಹ ದಾಖಲೆಗಳಿದ್ದರೆ ಅದಿರನ್ನು ರಫ್ತು ಮಾಡಬಹುದು ಎಂದು ಆದೇಶ ಹೊರಡಿಸಿತ್ತು. ಆದರೆ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ, ಯಾವುದೇ ನೈಜ ದಾಖಲೆಗಳಿಲ್ಲದಿದ್ದರೂ ಬಂದರಿನ ಅಧಿಕಾರಿ ಮಹೇಶ್ ಬಿಲಿಯಾ ಅವರ ಸಹಕಾರದಿಂದ ಕಬ್ಬಿಣದ ಅದಿರನ್ನು ಕಳವು ಮಾಡಿ ಚೀನಾ ದೇಶಕ್ಕೆ ರಫ್ತು ಮಾಡಿರುವುದನ್ನು ಸಿಬಿಐ ಪತ್ತೆ ಹಚ್ಚಿತ್ತು. ಪಿತೂರಿ, ವಂಚನೆ, ಅಕ್ರಮ ಪ್ರವೇಶ ಮತ್ತು ಭ್ರಷ್ಟಾಚಾರದ ಅಡಿಯಲ್ಲಿ ಇವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಆ ಸಂದರ್ಭದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು 2006-07 ಮತ್ತು 2010-11ರ ಅವಧಿಯಲ್ಲಿ ಸುಮಾರು 7.74 ಮಿಲಿಯನ್ ಟನ್ ಗಳಷ್ಟು ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿರುವುದನ್ನು ಪತ್ತೆ ಹಚ್ಚಿದ್ದರು.