ಬೆಂಗಳೂರಿನಿಂದ ಮದುವೆಗೆಂದು ಬಂದಿದ್ರು; ಕುಂದಾಪುರದ ಬೀಜಾಡಿ ಬೀಚ್ನಲ್ಲಿ ಈಜಲು ತೆರಳಿದ್ದ ಇಬ್ಬರು ಸಮುದ್ರ ಪಾಲು
Kundapur Beejadi Beach: ಸ್ನೇಹಿತನ ಮದುವೆ ಕಾರ್ಯಕ್ರಮಕ್ಕಾಗಿ ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದಿದ್ದ ಇಬ್ಬರು ಯುವಕರ ಬೀಜಾಡಿ ಬೀಚ್ನಲ್ಲಿ ಈಜಲು ತೆರಳಿದ ವೇಳೆ ಸಮುದ್ರ ಪಾಲಾಗಿದ್ದಾರೆ.
ಉಡುಪಿ: ಸಮುದ್ರದಲ್ಲಿ ಈಜಲು ತೆರಳಿದ ಇಬ್ಬರು ಸಮುದ್ರ ಪಾಲಾಗಿರುವ ಘಟನೆ ಶನಿವಾರ (ಅಕ್ಟೋಬರ್ 26) ಬೆಳಿಗ್ಗೆ ಬೀಜಾಡಿ ಬೀಚ್ನಲ್ಲಿ ಸಂಭವಿಸಿದೆ. ಸ್ನೇಹಿತನ ಮದುವೆ ಕಾರ್ಯಕ್ರಮಕ್ಕಾಗಿ ಬೆಂಗಳೂರಿನಿಂದ ಬಂದ ಯುವಕರ ತಂಡವೊಂದು ಸಮುದ್ರದಲ್ಲಿ ಈಜಲು ತೆರಳಿದ ವೇಳೆ ನೀರುಪಾಲಾಗಿದ್ದಾರೆ. ಬೆಂಗಳೂರು ದಾಸರಳ್ಳಿ ಮೂಲದ ಸಂತೋಷ್ (25) ಉಸಿರುಗಟ್ಟಿ ಸಾವನ್ನಪ್ಪಿದ್ದು, ಕುಂದಾಪುರ ಮೂಲದ ಅಜಯ್ (25) ನೀರುಪಾಲಾಗಿ ನಾಪತ್ತೆಯಾಗಿದ್ದಾರೆ.
ಸ್ನೇಹಿತನ ಮದುವೆ ಕಾರ್ಯಕ್ರಮಕ್ಕೆಂದು ನಾಲ್ವರು ಸ್ನೇಹಿತರು ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದಿದ್ದು ಬೀಜಾಡಿ ಬೀಚ್ ಪಕ್ಕದ ರೆಸಾರ್ಟ್ವೊಂದರಲ್ಲಿ ಉಳಿದುಕೊಂಡಿದ್ದರು. ಇಂದು ಬೆಳಗ್ಗೆ ಮೂವರು ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಅವರ ಪೈಕಿ ಇಬ್ಬರು ಸಮುದ್ರ ಪಾಲಾಗಿದ್ದಾರೆ. ಈ ಪೈಕಿ ಸಂತೋಷ್ ಅವರನ್ನು ತನ್ನ ಜೊತೆಗಿದ್ದ ಮೋಕ್ಷಿತ್ ಎಂಬವರು ಮೇಲೆತ್ತಿ ದಡಕ್ಕೆ ತಂದಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಕುಂದಾಪುರ ಮೂಲದ ಅಜಯ್ ನೀರಿನ ಸೆಳೆತಕ್ಕೆ ಸಿಲುಕಿ ನೀರು ಪಾಲಾಗಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳ, ಕರಾವಳಿ ಕಾವಲು ಪಡೆ, ಮುಳುಗು ತಜ್ಞರ ತಂಡ ಆಗಮಿಸಿದ್ದು, ಅಜಯ್ ಅವರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಇತ್ತೀಚೆಗಷ್ಟೇ ತಿಪಟೂರು ಮೂಲದ ಯುವಕನೋರ್ವ ಸ್ನೇಹಿತನ ಮದುವೆಗೆ ಬಂದ ವೇಳೆ ಬೀಜಾಡಿ ಸಮುದ್ರದಲ್ಲಿ ಈಜಲು ಹೋಗಿ ಸಾವನ್ನಪ್ಪಿದ ಘಟನೆ ನೆನಪು ಮಾಸುವ ಮುನ್ನವೇ ಇದೀಗ ಇನ್ನೊಂದು ಘಟನೆ ನಡೆದಿರುವುದು ಬೇಸರದ ಸಂಗತಿ.