logo
ಕನ್ನಡ ಸುದ್ದಿ  /  Karnataka  /  Congress Won In 42 Constituencies Ramanagara Magadi By Giving Lure Coupons Says Hd Kumaraswamy Karnataka Elections Mgb

Congress Coupons: ರಾಮನಗರ, ಮಾಗಡಿ ಸೇರಿ 42 ಕ್ಷೇತ್ರಗಳಲ್ಲಿ ಆಮಿಷಗಳ ಕೂಪನ್ ಕೊಟ್ಟು ಗೆದ್ದ ಕಾಂಗ್ರೆಸ್; ದಾಖಲೆ ಸಮೇತ ಹೆಚ್​ಡಿಕೆ ಆರೋಪ

HT Kannada Desk HT Kannada

May 26, 2023 07:59 PM IST

ದಾಖಲೆ ಸಮೇತ ಕಾಂಗ್ರೆಸ್​ ವಿರುದ್ಧ ಹೆಚ್​ಡಿಕೆ ಆರೋಪ

    • HD Kumaraswamy: ಕೂಪನ್ ಗಳನ್ನು ಹಂಚಲು ಕಾಂಗ್ರೆಸ್ ಅಭ್ಯರ್ಥಿಗಳು ಹಣ ಎಲ್ಲಿಂದ ತಂದರು? ಕಾಂಗ್ರೆಸ್ ಅಭ್ಯರ್ಥಿ ಗೆದ್ದರಷ್ಟೇ ಈ ಕೂಪನ್ ನಗದಾಗುತ್ತದೆ. ಆಗ ಕೂಪನ್ ಹೊಂದಿರುವವರು ನಿಗದಿತ ಮಾಲ್ ಅಥವಾ ಅಂಗಡಿಗೆ ಹೋಗಿ ಕೂಪನ್ ನಲ್ಲಿ ನಿಗದಿತ ಮೊತ್ತದ ವಸ್ತುಗಳನ್ನು ಖರೀದಿ ಮಾಡಬಹುದು ಎಂದು ಆಮಿಷ ಒಡ್ಡಲಾಗಿದೆ ಎಂದು ಹೆಚ್​ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ದಾಖಲೆ ಸಮೇತ ಕಾಂಗ್ರೆಸ್​ ವಿರುದ್ಧ ಹೆಚ್​ಡಿಕೆ ಆರೋಪ
ದಾಖಲೆ ಸಮೇತ ಕಾಂಗ್ರೆಸ್​ ವಿರುದ್ಧ ಹೆಚ್​ಡಿಕೆ ಆರೋಪ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಗೆಲ್ಲಿಸಿಕೊಳ್ಳುವಲ್ಲಿ ವಿಫಲರಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್​ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಶ್ರೀನಿವಾಸ್ ಪ್ರಸಾದ್ ಮತ್ತು ಆರೆಸ್ಸೆಸ್; ಸಂವತ್ಸರ ಮೀರಿದ ಒಡನಾಟ, ಅಗಲಿದ ನಾಯಕನಿಗೆ ಲೇಖಕ ವಾದಿರಾಜ ಸಾಮರಸ್ಯ ಅಕ್ಷರ ನಮನ

Hassan Sex Scandal; ಪ್ರಜ್ವಲ್ ರೇವಣ್ಣ ಅಷ್ಟೇ ಅಲ್ಲಅವರ ಅಪ್ಪ ರೇವಣ್ಣ ಉಚ್ಚಾಟನೆಗೂ ಹೆಚ್ಚಿದ ಒತ್ತಡ

ಕರ್ನಾಟಕ ಹವಾಮಾನ ಏಪ್ರಿಲ್‌ 30; ಬಾಗಲಕೋಟೆ, ಕಲಬುರಗಿ, ಬೆಳಗಾವಿ, ರಾಯಚೂರು ಸೇರಿ 18 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌

Bangalore Crime: ಬೆಂಗಳೂರಲ್ಲಿ ತಾಯಿ ಮಗಳ ಜಗಳ, ಮಗಳನ್ನು ಕೊಂದಳಾ ತಾಯಿ, ತಲಾಖ್ ನೀಡಿಯೂ ಪತ್ನಿ ಕೊಲೆ

ಸುಳ್ಳು ಗ್ಯಾರಂಟಿಗಳ ಜತೆಗೆ ಅಕ್ರಮವಾಗಿ ಕೂಪನ್​​ಗಳನ್ನು ಹಂಚಿ ರಾಮನಗರ, ಮಾಗಡಿ ಸೇರಿದಂತೆ ರಾಜ್ಯದಲ್ಲಿ 45 ರಿಂದ 50 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಅಕ್ರಮವಾಗಿ ಗೆದ್ದಿದೆ ಎಂದು ಆರೋಪಿಸಿದ ಹೆಚ್​ಡಿಕೆ, ಮಿಸ್ಟರ್ ಸಿದ್ದರಾಮಯ್ಯ ಧೈರ್ಯ ಇದ್ದರೆ ಈ ಅಕ್ರಮವನ್ನು ತನಿಖೆಗೆ ಒಳಪಡಿಸಿ ಎಂದು ಸವಾಲೆಸೆದರು.

ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣ

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಕಾಂಗ್ರೆಸ್ ಪಕ್ಷವು ಮತದಾನಕ್ಕೆ ಕೆಲವೇ ಗಂಟೆಗಳ ಮುನ್ನ ಹಂಚಿದ ಕ್ಯೂ ಆರ್ ಕೋಡ್​​​ಗಳು ಉಳ್ಳ ಈ ಕೂಪನ್​​ಗಳೇ ಕಾರಣ. ಇದು ಗಂಭೀರ ಸ್ವರೂಪದ ಚುನಾವಣೆ ಅಕ್ರಮ ಎಂದು ದೂರಿದರು.

ಮೂರು ಸಾವಿರ ಹಾಗೂ ಐದು ಸಾವಿರ ಮೊತ್ತದ ಕ್ಯೂ ಆರ್ ಕೋಡ್ ಗಳನ್ಜು ಹೊಂದಿರುವ ಕೂಪನ್ ಗಳನ್ನು ಮತದಾನಕ್ಕೆ ಕೆಲವೇ ಗಂಟೆಗಳ ಮುನ್ನ ಮತದಾರರಿಗೆ ಹಂಚಲಾಯಿತು. ಈ ಕೂಪನ್ ಗಳಿಂದಲೇ ನಾವು ಸೋಲಬೇಕಾಯಿತು. ಕಾಂಗ್ರೆಸ್ ಅಕ್ರಮವಾಗಿ ಗೆದ್ದಿದೆ. ಈ ಬಗ್ಗೆ ತನಿಖೆ ಮಾಡಿಸುತ್ತೀರಾ ಮಿಸ್ಟರ್ ಸಿದ್ದರಾಮಯ್ಯ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಕಾಂಗ್ರೆಸ್ ಅಭ್ಯರ್ಥಿ ಗೆದ್ದರಷ್ಟೇ ಈ ಕೂಪನ್ ನಗದಾಗುತ್ತದೆ

ಹೀಗೆ ಕೂಪನ್ ಗಳನ್ನು ಹಂಚಲು ಕಾಂಗ್ರೆಸ್ ಅಭ್ಯರ್ಥಿಗಳು ಹಣ ಎಲ್ಲಿಂದ ತಂದರು? ಕಾಂಗ್ರೆಸ್ ಅಭ್ಯರ್ಥಿ ಗೆದ್ದರಷ್ಟೇ ಈ ಕೂಪನ್ ನಗದಾಗುತ್ತದೆ. ಆಗ ಕೂಪನ್ ಹೊಂದಿರುವವರು ನಿಗದಿತ ಮಾಲ್ ಅಥವಾ ಅಂಗಡಿಗೆ ಹೋಗಿ ಕೂಪನ್ ನಲ್ಲಿ ನಿಗದಿತ ಮೊತ್ತದ ವಸ್ತುಗಳನ್ನು ಖರೀದಿ ಮಾಡಬಹುದು ಎಂದು ಆಮಿಷ ಒಡ್ಡಲಾಗಿದೆ. ಇದು ಚುನಾವಣೆಯ ಮಹಾ ಅಕ್ರಮ. ಈ ಚುನಾವಣೆ ಆಯೋಗ ತನಿಖೆ ಮಾಡಬೇಕು ಎಂದು ಒತ್ತಾಯ ಮಾಡಿದರು ಮಾಜಿ ಮುಖ್ಯಮಂತ್ರಿಗಳು.

ರಾಮನಗರ, ಮಾಗಡಿ, ರಾಜರಾಜೇಶ್ವರಿ ನಗರ ಸೇರಿದಂತೆ ರಾಜ್ಯದ 42ರಿಂದ 50 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಈ ರೀತಿಯ ಅಕ್ರಮ ಮಾಡಿದೆ. ಬಿಜೆಪಿ ಸರಕಾರದ ಅಕ್ರಮಗಳನ್ನು ತನಿಖೆ ಮಾಡಿಸುವೆ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ಈ ಕೂಪನ್ ಅಕ್ರಮದ ಬಗ್ಗೆ ತನಿಖೆ ಮಾಡಿಸಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ಸುಮಾರು ನಲವತ್ತೆರಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವರು ಗಿಫ್ಟ್ ಕೂಪನ್ ಹಂಚಿದ್ದಾರೆ. ಆ ಕೂಪನ್ ಕೊಟ್ಟರೆ, ಮೂರು, ಐದು ಸಾವಿರ ಬೆಲೆಯ ವಸ್ತುಗಳು ಸಿಗುತ್ತೆ ಅಂತ ಆಸೆ ಹುಟ್ಟಿಸಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ ಸುಮಾರು ಅರವತ್ತು ಸಾವಿರ ಕೂಪನ್ ಹಂಚಿದ್ದಾರೆ ಎಂದ ಮಾಜಿ ಮುಖ್ಯಮಂತ್ರಿ ಅವರು, ಮಾಧ್ಯಮಗೋಷ್ಠಿಯಲ್ಲಿ ಗಿಫ್ಟ್ ಕೂಪನ್ ಗಳನ್ನು ಪ್ರದರ್ಶನ ಮಾಡಿದರು.

ಪ್ರಜಾಪ್ರಭುತ್ವದಲ್ಲಿ ಗೆಲವು ಗೆಲುವೇ. ಆದರೆ, ಮಹಾತ್ಮ ಗಾಂಧೀಜಿ ಹೆಸರು ಹೇಳುವ, ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಎಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ ಅತ್ಯಂತ ಕೀಳು ಕೆಲಸ ಮಾಡಿದೆ. ಆ ಪಕ್ಷಕ್ಕೆ ನೈತಿಕತೆ ಎನ್ನುವುದು ಇದೆಯಾ ಎಂದು ಅವರು ಪ್ರಶ್ನೆ ಮಾಡಿದರು.

ಕಾಲಚಕ್ರ ತಿರುಗುತ್ತೆ

ನಮ್ಮ ಬಗ್ಗೆ ಕಾಂಗ್ರೆಸ್ ಒಂದು ಟ್ವೀಟ್ ಮಾಡಿದೆ. ಗ್ಯಾರಂಟಿ ಕಾರ್ಯಕ್ರಮಗಳನ್ನು ಈಡೇರಿಸುವುದು ಇರಲಿ, ನೀವು ಪಕ್ಷ ವಿಸರ್ಜನೆ ಯಾವಾಗ ಮಾಡ್ತೀರಾ ಅಂತಾ ಕೇಳಿದೆ. ಹಿಂದೆ ಒಂದು ಚುನಾವಣೆಯಲ್ಲಿ 179 ಸ್ಥಾನದಿಂದ 39 ಸ್ಥಾನಕ್ಕೆ ಇಳಿದಾಗ ಕಾಂಗ್ರೆಸ್ ನಾಯಕರು ಪಕ್ಷ ವಿಸರ್ಜನೆ ಮಾಡಿದ್ದರಾ? ಕಾಲಚಕ್ರ ತಿರುಗುತ್ತೆ, ಮೇಲೆ ಇದ್ದವನು ಕೆಳಗೆ ಇಳಿಬೇಕು, ಕೆಳಗಿದ್ದವನು ಮೇಲೆ ಬರಬೇಕು. ಈ ದುರಹಂಕಾರದ ಮಾತು ಬೇಡ. ಪಕ್ಷ ವಿಸರ್ಜನೆ ಮಾಡುವುದು, ಅಂತ್ಯಸಂಸ್ಕಾರ ಮಾಡುವುದು ಇದೆಲ್ಲಾ ನಾನು ನಿಮ್ಮಿಂದ ಕಲೀಬೇಕಿಲ್ಲ ಎಂದು ಅವರು ಕಿಡಿಕಾರಿದರು.

ನಾನು ಹೇಳಿದ್ದೇನು?

ನನಗೆ 123 ಸೀಟು ಬಂದು ಪಂಚರತ್ನ ಯೋಜನೆಗಳನ್ನು ಜಾರಿ ಮಾಡದಿದ್ದರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಹೇಳಿದ್ದೆ. ಆ ಹೇಳಿಕೆ ಕಾಂಗ್ರೆಸ್ ನಾಯಕರಿಗೆ ಬೇರೆ ರೀತಿ ಕೇಳಿಸಿದೆ. ಒಮ್ಮೆ ಅವರು ನನ್ನ ಹೇಳಿಕೆಯನ್ನು ಮತ್ತೆ ಕೇಳಿಸಿಕೊಳ್ಳಲಿ. ನಾನು ಹೇಳಿದ್ದು ಏನು ಎಂಬುದು ಅರ್ಥ ಆಗುತ್ತದೆ. ಅವರಂಥ ಕುತಂತ್ರದ ರಾಜಕಾರಣ ಮಾಡಿ, ನಾವು ಪಕ್ಷ ಕಟ್ಟಿಲ್ಲ ಎಂದು ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇಗೆ ಗೆದ್ದರು ಅನ್ನೋದಕ್ಕಿಂತ ಒಟ್ಟಾರೆ ಗೆದ್ದರು ಅನ್ನುವುದೇ ಮುಖ್ಯ. ಈ ನಾಡಿನ ಜನರ ಮುಂದೆ ಮನವಿ ಮಾಡ್ತೀನಿ. ಒಪ್ಪತ್ತು ಹೊತ್ತಿನ ಊಟದ ಆಸೆಗೆ ನಿಮ್ಮ ಮುಂದಿನ ಭವಿಷ್ಯ ಹಾಳು ಮಾಡಿಕೊಳ್ಳವೇಡಿ. ಒಂದೆರಡು ಸಾವಿರ ಹಣದಿಂದ ನಿಮ್ಮ ಬದುಕು ಸರಿ ಹೋಗುವುದಿಲ್ಲ ಎಂದು ಜನತೆಗೆ ಅವರು ಕಿವಿಮಾತು ಹೇಳಿದರು.

ರಾಜ್ಯಾಧ್ಯಕ್ಷರಾಗಿ ಇಬ್ರಾಹಿಂ ಮುಂದುವರಿಕೆ:

ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಸಿಎಂ ಇಬ್ರಾಹಿಂ ಮುಂದುವರಿಯುತ್ತಾರೆ. ಚುನಾವಣೆ ಸೋಲಿನ ಹೊಣೆ ಹೊತ್ತು ಸಿಎಂ ಇಬ್ರಾಹಿಂ ರಾಜೀನಾಮೆ ಕೊಟ್ಟಿದ್ದಾರೆ. ಅವರನ್ನು ಮುಂದುವರೆಸಬೇಕಾ, ಬೇಡವಾ ಅಂತ ನಾವು ನಿರ್ಧಾರ ಮಾಡುತ್ತೇವೆ. ಅವರ ರಾಜೀನಾಮೆ ಅಂಗೀಕಾರ ಮಾಡಿಲ್ಲ. ಆದರೆ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಯುವ ಜನತಾದಳ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದ್ದಾರೆ. ಅವರ ರಾಜಿನಾಮೆ ಕೂಡಾ ಅಂಗೀಕಾರ ಆಗಿಲ್ಲ. ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೂ ಯಾರನ್ನು ನೇಮಿಸಬೇಕು ಅಂತಾ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದಾಗ ಮಧ್ಯಪ್ರವೇಶ ಮಾಡಿದ ಸಿಎಂ ಇಬ್ರಾಹಿಂ ಅವರು; ನಿಖಿಲ್ ಅವರೂ ಕೂಡ ಮುಂದುವರಿಯುತ್ತಾರೆ ಎಂದು ತಿಳಿಸಿದರು.

ಈ ಐದು ಗ್ಯಾರಂಟಿ ಗಳನ್ನು ಕಾಂಗ್ರೆಸ್ ಜಾರಿಗೆ ತರಲು ಕಷ್ಟ. ಅಡ್ಡದಾರಿಯಲ್ಲಿ ಅಧಿಕಾರಕ್ಕೆ ಅವರಿಂದ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯ ಇಲ್ಲ. ಸಿದ್ದರಾಮಯ್ಯ ಅವರು ಚುನಾವಣೆಗೆ ಮುನ್ನ ಭಾಷಣದಲ್ಲಿ ಎಲ್ಲರಿಗೂ ಫ್ರೀ ಅಂತಾ ಹೇಳ್ತಾ ಇದ್ದರು. ಬಸ್ ಪಾಸ್ ಎಲ್ಲಾ ಕಡೆ ಫ್ರೀ ಅಂತ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಮೊದಲ ಸಂಪುಟ ಸಭೆಯಲ್ಲಿಯೇ ಐದು ಗ್ಯಾರಂಟಿಗಳನ್ಹು ಜಾರಿ ಮಾಡುತ್ತೇವೆ ಎಂದು ಅವರು ಹೇಳಿದ್ದರು. ಆದರೆ, ಅವರು ಮಾತು ತಪ್ಪಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಈ ವಿಚಾರದಲ್ಲಿ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಜನ ಏನು ತೀರ್ಮಾನ ತೆಗೆದುಕೊಳ್ತಾರೋ ಗೊತ್ತಿಲ್ಲ. ನಾವಂತೂ ಹೋರಾಟ ಮಾಡಲು ಸಿದ್ದ.‌ ಜನರಿಗೆ ತಮಗೆ ಅನ್ಯಾಯ ಆಗಿದೆ ಎಂದರೆ ನಮ್ಮ ಜತೆ ಕೈಜೋಡಿಸಲಿ ಎಂದು ಅವರು ಹೇಳಿದರು.

    ಹಂಚಿಕೊಳ್ಳಲು ಲೇಖನಗಳು